ಸಾರ್ವಜನಿಕ ಸಾರಿಗೆಯಲ್ಲಿ ನಾವೀನ್ಯತೆ: ಬಿಎಂಟಿಸಿಗೆ ‘ಚೇಂಜ್ ಮೇಕರ್ ಅವಾರ್ಡ್’
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ನಾವೀನ್ಯತೆಗಾಗಿ ನೀಡಲಾಗುವ ‘ಚೇಂಜ್ ಮೇಕರ್ ಅವಾರ್ಡ್’ ಅನ್ನು ‘ಇನ್ನೋವೇಷನ್ ಇನ್ ಪಬ್ಲಿಕ್ ಟ್ರಾನ್ಸಿಟ್’ ವಿಭಾಗದಲ್ಲಿ ಪಡೆದುಕೊಂಡಿದೆ. ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮೊಬಿಲಿಟಿ ಸಿಂಪೋಸಿಯಂ–2026 ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ನಾವೀನ್ಯತೆಗಾಗಿ ನೀಡಲಾಗುವ ‘ಚೇಂಜ್ ಮೇಕರ್ ಅವಾರ್ಡ್’ ಅನ್ನು ‘ಇನ್ನೋವೇಷನ್ ಇನ್ ಪಬ್ಲಿಕ್ ಟ್ರಾನ್ಸಿಟ್’ ವಿಭಾಗದಲ್ಲಿ ಪಡೆದುಕೊಂಡಿದೆ. ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮೊಬಿಲಿಟಿ ಸಿಂಪೋಸಿಯಂ–2026 ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬಿಎಂಟಿಸಿ ಪರವಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ ಸುನಿತಾ ಜೆ. ಅವರು ನಿವೃತ್ತ ಐಎಎಸ್ ಅಧಿಕಾರಿ ವಿಕ್ರಮ್ ಕಪೂರ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸುವುದು, ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಸುಸ್ಥಿರ ನಗರ ಸಾರಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಿಎಂಟಿಸಿ ಕೈಗೊಂಡಿರುವ ನಿರಂತರ ಪ್ರಯತ್ನಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.ಬೆಂಗಳೂರಿನ ಸಾರ್ವಜನಿಕ ಸಾರಿಗೆ ಜಾಲವನ್ನು ವಿಸ್ತರಿಸುವ ಹಾಗೂ ಆಧುನೀಕರಿಸುವ ನಿಟ್ಟಿನಲ್ಲಿ ಬಿಎಂಟಿಸಿ ಕೈಗೊಂಡಿರುವ ವಿವಿಧ ಉಪಕ್ರಮಗಳಿಗೆ ಈ ಪ್ರಶಸ್ತಿ ಮಾನ್ಯತೆ ನೀಡಿದೆ. ವಿಶೇಷವಾಗಿ ವಿಮಾನ ನಿಲ್ದಾಣ ಸಾರಿಗೆ ಸೇವೆಗಳು, ನೈಸ್ ರಸ್ತೆ ಕಾರಿಡಾರ್ ಸೇವೆಗಳು ಹಾಗೂ ತಂತ್ರಜ್ಞಾನ ಆಧಾರಿತ ಪ್ರಯಾಣಿಕ ಸೇವೆಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.ಬಿಎಂಟಿಸಿಯು ಪ್ರತಿದಿನ ಸುಮಾರು 1,000 ವಿಮಾನ ನಿಲ್ದಾಣ ಸೇವಾ ಟ್ರಿಪ್ಗಳನ್ನು ನಿರ್ವಹಿಸುತ್ತಿದ್ದು, ಪ್ರತಿದಿನ 12,000ರಿಂದ 15,000 ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದೆ. ಇದೇ ರೀತಿಯಾಗಿ, ನೈಸ್ ರಸ್ತೆ ಕಾರಿಡಾರ್ ಮೂಲಕ ಪ್ರತಿದಿನ ಸುಮಾರು 250 ಟ್ರಿಪ್ಗಳನ್ನು ನಿರ್ವಹಿಸಲಾಗುತ್ತಿದ್ದು, ಸುಮಾರು 18,000 ಪ್ರಯಾಣಿಕರು ಈ ಸೇವೆಯನ್ನು ಬಳಸುತ್ತಿದ್ದಾರೆ.‘ನಮ್ಮ ಬಿಎಂಟಿಸಿ 2.0’: ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಸಾರಿಗೆಬಿಎಂಟಿಸಿಯು ತನ್ನ ನಿರಂತರ ಡಿಜಿಟಲ್ ಪರಿವರ್ತನೆಯ ಭಾಗವಾಗಿ ‘ನಮ್ಮ BMTC 2.0’ ಎಂಬ ನವೀಕೃತ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಪ್ರಯಾಣಿಕರ ಸಾರಿಗೆ ಅನುಭವವನ್ನು ಮತ್ತಷ್ಟು ಸುಗಮಗೊಳಿಸುವ ಹಲವು ಸ್ಮಾರ್ಟ್ ಮೊಬಿಲಿಟಿ ಸೌಲಭ್ಯಗಳನ್ನು ಈ ಅಪ್ಲಿಕೇಶನ್ ಒಳಗೊಂಡಿದೆ.ಅಪ್ಲಿಕೇಶನ್ನಲ್ಲಿ ಚಲಿಸುತ್ತಿರುವ ಬಸ್ಗಳ ನೇರ ಮಾಹಿತಿ ಮತ್ತು ಆಗಮನದ ಅಂದಾಜು ಸಮಯ (ಇಟಿಎ), ಮಾರ್ಗ ಹಾಗೂ ಬಸ್ ನಿಲ್ದಾಣಗಳ ಮಾಹಿತಿ, ಡಿಜಿಟಲ್ ಟಿಕೆಟ್ ಖರೀದಿ, ಬಸ್ ಪಾಸ್ ಸೇವೆಗಳು, ಪ್ರಯಾಣ ಯೋಜನೆ, ಡಿಜಿಟಲ್ ಪಾವತಿ ಸೌಲಭ್ಯ ಹಾಗೂ ಬಿಎಂಟಿಸಿ–ನಮ್ಮ ಮೆಟ್ರೋ ಸಮಗ್ರ ಟಿಕೆಟ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ.ಒಂದೇ ಡಿಜಿಟಲ್ ವೇದಿಕೆಯ ಮೂಲಕ ಬಸ್, ಮೆಟ್ರೋ ಹಾಗೂ ಬಸ್–ಮೆಟ್ರೋ ಸಂಯೋಜಿತ ಪ್ರಯಾಣವನ್ನು ಯೋಜಿಸಿಕೊಳ್ಳಲು ಪ್ರಯಾಣಿಕರಿಗೆ ಈ ಅಪ್ಲಿಕೇಶನ್ ಅವಕಾಶ ಕಲ್ಪಿಸುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.