ಸಕಾಲಿಕ: ಕನ್ನಡ ಸಿನಿಮಾಗಳಿಗೆ ಸರ್ಕಾರಿ ಒಟಿಟಿ ಬೇಕು
ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದ, ಪ್ರಯೋಗಾತ್ಮಕ ಹಾಗೂ ಕಡಿಮೆ ಬಂಡವಾಳದ ಸಿನಿಮಾಗಳ ಪ್ರದರ್ಶನಕ್ಕೆ ಪ್ರತ್ಯೇಕ ದೂರದರ್ಶನ ಚಾನಲ್ ಬೇಕು ಎಂಬ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. 2024ರಲ್ಲಿ ಆರಂಭವಾದ ದೂರದರ್ಶನದ ವೇವ್ಸ್ ಹೆಸರಿನ ಒಟಿಟಿಯಿಂದ ಪ್ರಾದೇಶಿಕ ಸಿನಿಮಾಗಳಿಗೆ ಪ್ರಯೋಜನ ಇಲ್ಲ. ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ 200 ಆಸನಗಳ ಸಣ್ಣ ಚಿತ್
ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದ, ಪ್ರಯೋಗಾತ್ಮಕ ಹಾಗೂ ಕಡಿಮೆ ಬಂಡವಾಳದ ಸಿನಿಮಾಗಳ ಪ್ರದರ್ಶನಕ್ಕೆ ಪ್ರತ್ಯೇಕ ದೂರದರ್ಶನ ಚಾನಲ್ ಬೇಕು ಎಂಬ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. 2024ರಲ್ಲಿ ಆರಂಭವಾದ ದೂರದರ್ಶನದ ವೇವ್ಸ್ ಹೆಸರಿನ ಒಟಿಟಿಯಿಂದ ಪ್ರಾದೇಶಿಕ ಸಿನಿಮಾಗಳಿಗೆ ಪ್ರಯೋಜನ ಇಲ್ಲ. ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ 200 ಆಸನಗಳ ಸಣ್ಣ ಚಿತ್ರಮಂದಿರಗಳನ್ನು ನಿರ್ಮಿಸಿ ಕೊಡಬೇಕು ಎಂಬ ಬೇಡಿಕೆಗೆ ರಾಜ್ಯ ಸರ್ಕಾರ ಕಿವಿಗೊಟ್ಟಿಲ್ಲ.ಕನ್ನಡ ಸಿನಿಮಾ ಉದ್ಯಮ ಅಸಹಾಯಕ ಸ್ಥಿತಿಯಲ್ಲಿದೆ. ರಾಜ್ಯದಲ್ಲಿ ಸಿನಿಮಾ ನೋಡುಗರ ಸಂಖ್ಯೆ ಹೆಚ್ಚಾಗಿದ್ದರೂ ಕನ್ನಡ ಸಿನಿಮಾಗಳನ್ನು ನೋಡುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಕನ್ನಡಿಗರನ್ನು ಕನ್ನಡ ಸಿನಿಮಾಗಳತ್ತ ಸೆಳೆಯುವುದು ಹೇಗೆ? ಈ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಇಲ್ಲ.ಕೇರಳಂ ಸರ್ಕಾರ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಮಲಯಾಳಂ ಸಿನಿಮಾಗಳ ಪ್ರದರ್ಶನಕ್ಕಾಗಿ ಪ್ರತ್ಯೇಕ ಒಟಿಟಿ ನಿರ್ಮಿಸಿಕೊಟ್ಟಿದೆ. ಅದು ಕಾರ್ಯರೂಪಕ್ಕೆ ಬಂದು ಎರಡು ವರ್ಷಗಳಾಗಿವೆ. ಕಡಿಮೆ ಬಂಡವಾಳದ ಮತ್ತು ಹೊಸಬರು ನಿರ್ಮಿಸುವ ಸಿನಿಮಾಗಳಿಗೆ ಅಲ್ಲಿ ಅವಕಾಶ ಸಿಗುತ್ತಿದೆ.ಸಕಾಲಿಕ: ಸಾರ್ವಜನಿಕ ಬದುಕಿನ ಕೆಟ್ಟ ಮಾದರಿಗಳು!ಸಕಾಲಿಕ: ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೇ?ಮುಖ್ಯಮಂತ್ರಿ ಪಿಣರಾಯಿ ವಿಜಯನ್ 2024ರ ಮಾರ್ಚ್ನಲ್ಲಿ ಈ ಒಟಿಟಿಗೆ ಚಾಲನೆ ನೀಡಿದರು. ಒಮ್ಮೆ ನೋಡಲು ಇಂತಿಷ್ಟು ಹಣ ನಿಗದಿಯಾಗಿದೆ. ಅಲ್ಲಿ ಮಲಯಾಳಂ ಸಿನಿಮಾಗಳನ್ನು ಮಾತ್ರವೇ ನೋಡಬಹುದು. ಕನಿಷ್ಠ 10 ರೂ ನಿಂದ ಗರಿಷ್ಠ 75 ರೂ ಕೊಟ್ಟು ಸಿನಿಮಾ ನೋಡಬಹುದು. ಪ್ರದರ್ಶನದಿಂದ ಸಿಗುವ ಹಣದಲ್ಲಿ ನಿರ್ಮಾಪಕರಿಗೆ ಶೇ.50 ರಷ್ಟು ಹಣ ಸಿಗುತ್ತದೆ. ಕೇರಳದಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆಯೂ ಸಾಕಷ್ಟಿದೆ. ಕನ್ನಡ ಸಿನಿಮಾಗಳಿಗೆ ಹೋಲಿಸಿದರೆ ಮಲಯಾಳಂ ಸಿನಿಮಾಗಳಿಗೆ ಸರ್ಕಾರದ ಮತ್ತು ಜನರಿಂದ ಹೆಚ್ಚಿನ ಉತ್ತೇಜನ ಸಿಗುತ್ತಿದೆ.ಕನ್ನಡ ಸಿನಿಮಾಗಳ ದುಃಸ್ಥಿತಿಕರೋನಾ ನಂತರ ಕನ್ನಡ ಚಿತ್ರೋದ್ಯಮದ ಪರಿಸ್ಥಿತಿ ಬದಲಾಯಿತು. ಹಣಕಾಸಿನ ಮುಗ್ಗಟ್ಟಿನ ಜತೆಗೆ ದೊಡ್ಡ ಬಂಡವಾಳದ ಸಿನಿಮಾಗಳ ಎದುರು ಪೈಪೋಟಿ ನೀಡುವ ಶಕ್ತಿ ಇಲ್ಲದೆ ಕಡಿಮೆ ಬಂಡವಾಳದ ಸಿನಿಮಾಗಳು ಸೊರಗಿದವು. ಅಷ್ಟೇ ಅಲ್ಲ ದೇಶದ 12 ಪ್ರಮುಖ ಒಟಿಟಿಗಳಲ್ಲಿ ಕನ್ನಡ ಸಿನಿಮಾಗಳಿಗೆ ಅವಕಾಶ ಕಡಿಮೆ ಇದೆ. ಈ ಒಟಿಟಿಗಳಿಗೆ ಸಿನಿಮಾ ಕೊಟ್ಟರೆ ನಮಗೆ ಸಿಗುವ ಪಾಲು ತೀರಾ ಕಡಿಮೆ ಎಂದು ಕನ್ನಡ ಸಿನಿಮಾಗಳ ನಿರ್ಮಾಪಕರು ಹೇಳುತ್ತಾರೆ. ಈ ಒಟಿಟಿಗಳಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಿಗೆ ಹೆಚ್ಚಿನ ಅವಕಾಶ ಸಿಗುತ್ತಿದೆ. ಕೆಲ ಒಟಿಟಿಗಳು ಸಿನಿಮಾ ಮತ್ತು ಸೀರಿಯಲ್ ನಿರ್ಮಾಣ ಮಾಡಿ ಪ್ರದರ್ಶನ ಮಾಡುತ್ತಿವೆ. ಎಳೆಂಟು ಕಂತುಗಳ ರಾಜಕಾರಣ ಮತ್ತು ಭೂಗತ ಜಗತ್ತಿನ ರೋಚಕ ಕಥೆಯ ಸೀರಿಯಲ್ಗಳು ಜನಪ್ರಿಯವಾಗುತ್ತಿವೆ. ಈ ಒಟಿಟಿಗಳಲ್ಲಿ ನೋಡುಗರಿಗೆ ಬಹಳಷ್ಟು ಆಯ್ಕೆಗಳಿವೆ. ಇಲ್ಲಿ ಸಿನಿಮಾ ನೋಡುವ ಕನ್ನಡಿಗರಿಗೆ ಅನ್ಯ ಭಾಷೆಯ ಸಿನಿಮಾಗಳು ಆಕರ್ಷಕವಾಗಿ ಕಾಣುತ್ತವೆ.ಸಕಾಲಿಕ: ಟೊರಂಟೊದಲ್ಲಿ ನಾಗಾ ಬುಡಕಟ್ಟು ಸಿನಿಮಾ!ಸಕಾಲಿಕ: ಸರ್ವಾಧಿಕಾರಿ, ಧರ್ಮಾಧಾರಿತ ರಾಜಕಾರಣದಿಂದ ನೆಲಕಚ್ಚಿದ ಇರಾನ್ ಸಿನಿಮಾಈ ಪ್ರತಿಕೂಲ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವೇ ಒಂದು ಒಟಿಟಿ ಆರಂಭಿಸಿ ಕನ್ನಡ ಚಿತ್ರೋದ್ಯಮದ ಸಹಾಯಕ್ಕೆ ಬರಬೇಕಿದೆ. ಹೊಸಬರ ಸಿನಿಮಾಗಳಲ್ಲದೆ, ಸಾಕ್ಷ್ಯಚಿತ್ರಗಳು, ಕಿರು ಚಿತ್ರಗಳ ಪ್ರದರ್ಶನಕ್ಕೆ ಸಹಾಯವಾಗುತ್ತದೆ. ದುಬಾರಿ ಬಾಡಿಗೆ ತೆತ್ತು ಸಿನಿಮಾಗಳನ್ನು ಪ್ರದರ್ಶನ ಮಾಡಲು ಆಗದ ಸಣ್ಣ ಪುಟ್ಟ ನಿರ್ಮಾಪಕರಿಗೆ ಹೆಚ್ಚು ಪ್ರಯೋಜನ ಆಗಲಿದೆ. ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವ ಪ್ರವೃತ್ತಿ ಕಡಿಮೆ ಆಗುತ್ತಿರುವ ಈ ಹೊತ್ತಿನಲ್ಲಿ ಸರ್ಕಾರಿ ಒಟಿಟಿ ಮೂಲಕವಾದರೂ ಕನ್ನಡಿಗರು ಕನ್ನಡ ಸಿನಿಮಾ ನೋಡುವ ಮನಸ್ಸು ಮಾಡಬಹುದು.ದೊಡ್ಡ ಬಜೆಟ್ಟಿನ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲದೆ ಕನ್ನಡಕ್ಕೆ ಡಬ್ ಆದ ಇತರ ಭಾಷೆಗಳ ಸಿನಿಮಾಗಳ ಅಬ್ಬರದಲ್ಲೂ ಚಿತ್ರಗಳ ನಿರ್ಮಾಣವೇನೂ ಕಡಿಮೆ ಆಗಿಲ್ಲ. 2025ರಲ್ಲಿ 256 ಕನ್ನಡ ಸಿನಿಮಾಗಳು ನಿರ್ಮಾಣವಾಗಿವೆ. ಇವುಗಳ ಪೈಕಿ ಎಷ್ಟು ಸಿನಿಮಾಗಳಿಗೆ ಹಾಕಿದ ಬಂಡವಾಳ ಗಳಿಸಲು ಸಾಧ್ಯವಾಗಿದೆ ಎಂಬ ಮಾಹಿತಿ ಇಲ್ಲ.ಒಂದು ಅಧಿಕೃತ ಮೂಲದ ಪ್ರಕಾರ ಒಟ್ಟಾರೆ(ದೇಶಾದ್ಯಂತ) ಹಿಂದಿ ಸಿನಿಮಾಗಳಿಗೆ ಶೇ 41ರಷ್ಟು ಬಾಕ್ಸ್ ಆಫೀಸ್ ಪಾಲು ಸಿಗುತ್ತಿದೆ. ತೆಲುಗು ಸಿನಿಮಾಗಳಿಗೆ ಶೇ.18 ರಿಂದ 20, ತಮಿಳು ಸಿನಿಮಾಗಳಿಗೆ ಶೇ. 13 ರಿಂದ 15, ಮಲಯಾಳಂ ಸಿನಿಮಾಗಳಿಗೆ ಶೇ.9 ರಷ್ಟು ಮತ್ತು ಕನ್ನಡ, ಮರಾಠಿ,ಬಂಗಾಳಿ ಭಾಷೆಗಳ ಮತ್ತಿತರ ಸಿನಿಮಾಗಳಿಗೆ ಸಿಗುವ ಪಾಲು ಶೇ.4ರಷ್ಟು ಮಾತ್ರ. ಕನ್ನಡದ ಕೆಲವೇ ನಟರ ಸಿನಿಮಾಗಳು ಮಾತ್ರ ನಿರೀಕ್ಷಿಸಿದ ಆದಾಯ ಗಳಿಸುತ್ತಿವೆ. ಹೊಸಬರ ಸಿನಿಮಾಗಳು ಆರ್ಥಿಕ ಗೆಲ್ಲುವುದು ಅಪರೂಪ.ಸಿನಿಮಾಗಳ ಮೂಲಕ ದೇಶದ ಗಮನ ಸೆಳೆದ, ಹಲವು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಇತ್ತೀಚೆಗೆ ಸಭೆಯೊಂದರಲ್ಲಿ ನನ್ನ ಸಿನಿಮಾಗಳನ್ನು ಜನ ನೋಡುವುದಿಲ್ಲ ಎಂದು ಹೇಳಿದ್ದಾರೆ. ಅವರ ಮಾತುಗಳಲ್ಲಿ ಹತಾಶೆ ಇದ್ದರೂ ಅದು ವಾಸ್ತವ. ಇನ್ನು ಹೊಸಬರ ಮತ್ತು ಪ್ರಯೋಗಶೀಲರ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಗಳಿಗೆ ಬರುತ್ತಾರೆ ಎಂದು ನಿರೀಕ್ಷಿಸುವುದು ಹೇಗೆ? ಇತ್ತೀಚಿನ ಸಿನಿಮಾಗಳು ಬಿಡುಗಡೆಯಾದರೂ ಕೆಲವೇ ಚಿತ್ರಮಂದಿರಗಳಲ್ಲಿ ದಿನಕ್ಕೆ ಒಂದೋ, ಎರಡೋ ಪ್ರದರ್ಶನ ಕಾಣುತ್ತವೆ. ಈ ಪ್ರತಿಕೂಲ ಪರಿಸ್ಥಿತಿಗೆ ಸರ್ಕಾರಿ ಒಟಿಟಿ ಉತ್ತರ ಆಗಬಲ್ಲದು.ಅಕಾಡೆಮಿ ಏನು ಮಾಡುತ್ತಿದೆ?ಕೇರಳಂನ ಸರ್ಕಾರಿ ಒಟಿಟಿಯನ್ನು ಅಲ್ಲಿನ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ ನಿರ್ವಹಿಸುತ್ತಿದೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಒಟಿಟಿ ಆರಂಭಿಸಿ ಅದರ ನಿರ್ವಹಣೆಯ ಹೊಣೆಯನ್ನು ವಾರ್ತಾ ಇಲಾಖೆ ಅಥವಾ ಚಲನಚಿತ್ರ ಅಕಾಡೆಮಿಗೆ ನೀಡಬಹುದು. ಇದರಿಂದ ಕನ್ನಡ ಮಾತ್ರವಲ್ಲದೆ ತುಳು, ಕೊಡವ ಭಾಷೆಗಳ ಸಿನಿಮಾಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿ ಕೊಟ್ಟಂತಾಗುತ್ತದೆ. ಹಿಂದಿನ ಸರ್ಕಾರ ಕನ್ನಡ ಸಿನಿಮಾಗಳಿಗಾಗಿ ಪ್ರತ್ಯೇಕ ಒಟಿಟಿ ಆರಂಭಿಸುವ ಕುರಿತು ಬಜೆಟ್ನಲ್ಲಿ ಪ್ರಸ್ತಾಪಿಸಿತ್ತು. ಆದು ಕಾರ್ಯರೂಪಕ್ಕೆ ಬರಬೇಕು.ರಾಜ್ಯದಲ್ಲಿ ಸಿನಿಮಾ ಸಂಸ್ಕೃತಿ ಬೆಳೆಸುವುದು, ಸಿನಿಮಾ ನಿರ್ಮಾಣಕ್ಕೆ ಬೇಕಾದ ತಾಂತ್ರಿಕ, ಶೈಕ್ಷಣಿಕ ಅರ್ಹತೆ ಹೆಚ್ಚಿಸಲು ಯುವ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ 2009ರಲ್ಲಿ ಚಲನ ಚಿತ್ರ ಅಕಾಡೆಮಿಯನ್ನು ಸ್ಥಾಪಿಸಿತು. ರಾಜ್ಯದಲ್ಲಿ ಸಿನಿಮಾ ನಿರ್ಮಾಣಕ್ಕೆ ಬೇಕಾದ ಪರಿಸರ ನಿರ್ಮಾಣ, ಪ್ರೇಕ್ಷಕರು ಮತ್ತು ಉದ್ಯಮದ ನಡುವೆ ಪರಸ್ಪರ ಸಂವಾದ, ಚರ್ಚೆಗೆ ವೇದಿಕೆ ಒದಗಿಸುವುದು ಅದರ ಮುಖ್ಯ ಕೆಲಸ.ಆರಂಭದ ವರ್ಷಗಳಲ್ಲಿ ಒಬ್ಬಿಬ್ಬರು ಉತ್ಸಾಹಿ ಅಧ್ಯಕ್ಷರು ಕೆಲವು ಕಾರ್ಯಕ್ರಮಗಳನ್ನು ಮಾಡಿದ್ದನ್ನು ಬಿಟ್ಟರೆ, ಇತ್ತೀಚಿನ ವರ್ಷಗಳಲ್ಲಿ ಅಕಾಡೆಮಿ ವರ್ಷಕ್ಕೊಮ್ಮೆ ವಾರ್ತಾ ಇಲಾಖೆ ಜತೆ ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆಸುವುದನ್ನು ಬಿಟ್ಟರೆ ಉಳಿದಂತೆ ಏನೂ ಮಾಡುತ್ತಿಲ್ಲ. 2024ರಲ್ಲಿ ಸರ್ಕಾರ ಅಕಾಡೆಮಿಯ ಚಟುವಟಿಕೆಗಳಿಗೆ ಸರ್ಕಾರ 2 ಕೋಟಿ ರೂ ಅನುದಾನವನ್ನು ನಿಗದಿಗೊಳಿಸಿತು, ಆದರೆ ಬಿಡುಗಡೆ ಆಗಿದ್ದು 80 ಲಕ್ಷವಂತೆ. ಈ ವರ್ಷ ಇದುವರೆಗೆ ಸಿಬ್ಬಂದಿಯ ವೇತನ ಇತ್ಯಾದಿ ಖರ್ಚು ವೆಚ್ಚಗಳಿಗೆ ಹಣ ನೀಡಿದ್ದನ್ನು ಬಿಟ್ಟರೆ ಉಳಿದ ಚಟುವಟಿಕೆಗಳಿಗೆ ಹಣ ನೀಡಿಲ್ಲ. ಇತ್ತೀಚೆಗೆ 90 ಲಕ್ಷರೂಗಳನ್ನು ನೀಡುವ ಭರವಸೆ ನೀಡಿದೆಯಂತೆ. ಈ ಹಣ ಬಿಡುಗಡೆಯಾದರೆ ಸಿನಿಮಾ ನಿರ್ಮಾಣದ ವಿವಿಧ ವಿಭಾಗದಲ್ಲಿ ಕೌಶಲ್ಯ ತರಬೇತಿ ನೀಡುವ ಕಾರ್ಯಾಗಾರ ಹಮ್ಮಿಕೊಳ್ಳುವ ನಿರ್ಧಾರ ಮಾಡಿದ್ದೇವೆ ಎಂದು ಅಕಾಡೆಮಿಯ ಸದಸ್ಯರೊಬ್ಬರು ಹೇಳುತ್ತಾರೆ.2025ರ ಅಂತರರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆ ಸಮಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಯಮದ ಕೆಲವರ ಧೋರಣೆ ಕುರಿತು ಕೆಲ ಮಾತುಗಳಲ್ಲಿ ಟೀಕಿಸಿದ್ದರು. ಈಗ ಅವರೇ ಮುಖ್ಯಮಂತ್ರಿ. ಕನ್ನಡ ಚಿತ್ರೋದ್ಯಮಕ್ಕೆ ಕಾಯಕಲ್ಪ ನೀಡುವ ಜವಾಬ್ದಾರಿ ಅವರ ಮೇಲಿದೆ.