ಹುಳಿಮಾವು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ: ಟೆಕಿ, ಶುಶ್ರೂಷಕ ಸಾವು
ಬೆಂಗಳೂರು: ಯಲಹಂಕ ಹಾಗೂ ಹುಳಿಮಾವು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ ಟೆಕಿ ಹಾಗೂ ಶುಶ್ರೂಷಕ ಮೃತಪಟ್ಟಿದ್ದಾರೆ.ದೊಡ್ಡಬೆಟ್ಟಹಳ್ಳಿ ಲೇಔಟ್ನಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮರಕ್ಕೆ ಅಪ್ಪಳಿಸಿದ್ದರಿಂದ ಟೆಕಿ ಪುನೀತ್ ಯಾದವ್ (37) ಮೃತಪಟ್ಟಿದ್ದಾರೆ. ಸಿಂಧು ಯಾದವ್ ಗಂಭೀರವಾಗಿ ಗ

ಬೆಂಗಳೂರು: ಯಲಹಂಕ ಹಾಗೂ ಹುಳಿಮಾವು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ ಟೆಕಿ ಹಾಗೂ ಶುಶ್ರೂಷಕ ಮೃತಪಟ್ಟಿದ್ದಾರೆ.ದೊಡ್ಡಬೆಟ್ಟಹಳ್ಳಿ ಲೇಔಟ್ನಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮರಕ್ಕೆ ಅಪ್ಪಳಿಸಿದ್ದರಿಂದ ಟೆಕಿ ಪುನೀತ್ ಯಾದವ್ (37) ಮೃತಪಟ್ಟಿದ್ದಾರೆ. ಸಿಂಧು ಯಾದವ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಹೆಬ್ಬಾಳದ ಕೆಂಪಾಪುರದ ವೆಂಕಟೇಗೌಡ ಲೇಔಟ್ನ ನಿವಾಸಿ ಪುನೀತ್ ಯಾದವ್ ಹಾಗೂ ಸಿಂಧು ಯಾದವ್ ಅವರು ದೊಡ್ಡಬೆಟ್ಟಹಳ್ಳಿ ಲೇಔಟ್ ಕಡೆಯಿಂದ ಯಲಹಂಕದ ಕಡೆಗೆ ತೆರಳುತ್ತಿದ್ದರು. ಅರವಿಂದ್ ಬೆಲೆರ್ ಅಪಾರ್ಟ್ಮೆಂಟ್ ಬಳಿ ವೇಗವಾಗಿ ಸಾಗುವಾಗ ನಿಯಂತ್ರಣ ತಪ್ಪಿದ ಸ್ಕೂಟರ್, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಬಳಿಕ, ರಸ್ತೆಬದಿಯ ಮರಕ್ಕೆ ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪುನೀತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.ಸ್ಕೂಟರ್ ಸವಾರನ ಅತಿಯಾದ ವೇಗ, ಅಜಾಗರೂಕತೆ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸಂಚಾರ ಪೊಲೀಸರು ಹೇಳಿದರು.ಹುಳಿಮಾವು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲುಗೇಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಶುಶ್ರೂಷಕ ರಂಜಿತ್ (28) ಮೃತಪಟ್ಟಿದ್ದಾರೆ.ಕೇರಳದ ರಂಜಿತ್, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ನೇಹಿತರ ಜೊತೆಗೆ ಬಾಡಿಗೆಗೆ ಕೊಠಡಿ ಪಡೆದು ನೆಲಸಿದ್ದರು. ಎಚ್ಎಸ್ಆರ್ ಲೇಔಟ್ನಲ್ಲಿ ಖಾಸಗಿ ಸಂಸ್ಥೆಗೆ ಸೇರಿದ ಆಂಬುಲೆನ್ಸ್ನಲ್ಲಿ ಶುಶ್ರೂಷಕರಾಗಿ ಕೆಲಸ ಮಾಡುತ್ತಿದ್ದರು. ಗುರುವಾರ ಮುಂಜಾನೆ ತುರ್ತು ಕರೆ ಬಂದಿದ್ದರಿಂದ ರಂಜಿತ್, ಬೈಕ್ ತೆಗೆದುಕೊಂಡು ಎಚ್ಎಸ್ಆರ್ ಲೇಔಟ್ನ ಕಚೇರಿಗೆ ಹೋಗುತ್ತಿದ್ದರು. ಹೊಸೂರು ರಸ್ತೆಯ ಕೂಡ್ಲುಗೇಟ್ ಬಳಿ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ರಂಜಿತ್ ಕೆಳಕ್ಕೆ ಬಿದ್ದು, ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.ಚಾಲಕ ವಾಹನವನ್ನು ನಿಲ್ಲಿಸದೇ ತೆರಳಿದ್ದು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.ಹುಳಿಮಾವು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.