ನುಡಿ ನಮನ: ನಟನೆ–ಬದುಕಿನ ನಾನಾ ನಮೂನೆ
ಬೆಂಗಳೂರಿನ ಕೋಣನಕುಂಟೆ ಸಮೀಪದ ಮನೆ. ‘ಯಕ್ಷ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಅದು ನಿರ್ಮಾಪಕ ಸಿದ್ದರಾಜು ಅವರ ಮನೆ. ಒಳಗೆ ಹೋದಾಗ ನಾನಾ ಪಾಟೇಕರ್ ಕಾಣಿಸಲಿಲ್ಲ. ನಿರ್ದೇಶಕ ರಮೇಶ್ ಭಾಗವತ್ ನಸುನಗುತ್ತಾ, ‘ಅಡುಗೆ ಮನೆಯಲ್ಲಿದ್ದಾರೆ’ ಎಂದರು.ಒಳಗೆ ದೊಗಳೆ ಚಡ್ಡಿ ಮತ್ತು ಟೀ ಶರ್ಟ್ ಹಾಕ್ಕೊಂಡು ಸ್ಟೌ ಮುಂದೆ ನಿಂತಿದ್ದರು ನಾನಾ. ಈರುಳ್ಳಿ, ಟೊಮೆಟೋ ಕತ್ತರಿಸುವುದರಲ

ಬೆಂಗಳೂರಿನ ಕೋಣನಕುಂಟೆ ಸಮೀಪದ ಮನೆ. ‘ಯಕ್ಷ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಅದು ನಿರ್ಮಾಪಕ ಸಿದ್ದರಾಜು ಅವರ ಮನೆ. ಒಳಗೆ ಹೋದಾಗ ನಾನಾ ಪಾಟೇಕರ್ ಕಾಣಿಸಲಿಲ್ಲ. ನಿರ್ದೇಶಕ ರಮೇಶ್ ಭಾಗವತ್ ನಸುನಗುತ್ತಾ, ‘ಅಡುಗೆ ಮನೆಯಲ್ಲಿದ್ದಾರೆ’ ಎಂದರು.ಒಳಗೆ ದೊಗಳೆ ಚಡ್ಡಿ ಮತ್ತು ಟೀ ಶರ್ಟ್ ಹಾಕ್ಕೊಂಡು ಸ್ಟೌ ಮುಂದೆ ನಿಂತಿದ್ದರು ನಾನಾ. ಈರುಳ್ಳಿ, ಟೊಮೆಟೋ ಕತ್ತರಿಸುವುದರಲ್ಲಿ ಮಗ್ನರಾಗಿದ್ದರು. ಕೋಳಿ ಸಾರಿನ ಮಸಾಲೆ ಒಲೆ ಮೇಲೆ ಕುದಿಯುತ್ತಿತ್ತು.ಸ್ವಲ್ಪ ಹೊತ್ತಿನ ಬಳಿಕ ಅವರು ಹಿಂದೆ ತಿರುಗಿ ನಮ್ಮನ್ನು ಗಮನಿಸಿದರು. ರಮೇಶ್ ನನ್ನನ್ನು ಪರಿಚಯಿಸಿದರು. ಓ.. ಅಂತ ನಗುತ್ತಾ, ‘ನನಗೆ ಅಡುಗೆ ಮಾಡುವುದೆಂದರೆ ತುಂಬಾ ಇಷ್ಟ. ಇದೊಂದು ರೀತಿಯಲ್ಲಿ ಧ್ಯಾನ ಮಾಡಿದಂತೆ’ ಅಂತ ನಕ್ಕರು. ಕತ್ತರಿಸಿಟ್ಟಿದ್ದ ಚಿಕನ್ ತುಂಡುಗಳನ್ನು ಸಾರಿಗೆ ಹಾಕಿ ಕುದಿಯಲು ಬಿಟ್ಟು, ಅಲ್ಲಿದ್ದ ಅಡುಗೆಯವನಿಗೆ ಏನೋ ಸೂಚನೆ ಕೊಟ್ಟು ಹೊರಗೆ ಬಂದರು.‘ಶೂಟಿಂಗ್ ಎಲ್ಲ ಮುಗಿದ ಬಳಿಕ ನಾನೊಬ್ಬನೇ ನಿಮಗೆಲ್ಲ ಅಡುಗೆ ಮಾಡಿ ಬಡಿಸುತ್ತೇನೆ’ ಎಂದು ನಿರ್ದೇಶಕರಲ್ಲಿ ಹೇಳಿದ್ದರಂತೆ. ಅದರಂತೆ ಅವತ್ತು ನಿರ್ಮಾಪಕರ ಮನೆಯಲ್ಲಿ ಅವರು ಅಡುಗೆಯಲ್ಲಿ ತಲ್ಲೀನರಾಗಿದ್ದರು.ನಾನಾ ನುಡಿದಂತೆ ನಡೆಯುತ್ತಿದ್ದವರು ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.ಭಾವತೀವ್ರತೆಯ ನಟ‘ಪರಿಂದ’ ಚಿತ್ರದ ಅರೆ ನಿಮೀಲಿತ ಕಣ್ಣಿನ ಖಳ, ‘ಕ್ರಾಂತಿವೀರ್’ ಚಿತ್ರದಲ್ಲಿ ಓತಪ್ರೋತವಾಗಿ ಕೋಮುಸೌಹಾರ್ದದ ಭಾಷಣ ಮಾಡಿದ ಸಿನಿಕ, ‘ಯಶವಂತ್’ನಲ್ಲಿ ಮಾತಿನಷ್ಟೇ ಸಮಾಜಘಾತುಕರಿಗೆ ಪೆಟ್ಟನ್ನೂ ಕೊಟ್ಟ ಧಾರ್ಷ್ಟ್ಯದ ವ್ಯಕ್ತಿ, ‘ಅಗ್ನಿಸಾಕ್ಷಿ’ಯ ವಿಲಕ್ಷಣ ಪತಿ, ‘ರಾಜನೀತಿ’ ಸಿನಿಮಾದ ರಾಜಕಾರಣದ ಭಾಷೆ ತುಳುಕಿಸಿದ ಸ್ಟೈಲಿಷ್ ನಟ, ‘ವೆಲ್ಕಮ್’ನಲ್ಲಿ ಕಚಗುಳಿ ಇಟ್ಟ ಹಾಸ್ಯಗಾರ... ಎಲ್ಲವೂ ಆಗಿ ನಾನಾ ಜನಮಾನಸದಲ್ಲಿ ಉಳಿದಿದ್ದಾರೆ. ಜೆ.ಜೆ. ಕಲಾಶಾಲೆಯಲ್ಲಿ ‘ಕ್ಯಾಲಿಗ್ರಫಿ’ಯಲ್ಲಿ ಪಳಗಿದ ಅವರ ಕೈಗಳು ರಸ್ತೆ ಮೇಲೆ ಝೀಬ್ರಾ ಕ್ರಾಸಿಂಗ್ ಬರೆದು ಚಿಕ್ಕಾಸು ಸಂಪಾದಿಸಿದ ದಿನಗಳಿದ್ದವು. ರಂಗಭೂಮಿಯಲ್ಲಿ ತಾಲೀಮು ಮಾಡುತ್ತಿದ್ದ ಅವರು ಆಮೇಲೆ ಸಿನಿಮಾಕ್ಕೆ ಹೊರಳಿದ್ದು ತಾನಾಗೇ ಸಿಕ್ಕ ಅವಕಾಶಗಳಿಂದ. ತಮ್ಮ ಪಾತ್ರದ ಸಂಭಾಷಣೆಯನ್ನು ತಾವೇ ಬರೆದುಕೊಳ್ಳುವ ಸವಾಲು ಹಾಕಿ, ಅದಕ್ಕೆ ಜವಾಬನ್ನೂ ಕೊಟ್ಟ ನಿರ್ಭಿಡೆಯ ನಟ. ಅನಿಸಿದ್ದನ್ನು ಹಿಂದೆ ಮುಂದೆ ನೋಡದೆ ಹೇಳಿ ನಿಷ್ಠುರ ಕಟ್ಟಿಕೊಳ್ಳಲು ಸದಾ ಸಿದ್ಧವಿದ್ಧ ದಿಟ್ಟ. ಕನ್ನಡದಲ್ಲಿ ಅವರು ನಟಿಸಿದ ಏಕೈಕ ಚಿತ್ರ ‘ಯಕ್ಷ’. ಅದು ಅವರು ನಟಿಸಿದ ದಕ್ಷಿಣ ಭಾರತದ ಎರಡನೇ ಚಿತ್ರ. ಅದಕ್ಕೂ ಮುನ್ನ ಭಾರತಿರಾಜಾರ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದರು. ಆಮೇಲೆ ‘ಕಾಲಾ’ ತಮಿಳು ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ನಟಿಸಿ, ಖುದ್ದು ತಾವೇ ಪಾತ್ರಕ್ಕೆ ಡಬ್ ಮಾಡಿದರು. ಹಳೆಯ ನೆನಪು‘ನಿಮ್ಮನ್ನು 20 ವರ್ಷಗಳ ಹಿಂದೆ ನಾನು ಮಂಗಳೂರಿನ ಒಂದು ಹಳ್ಳಿಯಲ್ಲಿ ಶೂಟಿಂಗ್ ವೇಳೆ ಭೇಟಿಯಾಗಿದ್ದೆ. ನನ್ನ ಬಳಿ ನೀವು ಬೀಡಿ ಕೇಳಿದ್ದಿರಿ. ರೈತನೊಬ್ಬನ ಬಳಿ ಬೀಡಿ ಇಸಿದುಕೊಂಡು ನಿಮಗೆ ಕೊಟ್ಟಿದ್ದೆ. ಕೋಗ ಪಂಡಿತ್ ಪಾತ್ರದಲ್ಲಿ ಅರ್ಧ ಲುಂಗಿ ಉಟ್ಟು ಬರಿಮೈಯಲ್ಲಿ ಇದ್ದ ನೀವು ನೆಲದ ಮೇಲೆ ಕುಕ್ಕರುಗಾಲಲ್ಲಿ ಕುಳಿತು ಬೀಡಿ ಅರ್ಧ ಸೇದಿ ಬಳಿಕ ನೆಲಕ್ಕೆ ಅದನ್ನು ಉಜ್ಜಿ ನಂದಿಸಿ ಅರ್ಧವನ್ನು ಸೊಂಟದಲ್ಲಿ ಇಟ್ಟುಕೊಂಡಿರಿ...’ ಎಂದು ಅವರ ಮುಖವನ್ನು ನೋಡಿದೆ.‘ಓ... ವೋ ದೀಕ್ಷಾ ಫಿಲ್ಮ್ ಕಾ ಶೂಟಿಂಗ್...’ ಎಂದು ನೆನಪಿಸಿಕೊಂಡರು. ಬೀಡಿ ಸೇದಿದ್ದು ನೆನಪಿರಲಿಲ್ಲ. ಮೂಲ್ಕಿ ಬಳಿಯ ಕೊಲ್ನಾಡು ಎಂಬ ಊರಲ್ಲಿ ಯು.ಆರ್.ಅನಂತಮೂರ್ತಿ ಅವರ ‘ಘಟಶ್ರಾದ್ಧ’ ಕತೆ ಆಧರಿಸಿದ ಚಿತ್ರದ ಶೂಟಿಂಗ್ ನಡೆದಿತ್ತು. ಅರುಣ್ ಕೌಲ್ ಅದರ ನಿರ್ದೇಶಕರು.‘ಅವತ್ತು ಯಾವುದೋ ವಿಷಯಕ್ಕೆ ನಿರ್ದೇಶಕರ ಜೊತೆ ಸಿಟ್ಟಿಗೆದ್ದು ಕೂಗಾಡಿ, ಅರ್ಧದಲ್ಲಿ ಶೂಟಿಂಗ್ ಬಿಟ್ಟು ಮೂಲ್ಕಿಯಲ್ಲಿ ನೀವು ಉಳಿದುಕೊಂಡಿದ್ದ ಲಾಡ್ಜ್ಗೆ ತೆರಳಿದ್ದಿರಿ’ ಎಂದೆ.ನಾನಾ ಜೋರಾಗಿ ನಕ್ಕರು. ‘ಪಾತ್ರದ ವಿಷಯಕ್ಕೆ, ಅಭಿನಯಕ್ಕೆ ಸಂಬಂಧಿಸಿ ನಿರ್ದೇಶಕರ ಜೊತೆ ಜಗಳ ಸಹಜ ಅಲ್ವಾ... ಅವತ್ತೇಕೋ ಸಿಟ್ಟು ಬಂದಿತ್ತು...’ ಎಂದರು.ಆ ಸಿನಿಮಾದ ನಟನೆಗೆ ನಾನಾ ಪಾಟೇಕರ್ಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ಅನಂತಮೂರ್ತಿಯವರ ಅದೇ ಕತೆಯನ್ನು ಗಿರೀಶ್ ಕಾಸರವಳ್ಳಿ 1970ರ ದಶಕದ ಕೊನೆಯಲ್ಲಿ ‘ಘಟಶ್ರಾದ್ಧ’ ಸಿನಿಮಾ ಮಾಡಿ ಅದು ಸ್ವರ್ಣಕಮಲ ಪ್ರಶಸ್ತಿ ಗೆದ್ದುಕೊಂಡು ಕನ್ನಡಕ್ಕೆ ದೊಡ್ಡ ಕೀರ್ತಿ ತಂದಿತ್ತು.‘ದೀಕ್ಷಾ’ ಶೂಟಿಂಗ್ ನೋಡಿದ ಮರುದಿನ ಬೆಳಿಗ್ಗೆ ಮೂಲ್ಕಿಯ ಆ ಲಾಡ್ಜ್ ಗೆ ನಾನಾ ಅವರನ್ನು ಹುಡುಕಿಕೊಂಡು ಹೋಗಿದ್ದೆ. ಆದರೆ ಅಲ್ಲಿದ್ದ ಮ್ಯಾನೇಜರ್ ‘ಬೆಳಿಗ್ಗೆಯೇ ಇಲ್ಲಿ ಜಗಳ ಮಾಡಿಕೊಂಡು ಹೊರಗೆಲ್ಲೋ ಹೋಗಿದ್ದಾರೆ... ಟೆನ್ಶನ್ ಪಾರ್ಟಿ ಮಾರ್ರೆ’ ಎಂದಿದ್ದರು.‘ಯಕ್ಷ’ ಚಿತ್ರದ ಪೊಲೀಸ್ ಪಾತ್ರಕ್ಕೆ ನಾನಾ ಕೇವಲ ₹75 ಲಕ್ಷ ಸಂಭಾವನೆಗೆ ಒಪ್ಪಿಕೊಂಡಿದ್ದರು. ಅವತ್ತು ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಿದ್ದ ಅವರಿಗೆ ಕನ್ನಡ ಸಿನಿಮಾದ ಸೀಮಿತ ಮಾರುಕಟ್ಟೆಯ ಅರಿವಿತ್ತು.ಸೂಪರ್ ಸ್ಟಾರ್ ಆಗಿದ್ದರೂ ನಾನಾಗೆ ಅಹಂಕಾರ ಇರಲಿಲ್ಲ. ಅವರು ಅಭಿನಯಕ್ಕೆ, ಚಿತ್ರಕತೆಗೆ ಸಂಬಂಧಿಸಿ ಸಹಜ ಸಿಟ್ಟು ತೋರಿಸುತ್ತಿದ್ದರೇ ವಿನಾ ಸಂಭಾವನೆಗೆ ಮುಖ ಸಣ್ಣಗೆ ಮಾಡಿಕೊಳ್ಳುತ್ತಿರಲಿಲ್ಲ.‘ಯಕ್ಷ’ದ ಶೂಟಿಂಗ್ ನಡೆದಾಗ ಮಾಸ್ಟರ್ ಹಿರಣ್ಣಯ್ಯ ಭೇಟಿಯಾಗಲು ಬಂದಿದ್ದರು. ಅವರು ಕಾರಿಳಿದು ಬರುವುದನ್ನು ನೋಡಿದ ನಾನಾ ನೇರವಾಗಿ ಅವರ ಬಳಿಗೆ ಹೋಗಿ ಬಗ್ಗಿ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದರು.ಆ ಸಿನಿಮಾದಲ್ಲಿ ಜಿ.ಕೆ.ಗೋವಿಂದರಾವ್ ನಟಿಸಿದ್ದರು. ಅವರನ್ನು ಮೊದಲು ಕಂಡಾಗಲೂ ಕಾಲು ಮುಟ್ಟಿ ನಮಸ್ಕರಿಸಿದ್ದರು. ಗೋವಿಂದರಾವ್ ಅವರು ಹಿಂದೆ ಸರಿದಾಗ, ‘I know where to bend and how to bend’ ಎಂದು ನಾನಾ ನಸುನಗುತ್ತಾ ಹೇಳಿದ್ದರು.ಮಾತಿನ ಮಧ್ಯೆ ನಾನು ಮಂಗಳೂರಿನವ ಎಂದು ಗೊತ್ತಾದಾಗ, ನಾನಾ ತುಳು ಭಾಷೆಯಲ್ಲಿ ಮಾತನಾಡಿದ್ದರು. ಅವರಿಗೆ ತಕ್ಕಮಟ್ಟಿಗೆ ತುಳು ಬರುತ್ತಿತ್ತು. ಮುಂಬೈಯಲ್ಲಿ ಅವರ ನಿಕಟ ಗೆಳೆಯ ರತ್ನಾಕರ ಶೆಟ್ಟಿ ಬಗ್ಗೆ ಮಾತನಾಡಿದರು.‘ನಿಮ್ಮ ಮಗ ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ’ ಎಂದು ಪ್ರಶ್ನಿಸಿದೆ. ‘ಅವನನ್ನು ಲಂಡನ್ಗೆ ಕಳಿಸಿದ್ದೇನೆ. ಈ ಬಾಲಿವುಡ್ ಅವನಿಗೆ ಬೇಡ. ಅಲ್ಲಿ ಸಿನಿಮಾ ತಂತ್ರಜ್ಞಾನದ ಬಗ್ಗೆ ಕಲಿತಿದ್ದಾನೆ’ ಅಂದರು. ‘ನಿಮ್ಮಂತೆಯೇ ಹೀರೊ ಆಗುವ ಚಾನ್ಸ್ ಇದೆಯಾ’ ಎಂದು ಕೇಳಿದಾಗ, ‘ಛೋಡೋ ಯಾರ್. ಏನು ರಾಜಕಾರಣಿಗಳ ಹಾಗೆ ಮಕ್ಕಳೆಲ್ಲ ಅಪ್ಪನ ಕೆಲಸಾನೇ ಮಾಡ್ಬೇಕಾ? ಅವನು ಅಲ್ಲೇ ಏನಾದ್ರೂ ಮಾಡಿಕೊಂಡು ನೆಮ್ಮದಿಯಾಗಿರಲಿ’ ಎಂದರು. (ಅವರಿಗೆ ಇಬ್ಬರು ಗಂಡುಮಕ್ಕಳು. ಮೊದಲ ಮಗ ಬಾಲ್ಯದಲ್ಲೇ ತೀರಿಕೊಂಡಿದ್ದ. ಪತ್ನಿಯ ಜೊತೆ ಹೊಂದಾಣಿಕೆಯಾಗದೆ ಆಗಲೇ ಅವರು ಬೇರೆಯಾಗಿದ್ದ ಸುದ್ದಿಯೂ ಇತ್ತು).ಮರಾಠಿ ರಂಗಭೂಮಿಯ ಬೇರನ್ನು ಮರೆಯದ ಅವರು ತಮ್ಮನ್ನು ಸದಾ ಸಿನಿಮಾ ವಿದ್ಯಾರ್ಥಿ ಎಂದೇ ಹೇಳಿಕೊಳ್ಳುತ್ತಿದ್ದರು. ಸಂಜಯ್ ಲೀಲಾ ಬನ್ಸಾಲಿ ತರಹದ ನಿರ್ದೇಶಕರ ಜೊತೆಗೇ ವಾಗ್ವಾದ ಮಾಡಿ, ಕೋಪ ತೋರಿಸಿದ್ದವರು. ಹೀಗಿದ್ದ ಅವರು ನೆನಪಿಟ್ಟುಕೊಳ್ಳುವ ಸಮಾಜಮುಖಿ ಕೆಲಸಗಳಲ್ಲಿ ಅವಿರತ ತೊಡಗಿಕೊಂಡರು. ಅವರ ಅಭಿನಯದ ಜೊತೆಜೊತೆಗೇ ಅಂತಹ ಮಾನವೀಯ ಕೆಲಸಗಳು ಅವರ ಜನಪ್ರಿಯತೆಯನ್ನು ಹೆಚ್ಚಿಸಿವೆ. ಶಾರುಕ್ ಖಾನ್, ನಟನೇರವಂತಿಕೆ, ಒರಟುತನ, ಪ್ರಾಮಾಣಿಕತೆಯ ವ್ಯಕ್ತಿಯಾಗಿದ್ದ ನಾನಾ ಪಾಟೇಕರ್, ಅತ್ಯಂತ ಸುಂದರವಾದ ನಗು ಹೊಂದಿದ್ದರು; ನನ್ನ ಮಾರ್ಗದರ್ಶಿ, ಗುರು, ವಿಮರ್ಶಕ, ಸ್ನೇಹಿತರಾಗಿದ್ದರು.ಹೇಮಾ ಮಾಲಿನಿ, ನಟಿಸುದ್ದಿ ಕೇಳಿ ನಾನು ಆಘಾತಗೊಂಡಿದ್ದೇನೆ. ಹಿಂದಿ ಮತ್ತು ಮರಾಠಿ ಚಿತ್ರರಂಗ ಶ್ರೇಷ್ಠ ನಟನನ್ನು ಕಳೆದುಕೊಂಡಿವೆ. ಅವರು ನಟನೆಯ ಪಾಠಶಾಲೆಯಾಗಿದ್ದರು.ಮೋಹನ್ಲಾಲ್, ನಟಪ್ರತಿ ಪಾತ್ರಕ್ಕೂ ಅವರು ಅಪರೂಪದ ತೀವ್ರತೆ, ಆಳ ಮತ್ತು ಋಜುತ್ವ ತಂದುಕೊಟ್ಟರು. ಅವರ ಕೌಶಲ ಮತ್ತು ಸಂವೇದನೆಯು ತಲೆಮಾರುಗಳ ಕಾಲ ಅಚ್ಚಳಿಯದ ಪ್ರಭಾವ ಬೀರುತ್ತಲೇ ಇರುತ್ತವೆ.ಡೈಲಾಗ್ ರಾಜತಮ್ಮ ಸಂಭಾಷಣೆಗೆ ಹೆಸರಾಗಿದ್ದವರು ನಾನಾ ಪಾಟೇಕರ್. ಅವರು ನಟಿಸಿದ ಕೆಲವು ಚಿತ್ರಗಳಲ್ಲಿನ ಜನಪ್ರಿಯ ಸಂಭಾಷಣೆಗಳಿವು:1. ದಂಧೆ ಮೇ ಕೋಯಿ ಕಿಸೀ ಕಾ ಭಾಯಿ ನಹೀ, ಕೋಯಿ ಕಿಸೀ ಕಾ ಬೇಟಾ ನಹಿ (ವ್ಯವಹಾರದಲ್ಲಿ ಯಾರು ಯಾರಿಗೂ ಸಹೋದರ ಅಲ್ಲ, ಯಾರು ಯಾರಿಗೂ ಮಗ ಅಲ್ಲ)– ಚಿತ್ರ: ‘ಪರಿಂದ’ (1989)2. ಯೇ ಮುಸಲ್ಮಾನ್ ಕಾ ಖೂನ್, ಯೇ ಹಿಂದೂ ಕಾ ಖೂನ್, ಬತಾ ಇಸ್ ಮೇ ಮುಸಲ್ಮಾನ್ ಕಾ ಕೌನ್ ಸಾ, ಹಿಂದೂ ಕಾ ಕೌನ್ ಸಾ, ಬತಾ (ಇದು ಮುಸ್ಲಿಮರ ರಕ್ತ, ಇದು ಹಿಂದೂವಿನ ರಕ್ತ. ಹೇಳು, ಇದರಲ್ಲಿ ಮುಸ್ಲಿಮರದು ಯಾವುದು, ಹಿಂದೂವಿನದು ಯಾವುದು–ಹಿಂದೂ, ಮುಸ್ಲಿಮರಿಬ್ಬರಿಗೂ ಗಾಯ ಮಾಡಿ, ಆ ರಕ್ತಗಳನ್ನು ಸೇರಿಸಿ ಹೇಳಿದ ಸಂಭಾಷಣೆ)– ಚಿತ್ರ: ಕ್ರಾಂತಿವೀರ್ (1994)3. ಸೌ ಮೇ ಸೆ ಅಸ್ಸಿ ಬೆಯಿಮಾನ್, ಫಿರ್ ಭೀ ಮೇರಾ ದೇಶ್ ಮಹಾನ್ (ನೂರರಲ್ಲಿ 80 ಜನ ಅಪ್ರಾಮಾಣಿಕರು. ಆದರೂ ನನ್ನದು ಮಹಾನ್ ದೇಶ)– ಚಿತ್ರ: ಕ್ರಾಂತಿವೀರ್4. ಏಕ್ ಮಚ್ಚರ್ ಸಾಲಾ ಆದ್ಮಿ ಕೋ ಹಿಜಡಾ ಬನಾದೇತಾ ಹೈ (ಒಂದೇ ಒಂದು ಸೊಳ್ಳೆ ಪುರುಷನನ್ನು ಹಿಜಡಾ ಮಾಡಿಬಿಡುತ್ತದೆ) - ಚಿತ್ರ: ಯಶವಂತ್ (1997)5. ಮೌತ್ ಸೇ ಬಡಕರ್ ಕೋಯಿ ದೋಸ್ತ್ ನಹೀ ಹೈ (ಸಾವಿಗಿಂತ ದೊಡ್ಡ ಸ್ನೇಹಿತ ಬೇರೊಬ್ಬರಿಲ್ಲ)– ಚಿತ್ರ: ಗುಲಾಮ್–ಎ–ಮುಸ್ತಫಾ (1997)6. ಭಗವಾನ್ ಕಾ ದಿಯಾ ಸಬ್ ಕುಚ್ ಹೈ. ದೌಲತ್ ಹೈ, ಶೋರತ್ ಹೈ, ಇಜ್ಜತ್ ಹೈ (ದೇವರು ನೀಡಿದ ಎಲ್ಲವೂ ನನ್ನ ಬಳಿ ಇದೆ. ಶ್ರೀಮಂತಿಕೆ ಇದೆ, ಹೆಸರಿದೆ, ಗೌರವ ಇದೆ)– ಚಿತ್ರ: ವೆಲ್ಕಮ್ (2007)7. ಕಂಟ್ರೋಲ್ ಉದಯ್– ಚಿತ್ರ: ವೆಲ್ಕಮ್8. ಆಲೂ ಲೇಲೊ, ಕಾಂದಾ ಲೇಲೋ (ಆಲೂಗೆಡ್ಡೆ ಖರೀದಿಸಿ, ಈರುಳ್ಳಿ ಖರೀದಿಸಿ)– ಚಿತ್ರ: ವೆಲ್ಕಮ್ (2007)