ರೆಪೊ ದರ ಏರಿಕೆ ನಿರೀಕ್ಷಿತ ತಾಳಿಕೆ ಶಕ್ತಿ ಆರ್ಥಿಕತೆಗೆ ಇದೆ
ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಶೇ 0.25ರಷ್ಟು ಹೆಚ್ಚಿಸಿರುವುದು ಅನಿರೀಕ್ಷಿತ ಅಲ್ಲ. ಕಳೆದ ಕೆಲವು ವಾರಗಳಲ್ಲಿ ಆದ ಬೆಳವಣಿಗೆಗಳು ಆರ್ಬಿಐನ ಹಣಕಾಸಿನ ನಿಲುವು ಬದಲಾಗಲಿದೆ ಎನ್ನುವುದನ್ನು ಹೇಳುವಂತೆ ಇದ್ದವು. ಬುಧವಾರದ ಹೆಚ್ಚಳದೊಂದಿಗೆ ರೆಪೊ ದರವು ಶೇ 5.5ಕ್ಕೆ ತಲಪಿದೆ. ದರ ಏರಿಕೆಯ ತೀರ್ಮಾನವನ್ನು ಸಮ

ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಶೇ 0.25ರಷ್ಟು ಹೆಚ್ಚಿಸಿರುವುದು ಅನಿರೀಕ್ಷಿತ ಅಲ್ಲ. ಕಳೆದ ಕೆಲವು ವಾರಗಳಲ್ಲಿ ಆದ ಬೆಳವಣಿಗೆಗಳು ಆರ್ಬಿಐನ ಹಣಕಾಸಿನ ನಿಲುವು ಬದಲಾಗಲಿದೆ ಎನ್ನುವುದನ್ನು ಹೇಳುವಂತೆ ಇದ್ದವು. ಬುಧವಾರದ ಹೆಚ್ಚಳದೊಂದಿಗೆ ರೆಪೊ ದರವು ಶೇ 5.5ಕ್ಕೆ ತಲಪಿದೆ. ದರ ಏರಿಕೆಯ ತೀರ್ಮಾನವನ್ನು ಸಮಿತಿಯು ಒಕ್ಕೊರಲಿನಿಂದ ತೆಗೆದುಕೊಂಡಿದೆ. ಅಲ್ಲದೆ, ‘ತಟಸ್ಥ’ ಹಣಕಾಸಿನ ನಿಲುವನ್ನು ‘ಜಾಗರೂಕವಾಗಿ ಬಿಗಿಗೊಳಿಸುವ’ ನಿಲುವಿಗೆ ಬದಲಾವಣೆ ಮಾಡುವುದಕ್ಕೆ ಸಮಿತಿಯು 4–2 ಬಹುಮತದೊಂದಿಗೆ ಒಪ್ಪಿಗೆ ನೀಡಿದೆ. ಹಣಕಾಸಿನ ನಿಲುವಿನಲ್ಲಿ ಆಗಿರುವ ಬದಲಾವಣೆಯು, ರೆಪೊ ದರವು ಸದ್ಯಕ್ಕಂತೂ ಕಡಿಮೆ ಆಗುವುದಿಲ್ಲ ಎಂಬುದನ್ನು ಸೂಚಿಸುತ್ತಿದೆ. ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರೂ ಇದೇ ಮಾತು ಹೇಳಿದ್ದಾರೆ. 2023ರ ಫೆಬ್ರುವರಿ ನಂತರದಲ್ಲಿ ರೆಪೊ ದರವು ಇದೇ ಮೊದಲ ಬಾರಿಗೆ ಏರಿಕೆ ಆಗಿದೆ. 2025ರಲ್ಲಿ ಆರ್ಬಿಐ ರೆಪೊ ದರವನ್ನು ಒಟ್ಟು ಶೇ 1.25ರಷ್ಟು ಕಡಿಮೆ ಮಾಡಿತ್ತು. ನಂತರದಲ್ಲಿ ಅದು ಶೇ 5.25ರ ಮಟ್ಟದಲ್ಲಿ ಸ್ಥಿರವಾಗಿತ್ತು.ಹಣದುಬ್ಬರ ಹೆಚ್ಚಳ ಆಗಿರುವ, ಮುಂಗಾರು ಮಳೆಯ ಕೊರತೆಯಿಂದಾಗಿ ಕೃಷಿ ಉತ್ಪಾದನೆಯು ಕಡಿಮೆ ಆಗಿರುವ ಹಾಗೂ ಜಾಗತಿಕವಾಗಿ ಪರಿಸ್ಥಿತಿಯು ಬಹಳ ಕಠಿಣಆಗಿರುವ ಈ ಹೊತ್ತಿನಲ್ಲಿ ರೆಪೊ ದರಏರಿಕೆಯು ಆರ್ಬಿಐ ಪಾಲಿಗೆ ಅನಿವಾರ್ಯ ಕ್ರಮವೇ ಆಗಿತ್ತು. ಚಿಲ್ಲರೆ ಹಣದುಬ್ಬರ ಪ್ರಮಾಣವು ಸತತವಾಗಿ ಮೂರು ತಿಂಗಳಿನಿಂದ ಶೇ 4ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದೆ. ಅದು ಆಗಸ್ಟ್ನಲ್ಲಿ ಶೇ 4.82ಕ್ಕೆ ಹೆಚ್ಚಿದೆ. ಇದು ಆರ್ಬಿಐ ನಿಗದಿ ಮಾಡಿಕೊಂಡಿರುವ ಮಿತಿಗಿಂತ (ಶೇ4) ಹೆಚ್ಚು. ಹಣದುಬ್ಬರದ ವಿಚಾರವಾಗಿ ಮುಂದೆ ಪರಿಸ್ಥಿತಿ ಇನ್ನೂ ಬಿಗುವಾಗಬಹುದು ಎಂದು ಆರ್ಬಿಐ ನಿರೀಕ್ಷಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ದರವು ಶೇ5.2ಕ್ಕೆ ಹೆಚ್ಚಬಹುದು ಎಂದು ತನ್ನ ಅಂದಾಜನ್ನು ಪರಿಷ್ಕರಿಸಿದೆ. ಈ ಮೊದಲಿನ ಅಂದಾಜಿನಲ್ಲಿ ಹಣದುಬ್ಬರವು ಶೇ 5ರ ಮಟ್ಟದಲ್ಲಿ ಇರಬಹುದು ಎಂದು ಅದು ಹೇಳಿತ್ತು. ಮುಂದಿನ ಮೂರು ತ್ರೈಮಾಸಿಕಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 5.8ರ ಮಟ್ಟದಲ್ಲಿ ಇರಬಹುದು, ಆಹಾರ ಹಾಗೂ ಇಂಧನ ಹೊರತುಪಡಿಸಿದ ಸರಕು ಮತ್ತು ಸೇವೆಗಳ ಹಣದುಬ್ಬರಪ್ರಮಾಣವು ಶೇ4.4ರ ಮಟ್ಟದಲ್ಲಿರಬಹುದು ಎಂದು ಆರ್ಬಿಐ ಅಂದಾಜು ಮಾಡಿದೆ. ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸುವ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಆರ್ಬಿಐ, ತನ್ನ ಬತ್ತಳಿಕೆಯಲ್ಲಿನ ಹಣಕಾಸಿನ ಅಸ್ತ್ರವೊಂದನ್ನು ಬಳಸಿ ಅದನ್ನು ನಿಯಂತ್ರಿಸಲು ಮುಂದಾಗಿದೆ.ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರಣದಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿನ ಪರಿಸ್ಥಿತಿಯು ಬಹಳ ಅಸ್ಥಿರವಾಗಿರುವುದು ಕೂಡ ರೆಪೊ ದರ ಹೆಚ್ಚಳ ತೀರ್ಮಾನದ ಸಂದರ್ಭದಲ್ಲಿ ಪರಿಗಣನೆಗೆ ಬಂದಿರಬಹುದು. ಕಚ್ಚಾ ತೈಲದ ಬೆಲೆಯು ಏರಿಕೆ ಕಂಡಿದೆ, ಇತರ ಸರಕುಗಳ ಬೆಲೆಯೂ ಹೆಚ್ಚಾಗುತ್ತಿದೆ. ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್ಗಳು ಈಚಿನ ದಿನಗಳಲ್ಲಿ ಬಡ್ಡಿ ದರ ಹೆಚ್ಚಿಸಿವೆ. ಭಾರತದ ರೂಪಾಯಿಯ ಮೇಲೆ ಒತ್ತಡ ಸೃಷ್ಟಿಯಾಗಿದೆ. ಹಣದುಬ್ಬರದ ಪ್ರಮಾಣ ಹಾಗೂ ದೇಶದ ಆರ್ಥಿಕ ಬೆಳವಣಿಗೆಯ ಅಂಕಿ–ಅಂಶಗಳನ್ನು ಪರಿಗಣಿಸಿ ರೆಪೊ ದರದ ಮುಂದಿನ ಏರಿಕೆ ತೀರ್ಮಾನವಾಗಲಿದೆ ಎಂದು ಗವರ್ನರ್ ಮಲ್ಹೋತ್ರಾ ತಿಳಿಸಿದ್ದಾರೆ. ದೇಶದ ಅರ್ಥ ವ್ಯವಸ್ಥೆಯು ರೆಪೊ ದರದ ಏರಿಕೆಗೆ ಅವಕಾಶ ಮಾಡಿಕೊಡುವ ಸ್ಥಿತಿಯಲ್ಲಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ 7.8ರಷ್ಟು ಇತ್ತು. ಇದನ್ನು ಪರಿಗಣಿಸಿ ಆರ್ಬಿಐ ಪೂರ್ಣ ವರ್ಷದ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ 6.7ರಿಂದ ಶೇ 7.1ಕ್ಕೆ ಹೆಚ್ಚಿಸಿದೆ. ಅಂದರೆ, ಯಾವುದೇ ಗಂಭೀರ ನಕಾರಾತ್ಮಕ ಪರಿಣಾಮಗಳಿಲ್ಲದೆ ರೆಪೊ ದರದ ಏರಿಕೆಯನ್ನು ತಾಳಿಕೊಳ್ಳುವ ಶಕ್ತಿಯು ಈಗ ಆರ್ಥಿಕತೆಗೆ ಇದೆ. ದರ ಏರಿಕೆ ಪರಿಣಾಮವಾಗಿ ಗೃಹಸಾಲದ ಮೇಲಿನ ಬಡ್ಡಿದರ ಹೆಚ್ಚಬಹುದು ಹಾಗೂ ಗ್ರಾಹಕರಿಂದ ಆಗುವ ಕೆಲವು ಖರೀದಿಗಳು ತುಸು ತಗ್ಗಬಹುದು. ಆದರೆ ಹಣದುಬ್ಬರವನ್ನು ನಿಯಂತ್ರಿಸದೆ ಬಿಟ್ಟರೆ ಆರ್ಥಿಕತೆಗೆ ಪೆಟ್ಟು ಬೀಳುತ್ತದೆ.