ಮೈಸೂರು ದಸರಾ ಅಂಗಳದಲ್ಲಿ ತಾಕತ್ತು ಪ್ರದರ್ಶಿಸಲು ಸಜ್ಜಾಗಿದೆ ಕರಾವಳಿಯ ಕಂಬಳ
ಕರಾವಳಿಯ ಮಣ್ಣಿನ ಸೊಗಡು… ತುಳುನಾಡಿನ ಸಂಸ್ಕೃತಿಯ ಹೆಮ್ಮೆ… ಕೆಸರು ಗದ್ದೆಯಲ್ಲಿ ಜೋಡಿ ಕೋಣಗಳ ಶರವೇಗದ ಓಟ… ಇದು ಕಂಬಳದ ವೈಭವ. ಕರಾವಳಿಯ ಗಡಿ ದಾಟಿ ಬೆಂಗಳೂರಿನಲ್ಲೂ ಜನಮೆಚ್ಚುಗೆ ಗಳಿಸಿರುವ ಕಂಬಳ (Kambala) ಕ್ರೀಡೆ, ಇದೀಗ ನಾಡಹಬ್ಬ ಮೈಸೂರು ದಸರಾ (Mysuru Dasara) ಅಂಗಳದಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಮೈಸೂರಿನಲ್ಲಿ ಕಂಬಳ ಆಯೋಜನೆಗೆ ಸಿದ್ಧತೆಗಳು ಭರದಿಂ

ಕರಾವಳಿಯ ಮಣ್ಣಿನ ಸೊಗಡು… ತುಳುನಾಡಿನ ಸಂಸ್ಕೃತಿಯ ಹೆಮ್ಮೆ… ಕೆಸರು ಗದ್ದೆಯಲ್ಲಿ ಜೋಡಿ ಕೋಣಗಳ ಶರವೇಗದ ಓಟ… ಇದು ಕಂಬಳದ ವೈಭವ. ಕರಾವಳಿಯ ಗಡಿ ದಾಟಿ ಬೆಂಗಳೂರಿನಲ್ಲೂ ಜನಮೆಚ್ಚುಗೆ ಗಳಿಸಿರುವ ಕಂಬಳ (Kambala) ಕ್ರೀಡೆ, ಇದೀಗ ನಾಡಹಬ್ಬ ಮೈಸೂರು ದಸರಾ (Mysuru Dasara) ಅಂಗಳದಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಮೈಸೂರಿನಲ್ಲಿ ಕಂಬಳ ಆಯೋಜನೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಉಡುಪಿ ಜಿಲ್ಲೆಯ ಕಾರ್ಕಳದ ಮಿಯ್ಯಾರಿನಲ್ಲಿ ಕೋಣಗಳ ತಾಲೀಮು ಜೋರಾಗಿದೆ. ಇನ್ನೊಂದೆಡೆ, ಕಂಬಳ ಆಯೋಜನೆಗೆ ವ್ಯಕ್ತವಾಗುತ್ತಿರುವ ಆಕ್ಷೇಪಗಳಿಗೂ ಸಂಘಟಕರು ತಿರುಗೇಟು ನೀಡಿದ್ದಾರೆ. ಹಾಗಾದರೆ, ಮೈಸೂರು ದಸರಾ ಕಂಬಳದ ಸಿದ್ಧತೆ ಹೇಗಿದೆ? ಕೋಣಗಳ ಆಯ್ಕೆ ಪ್ರಕ್ರಿಯೆ ಯಾವ ಹಂತದಲ್ಲಿದೆ? ಕಂಬಳದ ಬಗ್ಗೆ ಸಂಘಟಕರು ಹೇಳುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ. ಕರಾವಳಿಯ ಕಂಬಳ ಅಂದರೆ ಬರೀ ಕೋಣಗಳ ಓಟವಲ್ಲ.. ಅದರ ಹಿಂದೆ ಕೃಷಿ ಸಂಸ್ಕೃತಿಯಿದೆ, ರೈತಾಪಿ ಬದುಕಿನ ನಂಟಿದೆ, ತಲೆಮಾರುಗಳಿಂದ ಬೆಳೆದು ಬಂದ ತುಳುನಾಡಿನ ಪರಂಪರೆಯಿದೆ. ಕೆಸರು ಗದ್ದೆಯಲ್ಲಿ ಜೋಡಿ ಕೋಣಗಳ ಓಟ, ಓಟಗಾರರ ಸಾಹಸ, ಕೋಣಗಳ ಯಜಮಾನರ ಪ್ರೀತಿ ಮತ್ತು ಆರೈಕೆ… ಇವೆಲ್ಲವೂ ಕಂಬಳದ ವಿಶೇಷತೆ. ಇಂತಹ ಕರಾವಳಿಯ ಜನಪದ ಕ್ರೀಡೆಗೆ ಇದೀಗ ನಾಡಹಬ್ಬ ಮೈಸೂರು ದಸರಾ ಅಂಗಳದಲ್ಲಿ ಅವಕಾಶ ಸಿಕ್ಕಿದೆ. ಬೆಂಗಳೂರಿನಲ್ಲಿ ನಡೆದ ಕಂಬಳಕ್ಕೆ ಕರಾವಳಿಯಾಚೆಯ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೇ ಯಶಸ್ಸಿನ ನಿರೀಕ್ಷೆಯಲ್ಲಿ ಮೈಸೂರು ದಸರಾ ಕಂಬಳದ ಸಿದ್ಧತೆಗಳು ನಡೆಯುತ್ತಿವೆ. ಉಡುಪಿ ಜಿಲ್ಲೆಯ ಕಾರ್ಕಳದ ಮಿಯ್ಯಾರಿನಲ್ಲಿ ಕಂಬಳದ ಕೋಣಗಳಿಗೆ ಭರ್ಜರಿ ತಾಲೀಮು ನಡೆಯುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಕೋಣಗಳ ಆಯ್ಕೆ, ಅವುಗಳ ಓಟದ ಸಿದ್ಧತೆ ಹಾಗೂ ಸ್ಪರ್ಧೆಯ ವ್ಯವಸ್ಥೆಗಳತ್ತ ಸಂಘಟಕರು ಗಮನ ಹರಿಸಿದ್ದಾರೆ. ಮೈಸೂರು ದಸರಾ ಮೂಲಕ ಕಂಬಳದ ವೈಭವವನ್ನು ರಾಜ್ಯದ ಜನತೆಗೆ ಪರಿಚಯಿಸುವ ಉತ್ಸಾಹದಲ್ಲಿದ್ದಾರೆ. ಮೈಸೂರು ದಸರಾ ಕಂಬಳಕ್ಕೆ ಕೋಣಗಳ ದಂಡೇ ಹರಿದುಬರಲು ಸಿದ್ಧವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಬರೋಬ್ಬರಿ 280 ಜೋಡಿ ಕೋಣಗಳು ನೋಂದಣಿಯಾಗಿವೆ. ಆದರೆ, ಜಿಲ್ಲಾಡಳಿತದ ನಿರ್ಧಾರದಂತೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದು ಕೇವಲ 160 ಜೋಡಿಗಳಿಗೆ ಮಾತ್ರ. ಕಂಬಳದ ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಈ ಪೈಕಿ ನಾಲ್ಕು ವಿಭಾಗಗಳಲ್ಲಿ ಈಗಾಗಲೇ 82 ಜೋಡಿ ಕೋಣಗಳ ಆಯ್ಕೆ ಪೂರ್ಣಗೊಂಡಿದೆ. ಇನ್ನು ಹಕ್ಕಾ ಕಿರಿಯ ಮತ್ತು ನೇಗಿಲು ಕಿರಿಯ ವಿಭಾಗಗಳ ಕೋಣಗಳ ಆಯ್ಕೆ ಬಾಕಿಯಿದೆ. ಕೋಣಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆಧುನಿಕ ಸೆನ್ಸರ್ಗಳ ಬಳಕೆ ಮಾಡಲಾಗುತ್ತಿದ್ದು, ಆಯ್ಕೆಯಲ್ಲಿ ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ಅರ್ಹ ಕೋಣಗಳಿಗೆ ಅವಕಾಶ ಕಲ್ಪಿಸುವ ಮೂಲಕ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಡೆಸಲು ಸಂಘಟಕರು ಸಿದ್ಧತೆ ನಡೆಸಿದ್ದಾರೆ. ಕಂಬಳದ ವೈಭವ ಮೈಸೂರು ದಸರಾ ಅಂಗಳಕ್ಕೆ ಕಾಲಿಡುತ್ತಿರುವ ಬೆನ್ನಲ್ಲೇ, ಈ ಕ್ರೀಡೆಯ ಆಯೋಜನೆ ಕುರಿತು ಪರ-ವಿರೋಧದ ಚರ್ಚೆಯೂ ನಡೆಯುತ್ತಿದೆ. ಆದರೆ, ಕಂಬಳವನ್ನು ವಿರೋಧಿಸುವ ಮುನ್ನ ಅದರ ಹಿಂದಿರುವ ಸಂಸ್ಕೃತಿ, ಕೋಣಗಳ ಆರೈಕೆ ಮತ್ತು ಯಜಮಾನರ ಕಾಳಜಿಯನ್ನು ಅರ್ಥಮಾಡಿಕೊಳ್ಳಬೇಕು ಎನ್ನುವುದು ಸಂಘಟಕರ ವಾದ. ಕಂಬಳ ಕೇವಲ ಮನರಂಜನೆಯ ಕ್ರೀಡೆಯಲ್ಲ. ಇದು ಕರಾವಳಿಯ ಕೃಷಿ ಪರಂಪರೆಯ ಭಾಗ. ಕೋಣಗಳನ್ನು ಸಾಕುವುದು, ಪೋಷಿಸುವುದು ಮತ್ತು ಸ್ಪರ್ಧೆಗೆ ಸಿದ್ಧಪಡಿಸುವುದು ಸುಲಭದ ಕೆಲಸವಲ್ಲ. ಯಜಮಾನನ ಮಾತಿಗೆ ತಕ್ಕಂತೆ ಕೋಣಗಳು ಓಡುವ ರೀತಿ ಈ ಕ್ರೀಡೆಯ ವಿಶೇಷ ಆಕರ್ಷಣೆ. ಕೋಣಗಳಿಗೆ ಅಗತ್ಯವಿರುವಷ್ಟು ನೀರನ್ನು ಮಾತ್ರ ಬಳಸಲಾಗುತ್ತದೆ. ಕೃಷಿ ಚಟುವಟಿಕೆಗಳಲ್ಲಿಯೂ ನೀರಿನ ಸದ್ಬಳಕೆಗೆ ಆದ್ಯತೆ ನೀಡಲಾಗುತ್ತದೆ ಎಂದು ಸಂಘಟಕರು ಸಮರ್ಥಿಸಿಕೊಂಡಿದ್ದಾರೆ. ಮೈಸೂರು ದಸರಾ ಮೂಲಕ ಕಂಬಳದ ಮಹತ್ವವನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸುವ ಆಶಯವನ್ನೂ ವ್ಯಕ್ತಪಡಿಸಿದ್ದಾರೆ. ಇನ್ನು ಕಂಬಳದ ಆಯೋಜನೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವವರೊಂದಿಗೂ ಮುಕ್ತ ಚರ್ಚೆಗೆ ಸಂಘಟಕರು ಸಿದ್ಧರಾಗಿದ್ದಾರೆ. ಕಂಬಳದ ಬಗ್ಗೆ ಯಾವುದೇ ಅನುಮಾನ ಅಥವಾ ಆಕ್ಷೇಪಗಳಿದ್ದರೆ ನೇರವಾಗಿ ತಿಳಿಸಲಿ. ಮಾತುಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕರಿಸಲಿ ಎಂಬುದು ಅವರ ಮನವಿ. ಮೈಸೂರು ದಸರಾ ಕಂಬಳದ ಆಯೋಜನೆಗೆ ಜಿಲ್ಲಾಡಳಿತ ಹಾಗೂ ಪುತ್ತೂರು ಶಾಸಕ ಅಶೋಕ್ ರೈ ಸೇರಿದಂತೆ ಹಲವು ಗಣ್ಯರಿಂದ ಸಹಕಾರ ದೊರೆಯುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಕಂಬಳದ ಜೊತೆಗೆ ವೀರಗಾಸೆ, ಮಲ್ಲಯುದ್ಧ ಸೇರಿದಂತೆ ಕರಾವಳಿಯ ಇತರ ಜಾನಪದ ಕ್ರೀಡೆಗಳಿಗೂ ಸೂಕ್ತ ಪ್ರೋತ್ಸಾಹ ದೊರೆಯಬೇಕು ಎಂಬ ಆಶಯವೂ ವ್ಯಕ್ತವಾಗಿದೆ. ಒಟ್ಟಿನಲ್ಲಿ, ಕರಾವಳಿಯ ಕೆಸರು ಗದ್ದೆಗಳಲ್ಲಿ ವಿಜೃಂಭಿಸುವ ಕಂಬಳ ಇದೀಗ ಮೈಸೂರು ದಸರಾ ಅಂಗಳದಲ್ಲಿ ತನ್ನ ತಾಕತ್ತು ಪ್ರದರ್ಶಿಸಲು ಸಜ್ಜಾಗಿದೆ. 280 ಜೋಡಿ ಕೋಣಗಳ ನೋಂದಣಿ, 160 ಜೋಡಿಗಳಿಗೆ ಸ್ಪರ್ಧೆಯ ಅವಕಾಶ, ಮಿಯ್ಯಾರಿನಲ್ಲಿ ಭರ್ಜರಿ ತಾಲೀಮು.. ಹೀಗೆ ಕಂಬಳದ ಸಿದ್ಧತೆಗಳು ಕಾವೇರುತ್ತಿವೆ. ಕೋಣಗಳ ಶರವೇಗದ ಓಟ, ಓಟಗಾರರ ಸಾಹಸ ಮತ್ತು ತುಳುನಾಡಿನ ಸಾಂಸ್ಕೃತಿಕ ವೈಭವ ಮೈಸೂರು ದಸರಾ ಅಂಗಳದಲ್ಲಿ ಹೇಗೆ ಅನಾವರಣಗೊಳ್ಳಲಿದೆ ಎಂಬ ಕುತೂಹಲ ಈಗ ಎಲ್ಲರಲ್ಲಿದೆ.