ಟಿ20 ಕ್ರಿಕೆಟ್: ಹೋಪ್ ಶತಕಕ್ಕೆ ಒಲಿದ ಗೆಲುವು
ರಾಂಚಿ: ನಾಯಕ ಶಾಯ್ ಹೋಪ್ (ಔಟಾಗದೇ 102;45ಎ) ಅವರ ಸಿಡಿಲಬ್ಬರದ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಶುಕ್ರವಾರ ಎರಡನೇ ಟಿ20 ಪಂದ್ಯದಲ್ಲಿ ಆರು ವಿಕೆಟ್ಗಳಿಂದ ಭಾರತ ತಂಡವನ್ನು ಮಣಿಸಿತು.ಕಳೆದ ನಾಲ್ಕು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಸಂಜು ಸ್ಯಾಮ್ಸನ್ (82;41ಎ, 4x9, 6x4) ಇಲ್ಲಿನ ಜೆಕೆಸಿಎ ಕ್ರೀಡಾಂಗಣ ದಲ್ಲಿ ಲಯ ಕಂಡುಕೊಂಡರು. ಅವರ ಬ್ಯಾಟಿಂಗ್

ರಾಂಚಿ: ನಾಯಕ ಶಾಯ್ ಹೋಪ್ (ಔಟಾಗದೇ 102;45ಎ) ಅವರ ಸಿಡಿಲಬ್ಬರದ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಶುಕ್ರವಾರ ಎರಡನೇ ಟಿ20 ಪಂದ್ಯದಲ್ಲಿ ಆರು ವಿಕೆಟ್ಗಳಿಂದ ಭಾರತ ತಂಡವನ್ನು ಮಣಿಸಿತು.ಕಳೆದ ನಾಲ್ಕು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಸಂಜು ಸ್ಯಾಮ್ಸನ್ (82;41ಎ, 4x9, 6x4) ಇಲ್ಲಿನ ಜೆಕೆಸಿಎ ಕ್ರೀಡಾಂಗಣ ದಲ್ಲಿ ಲಯ ಕಂಡುಕೊಂಡರು. ಅವರ ಬ್ಯಾಟಿಂಗ್ ಬಲದಿಂದ ಭಾರತ 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 249 ರನ್ ಗಳಿಸಿತು.ಗುರಿ ಬೆನ್ನಟ್ಟಿದ ವಿಂಡೀಸ್ ತಂಡವು ಇನ್ನೂ 9 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ಗೆ 252 ರನ್ ಗಳಿಸಿ ಸಂಭ್ರಮಿಸಿತು. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ವಿಂಡೀಸ್ ತಂಡದ ಗರಿಷ್ಠ ರನ್ ಚೇಸ್ ಇದಾಗಿದೆ. ಐದು ಪಂದ್ಯಗಳ ಸರಣಿಯನ್ನು 1–1ರಿಂದ ಸಮಬಲ ಸಾಧಿಸಿತು.ವೇಗಿ ಮಯಂಕ್ ಯಾದವ್ ಅವರು ಮೊದಲ ಓವರ್ನಲ್ಲೇ ಕಮಿಲ್ ಪೂರನ್ (4) ಮತ್ತು ಶಿಮ್ರಾನ್ ಹೆಟ್ಮೆಯರ್ (0) ವಿಕೆಟ್ ಪಡೆದು ಪ್ರವಾಸಿ ತಂಡಕ್ಕೆ ಪೆಟ್ಟು ನೀಡಿದರು. ಇಷ್ಟಾದರೂ ಹೋಪ್ ಭರವಸೆ ಕಳೆದುಕೊಳ್ಳಲಿಲ್ಲ. ಮೂರನೇ ವಿಕೆಟ್ಗೆ ರೋವ್ಮನ್ ಪೊವೆಲ್ (24) ಅವರೊಂದಿಗೆ 53 ರನ್ ಸೇರಿಸಿದರು. ಪೊವೆಲ್ ವಿಕೆಟ್ ಕೂಡ ಮಯಂಕ್ ಪಾಲಾಯಿತು.ನಂತರ ಹೋಪ್ ಅವರನ್ನು ಸೇರಿಕೊಂಡ ಶೆರ್ಫೇನ್ ರುದರ್ ಫೋರ್ಡ್ (84;37ಎ, 4x7, 6x7) ಭಾರತದ ಬೌಲರ್ಗಳ ಮೇಲೆ ಸವಾರಿ ನಡೆಸಿದರು. 12ರ ಸರಾಸರಿಯಲ್ಲಿ ರನ್ ಸೂರೆ ಮಾಡಿದ ಅವರು ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 120 ರನ್ (54ಎ) ಸೇರಿಸಿ ತಂಡಕ್ಕೆ ಮಹತ್ವದ ಚೇತರಿಕೆ ನೀಡಿದರು. ಶತಕದ ಹಾದಿಯಲ್ಲಿದ್ದ ರುದರ್ಫೋರ್ಡ್ ಅವರಿಗೆ ಸ್ಪಿನ್ನರ್ ಕುಲದೀಪ್ ಯಾದವ್ ಪೆವಿಲಿಯನ್ ದಾರಿ ತೋರಿದರು.ಭಾರತ ಪಾಳಯದ ಈ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ನಾಯಕನಿಗೆ ತಕ್ಕ ಆಟ ಮುಂದುವರಿಸಿದ ಹೋಪ್ ಮತ್ತು ರೊಮಾರಿಯೊ ಶೆಫರ್ಡ್ (34;13ಎ, 4x3, 6x3) ಮುರಿಯದ ಐದನೇ ವಿಕೆಟ್ಗೆ ಮಿಂಚಿನ 74 (26ಎ) ರನ್ ಪೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಹೋಪ್ ಇನಿಂಗ್ಸ್ನಲ್ಲಿ ಆರು ಬೌಂಡರಿ ಮತ್ತು ಒಂಬತ್ತು ಭರ್ಜರಿ ಸಿಕ್ಸರ್ಗಳಿದ್ದವು. ಕಳೆದ ನಾಲ್ಕು ಪಂದ್ಯಗಳಲ್ಲಿ ಅವರ ಮೂರನೇ ಶತಕ ಇದಾಗಿದೆ.ಇದಕ್ಕೂ ಮೊದಲು ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಈ ಪಂದ್ಯವು ಸಂಜು ಅವರಿಗೆ ಬಹುತೇಕ ಕೊನೆಯ ಅವಕಾಶವಾಗಿತ್ತು. ಇದನ್ನು ಅರಿತಿದ್ದ ಅವರು ಎಚ್ಚರಿಕೆಯ ಆಟವಾಡಿದರು. ಟಿ20 ಕ್ರಿಕೆಟ್ ಮಾದರಿಯಲ್ಲಿ 9ನೇ ಅರ್ಧಶತಕ ಗಳಿಸಿದರು.ಅಭಿಷೇಕ್ ಶರ್ಮಾ (20; 12ಎ, 4X2, 6X1) ಅವರೊಂದಿಗೆ ಸಂಜು ಮೊದಲ ವಿಕೆಟ್ ಜೊತೆಯಾಟದಲ್ಲಿ 42 ರನ್ ಸೇರಿಸಿದರು. ಪವರ್ಪ್ಲೇ ಮುಗಿಯುವ ಮುನ್ನವೇ ಶರ್ಮಾ ಔಟಾದರು. ಆಗ ಸಂಜು ಜೊತೆಗೂಡಿದ ಇಶಾನ್ ಕಿಶನ್ (43;22ಎ, 4X6, 6X2) ಆರ್ಭಟಿಸಿದರು. ‘ವಿಕೆಟ್ಕೀಪರ್ ಜೋಡಿ’ ಎರಡನೇ ವಿಕೆಟ್ಗೆ 97 ರನ್ ಕಲೆಹಾಕಿತು. ತಮ್ಮ ಅರ್ಧಶತಕದ ಸನಿಹ ಇಶಾನ್ ಔಟಾದರು. 15ನೇ ಓವರ್ನಲ್ಲಿ ಶಾಮರ್ ಸ್ಪಿಂಗರ್ ಹಾಕಿದ ಎಸೆತವನ್ನು ಹೊಡೆದ ಸಂಜು, ಕಮಿಲ್ ಪೂರನ್ ಅವರಿಗೆ ಕ್ಯಾಚ್ ಆದರು. ಕೊನೆಯಲ್ಲಿ ನಾಯಕ ಶ್ರೇಯಸ್ ಅಯ್ಯರ್ (40; 18ಎ, 4X3, 6X3) ಮತ್ತು ತಿಲಕ್ ವರ್ಮಾ (ಔಟಾಗದೇ 44; 18ಎ, 4X3, 6X3) ಅವರಿಬ್ಬರ ಬೀಸಾಟಕ್ಕೆ ಬೌಲರ್ಗಳು ಬಸವಳಿದರು. ಕೊನೆಯ ಐದು ಓವರ್ಗಳಲ್ಲಿ ತಂಡಕ್ಕೆ 87 ರನ್ ಹರಿದುಬಂದವು.ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್ಗಳಲ್ಲಿ 5ಕ್ಕೆ249 (ಅಭಿಷೇಕ್ ಶರ್ಮಾ 20, ಸಂಜು ಸ್ಯಾಮ್ಸನ್ 82, ಇಶಾನ್ ಕಿಶನ್ 43, ಶ್ರೇಯಸ್ ಅಯ್ಯರ್ 40, ತಿಲಕ್ ವರ್ಮಾ ಔಟಾಗದೇ 44, ರಾಸ್ಟನ್ ಚೇಸ್ 24ಕ್ಕೆ3, ಶಾಮರ್ ಸ್ಪ್ರಿಂಗರ್ 64ಕ್ಕೆ2). ವೆಸ್ಟ್ ಇಂಡೀಸ್: 18.3 ಓವರ್ಗಳಲ್ಲಿ 4 ವಿಕೆಟ್ಗೆ 252 (ಶಾಯ್ ಹೋಪ್ 102, ರೋವ್ಮನ್ ಪೊವೆಲ್ 24, ಶೆರ್ಫೇನ್ ರುದರ್ಫೋರ್ಡ್ 84, ರೊಮಾರಿಯೊ ಶೆಫರ್ಡ್ ಔಟಾಗದೇ 34). ಪಂದ್ಯದ ಆಟಗಾರ: ಶಾಯ್ ಹೋಪ್