ಸಂಗೀತ ಸಂಭ್ರಮ ಸಭಾಭವನ ನುಂಗಿತ್ತಾ?
ಪಂಡಿತ ಸವಾಯಿ ಗಂಧರ್ವರ 74ನೆಯ ಪುಣ್ಯತಿಥಿ ಸಂದರ್ಭದ ಅಹೋರಾತ್ರಿ ‘ಸಂಗೀತ ಮಹೋತ್ಸವ’ ಕಾರ್ಯಕ್ರಮ ಕುಂದಗೋಳದಲ್ಲಿ ಅ. 4ರಂದು ನಡೆಯಿತು. ಯುವಕಲಾವಿದರಲ್ಲದೆ ಪಂಡಿತ್ ವೆಂಕಟೇಶಕುಮಾರ್, ಪಂಡಿತ್ಜಯತೀರ್ಥ ಮೇವುಂಡಿ ಮುಂತಾದ ಘಟಾನುಘಟಿಗಳ ಕಛೇರಿಗಳಿದ್ದವು. ಈ ವರ್ಷದ ಸವಾಯಿ ಗಂಧರ್ವ ರಾಷ್ಟ್ರೀಯ ಸಂಗೀತ ಪ್ರಶಸ್ತಿಗೆ ಪಾತ್ರರಾದ ಕೈವಲ್ಯಕುಮಾರ್ ಗೌರವ್ ಅವರ ಕಛೇರಿಯೂ ಇತ್ತು

ಪಂಡಿತ ಸವಾಯಿ ಗಂಧರ್ವರ 74ನೆಯ ಪುಣ್ಯತಿಥಿ ಸಂದರ್ಭದ ಅಹೋರಾತ್ರಿ ‘ಸಂಗೀತ ಮಹೋತ್ಸವ’ ಕಾರ್ಯಕ್ರಮ ಕುಂದಗೋಳದಲ್ಲಿ ಅ. 4ರಂದು ನಡೆಯಿತು. ಯುವಕಲಾವಿದರಲ್ಲದೆ ಪಂಡಿತ್ ವೆಂಕಟೇಶಕುಮಾರ್, ಪಂಡಿತ್ಜಯತೀರ್ಥ ಮೇವುಂಡಿ ಮುಂತಾದ ಘಟಾನುಘಟಿಗಳ ಕಛೇರಿಗಳಿದ್ದವು. ಈ ವರ್ಷದ ಸವಾಯಿ ಗಂಧರ್ವ ರಾಷ್ಟ್ರೀಯ ಸಂಗೀತ ಪ್ರಶಸ್ತಿಗೆ ಪಾತ್ರರಾದ ಕೈವಲ್ಯಕುಮಾರ್ ಗೌರವ್ ಅವರ ಕಛೇರಿಯೂ ಇತ್ತು. ಕುಂದಗೋಳ ಮತ್ತು ಸುತ್ತಮುತ್ತಲಿನ ಸಂಗೀತಪ್ರೇಮಿಗಳು ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. ಎಲ್ಲಾ ಕಲಾವಿದರೂ ಅತ್ಯಂತ ಭಕ್ತಿಪೂರ್ವಕವಾಗಿ ಅತ್ಯುತ್ತಮ ಸಂಗೀತ ಸೇವೆ ನೀಡಿದರು. ಆದರೆ, ಈ ಕಾರ್ಯಕ್ರಮವು ನಡೆದ ಸಂಗೀತ ಸಾಮ್ರಾಟ್ ಸವಾಯಿ ಗಂಧರ್ವ ಸಭಾಭವನ ಮಾತ್ರ ಈ ಕಲಾವಿದರಿಗಾಗಲೀ, ಸಂಗೀತದ ವಾತಾವರಣಕ್ಕಾಗಲೀ ಯಾವುದೇ ರೀತಿಯಲ್ಲೂ ಮೆಚ್ಚುವಂತೆ ಇರಲೇ ಇಲ್ಲ.ಎರಡು ವರ್ಷಗಳ ಹಿಂದೆ ಹೋದಾಗ ಕಂಡಂತೆಯೇ ಈಗಲೂ ಸಭಾಭವನವು ಅತ್ಯಂತ ಕಳಪೆ ನಿರ್ವಹಣೆಯಿಂದ ತನ್ನ ಕಳಾಹೀನ ಚಹರೆಯಲ್ಲೇ ಸಂಗೀತದ ಅಭಿಮಾನಿಗಳನ್ನು ಸ್ವಾಗತಿಸಿತು. ಹೊರಗಡೆ ಝಗಮಗಿಸುವ ಬಣ್ಣಬಣ್ಣದ ವಿದ್ಯುತ್ ಸಾಲುದೀಪಗಳು ಕಂಗೊಳಿಸಿದರೂ, ಒಳಗೆ ತಾತ್ಕಾಲಿಕವಾಗಿ ಸ್ಥಾಪಿಸಿದ ಫ್ಲಡ್ ಲೈಟುಗಳು ಮತ್ತು ಎಲ್ಇಡಿ ಬಲ್ಬುಗಳು ನಮ್ಮನ್ನು ಸ್ವಾಗತಿಸಿದವು. ಇಡೀ ಸಭಾಂಗಣದಲ್ಲಿ ವಿದ್ಯುದ್ದೀಪ ಗಳಿಗಾಗಿ ಛಾವಣಿಯಲ್ಲಿ (ಫಾಲ್ಸ್ ಸೀಲಿಂಗ್) ಜೋಡಿಸಿದ ಡಜನ್ ಗಟ್ಟಲೆ ದೀಪಗಳಲ್ಲಿ ಒಂದೂ ಉರಿಯುತ್ತಿರಲಿಲ್ಲ; ಕಪ್ಪಾಗಿ ರೋದಿಸು ತ್ತಿದ್ದವು. ಕುರ್ಚಿಗಳಂತೂ ಹೇಳ ತೀರದಷ್ಟು ಅವ್ಯವಸ್ಥಿತವಾಗಿದ್ದವು. ಕೆಲವು ಕುರ್ಚಿಗಳೇ ಮಾಯವಾಗಿದ್ದವು. ಹಲವು ಕುರ್ಚಿಗಳಲ್ಲಿ ಕುಳಿತುಕೊಳ್ಳಲು ಕಷ್ಟವಾಗುತ್ತಿತ್ತು.ಶೌಚಾಲಯದ್ದು ಇನ್ನೊಂದು ಅವ್ಯವಸ್ಥೆ. ಕಳೆದ ಸಲ ಶೌಚಾಲಯಗಳಲ್ಲಿ ಮಿಣುಕು ದೀಪವಿತ್ತು; ಈ ಬಾರಿ ದೊಡ್ಡ ಬಲ್ಬ್ ಇತ್ತು ಎನ್ನುವುದನ್ನು ಬಿಟ್ಟರೆ ಶೌಚಾಲಯವು ವಿಪರೀತ ಕೊಳಕು ಸ್ಥಿತಿಯಲ್ಲಿಯೇ ಇತ್ತು. ಯಾವುದೇ ಬಗೆಯ ನಿರ್ವಹಣೆ ಇಲ್ಲದೆ ಹಲವಾರು ಅಡಿಗಳವರೆಗೆ ದುರ್ವಾಸನೆ ಬೀರುತ್ತಲೇ ಇತ್ತು. ಸಭಾಂಗಣದ ಒಳಗೂ ಯಾವುದೇ ಬಗೆಯಲ್ಲೂ ನೆಲವನ್ನು ಸ್ವಚ್ಛ ಮಾಡಿದಂತೆ ಕಾಣಲಿಲ್ಲ; ದೂಳಿನ ಹಾಸಿನ ಮೇಲೇ ಕುರ್ಚಿಗಳಿದ್ದವು. ಸಮಾರಂಭದ ವೇದಿಕೆಯ ಭಿತ್ತಿಯನ್ನು ಹಾಗೇ ಓರೆಯಾಗಿ ಒರಗಿಸಲಾಗಿತ್ತು.ಇಡೀ ಸಭಾಂಗಣವು ಹಲವಾರು ವರ್ಷಗಳಿಂದ ಯಾವುದೇ ಸುಣ್ಣ ಬಣ್ಣ ಕಾಣದೆ ಪೇಲವವಾಗಿ ಇಡೀ ಕಾರ್ಯಕ್ರಮದ ಇದ್ದಬದ್ದ ಸೊಗಸನ್ನೆಲ್ಲ ತಿಂದಿತ್ತು. ಫಾಲ್ಸ್ ಸೀಲಿಂಗಿನ ಚರ್ಮವು ಅಲ್ಲಲ್ಲಿ ಕಿತ್ತು ನೇತಾಡುತ್ತಿತ್ತು. ವಾತಾನುಕೂಲವೇ ಇಲ್ಲದ ಸಭಾಂಗಣದ ಸುತ್ತಲಿನ ಗೋಡೆಗಳಲ್ಲಿ ಮಾತ್ರ ಫ್ಯಾನುಗಳನ್ನು ಅಳವಡಿಸಲಾಗಿತ್ತು; ಕೆಲವು ನಿಷ್ಕ್ರಿಯವಾಗಿದ್ದವು. ಬಂದ ಸಭಿಕರೆಲ್ಲರೂ ಈ ಸಲದ ವಿಪರೀತ ಸೆಕೆಯನ್ನು ಅನುಭವಿಸುತ್ತಲೇ ಸಂಗೀತದ ಸವಿಯುಣ್ಣಬೇಕಾಯಿತು. ಸ್ವತಃ ಜಯತೀರ್ಥ ಮೇವುಂಡಿಯವರೇ ‘ಇಷ್ಟು ಭಯಂಕರ ಸೆಕೆಯನ್ನು ನೋಡಿರಲೇ ಇಲ್ಲ’ ಎಂದರು.ಮುಂದಿನ ವರ್ಷ 75ನೆಯ ಪುಣ್ಯತಿಥಿಯ ಸಂದರ್ಭದಲ್ಲಿ ಮೂರುದಿನಗಳ ಕಾರ್ಯಕ್ರಮವು ಇಲ್ಲೇ ನಡೆಯುವುದೆಂದು ಸಂಘಟಕರು ಘೋಷಿಸಿದರು. ಪಂಡಿತ್ ಗಂಗೂಬಾಯಿ ಹಾನಗಲ್ ಅವರ ಕನಸಿನ ಈ ಯೋಜನೆಯ ಮುಖ್ಯ ಭಾಗವಾದ ಸಭಾಂಗಣವು ಕಳಪೆ ಸ್ಥಿತಿಯಲ್ಲಿರುವುದು ಸಂಘಟಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಮನಕ್ಕೆ ಬಂದಿಲ್ಲವೆ? ಈ ಸಭಾಂಗಣದ ಜೀರ್ಣೋದ್ಧಾರಕ್ಕಾಗಿ ಹಣ ನಿಗದಿಯಾಗಿದ್ದರೆ ಈ ಮಹತ್ವದ ವಾರ್ಷಿಕ ಸಮಾರಂಭದ ಸಮಯಕ್ಕಾದರೂ ಸಭಾಂಗಣವನ್ನು ಸಿದ್ಧಪಡಿಸಬಹುದಿತ್ತಲ್ಲವೆ?ಇಂತಹ ಪ್ರತಿಷ್ಠಿತ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಅತ್ಯಂತ ಅಭಿಮಾನದಿಂದ ವೇದಿಕೆಗೆ ಕರೆತರುವುದಕ್ಕೆ ಟ್ರಸ್ಟಿನ ಅಧ್ಯಕ್ಷರು (ಅವರು ಯಾವುದೋ ಕಾರಣಕ್ಕೆ ಬಂದಿರಲಿಲ್ಲ) ಅಥವಾ ಸದಸ್ಯರು ಬರುವುದು ಅತ್ಯಂತ ನಿರೀಕ್ಷಿತ ವ್ಯವಸ್ಥೆ. ಆದರೆ, ಪ್ರಶಸ್ತಿ ಪಡೆದ ಕೈವಲ್ಯಕುಮಾರ್ ಅವರನ್ನು ವೇದಿಕೆಗೆ ಬರಲು ಆಹ್ವಾನಿಸಲಾಯಿತೇ ವಿನಾ ಯಾವ ಟ್ರಸ್ಟಿಯೂ ಅವರನ್ನು ವೇದಿಕೆಗೆ ಕರೆತರುವುದಕ್ಕೆ ಮುಂದಾಗಲಿಲ್ಲ ಎಂಬುದು ನಾನು ಕಂಡ ಇನ್ನೊಂದು ಅಸಹಜತೆ. (ಈ ಕಲಾವಿದರೆಲ್ಲ ಕಛೇರಿ ಕೊಡುವ ಮುನ್ನ ರಿಯಾಜ್ ಮಾಡುವ ಕೊಠಡಿಗಳು ಹೇಗಿವೆ ಎಂಬುದನ್ನು ನಾನು ನೋಡಿಲ್ಲ).ಕರ್ನಾಟಕದ ಸಂಗೀತ ಕಾರ್ಯಕ್ರಮಗಳಲ್ಲೇ ಅತ್ಯಂತ ಪ್ರತಿಷ್ಠಿತವಾಗಿರುವ ಈ ಕಾರ್ಯಕ್ರಮವನ್ನು ಕುಂದಗೋಳದಲ್ಲೇ ನಡೆಸುವುದು ಸೂಕ್ತವೇ ಆಗಿದೆ. ಆದರೆ, ಸಭಾಭವನ ವನ್ನು ಕುಳಿತುಕೊಳ್ಳಲಾಗದಂತಹ ಕಳಪೆ ಸ್ಥಿತಿಯಲ್ಲಿಟ್ಟು ಕಾಟಾಚಾರಕ್ಕೆ ಬಲ್ಬುಗಳನ್ನು ಹಚ್ಚಿ ಕಾರ್ಯಕ್ರಮ ನಡೆಸುವುದು ಸಂಗೀತ ಪರಂಪರೆಗೆ ತೋರುವ ಅಗೌರವ. ಅದರಲ್ಲೂ ದೇಶದ ವಿವಿಧ ಭಾಗಗಳಿಂದ ಬರುವ ಹಿರಿಯ ಕಲಾವಿದರನ್ನು ಕಳಪೆ ವ್ಯವಸ್ಥೆಯ ವೇದಿಕೆಗೆ ಕರೆಯುವುದು ಕನ್ನಡಿಗರಿಗೇ ಅವಮಾನಕರ.ಡಿಜಿಟಲ್ ವೇದಿಕೆಗಳಲ್ಲಿ ಸಂಗೀತ ಕಛೇರಿಯನ್ನು ಮನೆಯಲ್ಲೇ ಕುಳಿತು ಕೇಳುವ ಅವಕಾಶವಿರುವ ಈ ದಿನಗಳಲ್ಲಿ, ದೂರದ ಊರುಗಳಿಂದ ಬರುವ ಕಲಾವಿದರ, ಯುವ ಪ್ರತಿಭೆಗಳ ಮತ್ತು ಹಿರಿಯ ಕಲಾವಿದರ ಕಛೇರಿಗಳನ್ನು ಗಂಟೆಗಟ್ಟಲೆ ಖುದ್ದಾಗಿ ನೋಡಿ ಅನುಭವಿಸುವ ಖುಷಿಗಾಗಿ ಬರುವವರಿಗೆ ಸಭಾಂಗಣವು ಒಂದಿನಿತಾದರೂ ಸಮಾಧಾನ ಕೊಡಬೇಕಲ್ಲವೆ? ಮುಂದಿನ ವರ್ಷದ ಹೊತ್ತಿಗಾದರೂ ಈ ಸಭಾಂಗಣವನ್ನು ಸುಸಜ್ಜಿತಗೊಳಿಸುತ್ತಾರೆಂದು ಆಶಿಸೋಣವೆ?