ಭಾವನೆಗಳನ್ನು ಮೀರಿದ್ದು ಯಾವುದು ಇಲ್ಲ; ‘ಪ್ರೇಮದ ಊರಲಿ‘ ನಿರ್ದೇಶಕ ಮನೋಜ್ ಕುಮಾರ್
ಬಿಡುಗಡೆಯಾದ ಎಲ್ಲೆಡೆ ಜನಮೆಚ್ಚುಗೆ ಗಳಿಸುತ್ತಿರುವ ಸಿನಿಮಾ ‘ಪ್ರೇಮದ ಊರಲಿ’. ನಿರ್ದೇಶಕ ಮನೋಜ್ ಕುಮಾರ್ ಅವರ ಎರಡನೇ ಸಿನಿಮಾ ಇದು. 2021ರಲ್ಲಿ ಬಿಡುಗಡೆಯಾದ ಮೊದಲ ಸಿನಿಮಾ ‘ಅಕ್ಷಿ’ ರಾಷ್ಟ್ರಪ್ರಶಸ್ತಿ ಪಡೆದಿತ್ತು. ‘ಪ್ರೇಮದ ಊರಲಿ’ಯ ಯಶಸ್ಸು ಮತ್ತು ತಮ್ಮ ವೃತ್ತಿ ಬದುಕಿನ ಕುರಿತು ಮನೋಜ್ ಕುಮಾರ್ ಮಾತನಾಡಿದ್ದಾರೆ.*ಈ ಮಟ್ಟದ ಯಶಸ್ಸಿನ ನಿರೀಕ್ಷೆ ಇತ್ತೆ?ಇಲ್ಲ. ಆ

ಬಿಡುಗಡೆಯಾದ ಎಲ್ಲೆಡೆ ಜನಮೆಚ್ಚುಗೆ ಗಳಿಸುತ್ತಿರುವ ಸಿನಿಮಾ ‘ಪ್ರೇಮದ ಊರಲಿ’. ನಿರ್ದೇಶಕ ಮನೋಜ್ ಕುಮಾರ್ ಅವರ ಎರಡನೇ ಸಿನಿಮಾ ಇದು. 2021ರಲ್ಲಿ ಬಿಡುಗಡೆಯಾದ ಮೊದಲ ಸಿನಿಮಾ ‘ಅಕ್ಷಿ’ ರಾಷ್ಟ್ರಪ್ರಶಸ್ತಿ ಪಡೆದಿತ್ತು. ‘ಪ್ರೇಮದ ಊರಲಿ’ಯ ಯಶಸ್ಸು ಮತ್ತು ತಮ್ಮ ವೃತ್ತಿ ಬದುಕಿನ ಕುರಿತು ಮನೋಜ್ ಕುಮಾರ್ ಮಾತನಾಡಿದ್ದಾರೆ.*ಈ ಮಟ್ಟದ ಯಶಸ್ಸಿನ ನಿರೀಕ್ಷೆ ಇತ್ತೆ?ಇಲ್ಲ. ಆದರೆ ದೊಡ್ಡ ಸಿನಿಮಾ ಮಾಡಬೇಕು, ಜನ ಮರೆಯದಂತಹ ಸಿನಿಮಾ ಆಗಬೇಕು ಎಂಬ ಆಸೆ ಇತ್ತು. ಲೊಕೇಷನ್, ನಟರ ಆಯ್ಕೆ, ಕಥೆ, ಸಂಗೀತ ಎಲ್ಲದರಲ್ಲೂ ಅದಕ್ಕಾಗಿ ಪ್ರಯತ್ನಿಸಿದ್ದೆವು. ಈ ಮಟ್ಟಿಗೆ ಜನ ಸಂಭ್ರಮಿಸುತ್ತಾರೆ ಎಂದುಕೊಂಡಿರಲಿಲ್ಲ.*ಮೊದಲ ಸಿನಿಮಾಕ್ಕೂ ಇದಕ್ಕೂ ಐದು ವರ್ಷ ಅಂತರವಿದೆ. ಏಕೆ?ರಾಷ್ಟ್ರಪ್ರಶಸ್ತಿ ಬಂದ ನಂತರ ಅದೇ ರೀತಿಯ ಸಿನಿಮಾ ಮಾಡಲು ಅವಕಾಶಗಳು ಬಂದವು. ನನ್ನನ್ನು ಆ ಚೌಕಟ್ಟಿಗೆ ಸೀಮಿತಗೊಳಿಸಿದರು. ಆದರೆ, ಕಮರ್ಷಿಯಲ್ ಸಿನಿಮಾ ಮಾಡುವುದು ನನ್ನ ಒಲವು. ಪ್ರಶಸ್ತಿಗಾಗಿ ಸಿನಿಮಾ ಮಾಡುವುದಿಲ್ಲ ಎಂದು ಆಗಲೇ ನಿರ್ಧರಿಸಿದೆ. ನಿರ್ಮಾಪಕರು, ಹೀರೊಗಳು ಅವಕಾಶ ಕೊಡಲಿಲ್ಲ ಎನ್ನುವುದಿಲ್ಲ. ಬಹುಶಃ ಕಮರ್ಷಿಯಲ್ ಸಿನಿಮಾ ಮಾಡಬಲ್ಲೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವಲ್ಲಿ ನಾನೇ ಸೋತಿದ್ದೆ.*‘ಪ್ರೇಮದ ಊರಲಿ’ ಕಥೆ ಹೇಗೆ ಹುಟ್ಟಿತು?ಬೇರೆ ಕಥೆಗಳಿದ್ದವು. ‘ಅಕ್ಷಿ’ಗೆ ಕೈಜೋಡಿಸಿದ್ದ ದೇವೇಂದ್ರ ಅವರೇ ಮತ್ತೆ ಜೊತೆ ಆದರು. ನಂತರ ಏಳು ಜನರು ಸೇರಿಕೊಂಡರು. ಕನಿಷ್ಠ ಬಜೆಟ್ನಲ್ಲಿ, ಆ್ಯಕ್ಷನ್, ಕ್ರೈಮ್ ಸಿನಿಮಾಗಳಿಗಿಂತ ಭಿನ್ನವಾದ ಸಿನಿಮಾ ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ‘ಪ್ರೇಮದ ಊರಲಿ’ಯ ಎಳೆ ಹೊಳೆಯಿತು. ಚಿತ್ರಕ್ಕೆ ಈ ಹೆಸರಿಟ್ಟಿದ್ದೂ ಮೊದಲ ಹಂತದ ಚಿತ್ರೀಕರಣ ಮುಗಿದ ನಂತರ.*ಆರಂಭದ ಪ್ರತಿಕ್ರಿಯೆ ಹೇಗಿತ್ತು?ಮೊದಲ ದಿನದಿಂದಲೇ ಸ್ಪಂದನೆ ಇತ್ತು. ಆದರೆ ಶೋಗಳೇ ಕಡಿಮೆ. ‘ಪ್ರಸನ್ನ’ ಚಿತ್ರಮಂದಿರದಲ್ಲಿ ಬೆಳಿಗ್ಗೆ 10 ಗಂಟೆಗೆ ಕೌಂಟರ್ ಓಪನ್ ಆಗಿರಲಿಲ್ಲ. 10.15ಕ್ಕೆ 50 ಜನರಿದ್ದರು; ಮುಂದಿನ ಹದಿನೈದು ನಿಮಿಷದಲ್ಲಿ 300 ಜನರಾದರು. ಸಂಜೆ ‘ನವರಂಗ್’ ಹೌಸ್ಫುಲ್ ಆಗಿತ್ತು. ಮೈಸೂರು, ಹಾಸನ, ಬೆಂಗಳೂರಿನ ಪ್ರೀಮಿಯರ್ ಶೋಗಳ ಬಳಿಕ ಸಿನಿಮಾ ಚೆನ್ನಾಗಿದೆ ಎಂಬ ಸುದ್ದಿ ಹರಡಿತ್ತು. ಮೊದಲ ದಿನ ರಾಜ್ಯದಾದ್ಯಂತ 60 ಶೋಗಳಷ್ಟಿದ್ದವು. ಈಗ 600 ಶೋಗಳವರೆಗೂ ಬಂದಿದೆ.ನಿಮ್ಮ ಸಿನಿಮಾದಲ್ಲಿ ಎಮೋಷನ್ಗೆ ಏಕೆ ಒತ್ತು?ಎಮೋಷನ್ ಮೀರಿದ್ದು ಯಾವುದೂ ಇಲ್ಲ. ಗೆದ್ದಿರುವ ಯಾವುದೇ ಸಿನಿಮಾ ತೆಗೆದುಕೊಳ್ಳಿ; ಕಾಡುವುದು ಅದರ ಭಾವನಾತ್ಮಕ ಅಂಶವೇ. ‘ಜೋಗಿ’ಯಲ್ಲಿ ಮಚ್ಚಿದ್ದರೂ ಕಾಡಿದ್ದು ತಾಯಿ–ಮಗನ ಸೆಂಟಿಮೆಂಟ್. ‘ದುನಿಯಾ’ದಲ್ಲಿ ಹೊಡಿ, ಬಡಿ ಇದ್ದರೂ ಕಾಡಿದ್ದು ತಾಯಿ ಸಮಾಧಿ ಕಟ್ಟಲು ಪರಿತಪಿಸುವ ಮಗನ ಯಾತನೆ. ‘ಇತಿಹಾಸ ತಿಳಿಯದವ ಇತಿಹಾಸ ಸೃಷ್ಟಿಸಲಾರ’ ಎಂದು ನಂಬಿದವನು ನಾನು. ಗೆದ್ದ ಸಿನಿಮಾಗಳನ್ನು ಗಮನಿಸಿದಾಗ ಎಮೋಷನ್ ಕೆಲಸ ಮಾಡುತ್ತದೆ ಎನ್ನಿಸಿತು.*‘ಪ್ರೇಮದ ಊರಲಿ’ ಚಿತ್ರರಂಗಕ್ಕೆ ಆಕ್ಸಿಜನ್ ನೀಡಿದೆ ಎಂಬ ಮಾತಿದೆ?ಆ ಮಾತನ್ನು ನಾನೂ ಕೇಳಿದ್ದೇನೆ. ಆದರೆ ಒಪ್ಪುವುದಿಲ್ಲ. ‘ಗಂಧದಗುಡಿ’ ತುಂಬಾ ಚೆನ್ನಾಗಿದೆ. ಅದಕ್ಕೆ ನಾವು ಕೊಡುವಂಥದ್ದು ಏನೂ ಇಲ್ಲ. ನಾವು ಹೊಸದಾಗಿ ಬರುವವರು ಎರಡು–ಮೂರು ಸಿನಿಮಾಗಳಿಗೆ ಸಹಾಯಕನಾಗಿ, ಸಿದ್ಧತೆಯೊಂದಿಗೆ ಬಂದು ಅದರ ಘಮಲನ್ನು ಹೆಚ್ಚಿಸಬೇಕಷ್ಟೇ. ಚಿತ್ರರಂಗ ನನ್ನ ಸಿನಿಮಾದ ಘಮಲನ್ನು ಸ್ವೀಕರಿಸಿದೆ ಎಂದಷ್ಟೇ ನಾನು ಭಾವಿಸುತ್ತೇನೆ.*ಮುಂದಿನ ಯೋಜನೆ?ಅವಕಾಶಗಳು ಬರುತ್ತಿವೆ. ದೊಡ್ಡ ನಿರ್ಮಾಣ ಸಂಸ್ಥೆಗಳು ಸಂಪರ್ಕಿಸಿವೆ. ಹೊಸ ಪ್ರೊಡಕ್ಷನ್ ಹೌಸ್ ಶುರು ಮಾಡುವ ಅವಕಾಶಗಳಿವೆ. ಬೇರೆ ಭಾಷೆಗಳಿಂದಲೂ ಕರೆ ಬಂದಿವೆ. ಆದರೆ, ಬೇರೆ ಭಾಷೆಯ ಸಿನಿಮಾ ನಿರ್ವಹಿಸುವಷ್ಟು ಅನುಭವ ನನಗಿಲ್ಲ. ಕನ್ನಡದ ಜನ ಪ್ರೀತಿ ಕೊಟ್ಟಿದ್ದಾರೆ. ಇದು ನನ್ನ ಭಾಷೆ; ಹಿಡಿತವಿದೆ, ಭಾವನೆಗಳು ಗೊತ್ತಿವೆ. ಮೂರು–ನಾಲ್ಕು ಕಥೆಗಳಿವೆ. ಮುಂದೆಯೂ ಜನರಿಗೆ ಹತ್ತಿರವಾಗುವ ಕೌಟುಂಬಿಕ ಹಿನ್ನೆಲೆಯ, ಮಣ್ಣಿನ ಕಥೆಗಳನ್ನೇ ಹೇಳಲು ಬಯಸುತ್ತೇನೆ.ಟಾರ್ಚ್ಬಾಯ್ನಿಂದ ಯಶಸ್ವಿ ನಿರ್ದೇಶಕನವರೆಗೆ... ಮನೋಜ್ ಕುಮಾರ್ ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬೈರೇಗೌಡನಕೊಪ್ಪಲಿನವರು. ಚಿತ್ರರಂಗದ ಹಿನ್ನೆಲೆಯಿಲ್ಲದ ಕುಟುಂಬ. ಓದಿದ್ದು ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸಾಪುರದಲ್ಲಿ. 18 ವರ್ಷಗಳ ಹಿಂದೆ ಸಂತೋಷ್ ಚಿತ್ರಮಂದಿರದಲ್ಲಿ ಟಾರ್ಚ್ಬಾಯ್ ಆಗಿ ಕೆಲಸ ಆರಂಭಿಸಿದರು. ನಿರ್ದೇಶಕನಾಗಬೇಕೆಂಬ ಕನಸಿನಿಂದ ಆರು ವರ್ಷ ಓಂ ಪ್ರಕಾಶ್ ರಾವ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ‘ಎಕೆ 47’ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದರು. ಈ ಅವಧಿಯಲ್ಲಿ ಸಂಕಲನ ಚಿತ್ರಕಥೆ ಸಂಭಾಷಣೆ ವಿಭಾಗಗಳಲ್ಲೂ ಆಸಕ್ತಿ ಬೆಳೆಸಿಕೊಂಡರು.