ಹಿಂಡಲಗಾ ಜೈಲಿಗೆ ಪ್ರಜ್ವಲ್ ರೇವಣ್ಣ?
ಬೆಂಗಳೂರು: ಜೈಲಿನ ಬ್ಯಾರಕ್ನಲ್ಲಿ ಮೊಬೈಲ್ ಬಳಸಿ ಸಿಕ್ಕಿಬಿದ್ದಿದ್ದ ಅತ್ಯಾಚಾರ ಪ್ರಕರಣದ ಅಪರಾಧಿ, ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡುವಂತೆ ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.‘ಹಿಂಡಲಗಾ ಜೈಲಿನ ಮುಖ್ಯಸ್ಥರಿಗೆ ಇ–ಮ

ಬೆಂಗಳೂರು: ಜೈಲಿನ ಬ್ಯಾರಕ್ನಲ್ಲಿ ಮೊಬೈಲ್ ಬಳಸಿ ಸಿಕ್ಕಿಬಿದ್ದಿದ್ದ ಅತ್ಯಾಚಾರ ಪ್ರಕರಣದ ಅಪರಾಧಿ, ಹಾಸನ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡುವಂತೆ ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.‘ಹಿಂಡಲಗಾ ಜೈಲಿನ ಮುಖ್ಯಸ್ಥರಿಗೆ ಇ–ಮೇಲ್ ಮೂಲಕ ಮಾಹಿತಿ ರವಾನೆ ಮಾಡಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಪ್ರಜ್ವಲ್ನನ್ನು ಸ್ಥಳಾಂತರ ಮಾಡಲಾಗುವುದು’ ಎಂದು ಮೂಲಗಳು ತಿಳಿಸಿವೆ.‘ಡಿಐಜಿ ಸೋಮಶೇಖರ್ ಜೊತೆ ಸೇರಿ ಸುಪ್ರೀಂ ಕೋರ್ಟ್ ಆದೇಶದ ಮಾದರಿಯಲ್ಲೇ ನಕಲಿ ದಾಖಲೆ ಸೃಷ್ಟಿಸಿ ಬಿಡುಗಡೆಗೊಂಡಿದ್ದ ಅಪರಾಧಿ ಶಂಕರ್ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ. ಉಳಿದಂತೆ, ಕೋಕಾ ಕಾಯ್ದೆ ಅಡಿಯಲ್ಲಿ ಬಂಧನಕ್ಕೆ ಒಳಗಾಗಿರುವ ಏಳು ಮಂದಿಯನ್ನು ರಾಜ್ಯದ ಬೇರೆ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿಯ ಡಿಸಿಪಿಗಳಾದ ಹರಿಬಾಬು ಮತ್ತು ಇಮಾಮ್ ಖಾಸೀಂ ನೇತೃತ್ವದ ತಂಡವು ಆಗಸ್ಟ್ನಲ್ಲಿ ದಾಳಿ ನಡೆಸಿ ಪರಿಶೀಲಿಸಿತ್ತು. ಪ್ರಜ್ವಲ್ ರೇವಣ್ಣನನ್ನು ಇರಿಸಲಾಗಿದ್ದ ವಿಶೇಷ ಭದ್ರತಾ ವಿಭಾಗದ ಬ್ಯಾರಕ್ನಲ್ಲೂ ಅಂದು ಸಿಸಿಬಿ ತಂಡವು ಪರಿಶೀಲನೆ ನಡೆಸಿತ್ತು. ಆ ಸಂದರ್ಭದಲ್ಲಿ ಮೊಬೈಲ್ ಫೋನ್, ಚಾರ್ಜರ್, ಸಿಮ್ ಕಾರ್ಡ್, ಪೆನ್ ಡ್ರೈವ್, ಡೈರಿ ಸಿಕ್ಕಿತ್ತು. ಸಿಸಿಬಿ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ ಸ್ವಾಮಿ ಅವರು ನೀಡಿದ ದೂರು ಆಧರಿಸಿ, ಪ್ರಜ್ವಲ್ ಹಾಗೂ ಆತನಿಗೆ ಸಹಕರಿಸಿದ್ದ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ಪೊಲೀಸರು ಎರಡು ದಿನ ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.‘ಬ್ಯಾರಕ್ನಲ್ಲಿ ಪತ್ತೆಯಾದ ಮೊಬೈಲ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಪರಿಶೀಲನೆ ವೇಳೆ ಮೊಬೈಲ್ನಲ್ಲಿ ಕೆಲವು ಅಶ್ಲೀಲ ವಿಡಿಯೊ ಹಾಗೂ ಫೋಟೊ ಇರುವುದು ಕಂಡುಬಂದಿತ್ತು. ಅಲ್ಲದೆ ಪ್ರಜ್ವಲ್ ಜೈಲಿನಿಂದಲೇ ತಮ್ಮ ತಂದೆ, ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ, ತಾಯಿ ಭವಾನಿ ರೇವಣ್ಣ ಹಾಗೂ ಸ್ನೇಹಿತರ ಜತೆಗೆ ನಿರಂತರವಾಗಿ ಮೊಬೈಲ್ನಲ್ಲಿ ಸಂಭಾಷಣೆ ನಡೆಸಿರುವುದು ಪತ್ತೆಯಾಗಿತ್ತು’ ಎಂದು ಮೂಲಗಳು ಹೇಳಿವೆ.ಪ್ರಕರಣದ ತನಿಖೆಗೆ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದ ತಂಡ ರಚನೆ ಮಾಡಲಾಗಿತ್ತು. ನಿರ್ಲಕ್ಷ್ಯ ತೋರಿದ್ದ ಆರೋಪದಲ್ಲಿ ಜೈಲರ್ ರಮೇಶ್ ಧರ್ಮಟ್ಟಿ, ವಾರ್ಡರ್ ಮಹೇಶ್ ಸಜ್ಜನ್ ಅವರನ್ನು ಅಮಾನತು ಮಾಡಲಾಗಿತ್ತು.