ಬೀದರ್: ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಜಿಲ್ಲಾಧಿಕಾರಿ ಸೂಚನೆ
ಬೀದರ್: ಕಮಲನಗರದಲ್ಲಿ ನಕಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಕೋಲ್ಕತ್ತದ ಗೌತಮ್ ಸಮದರ ಹಾಗೂ ಸುಜಲ್ ಕುಮಾರ್ ಸೇನ್ ಎಂಬುವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಇಬ್ಬರಿಗೂ ತಲಾ ₹2.50 ಲಕ್ಷ ದಂಡ ವಿಧಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ ನೀಡಿದರು.ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಪಿಎಂಇ ಜಿಲ

ಬೀದರ್: ಕಮಲನಗರದಲ್ಲಿ ನಕಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಕೋಲ್ಕತ್ತದ ಗೌತಮ್ ಸಮದರ ಹಾಗೂ ಸುಜಲ್ ಕುಮಾರ್ ಸೇನ್ ಎಂಬುವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಇಬ್ಬರಿಗೂ ತಲಾ ₹2.50 ಲಕ್ಷ ದಂಡ ವಿಧಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ ನೀಡಿದರು.ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಪಿಎಂಇ ಜಿಲ್ಲಾ ಮಟ್ಟದ ನೋಂದಣಿ ಮತ್ತು ಕುಂದು ಕೊರತೆ ಪರಿಹಾರ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಹಿಂದೆ ತಲಾ ₹25,000 ದಂಡ ವಿಧಿಸಿ, ಪುನಃ ವೈದ್ಯ ವೃತ್ತಿ ನಡೆಸದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೆ, ಇವರು ಮತ್ತೆ ವೈದ್ಯ ವೃತ್ತಿ ಮುಂದುವರಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಬೇಕು ಎಂದು ನಿರ್ದೇಶನ ನೀಡಿದರು. ಆಯುರ್ವೇದ ವೈದ್ಯಕೀಯ ಪದವಿ ಪಡೆದು ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಅಲೋಪಥಿ ವೃತ್ತಿ ನಡೆಸುತ್ತಿದ್ದ ಡಾ. ಹರೀಶ ವಿಶ್ವಕರ್ಮ ಕೂಡ ಕಾನೂನು ಉಲ್ಲಂಘಿಸಿದ್ದು, ₹50 ಸಾವಿರ ದಂಡ ವಿಧಿಸಿ, ಅಲೋಪಥಿ ಮುಂದುವರೆಸದಂತೆ ಎಚ್ಚರಿಕೆ ಕೊಟ್ಟರು. ಯಾವುದೇ ಅಧಿಕೃತ ವೈದ್ಯಕೀಯ ಪದವಿ ಇಲ್ಲದೆ ಔರಾದ್ ತಾಲ್ಲೂಕಿನ ಜಂಬಗಿಯಲ್ಲಿ ವೈದ್ಯ ವೃತ್ತಿ ನಡೆಸುತ್ತಿದ್ದ ರಾಜಶೇಖರ ಹಾಗೂ ಬೀದರ್ ತಾಲ್ಲೂಕಿನ ಆಣದೂರಿನಲ್ಲಿ ಸುಭಾಷದಾಸ್ ಹಾಗೂ ಭಾಲ್ಕಿ ತಾಲ್ಲೂಕಿನ ಬೀರಿಯಲ್ಲಿ ನಕಲಿ ಕ್ಲಿನಿಕ್ ನಡೆಸುತ್ತಿದ್ದ ವಿಶ್ವಜೀತ್ ಅವರಿಗೆ ತಲಾ ₹50 ಸಾವಿರ ದಂಡ ವಿಧಿಸಿದರು.ಕಮಲನಗರ ತಾಲ್ಲೂಕಿನ ಚಾಂದೋರಿಯ ಪ್ರೇಮಕುಮಾರ ಅವರು ಸರ್ಕಾರಿ ಶುಶ್ರೂಷಾಧಿಕಾರಿಯಾಗಿ ಅನಧಿಕೃತವಾಗಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದರು. 2026ರ ಜನವರಿಯಲ್ಲಿ ಇವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಹೀಗಿದ್ದರೂ ಅವರು ಪುನಃ ಕ್ಲಿನಿಕ್ ನಡೆಸುತ್ತಿದ್ದರು. ಅ. 5ರಂದು ಕ್ಲಿನಿಕ್ ಸೀಜ್ ಮಾಡಿ, ಅವರ ಜೀವನಾಂಶ ಭತ್ಯೆ ತಡೆ ಹಿಡಿಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಿಗೆ ಶಿಫಾರಸು ಮಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್, ಉಪವಿಭಾಗಾಧಿಕಾರಿ ಅಭಿನವ್ ಜೈನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನೀಲಕುಮಾರ ಚಿಂತಾಮಣಿ, ಕೆಪಿಎಂಇ ಜಿಲ್ಲಾ ನೋಡಲ್ ಅಧಿಕಾರಿಗಳು, ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.