ಚುನಾವಣಾ ಆಯೋಗದ ವಿರುದ್ಧ ಹೋರಾಟ: ಸಿಜೆಪಿಯ ದೀಪ್ಕೆ, ದಾಸ್, ರಾಂಕಾ ಪೊಲೀಸರ ವಶಕ್ಕೆ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ತಲೆದಂಡಕ್ಕೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಶ್ ರಾಂಕಾ ಅವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.ಈ ಮೂವರು ದೆಹಲಿಗೆ ವಿಮಾನದಲ್ಲಿ ಬಂದಿಳಿಯುತ್ತಿದ್ದಂತೆ ವಶಕ್ಕೆ ಪಡೆಯಲಾಗಿದೆ ಎಂದು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ತಲೆದಂಡಕ್ಕೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಶ್ ರಾಂಕಾ ಅವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.ಈ ಮೂವರು ದೆಹಲಿಗೆ ವಿಮಾನದಲ್ಲಿ ಬಂದಿಳಿಯುತ್ತಿದ್ದಂತೆ ವಶಕ್ಕೆ ಪಡೆಯಲಾಗಿದೆ ಎಂದು ಸಿಜೆಪಿ ತಿಳಿಸಿದೆ.ದೆಹಲಿ ಪೊಲೀಸರ ಕ್ರಮವನ್ನು ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿರುವ ಸಿಜೆಪಿ, ಪ್ರತಿಭಟನಾ ಸ್ಥಳಕ್ಕೆ ತಲುಪುವುದನ್ನು ತಡೆಯುವ ಸಲುವಾಗಿ ಪೂರ್ವಯೋಜಿತ ಕ್ರಮದ ಭಾಗವಾಗಿ ನಾಯಕರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದೆ.ಕಾರ್ಯಕ್ರಮವೊಂದರ ಸಲುವಾಗಿ ಮುಂಬೈಗೆ ತೆರಳಿದ್ದ ದೀಪ್ಕೆ, ಸೌರವ್ ಹಾಗೂ ರಾಂಕಾ ಅವರು ಶುಕ್ರವಾರ ಅಲ್ಲಿಯೇ ಉಳಿದುಕೊಂಡಿದ್ದರು. ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದರು.ಮೂವರೂ ನಾಯಕರನ್ನು ಬೇಷರತ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿರುವ ಸಿಜೆಪಿ, ಬಂಧನ ಕ್ರಮವು ಮುಕ್ತ ಸಂಚಾರ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಪ್ರತಿಪಾದಿಸಿದೆ.ದೇಶದಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಹಾಗೂ ಮತದಾರರ ನೋಂದಣಿಗೆ ಬಳಸುವ ‘ಫಾರ್ಮ್–6’ ವಿಚಾರವಾಗಿ ಪ್ರತಿಭಟನೆಗೆ ಕರೆ ನೀಡಿರುವ ಸಿಜೆಪಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದೆ.