ಟ್ರಂಪ್ ಯೂ-ಟರ್ನ್ | ಭಾರತದ ಮೇಲೆ ಸುಂಕ ಹೇರಿ ರಷ್ಯಾದಿಂದಲೇ ಡೀಸೆಲ್ ಖರೀದಿಗೆ ಮುಂದಾದ ಅಮೆರಿಕ
ವಾಷಿಂಗ್ಟನ್: ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ ಎಂಬ ಕಾರಣಕ್ಕೆ ಈ ಹಿಂದೆ ಭಾರತದ(India) ಮೇಲೆ ಹೆಚ್ಚುವರಿ ತೆರಿಗೆ ಮತ್ತು ದಂಡನಾತ್ಮಕ ಕ್ರಮಗಳನ್ನು ಜರುಗಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ತಾವೇ ರಷ್ಯಾದಿಂದ ನೇರವಾಗಿ ಡೀಸೆಲ್(Diesel) ಖರೀದಿಸಲು ಮುಂದಾಗುವ ಮೂಲಕ ಯೂ-ಟರ್ನ್ ಹೊಡೆದಿದ್ದಾರೆ. ಮುಂಬರುವ ಮಹತ್ವದ ಯು

ವಾಷಿಂಗ್ಟನ್: ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ ಎಂಬ ಕಾರಣಕ್ಕೆ ಈ ಹಿಂದೆ ಭಾರತದ(India) ಮೇಲೆ ಹೆಚ್ಚುವರಿ ತೆರಿಗೆ ಮತ್ತು ದಂಡನಾತ್ಮಕ ಕ್ರಮಗಳನ್ನು ಜರುಗಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ತಾವೇ ರಷ್ಯಾದಿಂದ ನೇರವಾಗಿ ಡೀಸೆಲ್(Diesel) ಖರೀದಿಸಲು ಮುಂದಾಗುವ ಮೂಲಕ ಯೂ-ಟರ್ನ್ ಹೊಡೆದಿದ್ದಾರೆ. ಮುಂಬರುವ ಮಹತ್ವದ ಯುಎಸ್ ಮಧ್ಯಂತರ ಚುನಾವಣೆಗಳ ಹಿನ್ನೆಲೆಯಲ್ಲಿ ದೇಶೀಯವಾಗಿ ಗಗನಕ್ಕೇರಿರುವ ಇಂಧನ ದರಗಳನ್ನು ನಿಯಂತ್ರಿಸಲು ಟ್ರಂಪ್ ಮಾಸ್ಕೋ ಮೇಲಿನ ಯುದ್ಧ ನಿರ್ಬಂಧಗಳನ್ನು ಸಡಿಲಿಸಿದ್ದು, ರಷ್ಯಾದಿಂದ(Russia) ಲಕ್ಷಾಂತರ ಟನ್ ಡೀಸೆಲ್ ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಪ್ರಕಟಿಸಿದ್ದಾರೆ. ಅಮೆರಿಕದಲ್ಲಿ ಜೀವನ ವೆಚ್ಚ ವಿಪರೀತವಾಗಿ ಹೆಚ್ಚಿದ್ದು, ಮತದಾರರಲ್ಲಿ ತೀವ್ರ ಅಸಮಾಧಾನ ಮೂಡಿದೆ. ಇದರಿಂದಾಗಿ ಕಾಂಗ್ರೆಸ್ (ಸಂಸತ್ತು) ಮೇಲಿನ ಹಿಡಿತ ಕಳೆದುಕೊಳ್ಳುವ ಭೀತಿಯಲ್ಲಿರುವ ರಿಪಬ್ಲಿಕನ್ ಪಕ್ಷಕ್ಕೆ ಈ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ. ಫೆಬ್ರವರಿಯಲ್ಲಿ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯ ಬಳಿಕ, ವಿಶ್ವದ ಪ್ರಮುಖ ಇಂಧನ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಟೆಹ್ರಾನ್ ನಿರ್ಬಂಧಿಸಿತ್ತು. ಪರಿಣಾಮವಾಗಿ, ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಶೇ. 46ರಷ್ಟು ಜಿಗಿದು ಪ್ರತಿ ಗ್ಯಾಲನ್ಗೆ 4.37 ಡಾಲರ್ ತಲುಪಿದ್ದರೆ, ಡೀಸೆಲ್ ಬೆಲೆ ಶೇ. 67ರಷ್ಟು ಏರಿಕೆಯಾಗಿ ಪ್ರತಿ ಗ್ಯಾಲನ್ಗೆ 6.28 ಡಾಲರ್ ತಲುಪಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನಡೆಸಿದ ಮಾತುಕತೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಟ್ರಂಪ್ ತಕ್ಷಣವೇ ಅಮೆರಿಕ ಹಾಗೂ ಜಾಗತಿಕ ಮಾರುಕಟ್ಟೆಗೆ ರಷ್ಯಾ 3,00,000 ಟನ್ಗಳಿಗೂ ಅಧಿಕ ಡೀಸೆಲ್ ಪೂರೈಸಲಿದೆ. ನವೆಂಬರ್ನಲ್ಲಿ ಹೆಚ್ಚುವರಿಯಾಗಿ 5,00,000 ಟನ್ ಹಾಗೂ ನಂತರ ಹಂತವಾಗಿ 10 ಲಕ್ಷ ಟನ್ ಡೀಸೆಲ್ ಸರಬರಾಜಾಗಲಿದೆ. ರಷ್ಯಾದ ಇಂಧನವು ಜಾಗತಿಕ ಮಾರುಕಟ್ಟೆಗೆ ತಲುಪಲು ಅನುಕೂಲವಾಗುವಂತೆ ಅಮೆರಿಕದ ಖಜಾನೆ ಇಲಾಖೆಯು ಏಪ್ರಿಲ್ 2027ರವರೆಗೆ ತಾತ್ಕಾಲಿಕ ಪರವಾನಗಿ ನೀಡಿದೆ. ಇದನ್ನೂ ಓದಿ: ಇಸ್ರೇಲ್ನಿಂದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ಗೆ ಶೌರ್ಯ ಪ್ರಶಸ್ತಿ ಘೋಷಣೆ ನಮ್ಮ ರೈತರು, ಪಶುಪಾಲಕರು ಮತ್ತು ಟ್ರಕ್ ಚಾಲಕರು ಸೇರಿದಂತೆ ಸಮಸ್ತ ಅಮೆರಿಕನ್ನರಿಗೆ ಇಂಧನ ದರ ಇಳಿಸುವುದೇ ನನ್ನ ಪ್ರಮುಖ ಆದ್ಯತೆ ಎಂದು ಟ್ರಂಪ್ ಹೇಳಿದ್ದಾರೆ. ರಷ್ಯಾದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ಟ್ರಂಪ್ ನಿರ್ಧಾರಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು “ಅನರ್ಹ ಹಾಗೂ ಅತ್ಯಂತ ದುರ್ಬಲ ನಿರ್ಧಾರ” ಎಂದು ಜರೆದಿದ್ದಾರೆ. ಇಂಧನ ಬೆಲೆ ಏರಿಕೆಗೆ ಜಾಗತಿಕ ರಾಜಕೀಯ ಕಾರಣವಾಗಿದ್ದರೂ, ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ಉಕ್ರೇನ್ ನಡೆಸಿದ ದಾಳಿಗಳೇ ಕಾರಣ ಎಂದು ಟ್ರಂಪ್ ಆರೋಪಿಸಿದ್ದಾರೆ. ಕುತೂಹಲಕರ ಸಂಗತಿಯೆಂದರೆ, ಚಳಿಗಾಲ ಆರಂಭಕ್ಕೂ ಮುನ್ನ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಮಿಯಾಮಿಯಲ್ಲಿ ಅಮೆರಿಕ ಮತ್ತು ಉಕ್ರೇನ್ ಸಂಧಾನಕಾರರು ಸಭೆ ನಡೆಸುತ್ತಿರುವ ನಡುವೆಯೇ ಈ ತೈಲ ಒಪ್ಪಂದ ಬಹಿರಂಗಗೊಂಡಿದೆ. ಯುದ್ಧ ನಿಲ್ಲಿಸುವ ಟ್ರಂಪ್ ಯತ್ನಗಳಿಗೆ ಮಾಸ್ಕೋದ ಬೃಹತ್ ಪ್ರಾದೇಶಿಕ ಬೇಡಿಕೆಗಳು ಅಡ್ಡಿಯಾಗಿದ್ದು, ಇತ್ತ ರಷ್ಯಾ ಉಕ್ರೇನ್ನ ಶೇ. 20ರಷ್ಟು ಭಾಗವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ.