ಒಳ್ಳೆಯವರ ಸಹವಾಸ ಮಾಡಬೇಕು ಮತ್ತು ಸದ್ವಿಚಾರದಲ್ಲಿ ತೊಡಗಬೇಕು: ಗವಿಮಠ ಶ್ರೀ ಸಲಹೆ
ಮೈಸೂರು: ‘ಮನಸ್ಸಿಗೆ ಆಕಾರ ಎಂಬುದಿಲ್ಲ. ಹೀಗಾಗಿ, ಸತ್ಸಂಗದಲ್ಲಿ ಪಾಲ್ಗೊಂಡು ಒಳ್ಳೆಯದನ್ನು ಕೇಳಬೇಕು, ಒಳ್ಳೆಯವರ ಸಹವಾಸ ಮಾಡಬೇಕು ಮತ್ತು ಸದ್ವಿಚಾರದಲ್ಲಿ ತೊಡಗಬೇಕು’ ಎಂದು ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಸಲಹೆ ನೀಡಿದರು.ದಸರಾ ಉದ್ಘಾಟನೆಗೆಂದು ಆಗಮಿಸಿರುವ ಅವರು, ಜಿಲ್ಲೆಯ ನಂಜನಗೂಡು ತಾಲ್ಲೂಕು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ಶನಿ

ಮೈಸೂರು: ‘ಮನಸ್ಸಿಗೆ ಆಕಾರ ಎಂಬುದಿಲ್ಲ. ಹೀಗಾಗಿ, ಸತ್ಸಂಗದಲ್ಲಿ ಪಾಲ್ಗೊಂಡು ಒಳ್ಳೆಯದನ್ನು ಕೇಳಬೇಕು, ಒಳ್ಳೆಯವರ ಸಹವಾಸ ಮಾಡಬೇಕು ಮತ್ತು ಸದ್ವಿಚಾರದಲ್ಲಿ ತೊಡಗಬೇಕು’ ಎಂದು ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಸಲಹೆ ನೀಡಿದರು.ದಸರಾ ಉದ್ಘಾಟನೆಗೆಂದು ಆಗಮಿಸಿರುವ ಅವರು, ಜಿಲ್ಲೆಯ ನಂಜನಗೂಡು ತಾಲ್ಲೂಕು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ಶನಿವಾರ ಸಂಜೆ ಭೇಟಿ ನೀಡಿದ್ದ ವೇಳೆ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.‘ಜೀವನ ಎಂದರೇನು ಎಂಬ ಕುತೂಹಲ ನಮ್ಮೆಲ್ಲರಲ್ಲೂ ಇದೆ. ಚಿಂತಕ ವಿಲಿಯಂ ಜೇಮ್ಸ್ ಅವರು ‘ಜೀವನ ಎನ್ನುವುದು ಅನುಭವ ಪ್ರವಾಹ’ ಎಂದು ಹೇಳಿದ್ದಾರೆ. ಒಮ್ಮೆ ಸುಖ, ಒಮ್ಮೆ ದುಃಖ, ಒಮ್ಮೆ ಹಿತ, ಇನ್ನೊಮ್ಮೆ ಅಹಿತದ ಅನುಭವ ಆಗುತ್ತದೆ. ಅವು, ಇಂದ್ರಿಯಗಳು– ವಿಷಯಗಳ ಸಂಪರ್ಕದಿಂದ ಆಗುತ್ತದೆ. ನಮಗಾದ ಅನುಭವ ಒಂದೇ ರೀತಿಯಲ್ಲಿ ಆಗಿರುವುದಿಲ್ಲ’ ಎಂದು ವ್ಯಾಖ್ಯಾನಿಸಿದರು.‘ಇಲ್ಲಿ ನೆರೆದಿರುವವರ ಮುಖದಲ್ಲಿರುವ ಸಂತೋಷ ನೋಡಿದರೆ, ಗುಡಿಯಲ್ಲಿನ ದೇವರನ್ನು ನೋಡಬೇಕು ಎನಿಸುವುದಿಲ್ಲ. ಅಷ್ಟು ಸಂತೋಷ ನಿಮ್ಮಲ್ಲಿದೆ. ಇದು ಸಂತೋಷದ ಅನುಭವ. ಹೂಮಾಲೆ ಹಾಕಿಕೊಂಡಾಗ ಸಂತೋಷ ಆಗಬಹುದು. ಆದರೆ, ಅದರಲ್ಲಿನ ಕೆಂಪಿರಿವೆ ಕಡಿದಾಗ ದುಃಖ ಕೊಡುತ್ತಿರುತ್ತದೆ’ ಎಂದಾಗ ಪಾಲ್ಗೊಂಡಿದ್ದವರಲ್ಲಿ ಹಾಸ್ಯದ ಹೊನಲು ಹರಿಯಿತು.‘ಜೀವನ ಸುಖ–ದುಃಖಗಳ ಮಿಶ್ರಣ. ನಮ್ಮ ಬಗ್ಗೆ ನಿಂದನೆಯ ಅಥವಾ ಚುಚ್ಚು ಮಾತನಾಡಿದರೆ ನೋವಿನ ಅನುಭವ ಆಗುತ್ತದೆ. ಮನೆ ಪಕ್ಕದವರು ಕೆಟ್ಟದಾಗಿ ಮಾತನಾಡುತ್ತಾರೆಂದು ಬೇರೆ ಓಣಿ, ಬೇರೆ ಊರಿಗೆ ಹೋಗಬಹುದು. ಆದರೆ, ಅವರು ಆಡಿದ್ದ ಮಾತು ಮನಸ್ಸಿನಿಂದ ದೂರವಾಗುವುದಿಲ್ಲ. ಆದ್ದರಿಂದ, ಬದುಕಿನಲ್ಲಿ ಎಲ್ಲ ಅನುಭವವನ್ನೂ ಪಡೆಯಬೇಕಾಗುತ್ತದೆ. ಧ್ಯಾನಗುರುವಿನ ಶಬ್ದವನ್ನು ಮನಸ್ಸಿನಲ್ಲಿ ಸ್ಥಾಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ‘ಮನಸ್ಸಿನ ಪಾತ್ರೆ ತೊಳೆಯುವುದಕ್ಕಾಗಿ ಪ್ರವಚನ ಮಾಡಬೇಕು. ಜನರು ಅದನ್ನು ಕೇಳಬೇಕು. ನಿತ್ಯವೂ ಸತ್ಸಂಗಗಳು ನಡೆಯಬೇಕು’ ಎಂದು ಹೇಳಿದರು.‘ಶಿವರಾತ್ರೀಶ್ವರ ಪುಣ್ಯಕ್ಷೇತ್ರವನ್ನು ಎಲ್ಲ ಪೀಠಾಧಿಪತಿಗಳೂ ದೊಡ್ಡ ಮಟ್ಟದಲ್ಲಿ ಬೆಳೆಸಿದ್ದಾರೆ. ಹತ್ತೂರು ನೋಡುವುದಕ್ಕಿಂತ ಒಮ್ಮೆ ಸುತ್ತೂರು ನೋಡು ಎನ್ನಬಹುದು’ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಕಷ್ಟವಿರಲಿ, ಸುಖವಿರಲಿ ಬೇಡ ಎಂದರೂ ಬರುತ್ತದೆ. ಭಗವಂತನ ಕೃಪೆಯೇ ಎಲ್ಲದಕ್ಕೂ ಕಾರಣ. ಜೀವನ ಬಂದಂತೆ ನಡೆಸಿಕೊಂಡು ಹೋಗಬೇಕಾಗುತ್ತದೆ. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಭಾವನೆಯನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.‘ದಸರಾ ಉದ್ಘಾಟನೆಗೆಂದು ಅವರು ಬಂದಿರುವುದು ಬಹಳ ಸಂತೋಷದ ಸಂಗತಿ. ಹಿಂದೆಯೂ ಹಲವು ಶ್ರೀಗಳು ಚಾಲನೆ ನೀಡಿದ್ದರು. ದಸರಾ ಜಾಗತಿಕವಾದ ಉತ್ಸವ. ಮೈಸೂರು ಎಂದರೆ ದಸರಾ ಎನ್ನುವುದು ವಿಶ್ವವಿಖ್ಯಾತವಾಗಿದೆ. ಅದನ್ನು ವಿಶ್ವವಿಖ್ಯಾತವಾದ ಶ್ರೀಗಳೇ ಉದ್ಘಾಟಿಸುತ್ತಿರುವುದು ಸಂತೋಷದ ಸಂಗತಿ. ಈ ಹಿಂದೆ ದಸರಾ ಉದ್ಘಾಟಿಸಿದವರೆಲ್ಲರೂ ಶ್ರೀಮಠಕ್ಕೆ ಬಂದು ಆತಿಥ್ಯ ಸ್ವೀಕರಿಸಿದ್ದಾರೆ’ ಎಂದರು.‘ನಾಡಿನ ಜಾಗೃತ ಸ್ಥಳಗಳಲ್ಲಿ ಕೊಪ್ಪಳದ ಗವಿಮಠವೂ ಒಂದು. ಸಾಂಪ್ರದಾಯಿಕವಾದ ಮಠಕ್ಕೆ ಆಧುನಿಕ ಸ್ಪರ್ಶವನ್ನು ಕೊಟ್ಟು ವಿಸ್ತರಿಸಿದ್ದಾರೆ. ಧಾರ್ಮಿಕ ಕಾರ್ಯ, ಬಡ ಮಕ್ಕಳಿಗೆ ಅಕ್ಷರ ದಾಸೋಹ ಎಲ್ಲವೂ ನಡೆಯುತ್ತಿದೆ’ ಎಂದು ಶ್ಲಾಘಿಸಿದರು.ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಇದ್ದರು.ಜಿಲ್ಲಾಡಳಿತದಿಂದ ಸ್ವಾಗತ: ರಸ್ತೆ ಮಾರ್ಗವಾಗಿ ಸಂಜೆ ಮೈಸೂರು ತಲುಪಿದ ಶ್ರೀಗಳನ್ನು, ಮಣಿಪಾಲ್ ಆಸ್ಪತ್ರೆ ಬಳಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಮೊದಲಾದ ಅಧಿಕಾರಿಗಳು ಜಿಲ್ಲಾಡಳಿತದಿಂದ ಆತ್ಮೀಯವಾಗಿ ಬರಮಾಡಿಕೊಂಡರು.