ಬೆಂಗಳೂರು: ಇನ್ನೊಂದು ವರ್ಷದಲ್ಲಿ ಸಂಚರಿಸಲಿವೆ ಮೂರು ಬೋಗಿಗಳ ರೈಲು
ಬೆಂಗಳೂರು: ನಗರದಲ್ಲಿ ಮೂರು ಬೋಗಿಗಳ ರೈಲುಗಳು ಇನ್ನೊಂದು ವರ್ಷದಲ್ಲಿ ಸಂಚರಿಸಲಿವೆ. ಬೆಂಗಳೂರು ಉಪನಗರ ಸಾರಿಗೆ ಯೋಜನೆಗೆ (ಬಿಎಸ್ಟಿಪಿ) ಇನ್ನು 18 ತಿಂಗಳಲ್ಲಿ ಈ ರೀತಿಯ 51 ರೈಲುಗಳು ಪೂರೈಕೆ ಯಾಗಲಿವೆ.ಈ ರೈಲುಗಳು ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ಸಂಪರ್ಕಿಸುವ ಕಾರಿಡಾರ್–2 ಮಲ್ಲಿಗೆ ಮಾರ್ಗ ಹಾಗೂ ರಾಜಾನುಕುಂಟೆ– ಹೀಲಲಿಗೆ ಸಂಪರ್ಕಿಸುವ ಕಾರಿಡಾರ್–4 ಕನಕ ಮಾರ್ಗಕ್

ಬೆಂಗಳೂರು: ನಗರದಲ್ಲಿ ಮೂರು ಬೋಗಿಗಳ ರೈಲುಗಳು ಇನ್ನೊಂದು ವರ್ಷದಲ್ಲಿ ಸಂಚರಿಸಲಿವೆ. ಬೆಂಗಳೂರು ಉಪನಗರ ಸಾರಿಗೆ ಯೋಜನೆಗೆ (ಬಿಎಸ್ಟಿಪಿ) ಇನ್ನು 18 ತಿಂಗಳಲ್ಲಿ ಈ ರೀತಿಯ 51 ರೈಲುಗಳು ಪೂರೈಕೆ ಯಾಗಲಿವೆ.ಈ ರೈಲುಗಳು ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ಸಂಪರ್ಕಿಸುವ ಕಾರಿಡಾರ್–2 ಮಲ್ಲಿಗೆ ಮಾರ್ಗ ಹಾಗೂ ರಾಜಾನುಕುಂಟೆ– ಹೀಲಲಿಗೆ ಸಂಪರ್ಕಿಸುವ ಕಾರಿಡಾರ್–4 ಕನಕ ಮಾರ್ಗಕ್ಕೆ ಬಳಕೆಯಾಗಲಿವೆ. ಮೆಜೆಸ್ಟಿಕ್–ದೇವನಹಳ್ಳಿ ಸಂಪರ್ಕಿಸುವ ಕಾರಿಡಾರ್–1 ಮತ್ತು ಕೆಂಗೇರಿ–ವೈಟ್ಫೀಲ್ಡ್ ಸಂಪರ್ಕಿಸುವ ಕಾರಿಡಾರ್–3 ಸಂಪಿಗೆ ಮಾರ್ಗಗಳಿಗೆ ರೋಲಿಂಗ್ ಸ್ಟಾಕ್ ಪೂರೈಕೆಗೆ (ರೈಲು ಕೋಚ್ಗಳು) ಮುಂದೆ ಪ್ರತ್ಯೇಕ ಒಪ್ಪಂದ ನಡೆಯಲಿದೆ.ಸದ್ಯ ಮೊದಲ ಹಂತದಲ್ಲಿ 51 ರೈಲುಗಳ ಪೂರೈಕೆಗೆ ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಜೊತೆಗೆ ಬಿಎಸ್ಟಿಪಿ ಅನುಷ್ಠಾನ ಸಂಸ್ಥೆಯಾದ ಬಿ–ರೈಡ್ ಒಪ್ಪಂದ ಮಾಡಿಕೊಂಡಿದೆ.ಬಿಎಸ್ಟಿಪಿಯ ನಾಲ್ಕು ಕಾರಿಡಾರ್ ಗಳಲ್ಲಿ ಎರಡನೇ ಕಾರಿಡಾರ್ ಮೊದಲು ನಿರ್ಮಾಣಗೊಳ್ಳಲಿದ್ದು, ಚಿಕ್ಕಬಾಣಾವರದಿಂದ ಯಶವಂತಪುರ ವರೆಗೆ ಮುಂದಿನ ವರ್ಷದ ಕೊನೆಗೆ ಸಂಚಾರ ಆರಂಭವಾಗಲಿದೆ. ಬೆನ್ನಿಗಾನ ಹಳ್ಳಿವರೆಗೆ ಮತ್ತೊಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಬೆಂಗಳೂರು ಸಂಯೋಜಿತ ರೈಲು ಮೂಲಸೌಕರ್ಯ ಅಭಿವೃದ್ಧಿ ಉದ್ಯಮ ನಿಯಮಿತ (ಬಿ–ರೈಡ್) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಐಸಿಎಫ್ ಜೊತೆಗೆ ಮಾಡಿಕೊಂಡಿ ರುವ ಒಪ್ಪಂದ ವ್ಯಾಪ್ತಿಯಡಿ ನೀಡಲಾದ ಕಾರ್ಯಾದೇಶವು ಬೋಗಿಗಳ ವಿನ್ಯಾಸ, ತಯಾರಿಕೆ, ಪರಿಶೀಲನೆ, ಪರೀಕ್ಷೆ ಮತ್ತು ಕಾರ್ಯಾರಂಭ, ಸಂಶೋಧನಾ ವಿನ್ಯಾಸ ಮತ್ತು ಮಾನಕಗಳ ಸಂಸ್ಥೆಯಿಂದ (ಆರ್ಡಿಎಸ್ಒ) ಶಾಸನಬದ್ಧ ಅನುಮೋದನೆಗಳನ್ನು ಪಡೆಯುವುದು, ವ್ಯವಸ್ಥೆಯ ಸಂಯೋಜನೆ ಹಾಗೂ ಆರ್ಎಎಂಎಸ್ ಅಂದರೆ ವಿಶ್ವಾಸಾರ್ಹತೆ, ಲಭ್ಯತೆ, ನಿರ್ವಹಣೆ ಮತ್ತು ಸುರಕ್ಷತೆ ಮಾನದಂಡಗಳ ಅನುಸರಣೆಯನ್ನು ಒಳಗೊಂಡಿದೆ.ಬೆಂಗಳೂರು ಉಪನಗರ ಸಾರಿಗೆಯ ರೈಲುಗಳು ಹವಾನಿಯಂತ್ರಿತ ಬ್ರಾಡ್-ಗೇಜ್ ಮೆಟ್ರೊ ಮಾದರಿಯ ಕೋಚ್ಗಳನ್ನು ಹೊಂದಿರಲಿವೆ. ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಕರ್ಯಗಳನ್ನು ನೀಡುವ ಆಧುನಿಕ ರೈಲುಗಳಾಗಿರಲಿವೆ.ಉಪನಗರ ರೈಲು ಯೋಜನೆಯ ಕಾಮಗಾರಿಗಳು ನಿರೀಕ್ಷಿತ ಸಮಯಕ್ಕಿಂತ ವಿಳಂಬವಾಗಿ ಆರಂಭವಾಗಿತ್ತು. ಆ ನಂತರ ಗುತ್ತಿಗೆ ಕಂಪನಿಯು ಗುತ್ತಿಗೆಯ ಒಪ್ಪಂದದಿಂದ ಹಿಂದಕ್ಕೆ ಸರಿದಿದ್ದ ಕಾರಣ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಮರು ಟೆಂಡರ್ ಕರೆದು ಕಾಮಗಾರಿಗಳನ್ನು ಮತ್ತೆ ಆರಂಭಿಸಿದ ಬಳಿಕ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಈಗ ರೋಲಿಂಗ್ ಸ್ಟಾಕ್ಗಳ ಪೂರೈಕೆಗೂ ಒಪ್ಪಂದ ನಡೆದಿರುವುದು ಪ್ರಗತಿಯ ಮುಂದುವರಿದ ಭಾಗವಾಗಿದೆ ಎಂದು ಬಿ–ರೈಡ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‘ಪ್ರಮುಖ ಮೈಲುಗಲ್ಲು’ರೋಲಿಂಗ್ ಸ್ಟಾಕ್ಗಳ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಿರುವುದು ಬಿಎಸ್ಟಿಪಿ ಅನುಷ್ಠಾನದಲ್ಲಿ ಪ್ರಮುಖ ಮೈಲುಗಲ್ಲಾಗಿದೆ. ಆಧುನಿಕ ರೈಲು ಬೋಗಿಗಳ ಸಂಗ್ರಹಣೆಯು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸುಸ್ಥಿರ ಉಪನಗರ ರೈಲು ಜಾಲವನ್ನು ಒದಗಿಸುವ ನಿಟ್ಟಿನಲ್ಲಿ ಯೋಜನೆಯ ಪ್ರಗತಿಯನ್ನು ಬಲಪಡಿಸುತ್ತದೆ ಎಂದು ಬಿ–ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.ವಿವಿಧ ಕಾರಿಡಾರ್ಗಳ ಹಳಿ ಮತ್ತು ವ್ಯವಸ್ಥೆಯ ಮೂಲಸೌಕರ್ಯ ಕಾರ್ಯಗಳು ಪೂರ್ಣಗೊಳ್ಳುವಷ್ಟರಲ್ಲಿ ಅಗತ್ಯವಿರುವ ರೈಲು ಕೋಚ್ಗಳು ಲಭ್ಯವಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.