ದಸರಾ ಉದ್ಘಾಟಿಸಲು ಬಂದಿಲ್ಲ, ನಾಡಿಗಾಗಿ ಪ್ರಾರ್ಥಿಸಲು ಬಂದಿದ್ದೇನೆ: ಗವಿಸಿದ್ದೇಶ್ವರ ಶ್ರೀ
– ಮೈಸೂರು ಕರ್ನಾಟಕದ ಸಾಂಸ್ಕೃತಿಕ ಆತ್ಮ – ಅಂದು ದೊರೆಯ ಹಬ್ಬ, ಇಂದು ಧರೆಯ ಹಬ್ಬ ಮೈಸೂರು: ಇಡೀ ಕರ್ನಾಟಕದ ಸಾಂಸ್ಕೃತಿಕ ಆತ್ಮ ಮೈಸೂರು . ಇದು ಸಂಸ್ಕಾರ, ಅರಿವು ಮತ್ತು ಗುರುಮನೆಗಳ ನೆಲೆವೀಡು ಹಾಗೂ ಅತ್ಯಂತ ಸ್ವಚ್ಛ ಮತ್ತು ಶಿಸ್ತಿನ ನಗರ ಎಂದು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು (Gavisiddheshwara Swamiji) ಬಣ್ಣಿಸಿದರು. ವಿಶ್ವವಿಖ

– ಮೈಸೂರು ಕರ್ನಾಟಕದ ಸಾಂಸ್ಕೃತಿಕ ಆತ್ಮ – ಅಂದು ದೊರೆಯ ಹಬ್ಬ, ಇಂದು ಧರೆಯ ಹಬ್ಬ ಮೈಸೂರು: ಇಡೀ ಕರ್ನಾಟಕದ ಸಾಂಸ್ಕೃತಿಕ ಆತ್ಮ ಮೈಸೂರು . ಇದು ಸಂಸ್ಕಾರ, ಅರಿವು ಮತ್ತು ಗುರುಮನೆಗಳ ನೆಲೆವೀಡು ಹಾಗೂ ಅತ್ಯಂತ ಸ್ವಚ್ಛ ಮತ್ತು ಶಿಸ್ತಿನ ನಗರ ಎಂದು ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು (Gavisiddheshwara Swamiji) ಬಣ್ಣಿಸಿದರು. ವಿಶ್ವವಿಖ್ಯಾತ 416ನೇ ಮೈಸೂರು ದಸರಾ(Mysuru Dasara) ಮಹೋತ್ಸವವಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ತಮ್ಮ ಸರಳತೆ ಮತ್ತು ಪಾಂಡಿತ್ಯಪೂರ್ಣ ಭಾಷಣದ ಮೂಲಕ ನೆರೆದಿದ್ದವರ ಮನಗೆದ್ದರು. ತಮ್ಮ ವಿನಮ್ರತೆಯನ್ನು ಮೆರೆದ ಗವಿಸಿದ್ದೇಶ್ವರ ಶ್ರೀಗಳು, “ದಸರಾವನ್ನು ಉದ್ಘಾಟಿಸುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನಾನು ಇಲ್ಲಿಗೆ ದಸರಾ ಉದ್ಘಾಟನೆ ಮಾಡಲು ಬಂದಿಲ್ಲ. ಈ ಹಿಂದೆ ಈ ದಸರಾ ಉದ್ಘಾಟಿಸಿದ ಮಹಾನ್ ಜ್ಞಾನಿಗಳು ಹಚ್ಚಿದ ಪ್ರಾರ್ಥನೆಯ ದೀಪ ಆರದಿರಲಿ ಎಂದು ಶಕ್ತಿದೇವತೆ ಚಾಮುಂಡೇಶ್ವರಿಯ ಬಳಿ ಪ್ರಾರ್ಥಿಸಲು ಬಂದಿದ್ದೇನೆ. ನಾನು ಕೇವಲ ಜೋಳಿಗೆ ಜಂಗಮ ಅಷ್ಟೇ; ನನ್ನಿಂದ ಪ್ರಾರ್ಥನೆ ಮಾತ್ರ ಸಾಧ್ಯ. ನಾಡಿನ ಸುಖ-ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ” ಎಂದರು. ದಸರಾ ಇತಿಹಾಸವನ್ನು ಮೆಲುಕು ಹಾಕಿದ ಶ್ರೀಗಳು, “ಕೊಪ್ಪಳದ ಗಂಡುಗಲಿ ಕುಮಾರರಾಮನ ಕಾಲದಿಂದ ದಸರಾ ಆರಂಭವಾಯಿತು. ತುಂಗಭದ್ರೆಯ ತೀರದಿಂದ ಹರಿದು ಬಂದ ಈ ಸಂಭ್ರಮ ಇಂದು ಕಾವೇರಿಯ ತೀರಕ್ಕೆ ತಲುಪಿದೆ. ಅಂದು ಕಾಲದ ದೊರೆಯ ಹಬ್ಬವಾಗಿದ್ದ ದಸರಾ, ಇಂದು ಇಡೀ ಧರೆಯ ಹಬ್ಬವಾಗಿ ಬದಲಾಗಿದೆ” ಎಂದು ವಿಶ್ಲೇಷಿಸಿದರು. ಸುತ್ತೂರು ಶ್ರೀಗಳಿಗೂ ಇದೇ ವೇಳೆ ಭಕ್ತಿಪೂರ್ವಕ ವಂದನೆ ಸಲ್ಲಿಸಿದರು. ಇದನ್ನೂ ಓದಿ: ತುಮಕೂರು ದಸರಾಗೆ ಅದ್ಧೂರಿ ಚಾಲನೆ – ಧ್ವಜಾರೋಹಣ ನೆರವೇರಿಸಿದ ಡಿಸಿಎಂ ಪರಮೇಶ್ವರ್ ಮೈಸೂರು ರಾಜಮನೆತನವನ್ನು ಹೊರಗಿಟ್ಟು ಕರ್ನಾಟಕದ ಇತಿಹಾಸ ನೋಡಲು ಸಾಧ್ಯವೇ ಇಲ್ಲ. ಅಂದಿನ ಕಾಲದಲ್ಲೇ ಮಾದರಿ ಅಭಿವೃದ್ಧಿ ರಾಜ್ಯವನ್ನು ಕಟ್ಟಿದವರು ಮೈಸೂರು ಅರಸರು. ಅವರು ಕೇವಲ ನೆಲವನ್ನು ಆಳಲಿಲ್ಲ, ಬದಲಿಗೆ ಜನರ ಮನಸ್ಸುಗಳನ್ನು ಆಳಿದರು ಎಂದು ಕೊಂಡಾಡಿದರು. ಇವತ್ತು ನಮಗೆ 10 ಮಕ್ಕಳನ್ನು ಸಾಕುವುದು ಕಷ್ಟ ಎನಿಸುತ್ತದೆ. ಆದರೆ ಕೇವಲ ಭಿಕ್ಷಾನ್ನದ ಜೋಳಿಗೆಯನ್ನು ನಂಬಿ ಹತ್ತಾರು ಸಾವಿರ ಬಡ ಮಕ್ಕಳನ್ನು ಸಾಕಿ-ಸಲಹಿ ವಿದ್ಯಾಬುದ್ಧಿ ನೀಡಿದ ಮಹಾ ಗುರುಗಳು ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳು ಎಂದು ಸ್ಮರಿಸಿದರು. ಜನಪದ ಸಾಹಿತ್ಯವೆಂಬುದು ರಾಜಮಹಲುಗಳಲ್ಲಿ ಕುಳಿತವರಿಂದ ಬಂದಿದ್ದಲ್ಲ. ಅದು ಈ ಮಣ್ಣಿನೊಂದಿಗೆ ಬೆರೆತು ಹುಟ್ಟಿದ್ದು. ತಾಯಿ ತನ್ನ ಮಗುವಿಗೆ ತುತ್ತು ನೀಡುತ್ತಾ ಕಟ್ಟಿದ ಸಾಹಿತ್ಯವಿದು ಎಂದು ಬಣ್ಣಿಸಿದರು. ಕರ್ನಾಟಕವು ರೈತರ ಬೆವರು, ಕಾರ್ಮಿಕರ ಶ್ರಮ, ಹೋರಾಟಗಾರರ ತ್ಯಾಗ ಮತ್ತು ಕವಿ-ಸಂತರ ತಪಸ್ಸಿನಿಂದ ಕಟ್ಟಲ್ಪಟ್ಟ ನಾಡು. ಪ್ರೀತಿಗೆ ಪ್ರೀತಿಯನ್ನು ಕೊಟ್ಟ ಮಹಾನ್ ಭೂಮಿಯಿದು. ಯಾರೋ ಒಬ್ಬರು ಕಟ್ಟಿದ್ದಲ್ಲ, ನಾವೆಲ್ಲರೂ ಒಟ್ಟಾಗಿ ಕಟ್ಟಿಕೊಂಡ ನಾಡು. ನಮ್ಮ ಬದುಕಿನ ಕತ್ತಲೆಯನ್ನು ದೂರ ಮಾಡಲು ಕತ್ತಲೆಯ ಜೊತೆ ಗುದ್ದಾಡಬಾರದು, ಸಣ್ಣದೊಂದು ದೀಪ ಹಚ್ಚಿದರೆ ಸಾಕು ಕತ್ತಲೆ ತಾನಾಗಿಯೇ ಮಾಯವಾಗುತ್ತದೆ. ಈ ಸರಳ ತತ್ವವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.