ಜಿರಳೆಗಳಿಗೆ ‘ದಿಗ್ಬಂಧನ’
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜಂತರ್ ಮಂತರ್ನಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಟನೆಯನ್ನು ‘ಪೊಲೀಸ್ ಬಲ’ದ ಮೂಲಕ ಹತ್ತಿಕ್ಕಲು ಕೇಂದ್ರ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿತು. ವ್ಯಾಪಕ ಭದ್ರತೆಯ ನಡುವೆಯೂ ಬೀದಿಗಿಳಿದ ರಾಜಕೀಯ ಮುಖಂಡರು, ವಿದ್ಯಾರ್ಥಿ ಸಂಘಟನೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜಂತರ್ ಮಂತರ್ನಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಟನೆಯನ್ನು ‘ಪೊಲೀಸ್ ಬಲ’ದ ಮೂಲಕ ಹತ್ತಿಕ್ಕಲು ಕೇಂದ್ರ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿತು. ವ್ಯಾಪಕ ಭದ್ರತೆಯ ನಡುವೆಯೂ ಬೀದಿಗಿಳಿದ ರಾಜಕೀಯ ಮುಖಂಡರು, ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು, ಅಪಾರ ಸಂಖ್ಯೆಯ ಜೆನ್– ಝೀಗಳು ಸಿಇಸಿ ಮತ್ತು ಎಸ್ಐಆರ್ ವಿರುದ್ಧ ಪ್ರತಿಭಟನೆಯ ಕಹಳೆ ಮೊಳಗಿಸಿದರು.ಪ್ರತಿಭಟನಕಾರರು ಜಂತರ್ ಮಂತರ್ ತಲುಪದಂತೆ ಪೊಲೀಸರು ಶತಾಯಗತಾಯ ಪ್ರಯತ್ನಿಸಿದರು. 30 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಇಡೀ ದೆಹಲಿಯನ್ನು ಅಕ್ಷರಶಃ →ಕೋಟೆಯಾಗಿ ಪರಿವರ್ತಿಸಲಾಗಿತ್ತು.ಜಂತರ್ ಮಂತರ್ ಸುತ್ತ 4 ಕಿ.ಮೀ ವ್ಯಾಪ್ತಿಯಲ್ಲಿ ಇಂಟರ್ನೆಟ್ ಸ್ಥಗಿತ ಗೊಳಿಸಲಾಗಿತ್ತು. ಪ್ರತಿಭಟನೆ ಹತ್ತಿಕ್ಕಲು ಪೊಲೀಸ್ ಬಲ ಬಳಸಿರುವುದು ‘ಮೋದಿ ಆಡಳಿತದ ಅಘೋಷಿತ ತುರ್ತು ಪರಿಸ್ಥಿತಿ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ಆರಂಭವಾಗುವ ಮುನ್ನವೇ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಸೌರಭ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ, ವಿಮಾನದಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದರು. ಯೂಟ್ಯೂಬರ್ ಧ್ರುವ ರಾಠಿ ಅವರನ್ನು ಗುರುಗ್ರಾಮದ ಅವರ ನಿವಾಸದಲ್ಲಿ ವಶಕ್ಕೆ ಪಡೆಯಲಾಯಿತು.ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರು ನಿರ್ಮಿಸಿದ್ದ ಭದ್ರಕೋಟೆಯನ್ನು ಭೇದಿಸಿ ಜಂತರ್ ಮಂತರ್ ತಲುಪಲು ಯತ್ನಿಸಿದ ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಬೃಂದಾ ಕಾರಟ್, ಸಂಸದ ಜಾನ್ ಬ್ರಿಟ್ಟಾಸ್, ಸಿಜೆಪಿ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್, ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು, ವಕೀಲರು ಸೇರಿ 7 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಿ, ಪೊಲೀಸರು ವಾಹನಗಳಲ್ಲಿ ಬೇರೆಡೆಗೆ ಸ್ಥಳಾಂತರಿಸಿದರು.ಪ್ರಮುಖ ನಾಯಕರ ಬಂಧನದ ನಂತರ ಪ್ರತಿಭಟನೆಯ ನೇತೃತ್ವವನ್ನು ಸಿಜೆಪಿ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂದೆ ವಹಿಸಿಕೊಂಡರು.ಪಾಲನೆಯಾಗದ ‘ಸುಪ್ರೀಂ’ ಆದೇಶ: ಪ್ರತಿಭಟನೆಯ ನೆಪದಲ್ಲಿ ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬಾರದು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರೂ, ಭದ್ರತಾ ಕಾರಣಗಳಿಗಾಗಿ ರಾಜೀವ್ ಚೌಕ್ ಸೇರಿದಂತೆ ಸುಮಾರು 45 ಮೆಟ್ರೊ ನಿಲ್ದಾಣಗಳನ್ನು ಪೊಲೀಸರು ಮುಚ್ಚಿದ್ದರು. ದೆಹಲಿ ಸಂಪರ್ಕಿಸುವ 250ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಶನಿವಾರ ರಾತ್ರಿ 10 ಗಂಟೆಯವರೆಗೆ ಮೆಟ್ರೊ ನಿಲ್ದಾಣಗಳನ್ನು ಮುಚ್ಚಲಾಗಿತ್ತು.ಕಲ್ಲು ತೂರಾಟ, 6 ಮಂದಿಗೆ ಗಾಯ: ಪ್ರತಿಭಟನಕಾರರನ್ನು ವಶಕ್ಕೆ ಪಡೆಯುವ ವೇಳೆ ಪಿಂಕ್ ಫೋರ್ಸ್ನ ಮಹಿಳಾ ಸಿಬ್ಬಂದಿ ಸೇರಿ ಆರು ಮಂದಿ ಪೊಲೀಸರು ಗಾಯಗೊಂಡಿದ್ದಾರೆ, ಎರಡು ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.ಪೊಲೀಸ್ ವಾಹನದ ಒಳಗೆ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಲವು ಪ್ರತಿಭಟನಕಾರರು ಆರೋಪಿಸಿದ್ದಾರೆ.‘ಜಂತರ್ ಮಂತರ್ ಪ್ರತಿಭಟನಕಾರರಿಂದ ಮುಕ್ತ’ಜಂತರ್ ಮಂತರ್ನಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರತಿಭಟನ ಕಾರರು ಜಮಾಯಿಸಿದ್ದರು, ಬಿಗಿ ಭದ್ರತೆಯ ನಡುವೆಯೇ ಸಭೆ ನಡೆದಿದೆ ಎನ್ನುವ ಸಾಮಾಜಿಕ ಜಾಲತಾಣಗಳ ವರದಿಗಳನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದಾರೆ. ‘ಶನಿವಾರ ಜಂತರ್ ಮಂತರ್ ಪ್ರದೇಶವು ಪ್ರತಿಭಟನಕಾರರಿಂದ ಮುಕ್ತವಾಗಿತ್ತು’ ಎಂದಿರುವ ದೆಹಲಿ ಡಿಸಿಪಿ, ಇದನ್ನು ದೃಢಪಡಿಸಲು ವಿಡಿಯೊ ತುಣುಕೊಂದನ್ನು ಹಂಚಿಕೊಂಡಿದ್ದಾರೆ. 37 ಸೆಕೆಂಡ್ಗಳ ಈ ವಿಡಿಯೊದಲ್ಲಿ ಯಾವುದೇ ಪ್ರತಿಭಟನಕಾರರು ಇಲ್ಲದ ಜಂತರ್ ಮಂತರ್ ಪ್ರದೇಶವನ್ನು ಕಾಣಬಹುದಾಗಿದೆ.ನ್ಯಾಯಾಂಗ ನಿಂದನೆ ಅರ್ಜಿ ಇಂದು ವಿಚಾರಣೆ‘ಸಿಜೆಪಿ ಪ್ರತಿಭಟನೆ ವೇಳೆ ಸಾರ್ವಜನಿಕ ಸಾರಿಗೆಗೆ ಸಂಪೂರ್ಣ ನಿಷೇಧ ಹೇರಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರೂ, ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸು ವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಭಾನುವಾರ ವಿಶೇಷ ವಿಚಾರಣೆ ನಡೆಸಲಿದೆ. ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿರುವ ಅರ್ಜಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್, ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್, ದೆಹಲಿ ಮೆಟ್ರೊ ರೈಲು ನಿಗಮದ ಅಧ್ಯಕ್ಷೆ ಡಿ.ತಾರಾ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ‘ನಮ್ಮ ಪ್ರತಿಭಟನೆ ಇಲ್ಲಿಗೇ ನಿಲ್ಲದು‘‘ಪೊಲೀಸರು ನಮ್ಮನ್ನು ವಿಮಾನದಲ್ಲೇ ಬಂಧಿಸಲು ಬಂದಿದ್ದಾರೆ. ರಾಷ್ಟ್ರ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ನೀವು ನೋಡಬಹುದು. ಇದು ಸರ್ವಾಧಿಕಾರದ ಧೋರಣೆ. ಇದು ಇಂದಿರಾ ಗಾಂಧಿ ಕೂಡ ಮಾಡದ ಕೆಲಸ. ನಮ್ಮ ಪ್ರತಿಭಟನೆ ಇಲ್ಲಿಗೇ ನಿಲ್ಲುವುದಿಲ್ಲ’ ಎಂದು ಅಭಿಜಿತ್ ದೀಪ್ಕೆ ಅಧಿಕಾರಿಗಳಿಗೆ ಹೇಳುತ್ತಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಲು ದೀಪ್ಕೆ ಶನಿವಾರ ಬೆಳಿಗ್ಗೆ ಮುಂಬೈನಿಂದ ದೆಹಲಿಗೆ ವಿಮಾನದಲ್ಲಿ ಬಂದಿದ್ದರು.