ಐತಿಹಾಸಿಕ ಮಡಿಕೇರಿ ದಸರಾಕ್ಕೆ ವಿದ್ಯುಕ್ತ ಚಾಲನೆ – ನಾಲ್ಕು ಶಕ್ತಿದೇವತೆಗಳ ಕರಗ ಉತ್ಸವ ಆರಂಭ
ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ (Madikeri) ಐತಿಹಾಸಿಕ ದಸರಾ ಸಂಭ್ರಮಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಒಂಬತ್ತು ದಿನಗಳ ನವರಾತ್ರಿ ಉತ್ಸವಕ್ಕೆ ನಗರದ ನಾಲ್ಕು ಶಕ್ತಿದೇವತೆಗಳ ಕರಗಗಳನ್ನು ಹೊರುವ ಮೂಲಕ ಚಾಲನೆ ನೀಡಲಾಗಿದ್ದು, ಮುಂದಿನ ಒಂಬತ್ತು ದಿನಗಳ ಕಾಲ ಮಡಿಕೇರಿ ನಗರದಲ್ಲಿ ಧಾರ್ಮಿಕ ವಿಧಿವಿಧಾನಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು

ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ (Madikeri) ಐತಿಹಾಸಿಕ ದಸರಾ ಸಂಭ್ರಮಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಒಂಬತ್ತು ದಿನಗಳ ನವರಾತ್ರಿ ಉತ್ಸವಕ್ಕೆ ನಗರದ ನಾಲ್ಕು ಶಕ್ತಿದೇವತೆಗಳ ಕರಗಗಳನ್ನು ಹೊರುವ ಮೂಲಕ ಚಾಲನೆ ನೀಡಲಾಗಿದ್ದು, ಮುಂದಿನ ಒಂಬತ್ತು ದಿನಗಳ ಕಾಲ ಮಡಿಕೇರಿ ನಗರದಲ್ಲಿ ಧಾರ್ಮಿಕ ವಿಧಿವಿಧಾನಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಲಿವೆ. ನಾಡಿನಾದ್ಯಂತ ಈಗ ದಸರಾ (Dasara) ಹಬ್ಬದ ಸಂಭ್ರಮ ಮನೆಮಾಡಿದೆ. ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಚಾಲನೆ ದೊರೆತ ಬೆನ್ನಲ್ಲೇ, ಇತ್ತ ಐತಿಹಾಸಿಕ ಮಡಿಕೇರಿ ದಸರಾ ಉತ್ಸವವೂ ಆರಂಭಗೊಂಡಿದೆ. ಸುಮಾರು ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಂಜಿನ ನಗರಿ ಮಡಿಕೇರಿಯ ದಸರಾ ಉತ್ಸವಕ್ಕೆ ನಗರದ ನಾಲ್ಕು ಶಕ್ತಿದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ಸಿಕ್ಕಿದೆ. ಇದನ್ನೂ ಓದಿ: ʻಉಪʼ ಪದ ಹೋಗಿ ʻಮುಖ್ಯಮಂತ್ರಿʼ ಆಗಲಿ; ಪರಮೇಶ್ವರ್ಗೆ ಕಾರದ ಮಠದ ಶ್ರೀಗಳ ಆಶೀರ್ವಾದ ನಗರದ ಪಂಪಿನ ಕೆರೆ ಬಳಿ ನಡೆದ ಧಾರ್ಮಿಕ ವಿಧಿವಿಧಾನಗಳಲ್ಲಿ ದಸರಾ ಸಮಿತಿಯ ಸದಸ್ಯರು ಪಾಲ್ಗೊಂಡರು. ಕೊಡಗು ಉಸ್ತುವಾರಿ ಸಚಿವ ಪಿ.ಎಂ ನರೇಂದ್ರಸ್ವಾಮಿ, ಶಾಸಕ ಮಂಥರ್ ಗೌಡ ಕರಗಗಳಿಗೆ ಪೂಜೆ ಸಲ್ಲಿಸಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು. ಈ ಬಾರಿ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆಗೆ ನಿರ್ಧರಿಸಲಾಗಿದೆ. ಸೀಮಿತ ಅನುದಾನದ ನಡುವೆಯೂ ದಸರಾ ಸಂಭ್ರಮಕ್ಕೆ ಯಾವುದೇ ಕೊರತೆಯಾಗದಂತೆ ಉತ್ಸವವನ್ನು ಯಶಸ್ವಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು, ಕರಗ ಉತ್ಸವದ ಹಿನ್ನೆಲೆ ನಗರದ ಬೀದಿಗಳಲ್ಲಿ ಮಹಿಳೆಯರು ಬಿಡಿಸಿದ್ದ ಬಣ್ಣಬಣ್ಣದ ರಂಗೋಲಿಗಳು ಎಲ್ಲರ ಗಮನ ಸೆಳೆದವು. ಮನೆಗಳ ಮುಂದೆ ಸುಂದರ ಚಿತ್ತಾರ ಬಿಡಿಸಿ ಕರಗಗಳನ್ನು ಸ್ವಾಗತಿಸಲು ನಗರದ ಜನತೆ ಸಜ್ಜಾಗಿದ್ದರು.ಇದನ್ನೂ ಓದಿ: ಮೈಸೂರು ದಸರಾ 2026: ಮೈತಳೆದ 40 ಅಡಿ ಎತ್ತರದ ಭವ್ಯ `ಕೃಷ್ಣಾರ್ಜುನ ರಥ’ ಮಡಿಕೇರಿ ದಸರಾ ಉತ್ಸವವಲ್ಲ, ಶತಮಾನಗಳ ಇತಿಹಾಸ, ಧಾರ್ಮಿಕ ಪರಂಪರೆ ಸಾರುವ ಸಂಭ್ರಮ: ನಗರದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ ಹಾಗೂ ಕಂಚಿ ಕಾಮಾಕ್ಷಮ್ಮ ದೇವಾಲಯಗಳ ನಾಲ್ಕು ಕರಗಗಳು ನವರಾತ್ರಿ ಉತ್ಸವದ ಪ್ರಮುಖ ಆಕರ್ಷಣೆ. ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಕರಗಗಳನ್ನು ಹೊತ್ತ ವ್ರತಧಾರಿಗಳು ಮುಂದಿನ ಒಂಬತ್ತು ದಿನಗಳ ಕಾಲ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಭಕ್ತರಿಂದ ಪೂಜೆ ಸ್ವೀಕರಿಸಲಿದ್ದಾರೆ. ಕರಗಗಳು ಮನೆಗಳ ಮುಂದೆ ಆಗಮಿಸುವ ವೇಳೆ ಮಹಿಳೆಯರು ಬಣ್ಣಬಣ್ಣದ ರಂಗೋಲಿಗಳನ್ನು ಬಿಡಿಸಿ, ದೀಪ ಬೆಳಗಿ, ಭಕ್ತಿಯಿಂದ ಪೂಜೆ ಸಲ್ಲಿಸಿ ದೇವತೆಗಳನ್ನು ಸ್ವಾಗತಿಸುವುದು ಇಲ್ಲಿನ ವಿಶೇಷ ಸಂಪ್ರದಾಯ. ಮಡಿಕೇರಿಯಲ್ಲಿ ಹಿಂದೆ ಬರಗಾಲದ ಸಂದರ್ಭದಲ್ಲಿ ಕಾಲರಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ವ್ಯಾಪಿಸಿದ್ದಾಗ, ನಗರದ ದೇವತೆಗಳ ಕರಗಗಳನ್ನು ಹೊತ್ತು ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪೂಜೆ ಸಲ್ಲಿಸುವ ಸಂಪ್ರದಾಯ ಆರಂಭವಾಯಿತು ಎಂಬ ಐತಿಹ್ಯವಿದೆ. ಅಂದಿನಿಂದ ಇಂದಿನವರೆಗೂ ಕರಗ ಉತ್ಸವ ಮಡಿಕೇರಿ ದಸರಾದ ಅವಿಭಾಜ್ಯ ಅಂಗವಾಗಿ ಮುಂದುವರಿದಿದೆ. ನಗರದ ನಾಲ್ಕು ಶಕ್ತಿದೇವತೆಗಳನ್ನು ಆರಾಧಿಸುವ ಮೂಲಕ ನಾಡಿಗೆ ಸುಭಿಕ್ಷೆ, ಉತ್ತಮ ಮಳೆ ಹಾಗೂ ಜನರ ಸುಖ-ಸಮೃದ್ಧಿಗಾಗಿ ಭಕ್ತರು ಪ್ರಾರ್ಥಿಸುತ್ತಾರೆ.ಇದನ್ನೂ ಓದಿ: ಖಾಸಗಿ ದರ್ಬಾರ್ – ಮೈಸೂರು ಅರಮನೆಯಲ್ಲಿ ಮರುಕಳಿಸಿದ ಗತವೈಭವ ಒಟ್ಟಿನಲ್ಲಿ, ಮಂಜಿನ ನಗರಿಯಲ್ಲಿ ಐತಿಹಾಸಿಕ ಮಡಿಕೇರಿ ದಸರಾ ಸಂಭ್ರಮಕ್ಕೆ ಇಂದಿನಿಂದ ಅಧಿಕೃತ ಚಾಲನೆ ಸಿಕ್ಕಿದೆ. ರಾಜ್ಯದಲ್ಲಿ ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾ ಆಚರಣೆಗೆ ಒತ್ತು ನೀಡಲಾಗಿದ್ದರೂ, ಧಾರ್ಮಿಕ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂಬತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಉತ್ಸವದಲ್ಲಿ ಕರಗಗಳ ಮೆರವಣಿಗೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಲಿವೆ. ಇನ್ನು ದಸರಾ ಉತ್ಸವದ ಕೊನೆಯ ದಿನ ನಡೆಯಲಿರುವ ದಶಮಂಟಪಗಳ ಶೋಭಾಯಾತ್ರೆ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿದ್ದು, ಈ ವೈಭವವನ್ನು ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ.ಇದನ್ನೂ ಓದಿ: ಹೂವಿನ ಲೋಕದಲ್ಲಿ ʻಪ್ರಜಾಪ್ರಭುತ್ವದ ಹಬ್ಬʼ – ದಸರಾ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ