‘ಜೀವರಕ್ಷಕ ಔಷಧದ ಲಾಭಾಂಶಕ್ಕೂ ಮಿತಿ’
ಬೆಂಗಳೂರು: ‘ಕ್ಯಾನ್ಸರ್ ಚಿಕಿತ್ಸಾ ಔಷಧಗಳ ಲಾಭಾಂಶವನ್ನು ಶೇ 30ಕ್ಕೆ ಮಿತಿಗೊಳಿಸುತ್ತಿರುವ ಮಾದರಿಯಲ್ಲಿಯೇ, ಹೃದಯ ಮತ್ತು ಮೂತ್ರಪಿಂಡದ ಚಿಕಿತ್ಸೆಯ ಔಷಧ, ಜೀವರಕ್ಷಕ ಔಷಧಗಳಿಗೂ ಲಾಭಾಂಶದ ಮಿತಿಯನ್ನು ಗೊತ್ತುಪಡಿಸಬೇಕು’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ

ಬೆಂಗಳೂರು: ‘ಕ್ಯಾನ್ಸರ್ ಚಿಕಿತ್ಸಾ ಔಷಧಗಳ ಲಾಭಾಂಶವನ್ನು ಶೇ 30ಕ್ಕೆ ಮಿತಿಗೊಳಿಸುತ್ತಿರುವ ಮಾದರಿಯಲ್ಲಿಯೇ, ಹೃದಯ ಮತ್ತು ಮೂತ್ರಪಿಂಡದ ಚಿಕಿತ್ಸೆಯ ಔಷಧ, ಜೀವರಕ್ಷಕ ಔಷಧಗಳಿಗೂ ಲಾಭಾಂಶದ ಮಿತಿಯನ್ನು ಗೊತ್ತುಪಡಿಸಬೇಕು’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರವು (ಎನ್ಪಿಪಿಎ) ಕ್ಯಾನ್ಸರ್ ಚಿಕಿತ್ಸಾ ಔಷಧಗಳ ಲಾಭಾಂಶವನ್ನು ಕಡಿತಗೊಳಿಸಲು ಕೈಗೊಂಡ ಕ್ರಮವನ್ನು ಸ್ವಾಗತಿಸಿದರು. ಔಷಧಗಳು ಹಾಗೂ ವೈದ್ಯಕೀಯ ಉಪಕರಣಗಳ ನೈಜ ಬೆಲೆ ಮತ್ತು ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ) ನಡುವೆ ಭಾರಿ ವ್ಯತ್ಯಾಸ ಇರುವ ಬಗ್ಗೆ ಸೆ. 23ರಂದು ಕೇಂದ್ರ ಆರೋಗ್ಯ ಸಚಿವರಿಗೆ ತಾವು ಪತ್ರ ಬರೆದಿರುವ ಕುರಿತೂ ಪ್ರಸ್ತಾಪಿಸಿದರು.‘ಸುಪ್ರೀಂ ಕೋರ್ಟ್ ಸಹ ಔಷಧಗಳ ಎಂಆರ್ಪಿ ಮತ್ತು ಅವುಗಳ ನೈಜ ಬೆಲೆಯಲ್ಲಿನ ಅತಿಯಾದ ವ್ಯತ್ಯಾಸದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ರಾಜ್ಯ ಔಷಧ ಆಡಳಿತ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ 253 ಔಷಧಗಳ ದರ ವ್ಯತ್ಯಾಸವನ್ನು ಗುರುತಿಸಲಾಗಿತ್ತು. ಅತ್ಯಾಧುನಿಕ ಕಿಮೋಥೆರಪಿ, ಟಾರ್ಗೆಟೆಡ್ ಥೆರಪಿ ಹಾಗೂ ಕ್ಯಾನ್ಸರ್ಗೆ ಇರುವ ಇತರ ದುಬಾರಿ ಔಷಧಗಳ ಬೆಲೆಯನ್ನು ಔಷಧ ಬೆಲೆ ನಿಯಂತ್ರಣ ಆದೇಶದ ವ್ಯಾಪ್ತಿಗೆ ಒಳಪಡಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಬಗ್ಗೆ ಕೇಂದ್ರವು ಸ್ಪಂದಿಸಿದ್ದು, ದರ ಇಳಿಕೆ ಮಾಡಲು ಮುಂದಾಗಿದೆ’ ಎಂದು ಹೇಳಿದರು.₹ 2,500 ಕೋಟಿ ಉಳಿಕೆ: ‘ಕ್ಯಾನ್ಸರ್ ನಿರೋಧಕ ಔಷಧಗಳ ಬೆಲೆಯನ್ನು ಔಷಧ ಬೆಲೆ ನಿಯಂತ್ರಣ ಆದೇಶದ ವ್ಯಾಪ್ತಿಗೆ ತರಲು ಆರೋಗ್ಯ ಸಚಿವಾಲಯದಡಿ ರಚನೆಗೊಂಡ ಸಮಿತಿ, ಇದೇ 14ರೊಳಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಈ ಕ್ರಮದಿಂದ ಹಲವಾರು ಕ್ಯಾನ್ಸರ್ ಔಷಧಗಳ ಬೆಲೆ ಕಡಿಮೆಯಾಗಲಿದೆ. ವಾರ್ಷಿಕ ಸುಮಾರು ₹ 2,500 ಕೋಟಿಯಷ್ಟು ಹಣ ಉಳಿತಾಯವಾಗಲಿರುವುದಾಗಿ ಕೇಂದ್ರ ಸರ್ಕಾರ ಅಂದಾಜಿಸಿದೆ’ ಎಂದು ತಿಳಿಸಿದರು.ಯು.ಟಿ. ಖಾದರ್ಯು.ಟಿ. ಖಾದರ್ ಆರೋಗ್ಯ ಸಚಿವಜೀವರಕ್ಷಕ ಔಷಧಗಳ ಮೇಲಿನ ಅತಿಯಾದ ಲಾಭಾಂಶಕ್ಕೂ ಕಡಿವಾಣ ಹಾಕಿ ರೋಗಿಗಳ ಹಿತ ಕಾಯಬೇಕು. ಲಾಭಾಂಶದ ಮಿತಿ ವಿಧಿಸಿದರೆ ಜನಸಾಮಾನ್ಯರಿಗೆ ಚಿಕಿತ್ಸಾ ವೆಚ್ಚದ ಭಾರ ಇಳಿಯಲಿದೆ.‘ಉತ್ಪಾದನಾ ವೆಚ್ಚ ನಮೂದು’ ‘ಕ್ಯಾನ್ಸರ್ ಔಷಧಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಉತ್ಪಾದನಾ ವೆಚ್ಚ ಮತ್ತು ಮಾರಾಟ ವೆಚ್ಚವನ್ನು ನಮೂದಿಸಲು ಎನ್ಪಿಪಿಎ ಸೂಚಿಸಿದೆ. ಇದರಿಂದ ಕ್ಯಾನ್ಸರ್ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ 70ರವರೆಗೂ ಕಡಿಮೆಯಾಗಲಿದೆ. ಔಷಧಗಳ ಖರೀದಿ ವೆಚ್ಚ ಮತ್ತು ಗರಿಷ್ಠ ಚಿಲ್ಲರೆ ಬೆಲೆ ಎರಡನ್ನೂ ನಮೂದಿಸುವುದನ್ನು ಖಚಿತಪಡಿಸಿಕೊಳ್ಳಲು ಇದೇ 1ರಂದು ಎಲ್ಲ ಆರೋಗ್ಯ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಈ ಸೂಚನೆಯನ್ನು ನ. 1ರಿಂದ ಜಾರಿಗೆ ತರಲು ಉದ್ದೇಶಿಸಲಾಗಿದೆ’ ಎಂದು ಯು.ಟಿ. ಖಾದರ್ ತಿಳಿಸಿದರು.