’ಮರ, ಗಿಡ, ನದಿ, ಕೆರೆ ಜೊತೆ ಜನರಿಗೆ ಮಾತಾಡಲು ಕಲಿಸುವ ಸಂತರು ನಾಡಿಗೆ ಬೇಕು‘
ದಸರಾ ಉದ್ಘಾಟನೆಯ ವೇಳೆ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಮಾತು ಮನೆ ಮನ ತಲುಪಿದೆ. ಇದು ಇನ್ನು ಕಾಡು, ಗುಡ್ಡ, ಹೊಲ, ಹಳ್ಳ, ಕೆರೆಗಳಲ್ಲಿ ನಾವು ಕಾರ್ಯರೂಪಕ್ಕೆ ತರಬೇಕು. ಕನ್ನಡ ನಾಡಿನ ಆರು ಕೋಟಿ ಜನ ನಾಡಿನ ಒಳ್ಳೆಯದಕ್ಕೆ ಒಂದೊಂದು ಹೆಜ್ಜೆ ಇಟ್ಟರೆ ಬದಲಾವಣೆಗೆ ಸಾಕೇ ಸಾಕು.ಕೆರೆ, ನದಿ ಪುನಶ್ಚೇತನ ಕಾರ್ಯದಲ್ಲಿ ಸದಾ ತೊಡಗಿಸಿಕೊಂಡ ಶ್ರೀಗಳು ಒಂದ

ದಸರಾ ಉದ್ಘಾಟನೆಯ ವೇಳೆ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಮಾತು ಮನೆ ಮನ ತಲುಪಿದೆ. ಇದು ಇನ್ನು ಕಾಡು, ಗುಡ್ಡ, ಹೊಲ, ಹಳ್ಳ, ಕೆರೆಗಳಲ್ಲಿ ನಾವು ಕಾರ್ಯರೂಪಕ್ಕೆ ತರಬೇಕು. ಕನ್ನಡ ನಾಡಿನ ಆರು ಕೋಟಿ ಜನ ನಾಡಿನ ಒಳ್ಳೆಯದಕ್ಕೆ ಒಂದೊಂದು ಹೆಜ್ಜೆ ಇಟ್ಟರೆ ಬದಲಾವಣೆಗೆ ಸಾಕೇ ಸಾಕು.ಕೆರೆ, ನದಿ ಪುನಶ್ಚೇತನ ಕಾರ್ಯದಲ್ಲಿ ಸದಾ ತೊಡಗಿಸಿಕೊಂಡ ಶ್ರೀಗಳು ಒಂದು ಸಸಿ ನೆಟ್ಟು ಉಪನ್ಯಾಸಕ್ಕೆ ನಿಲ್ಲುವವರಲ್ಲ, ಸ್ವತಃ ಮೂರು ನಾಲ್ಕು ತಾಸು ಕಾಯಕ ಮಾಡುತ್ತಾ ಮಾದರಿಯಾದವರು. ಹೀಗಾಗಿ ನುಡಿಯ ಶಕ್ತಿ ದೊಡ್ಡದು.ಗವಿ ಮಠದ ಆವರಣದಲ್ಲಿ, ತಾವರಗೇರಾ ವಿಶಾಲ ಕೆರೆಯ ದಂಡೆಗಳಲ್ಲಿ ದಶಕದ ಈಚೆಗೆ ಗಿಡ ಮರಗಳು ಮಾತಾಡುತ್ತಿವೆ. ನೆಟ್ಟು ನಾಲ್ಕೈದು ವರ್ಷಕ್ಕೆ ಕದಂಬ ಸಸಿ ಶ್ರೀ ಮಠದ ಕಾರ್ಯಾಲಯ ಪಕ್ಕದಲ್ಲಿಯೇ ಹೂವರಳಿಸಿದೆ.ನುಡಿದಂತೆ ನಡೆಯುವ ಶ್ರೀಗಳ ಮಾದರಿ ಕಾಯಕದ ನವಸ್ಪೂರ್ತಿ ನಾಡಿಗೆ ವ್ಯಾಪಿಸಬೇಕು. ಬರ ಗೆಲ್ಲುವ, ಮರ ಉಳಿಸುವ ದಾರಿಯಷ್ಟೇ ಈ ನಾಡನ್ನು ಬರದಿಂದ ದೂರ ಮಾಡಬಹುದು. ಮೈಸೂರು ರಾಜ್ಯ ಕೆರೆಗಳಿಗೆ ಖ್ಯಾತಿ, ಇಲ್ಲಿ ಮೈಲಿಗೆ ಒಂದು ಕೆರೆಯಿದೆ. ನಮ್ಮ ಬಯಲು ಸೀಮೆಯ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಳೇ ಕೆರೆಗಳು ಕಡಿಮೆ, ನಿರ್ಲಕ್ಷ್ಯವೂ ಇದೆ. ಕೆರೆ ಪುನಶ್ಚೇತನ, ಹೊಸ ಹೊಸ ಕೆರೆಗಳ ನಿರ್ಮಾಣದ ಗಟ್ಟಿ ಸಂಕಲ್ಪ ಬೇಕಾಗಿದೆ. ನೀರು ಹಿಡಿದು ಊರು ಕಟ್ಟೋಣ. ವಿಕೇಂದ್ರೀಕೃತ ನೀರಾವರಿ ವ್ಯವಸ್ಥೆ ಉಳಿಸುವ ಮಹಾ ಸಂಕಲ್ಪ ಮಾಡೋಣ.ಒಂದು ಘಟನೆ ಹೇಳಬೇಕು. ಅದು ಮುಂಜಾನೆ ಮೂರು ಗಂಟೆ ಸಮಯ, ಶ್ರೀಗಳು ನಮ್ಮಕಳವೆ ಕಾನ್ಮನೆಯಲ್ಲಿ ವಸತಿ ಮಾಡಿ ಕೊಪ್ಪಳಕ್ಕೆ ಹೊರಡುವ ಗಡಿಬಿಡಿಯಲ್ಲಿದ್ದರು. ಅದಕ್ಕೂ ಮುನ್ನ ಬೆಳಗಿನ ಒಂದು ವಾಕಿಂಗ್ ಶುರು ಮಾಡಿದರು, ನಾನು ಹಾಗೂ ಅವರು ಇಬ್ಬರೇ ಹೊರಟೆವು."ಈ ಮರ ಗಿಡಗಳಲ್ಲಿ ಔಷಧ ಗುಣ ಇದೆ, ಇದು ಇಂಥದ್ದೇ ಕಾಯಿಲೆಗೆ ಬರ್ತದ ಎಂದು ಮೊದಲು ಹೇಗೆ ತಿಳಿಯಿತು? " ಶ್ರೀಗಳು ಕೇಳಿದರು."ಮನುಷ್ಯ ಕಾಡು ವಾಸದಲ್ಲಿ ಇದ್ದಾಗ ಅನಾರೋಗ್ಯ ಕಾಡಿದಾಗ ಬದುಕಿ ಉಳಿಯಲು ಹೇಗೆ ಹೇಗೋ ಒಂದೊಂದೇ ಸಸ್ಯ ಬಳಸುತ್ತಾ ಬಳಸಿ ಬಲ್ಲ ಜ್ಞಾನ ಬಂದಿರಬಹುದು"ಉತ್ತರಿಸಿದೆ."ಹಾಗಲ್ಲ,ಮನುಷ್ಯ ಕಾಡಲ್ಲಿ ಯಾವಾಗಲೂ ಇದ್ದಾಗ ಅಲ್ಲಿನ ಮರ ಗಿಡಗಳ ಜೊತೆಗೆ ಮಾತಾಡುವ ಭಾಷೆ ಕಲಿತಿದ್ದ, ಇವನಿಗೆ ಸಮಸ್ಯೆ ಆದಾಗ ತಮ್ಮ ಸೊಪ್ಪು, ಚಿಗುರು, ಫಲ, ಬೇರು ಬಳಸಲು ಸ್ವತಃ ಗಿಡ ಮರಗಳು ಹೇಳಿದವು" ಶ್ರೀಗಳು ನುಡಿದರು. ಅಲ್ಲಿಂದ ನಮ್ಮ ಮಕ್ಕಳ ಶಿಬಿರದಲ್ಲಿ ಮರಗಳ ಜೊತೆ ಮಾತುಕತೆ ಪಾಠವೂ ಶುರುವಾಗಿದೆ.ಮರ ಗಿಡ ನದಿ ಕೆರೆಗಳ ಜೊತೆಗೆ ನಾಡಿನ ಜನರಿಗೆ ಮಾತಾಡಲು ಕಲಿಸುವ ಸಂತರು ನಾಡಿಗೆ ಬೇಕು. ಅವರೇ ನಮ್ಮ ಗವಿ ಮಠದ ಶ್ರೀಗಳು, ಅದೇ ಶ್ರೀಗಳು ನಮ್ಮ ನಾಡಿಗೆ ಕಾಡು ನೀರಿನ ಜ್ಞಾನ ದೀಪ ಬೆಳಗಿಸಿ ಇಂದು ನಾಡ ಹಬ್ಬ ದಸರೆ ಉದ್ಘಾಟಿಸಿದರು. ಶ್ರೀಗಳಿಗೆ ಶರಣು.ಇಂದು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಎಲ್ಲವನ್ನೂ ಡೌನ್ಲೋಡ್ ಮಾಡಬಹುದು; ಆದರೆ ಅನ್ನ ಮತ್ತು ಸಾರನ್ನು ಡೌನ್ಲೋಡ್ ಮಾಡಲು ಸಾಧ್ಯವಿಲ್ಲ. ರೈತರು ಬೆಳೆದ ಬೆಳೆಗಳಿಂದಲೇ ನಮಗೆ ಆಹಾರ ದೊರೆಯುತ್ತದೆ. ಹೀಗಾಗಿ ರೈತರ ಶ್ರಮವನ್ನು ಗೌರವಿಸಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಉದ್ಘಾಟಿಸಿ ಹೇಳಿದರು. ಮೈಸೂರು ರಾಜಮನೆತನದ ಕೊಡುಗೆಯನ್ನು ಸ್ಮರಿಸಿದ ಶ್ರೀಗಳು, ಮೈಸೂರು ದಸರಾ ಪರಂಪರೆಯನ್ನು ರಾಜಮನೆತನದ ಇತಿಹಾಸದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಿ ರೈತರ ಬದುಕು ಹಸನಾಗಲು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಮಹನೀಯರ ಕೊಡುಗೆ ನಾಡಿನ ಪ್ರಗತಿಗೆ ಮಹತ್ವದ್ದಾಗಿದೆ. ರಾಣಿ ಕೆಂಪರಾಜಮ್ಮ ಅವರು ತಮ್ಮ ಆಭರಣಗಳನ್ನು ಒತ್ತೆಯಿಟ್ಟು ಅಣೆಕಟ್ಟು ನಿರ್ಮಾಣಕ್ಕೆ ನೆರವು ನೀಡಿದ ತ್ಯಾಗದ ಪರಂಪರೆ ನಮಗೆಲ್ಲ ಪ್ರೇರಣೆಯಾಗಿದೆ ಎಂದರು. ಕಾವೇರಿ, ಕೃಷ್ಣೆ, ತುಂಗಭದ್ರೆಯಂತಹ ನದಿಗಳು ಬತ್ತಿಹೋದರೆ ಜನಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ಆದ್ದರಿಂದ ಸರ್ಕಾರಗಳು ನದಿಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ನೆಲ, ಜಲ ಮತ್ತು ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ದೇವರ ಮುಂದೆ ಲಕ್ಷ ದೀಪಗಳನ್ನು ಹಚ್ಚುವುದರ ಜೊತೆಗೆ ಒಂದು ವೃಕ್ಷವನ್ನು ನೆಟ್ಟು ಬೆಳೆಸಿದರೆ ಅದು ಪ್ರಕೃತಿಗೆ ಸಲ್ಲಿಸುವ ನಿಜವಾದ ಸೇವೆಯಾಗುತ್ತದೆ ಎಂದು ವಿವರಿಸಿದರು.ರೈತರ ಶ್ರಮ ಗೌರವಿಸಿ