ಚು.ಆಯೋಗದ ವಿರುದ್ಧ ಹೋರಾಟ: ಜೆನ್–ಝಿ ಅಲೆ ಎದುರು ರಾಜಕೀಯ ಪಕ್ಷಗಳ ಎಚ್ಚರದ ನಡೆ
ನವದೆಹಲಿ: ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಪ್ರತಿಭಟನೆಯನ್ನು ಹತ್ತಿಕ್ಕಲು ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಪ್ರಮಾಣದಲ್ಲಿ ಮಾಡಿರುವ ಭದ್ರತಾ ನಿಯೋಜನೆಯು ದೇಶದ ರಾಜಕಾರಣದಲ್ಲಿ ಜೆನ್ ಝೀ ಪ್ರಭಾವ ಹೆಚ್ಚುತ್ತಿರುವುದನ್ನು ತೋರಿಸುತ್ತಿರ

ನವದೆಹಲಿ: ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಪ್ರತಿಭಟನೆಯನ್ನು ಹತ್ತಿಕ್ಕಲು ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಪ್ರಮಾಣದಲ್ಲಿ ಮಾಡಿರುವ ಭದ್ರತಾ ನಿಯೋಜನೆಯು ದೇಶದ ರಾಜಕಾರಣದಲ್ಲಿ ಜೆನ್ ಝೀ ಪ್ರಭಾವ ಹೆಚ್ಚುತ್ತಿರುವುದನ್ನು ತೋರಿಸುತ್ತಿರುವುದಷ್ಟೇ ಅಲ್ಲದೆ, ಪ್ರಮುಖ ರಾಜಕೀಯ ಪಕ್ಷಗಳ ಲೆಕ್ಕಾಚಾರದ ನಡಿಗೆಯನ್ನೂ ಬಹಿರಂಗಪಡಿಸಿದೆ.ಸಿಜೆಪಿ ನೇತೃತ್ವದ ಈ ಹೋರಾಟದಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ಪಕ್ಷಗಳು, ತಮ್ಮ ಸೈದ್ಧಾಂತಿಕ ಹಿನ್ನೆಲೆ ಮತ್ತು ರಾಜಕೀಯ ಸ್ಥಾನಮಾನಕ್ಕೆ ಧಕ್ಕೆ ಬರದಂತೆ ತಮ್ಮ ನಿಲುವಿನಲ್ಲಿ ಸಮತೋಲನ ಕಾಯ್ದುಕೊಳ್ಳಲು ನೋಡುತ್ತಿವೆ.ದೆಹಲಿ ಬೀದಿಗಳಲ್ಲಿ ಶನಿವಾರ (ಅಕ್ಟೋಬರ್ 10) ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡವರಲ್ಲಿ ಹೆಚ್ಚಿನವರು ಎಡ ಪಕ್ಷಗಳ ಕಾರ್ಯಕರ್ತರು ಹಾಗೂ ಅವರದ್ದೇ ವಿದ್ಯಾರ್ಥಿ, ಯುವ ಸಂಘಟನೆಗಳ ಸದಸ್ಯರು ಎಂಬುದು ಎದ್ದು ಕಾಣುತ್ತಿದೆ. ಕೇರಳಂ ಮಾಜಿ ಮುಖ್ಯಮಂತ್ರಿ, ಸಿಪಿಎಂ ನಾಯಕ ಪಿಣರಾಯಿ ವಿಜಯನ್, ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಸೇರಿದಂತೆ ಆ ಪಕ್ಷದ ಹಲವು ನಾಯಕರು ಕೇರಳ ಹೌಸ್ನಲ್ಲಿ ಉಳಿದುಕೊಂಡಿದ್ದು, ಪ್ರತಿಭಟನಾ ಮೆರವಣಿಗೆ ನಡೆಸಿದ್ದರು.ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ಸಂಸತ್ನತ್ತ ಮೆರವಣಿಗೆ ಹೊರಟರೆ, ಸಿಪಿಐ(ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರು ಜನನಿಬಿಡ ಜಂಕ್ಷನ್ಗಳಲ್ಲಿ ಪ್ರತಿಭಟನಾಕಾರರನ್ನು ಒಗ್ಗೂಡಿಸಿ ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಎಡಪಕ್ಷಗಳ ವಿದ್ಯಾರ್ಥಿ ವಿಭಾಗವು ಸಿಜೆಪಿ ಜೊತೆ ನಿಕಟವಾಗಿ ಸಮನ್ವಯ ಸಾಧಿಸಿರುವಂತೆ ಕಾಣುತ್ತಿದೆ. ವಿದ್ಯಾರ್ಥಿ ವಿಭಾಗದ ಮುಖಂಡರು ಸಿಜೆಪಿ ನಾಯಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನೂ ನಡೆಸಿದ್ದಾರೆ. ಏತನ್ಮಧ್ಯೆ, ಪ್ರತಿಭಟನಾ ಸ್ಥಳದಿಂದ ಕೂಗಳತೆ ದೂರದಲ್ಲೇ ಇದ್ದ ಯುವ ಕಾಂಗ್ರೆಸ್ ಕಚೇರಿ ಬಣಗುಟ್ಟುತ್ತಿತ್ತು. ಯುವ ಕಾಂಗ್ರೆಸ್ ಕಚೇರಿ ಬಳಿ ಇದ್ದವರಿಗಿಂತಲೂ ಹೆಚ್ಚು ಸಂಖ್ಯೆಯ ವಕೀಲರು ಸುಪ್ರೀಂ ಕೋರ್ಟ್ ಬಳಿ ಜಮಾಯಿಸಿ ಘೋಷಣೆಗಳನ್ನು ಕೂಗಿದ್ದರು.ಅವಕಾಶ ಬಿಟ್ಟುಕೊಡದಿರಲು ಕಾಂಗ್ರೆಸ್ ತಂತ್ರಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ವಿರುದ್ಧದ ಅಭಿಯಾನವನ್ನು ವ್ಯವಸ್ಥಿತವಾಗಿ ಸಂಘಟಿಸಿತ್ತು. ‘ಇಂಡಿಯಾ’ ಮೈತ್ರಿಕೂಟದ ಸಂಸದರನ್ನು ಒಟ್ಟುಗೂಡಿಸಿ ಸತತ ಮೂರು ದಿನ ರಾಜಧಾನಿಯಾದ್ಯಂತ ಹೋರಾಟ ನಡೆಸಲು ಒತ್ತು ನೀಡಿತ್ತು. ರಾಜಕೀಯವಾಗಿ ಸಿಜೆಪಿಯ ನಿಲುವು ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಅದಕ್ಕೆ (ರಾಜಕೀಯವಾಗಿ) ಅವಕಾಶಗಳನ್ನು ಬಿಟ್ಟುಕೊಡದೆ ಮುಂದುವರಿಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ.ಉದ್ದೇಶಿತ ಪ್ರತಿಭಟನೆಯ ಭಾಗವಾಗಿ ಸಿಜೆಪಿ ನಾಯಕರು ಶನಿವಾರ ಬೆಳಗ್ಗೆ ದೆಹಲಿ ತಲುಪುವ ಮೊದಲೇ, ರಾಹುಲ್ ಗಾಂಧಿ ಚೆನ್ನೈಗೆ ತೆರಳಿದ್ದರು. ರಾಷ್ಟ್ರವ್ಯಾಪಿ ಯುವಕರನ್ನು ಸಂಪರ್ಕಿಸಲು ಕಾಂಗ್ರೆಸ್ ನಡೆಸುತ್ತಿರುವ ‘ಛಾತ್ರೋನ್ ಕಿ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟಿದ್ದರು.ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಬೆಳಗ್ಗೆಯಿಂದ ನಡೆದ ಬೆಳವಣಿಗೆಗಳ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಕಾಂಗ್ರೆಸ್ ಪಕ್ಷವು ಈ ನಿರಂಕುಶ ಆಡಳಿತದ ವಿರುದ್ಧ ವಿರೋಧ ಪಕ್ಷಗಳ ಒಗ್ಗಟ್ಟಿನೊಂದಿಗೆ ಕೊನೆವರೆಗೂ ಹೋರಾಡುತ್ತದೆ’ ಎಂದು ಹೇಳಿದ್ದರು.‘ಈ ಆಡಳಿತವನ್ನು ಪ್ರಶ್ನಿಸುವ ನಮ್ಮ ಯುವಕರು, ವಿದ್ಯಾರ್ಥಿಗಳು, ವಕೀಲರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ರೈತ ಸಂಘಟನೆ ನಾಯಕರು, ಯುಟ್ಯೂಬರ್ಗಳು, ಕಂಟೆಂಟ್ ಕ್ರಿಯೆಟರ್ಗಳು ಹಾಗೂ ಪ್ರತಿಯೊಬ್ಬರನ್ನೂ ಬಂಧಿಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಎಲ್ಲಿಯೂ ಸಿಜೆಪಿ ಎಂದು ಉಲ್ಲೇಖಿಸಿಲ್ಲ.ಈ ಹಿಂದೆ ಅಣ್ಣಾ ಹಜಾರೆ ನೇತೃತ್ವದ ಚಳವಳಿಗಳಿಂದ ಆಗಿರುವ ಅನುಭವ ಕಾಂಗ್ರೆಸ್ ಪಕ್ಷವು ಸಿಜೆಪಿ ವಿಚಾರದಲ್ಲಿ ಎಚ್ಚರಿಕೆ ವಹಿಸುವಂತೆ ಮಾಡಿದೆ. ಆ ಚಳವಳಿಗಳು ಆಮ್ ಆದ್ಮಿ ಪಕ್ಷದ (ಎಎಪಿ) ರಚನೆಗೆ ದಾರಿ ಮಾಡಿಕೊಟ್ಟಿದ್ದವು. ಆ ಪಕ್ಷವೇ ಈಗ ದೆಹಲಿ, ಪಂಜಾಬ್, ಗೋವಾ ಮತ್ತು ಗುಜರಾತ್ನಲ್ಲಿ ಬಿಜೆಪಿಯೇತರ ಸ್ಥಾನಕ್ಕೆ ಪ್ರಬಲವಾಗಿ ಬೆಳೆದು ಕಾಂಗ್ರೆಸ್ನ ಅವಕಾಶಗಳನ್ನು ಕಸಿದುಕೊಳ್ಳುತ್ತಿದೆ.ಹೈಲೈಟ್ ಆದ ಸಿಜೆಪಿ ನಾಯಕರುದೆಹಲಿಯಲ್ಲೇ ಇದ್ದ ಎಡ ಪಕ್ಷಗಳ ನಾಯಕರಿಗಿಂತಲೂ ಮುಂಬೈನಿಂದ ಬೆಳಗ್ಗೆ ವಿಮಾನದಲ್ಲಿ ಬಂದ ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಇತರರಿಗೆ ಸಾಕಷ್ಟು ಪ್ರಚಾರ ಸಿಕ್ಕಿತು. ಅವರು ಪ್ರತಿಭಟನಾ ಸ್ಥಳಕ್ಕೆ ತೆರಳದಂತೆ ಮಾಡಲು ವಿಮಾನದಲ್ಲಿಯೇ ವಶಕ್ಕೆ ಪಡೆಯಲಾಯಿತು.ದೆಹಲಿಯಾದ್ಯಂತ ಭದ್ರತಾ ಸಿಬ್ಬಂದಿ ನಿಯೋಜನೆಗೊಂಡಿದ್ದರಿಂದ, ಹೆಚ್ಚಿನ ಪ್ರತಿಭಟನಾಕಾರರು ಜಂತರ್ ಮಂತರ್ ಬಳಿ ಜಮಾಯಿಸಲು ಸಾಧ್ಯವಾಗಲಿಲ್ಲ. ಅಡೆತಡೆಗಳನ್ನು ಮೀರಿ ಬಂದಿದ್ದ ಸಾಕಷ್ಟು ಮುಖಂಡರು, ನಾಯಕರು, ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಅವರ ಅನುಪಸ್ಥಿತಿಯಲ್ಲಿ ಕಾರ್ಯಕರ್ತರು ಹೋರಾಟ ಮುಂದುವರಿಸಿದರು.ಸ್ಪಷ್ಟ ನಿಲುವು ತಳೆದ ಸರ್ಕಾರಇತ್ತೀಚೆಗೆ ನೀಟ್ ಅಕ್ರಮದ ವಿರುದ್ಧ ನಡೆದ ಬೃಹತ್ ಪ್ರತಿಭಟನೆಗಳು ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರ ತಲೆದಂಡಕ್ಕೆ ಕಾರಣವಾಗಿದ್ದವು. ಆ ರೀತಿ ಆಗಲು ಬಿಡಬಾರದು ಎಂಬ ಸ್ಪಷ್ಟ ನಿಲುವನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ಅದರಂತೆ, ಭಾರಿ ಭದ್ರತೆ ಕೈಗೊಂಡು ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಮಾಡಿತು.ಆದಾಗ್ಯೂ, ಭಾರಿ ಕಟ್ಟೆಚ್ಚರ, ಅತಿಯಾದ ಭದ್ರತಾ ಕ್ರಮಗಳು ವ್ಯವಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವುದಾಗಿ ಹೇಳಿಕೊಳ್ಳುವ ಸರ್ಕಾರದ ಆತಂಕವನ್ನೂ ಬಯಲು ಮಾಡಿದಂತಿದೆ.