ಮಣಿಪುರ: ಐವರ ಸಾವು
ಇಂಫಾಲ್ (ಪಿಟಿಐ): ಮಣಿಪುರದ ಕಾಮ್ಜೋಂಗ್ ಹಾಗೂ ಉಖರುಲ್ ಜಿಲ್ಲೆಗಳಲ್ಲಿ ಶಸ್ತ್ರಸಜ್ಜಿತ ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ ಮಹಿಳೆ ಸೇರಿ ಐವರು ಮೃತಪಟ್ಟಿದ್ದಾರೆ.ನಾಗಾ ಸಮುದಾಯದ ಪ್ರಾಬಲ್ಯವಿರುವ ಕಾಮ್ಜೋಂಗ್ ಜಿಲ್ಲೆಗೆ ಸೇರಿದ, ಕುಕಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಚಸ್ಸಾದ್ ಗ್ರಾಮದಲ್ಲಿ 22 ವರ್ಷದ ಯುವಕ ಹಾಗೂ 42 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.

ಇಂಫಾಲ್ (ಪಿಟಿಐ): ಮಣಿಪುರದ ಕಾಮ್ಜೋಂಗ್ ಹಾಗೂ ಉಖರುಲ್ ಜಿಲ್ಲೆಗಳಲ್ಲಿ ಶಸ್ತ್ರಸಜ್ಜಿತ ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ ಮಹಿಳೆ ಸೇರಿ ಐವರು ಮೃತಪಟ್ಟಿದ್ದಾರೆ.ನಾಗಾ ಸಮುದಾಯದ ಪ್ರಾಬಲ್ಯವಿರುವ ಕಾಮ್ಜೋಂಗ್ ಜಿಲ್ಲೆಗೆ ಸೇರಿದ, ಕುಕಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಚಸ್ಸಾದ್ ಗ್ರಾಮದಲ್ಲಿ 22 ವರ್ಷದ ಯುವಕ ಹಾಗೂ 42 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಐವರು ಮಕ್ಕಳ ತಾಯಿಯಾಗಿದ್ದ ಮಹಿಳೆಯ ಕುತ್ತಿಗೆಗೆ ಶುಕ್ರವಾರ ರಾತ್ರಿ ಗುಂಡು ಹಾರಿಸಲಾಗಿದೆ.‘ಈ ಹತ್ಯೆಯಿಂದಾಗಿ ಕುಕಿ ಹಾಗೂ ನಾಗಾ ಸಮುದಾಯದ ಶಸ್ತ್ರಸಜ್ಜಿತ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ನಂತರದ ಘರ್ಷಣೆಯಲ್ಲಿ ಯುವಕ ಮೃತಪಟ್ಟಿದ್ದು, 10 ಮನೆ ಗಳಿಗೆ ಬೆಂಕಿ ಹಚ್ಚಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ, ಮ್ಯಾನ್ಮಾರ್ ಗಡಿಯ ಸಮೀಪವಿರುವ ತಾಂಗಖುಲ್ ನಾಗಾ ಜನವಸತಿ ಪ್ರದೇಶವಾದ ಕಾಮ್ಜೋಂಗ್ನ ನಿಂಗ್ಚೌ ಗ್ರಾಮಕ್ಕೆ ನುಗ್ಗಿದ ಶಂಕಿತ ಬಂಡುಕೋರರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈ ಘಟನೆ ಬಳಿಕ ಭದ್ರತಾ ಪಡೆಗಳು ಗ್ರಾಮಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿವೆ.ಉಖರುಲ್ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆ ಯಲ್ಲಿ, ಶಂಕಿತ ಬಂಡುಕೋರರು ವಾಹನವೊಂದರ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಸಂದೀಪ್ ರಾಯ್ (40) ಎಂಬುವವರು ಮೃತಪಟ್ಟಿದ್ದಾರೆ. ಕಾಂಗ್ಪೋಕ್ಪಿ ಜಿಲ್ಲೆಯ ಮಕುಯಿ ಅಶಾಂಗ್ ಮತ್ತು ಟಪೋನ್ನಲ್ಲಿ ಶಸ್ತ್ರಸಜ್ಜಿತ ಗುಂಪುಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ.ಈ ವರ್ಷವೇ 40 ಮಂದಿ ಬಲಿಈ ವರ್ಷದ ಫೆಬ್ರುವರಿಯಲ್ಲಿ ಕುಕಿ ಮತ್ತು ನಾಗಾ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದ ನಂತರ 40ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಅನೇಕ ಮನೆಗಳು ಬೆಂಕಿಗೆ ಆಹುತಿಯಾಗಿವೆ.ಉಖರುಲ್ ಕಾಮ್ಜೋಂಗ್ ಕಾಂಗ್ಪೋಕ್ಪಿ ತಮೆಂಗ್ಲೊಂಗ್ ನೋನಿ ಜಿಲ್ಲೆಗಳು ಮತ್ತು ಸೇನಾಪತಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಹೆಚ್ಚಿನ ಹಿಂಸಾಚಾರ ನಡೆದಿದೆ.ಮೂರು ವರ್ಷಗಳ ಹಿಂದೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಮಣಿಪುರದ ಎಲ್ಲ ಜಿಲ್ಲೆಗಳ ಗಡಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.2023ರ ಮೇ ತಿಂಗಳಿನಿಂದ ಮೈತೇಯಿ ಮತ್ತು ಕುಕಿ–ಝೋ ಗುಂಪುಗಳ ನಡುವಿನ ಜನಾಂಗೀಯ ಕಲಹದಲ್ಲಿ 260ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.