ತಪ್ಪು ಮಾಡಿದ್ದೀರಿ, ನಿಮಗೆ ನಿದ್ದೆಯೇ ಬರುತ್ತಿಲ್ಲ: ಜ್ಞಾನೇಶ್ ವಿರುದ್ಧ ರಾಹುಲ್
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ನ ‘ಇಂದಿರಾ ಭವನ’ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಡಿಯಾ’ ಮೈತ್ರಿಕೂಟದ ನಾಯಕರು ಮೆರವಣಿಗೆ ಮೂಲಕ ಸುಪ್ರೀಂ ಕೋರ್ಟ್ಗೆ ತೆರಳಿ, ಜ್ಞಾನೇಶ್ ಕುಮಾರ್ ಮತ್ತು ‘ಮತ ಕಳ್ಳತನ’ದ ವಿರುದ್ಧ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ನ ‘ಇಂದಿರಾ ಭವನ’ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಡಿಯಾ’ ಮೈತ್ರಿಕೂಟದ ನಾಯಕರು ಮೆರವಣಿಗೆ ಮೂಲಕ ಸುಪ್ರೀಂ ಕೋರ್ಟ್ಗೆ ತೆರಳಿ, ಜ್ಞಾನೇಶ್ ಕುಮಾರ್ ಮತ್ತು ‘ಮತ ಕಳ್ಳತನ’ದ ವಿರುದ್ಧ ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.‘ನೀವು ರಾಜೀನಾಮೆ ನೀಡಲೇಬೇಕು. ಮಾಫಿಸಾಕ್ಷಿಯಾಗಿ ತಪ್ಪು ಮಾಡಿದ್ದೀರಿ. ಆದರೆ, ಆ ತಪ್ಪಿನ ಹಿಂದಿನ ಸೂತ್ರಧಾರ ನೀವಲ್ಲ’ ಎಂದು ಜ್ಞಾನೇಶ್ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.ಜ್ಞಾನೇಶ್ ಕುಮಾರ್ ಅವರಿಗೆ ರಾತ್ರಿಯಲ್ಲಿ ನಿದ್ದೆ ಬರುತ್ತಿಲ್ಲ ಎಂಬುದು ನಮಗೆ ತಿಳಿದಿದೆ. ಅವರು ಸಿಇಸಿ ಆಗಿ ಉಳಿಯುವುದಿಲ್ಲ ಎಂದು ನಾನು ಅವರಿಗೆ ನೇರವಾಗಿ ಹೇಳುತ್ತಿದ್ದೇನೆ ಎಂದೂ ರಾಹುಲ್ ಗುಡುಗಿದ್ದಾರೆ. ಈ ಹಿಂದೆಯೂ ಪ್ರತಿರೋಧವಿತ್ತು. ಆದರೆ, ಅದು ಬೀದಿಗಿಳಿದು ಪ್ರತಿಭಟನೆಯ ಸ್ವರೂಪ ಪಡೆದಿರಲಿಲ್ಲ ಎಂದು ಉಲ್ಲೇಖಿಸಿದ ರಾಹುಲ್, ಈ ಬಾರಿ ನಾವು ನಡೆಸುತ್ತಿರುವ ಹೋರಾಟ ನಿಲ್ಲುವುದಿಲ್ಲ. ದಿನಗಳು ಅಥವಾ ವರ್ಷಗಳೇ ಬೇಕಾದರೂ ಮುಂದುವರಿಯುತ್ತದೆ ಎಂದಿದ್ದಾರೆ.ಕೇಂದ್ರ ಸರ್ಕಾರದ 200 ಅಧಿಕಾರಿಗಳು ನಮ್ಮೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ಮಾಹಿತಿ ಒದಗಿಸುತ್ತಿದ್ದಾರೆ ಎಂದೂ ರಾಹುಲ್ ಪ್ರತಿಪಾದಿಸಿದ್ದಾರೆ.‘ಸಂವಿಧಾನವೇ ನಮ್ಮ ಧರ್ಮ. ಸಂವಿಧಾನವನ್ನು ಎತ್ತಿಹಿಡಿಯುವವರೆಗೆ, ಚುನಾವಣಾ ಆಯುಕ್ತರು ನಿರ್ಗಮಿಸುವವರೆಗೆ ಮತ್ತು ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವವರೆಗೆ ದೇಶದ ಯುವಜನತೆ ವಿಶ್ರಮಿಸುವುದಿಲ್ಲ’ ಎಂದಿದ್ದಾರೆ.‘ಐದು ಮಂದಿ ಅಪರಾಧಿಗಳು ನ್ಯಾಯಾಂಗ ವಿಚಾರಣೆಯನ್ನು ಎದುರಿಸಲಿದ್ದಾರೆ. ಆ ಐದು ಮಂದಿ ಅಪರಾಧಿಗಳು ಭಾರತದ ಪರಿಕಲ್ಪನೆ ಮತ್ತು ಅದರ ಆತ್ಮದ ಮೇಲೆ ದಾಳಿ ಮಾಡಿದ್ದಾರೆ. ಎಷ್ಟು ಸಮಯ ತೆಗೆದುಕೊಂಡರೂ ನಾವು ಹಿಂಜರಿಯುವುದಿಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.‘ಇಂಡಿಯಾ’ ಮೈತ್ರಿಕೂಟದ ಪ್ರತಿಭಟನಾ ಮೆರವಣಿಗೆಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ. ಸಂವಿಧಾನ ಅಪಾಯದಲ್ಲಿದೆ ಎಂದು ಭಾವಿಸುವ ಬಿಜೆಪಿಯವರೇ ಆಗಿರಲಿ, ಸಂವಿಧಾನವನ್ನು ರಕ್ಷಿಸಲು ಬಯಸುವ ಯಾರೇ ಆದರೂ ನಮ್ಮೊಂದಿಗೆ ಹೆಜ್ಜೆ ಹಾಕಬಹುದು’ ಎಂದಿದ್ದಾರೆ.‘ಪ್ರಧಾನಿ ನರೇಂದ್ರ ಮೋದಿ ಅವರ ಜಾತಕ ನಮ್ಮ ಬಳಿಯಿದೆ. ಸಂವಿಧಾನವನ್ನು ರಕ್ಷಿಸುವ ಹೋರಾಟವಿದು. ಇದು ರಾಹುಲ್ ಗಾಂಧಿ ಅಥವಾ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ್ದಲ್ಲ’ ಎಂದೂ ಹೇಳಿದ್ದಾರೆ.