ಹೋರಾಟದ ಕೇಂದ್ರಬಿಂದು: ದೆಹಲಿಯ ಜಂತರ್ ಮಂತರ್ನಿಂದ ಲಂಡನ್ನ ಹೈಡ್ ಪಾರ್ಕ್ವರೆಗೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನಾ ತಾಣವಾಗಿ ‘ಜಂತರ್ ಮಂತರ್’ನ ಮಾನ್ಯತೆ ರದ್ದುಗೊಳಿಸಿರುವುದು ನಗರದ ಹೃದಯಭಾಗದಲ್ಲಿ ಪ್ರತಿಭಟನೆಗೆ ಅವಕಾಶ ನೀಡಬೇಕೇ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಜಾಗತಿಕವಾಗಿ ಪ್ರಮುಖ ನಗರಗಳ ಕೇಂದ್ರ ಭಾಗಗಳಲ್ಲೇ ಇಂತಹ ಹಲವು ‘ಫ್ರೀಡಂ ಪಾರ್ಕ್’ಗಳಿವೆ.ಲಂಡನ್ನ ಹೈಡ್ ಪಾರ್ಕ್ನಲ್ಲಿರುವ ‘ಸ್ಪೀಕರ್ಸ್ ಕಾರ್ನ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನಾ ತಾಣವಾಗಿ ‘ಜಂತರ್ ಮಂತರ್’ನ ಮಾನ್ಯತೆ ರದ್ದುಗೊಳಿಸಿರುವುದು ನಗರದ ಹೃದಯಭಾಗದಲ್ಲಿ ಪ್ರತಿಭಟನೆಗೆ ಅವಕಾಶ ನೀಡಬೇಕೇ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಜಾಗತಿಕವಾಗಿ ಪ್ರಮುಖ ನಗರಗಳ ಕೇಂದ್ರ ಭಾಗಗಳಲ್ಲೇ ಇಂತಹ ಹಲವು ‘ಫ್ರೀಡಂ ಪಾರ್ಕ್’ಗಳಿವೆ.ಲಂಡನ್ನ ಹೈಡ್ ಪಾರ್ಕ್ನಲ್ಲಿರುವ ‘ಸ್ಪೀಕರ್ಸ್ ಕಾರ್ನರ್’, ‘ಟ್ರಾಫಲ್ಗರ್ ಸ್ಕ್ವೇರ್’ ಮತ್ತು ‘ಪಾರ್ಲಿಮೆಂಟ್ ಸ್ಕ್ವೇರ್’, ನ್ಯೂಯಾರ್ಕ್ನ ‘ಯೂನಿಯನ್ ಸ್ಕ್ವೇರ್’, ವಾಷಿಂಗ್ಟನ್ನ ‘ಲಫಯೆಟ್ ಸ್ಕ್ವೇರ್’ ಮತ್ತು ‘ನ್ಯಾಷನಲ್ ಮಾಲ್’, ಇಸ್ತಾನ್ಬುಲ್ನ ‘ತಕ್ಸಿಮ್ ಸ್ಕ್ವೇರ್’, ಸಿಂಗಪುರದ ‘ಹಾಂಗ್ ಲಿಮ್ ಪಾರ್ಕ್’ ಅಥವಾ ಪ್ಯಾರಿಸ್ನ ‘ಪ್ಲೇಸ್ ಡೆ ಲಾ ಬಾಸ್ಟಿಲ್’ ಇವೆಲ್ಲವೂ ಪ್ರಮುಖ ನಗರಗಳ ಕೇಂದ್ರ ಭಾಗಗಳಲ್ಲೇ ಇದ್ದು, ಪ್ರತಿಭಟನೆಗಳ ಮೂಲಕವೇ ಗಮನ ಸೆಳೆದಿವೆ.ಇದಲ್ಲದೆ, ಕೈರೊದ ತಹ್ರೀರ್ ಸ್ಕ್ವೇರ್, ಕೀವ್ನ ಮೈದಾನ್ ನೆಜಲೆಜ್ನೋಸ್ಟಿ ಮತ್ತು ಬೀಜಿಂಗ್ನ ಟಿಯಾನನ್ಮೆನ್ ಸ್ಕ್ವೇರ್ ಇತ್ತೀಚಿನ ಇತಿಹಾಸದ ಅತ್ಯಂತ ದೊಡ್ಡ ಪ್ರತಿಭಟನೆಗಳಿಗೆ ಜಾಗತಿಕವಾಗಿ ಹೆಸರುವಾಸಿಯಾಗಿವೆ.ದೆಹಲಿಯಲ್ಲಿಯೂ ಜಂತರ್ ಮಂತರ್ ಪ್ರತಿಭಟನೆಗಳ ಸಂಕೇತವಾಗುವ ಮೊದಲು ನಗರದ ಹೃದಯಭಾಗದಲ್ಲಿದ್ದ ‘ಬೋಟ್ ಕ್ಲಬ್’ ಐತಿಹಾಸಿಕ ಪ್ರತಿಭಟನಾ ತಾಣವಾಗಿತ್ತು. ಪ್ರಸ್ತುತ ಅಧಿಕೃತ ಪ್ರತಿಭಟನಾ ತಾಣವಾಗಿ ಮುಂದುವರಿದಿರುವ ರಾಮಲೀಲಾ ಮೈದಾನವೂ ಕೇಂದ್ರ ಭಾಗದಲ್ಲೇ ಇದೆಯಾದರೂ, ಜಂತರ್ ಮಂತರ್ ಅಥವಾ ಬೋಟ್ ಕ್ಲಬ್ನಷ್ಟು ಕೇಂದ್ರ ಭಾಗದಲ್ಲಿಲ್ಲ.ವಿಶ್ವದಾದ್ಯಂತ ಪ್ರಮುಖ ನಗರಗಳ ಕೇಂದ್ರ ಭಾಗದಲ್ಲಿರುವ ಐತಿಹಾಸಿಕ ಪ್ರತಿಭಟನಾ ತಾಣಗಳ ಪಟ್ಟಿ ಇಲ್ಲಿದೆ...ಹೈಡ್ ಪಾರ್ಕ್: ಲಂಡನ್ನ ಪ್ರಸಿದ್ಧ ಹೈಡ್ ಪಾರ್ಕ್ನ ಈಶಾನ್ಯ ದಿಕ್ಕಿನಲ್ಲಿರುವ ‘ಸ್ಪೀಕರ್ಸ್ ಕಾರ್ನರ್’ ವಾಕ್ ಸ್ವಾತಂತ್ರ್ಯಕ್ಕೆ ಮೀಸಲಾದ ಸ್ಥಳವಾಗಿದೆ. ಇದು 1800ರ ದಶಕದ ಮಧ್ಯಭಾಗದಿಂದ ಸಾರ್ವಜನಿಕ ಭಾಷಣ ಮತ್ತು ಚರ್ಚೆಗಳ ಸಾಂಪ್ರದಾಯಿಕ ತಾಣವಾಗಿದೆ. ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ಮತ್ತು ಜಾರ್ಜ್ ಆರ್ವೆಲ್ ಅವರಂತಹ ಪ್ರಸಿದ್ಧ ನಾಯಕರು ಭಾಷಣ ಮಾಡಿದ್ದರು. 1872ರ ಸಂಸತ್ತಿನ ಕಾಯ್ದೆಯು ಹೈಡ್ ಪಾರ್ಕ್ನ ಈ ಭಾಗವನ್ನು ಸಾರ್ವಜನಿಕ ಭಾಷಣಕ್ಕಾಗಿ ಕಾಯ್ದಿರಿಸಿತು. ಪೊಲೀಸರು ಕಾನೂನುಬದ್ಧ ಎಂದು ಪರಿಗಣಿಸುವವರೆಗೆ ಯಾರೇ ಆದರೂ ಪೂರ್ವಾನುಮತಿಯಿಲ್ಲದೆ ಬಂದು ಯಾವುದೇ ವಿಷಯದ ಬಗ್ಗೆ ಇಲ್ಲಿ ಮಾತನಾಡಬಹುದು.ಟ್ರಾಫಲ್ಗರ್ ಸ್ಕ್ವೇರ್: ವಸ್ತುಸಂಗ್ರಹಾಲಯಗಳು, ಕಲಾ ಗ್ಯಾಲರಿಗಳು, ಸಾಂಸ್ಕೃತಿಕ ತಾಣಗಳು ಮತ್ತು ಐತಿಹಾಸಿಕ ಕಟ್ಟಡಗಳಿಂದ ಸುತ್ತುವರೆದಿರುವ ಲಂಡನ್ನ ಟ್ರಾಫಲ್ಗರ್ ಸ್ಕ್ವೇರ್ ಪ್ರತಿಭಟನೆಗಳ ಕೇಂದ್ರಬಿಂದುವಾಗಿದೆ. ಇಲ್ಲಿ ವಾರಾಂತ್ಯಗಳಲ್ಲಿ ರಾಜಕೀಯ, ಧಾರ್ಮಿಕ ಮತ್ತು ಸಾರ್ವಜನಿಕ ವಿಷಯಗಳಿಗೆ ಸಂಬಂಧಿಸಿದ ರ್ಯಾಲಿಗಳು ಹಾಗೂ ಪ್ರತಿಭಟನೆಗಳು ನಡೆಯುತ್ತವೆ. ಲಂಡನ್ನ ಮೇಯರ್ ಈ ಪ್ರಜಾಸತ್ತಾತ್ಮಕ ಸಂಪ್ರದಾಯವನ್ನು ಬೆಂಬಲಿಸುತ್ತಾರೆ ಮತ್ತು ಇಂತಹ ಉದ್ದೇಶಗಳಿಗಾಗಿ ಈ ಸ್ಥಳವನ್ನು ಬಳಸಲು ಅವಕಾಶ ಕಲ್ಪಿಸುತ್ತಾರೆ.ವೈಟ್ಹಾಲ್/ಪಾರ್ಲಿಮೆಂಟ್ ಸ್ಕ್ವೇರ್: ಪ್ಯಾಲೇಸ್ ಆಫ್ ವೆಸ್ಟ್ಮಿನಿಸ್ಟರ್ನ (ಬ್ರಿಟನ್ ಸಂಸತ್ ಭವನ) ವಾಯುವ್ಯ ದಿಕ್ಕಿನಲ್ಲಿರುವ ಹಾಗೂ ಸರ್ಕಾರಿ ಕಚೇರಿಗಳು, ಡೌನಿಂಗ್ ಸ್ಟ್ರೀಟ್ ಮತ್ತು ವೆಸ್ಟ್ಮಿನಿಸ್ಟರ್ ಅಬ್ಬೆಗೆ ನೇರ ಸಂಪರ್ಕ ಹೊಂದಿರುವ ಈ ಸ್ಥಳವು, ಬ್ರಿಟಿಷ್ ಸರ್ಕಾರ ಮತ್ತು ನ್ಯಾಯಾಂಗದ ಕೇಂದ್ರ ಭಾಗಕ್ಕೆ ಸಮೀಪದಲ್ಲಿರುವುದರಿಂದ ಇದು ಸಾರ್ವಜನಿಕ ಸಭೆಗಳ ಪ್ರಮುಖ ಕೇಂದ್ರವಾಗಿದೆ.ಯೂನಿಯನ್ ಸ್ಕ್ವೇರ್: ನ್ಯೂಯಾರ್ಕ್ ನಗರದ ಮ್ಯಾನ್ಹ್ಯಾಟನ್ನಲ್ಲಿರುವ ‘ಯೂನಿಯನ್ ಸ್ಕ್ವೇರ್ ಪಾರ್ಕ್’ ಒಂದು ಐತಿಹಾಸಿಕ ಸಾರ್ವಜನಿಕ ಚೌಕವಾಗಿದ್ದು, ರಾಷ್ಟ್ರೀಯ ಐತಿಹಾಸಿಕ ಸ್ಮಾರಕವೆಂದು ಮಾನ್ಯತೆ ಪಡೆದಿದೆ. 19ನೇ ಶತಮಾನದ ಮಧ್ಯಭಾಗದಿಂದಲೂ ಇದು ಅಭಿವ್ಯಕ್ತಿ ಸ್ವಾತಂತ್ರ್ಯ, ಕಾರ್ಮಿಕರ ಪ್ರತಿಭಟನೆಗಳು ಮತ್ತು ರಾಜಕೀಯ ಪ್ರದರ್ಶನಗಳ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದೆ.ಲಫಾಯೆಟ್ ಸ್ಕ್ವೇರ್: ವಾಷಿಂಗ್ಟನ್ನಲ್ಲಿ ಶ್ವೇತಭವನದ ಉತ್ತರಕ್ಕಿರುವ ಈ ಸ್ಥಳವು ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ವಾಕ್ ಸ್ವಾತಂತ್ರ್ಯ, ಜಾಗೃತಿ ಸಭೆಗಳು ಮತ್ತು ನಾಗರಿಕ ಹಕ್ಕುಗಳ ಪ್ರತಿಭಟನೆಗಳ ತಾಣವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. 1889ರಿಂದ ಇಲ್ಲಿಯತನಕ ಯಾವುದೇ ಬೇಲಿ ಇರಲಿಲ್ಲ. ಆದರೆ, ಡೊನಾಲ್ಡ್ ಟ್ರಂಪ್ ಆಡಳಿತವು ಇಲ್ಲಿ ಶಾಶ್ವತ ಬೇಲಿಗಳನ್ನು ಅಳವಡಿಸಲು ಯೋಜಿಸುತ್ತಿದೆ.ನ್ಯಾಷನಲ್ ಮಾಲ್ / ಯುಎಸ್ ಕ್ಯಾಪಿಟಲ್ ಗ್ರೌಂಡ್ಸ್: 1964ರ ವಾಷಿಂಗ್ಟನ್ ಮೆರವಣಿಗೆ ಮತ್ತು 1870ರ ‘ಭೂಮಿಯ ದಿನ’ದಂತಹ ಹಲವು ಐತಿಹಾಸಿಕ ಘಟನೆಗಳಿಗೆ ಈ ಸ್ಥಳ ಸಾಕ್ಷಿಯಾಗಿದೆ.ಟಕ್ಸಿಮ್ ಸ್ಕ್ವೇರ್ (ಟರ್ಕಿ): ಇಸ್ತಾಂಬುಲ್ ನಗರದ ಮಧ್ಯಭಾಗದಲ್ಲಿರುವ ಈ ಸ್ಥಳವೂ ಐತಿಹಾಸಿಕ ಹಾಗೂ ಬಿಗಿ ಭದ್ರತೆಯುಳ್ಳ ಸಾರ್ವಜನಿಕ ಸ್ಥಳವಾಗಿದ್ದರೂ, ಕಾರ್ಮಿಕರ ರ್ಯಾಲಿಗಳು, ಪ್ರತಿಭಟನೆಗಳ ಪ್ರಮುಖ ಕೇಂದ್ರವಾಗಿದೆ.ಹಾಂಗ್ ಲಿಮ್ ಪಾರ್ಕ್ (ಸಿಂಗಪುರ): ಈ ಭೂಮಿಯನ್ನು ದಾನ ಮಾಡಿದ ಉದ್ಯಮಿಯೊಬ್ಬರ ಹೆಸರನ್ನು ಇಡಲಾಗಿರುವ ಈ ಉದ್ಯಾನವನವು ಸಿಂಗಪುರದ ಮೊದಲ ರಾಜಕೀಯ ರ್ಯಾಲಿಗಳಿಗೆ ವೇದಿಕೆಯಾಗಿತ್ತು. ಪ್ರಸ್ತುತ ಇದು ಸಮುದಾಯ ಕಾರ್ಯಕ್ರಮಗಳ ತಾಣವಾಗಿದ್ದರೂ, ಇಲ್ಲಿರುವ ‘ಸ್ಪೀಕರ್ಸ್ ಕಾರ್ನರ್’ ಎಂಬ ನಿರ್ದಿಷ್ಟ ಪ್ರದೇಶವು ಸಿಂಗಪುರದ ನಾಗರಿಕರು ಪ್ರತಿಭಟನೆ ನಡೆಸಲು ಮೀಸಲಿಟ್ಟಿರುವ ಏಕೈಕ ಹೊರಾಂಗಣ ಸ್ಥಳವಾಗಿದೆ.ಪ್ಲೇಸ್ ಡಿ ಲಾ ಬಾಸ್ಟಿಲ್ (ಪ್ಯಾರಿಸ್): ಫ್ರೆಂಚ್ ಕ್ರಾಂತಿಯ ಸಂಕೇತವಾಗಿರುವ ಈ ಸ್ಥಳವು ಅನೇಕ ಪ್ರತಿಭಟನೆಗಳು, ರಾಜಕೀಯ ಪ್ರದರ್ಶನಗಳು ಮತ್ತು ನಾಗರಿಕರ ಮೆರವಣಿಗೆಗಳಿಗೆ ಸಾಕ್ಷಿಯಾಗಿದೆ.ತಹ್ರೀರ್ ಸ್ಕ್ವೇರ್ (ಕೈರೊ): ಈ ಸ್ಥಳವನ್ನು ಹಲವು ವರ್ಷಗಳ ಹಿಂದೆ ‘ಇಸ್ಮೈಲಿಯಾ ಸ್ಕ್ವೇರ್’ ಎಂದು ಕರೆಯಲ್ಪಡುತ್ತಿತ್ತು. ದಶಕಗಳಿಂದ ಪ್ರತಿಭಟನೆ ಮತ್ತು ಪ್ರದರ್ಶನಗಳ ಸಾಂಪ್ರದಾಯಿಕ ತಾಣವಾಗಿದೆ. ಇದರಲ್ಲಿ 1977ರ ಈಜಿಪ್ಟ್ನ ‘ಬ್ರೆಡ್ ಗಲಭೆ’ (ಆಹಾರಕ್ಕಾಗಿ ನಡೆದ ದಂಗೆ) ಮತ್ತು 2011ರ ಈಜಿಪ್ಟ್ ಕ್ರಾಂತಿಗಳು ಸೇರಿವೆ.ಪ್ಲಾಜಾ ಡಿ ಮೇಯೊ: ಬ್ಯೂನಸ್ ಐರೀಸ್ ನಗರದ ಅತ್ಯಂತ ಹಳೆಯ ಸಾರ್ವಜನಿಕ ಚೌಕವಾಗಿದ್ದು, ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ.ಉಹುರು ಪಾರ್ಕ್: ನೈರೋಬಿ ನಗರದ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿರುವ ಈ ಸಾರ್ವಜನಿಕ ಉದ್ಯಾನವನವು ಪ್ರತಿಭಟನೆ, ರ್ಯಾಲಿ ಸೇರಿದಂತೆ ಹಲವು ಚಳವಳಿಗಳಿಗೆ (2024ರಲ್ಲಿ ತೆರಿಗೆ ಏರಿಕೆ ವಿರೋಧಿಸಿ ಬೃಹತ್ ಜೆನ್–ಝೀ ಪ್ರತಿಭಟನೆ ನಡೆದಿತ್ತು) ಸಾಕ್ಷಿಯಾಗಿದೆ.ಮೈಡಾನ್ ನೆಜಾಲೆಜ್ನೋಸ್ಟಿ: ‘ಕೀವ್ ಸ್ಕ್ವೇರ್’ ಎಂದೂ ಕರೆಯಲ್ಪಡುವ ಇದು ಪ್ರಸಿದ್ಧ ಸ್ವಾತಂತ್ರ್ಯ ಸ್ಮಾರಕವನ್ನು ಹೊಂದಿದ್ದು, ರಾಜಕೀಯ ಹೋರಾಟಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ.ಜೋಕಾಲೊ: ಮೆಕ್ಸಿಕೊ ನಗರದ ಮುಖ್ಯ ಚೌಕವಾಗಿದ್ದು, ಅಧ್ಯಕ್ಷರ ಕಚೇರಿ ಮತ್ತು ಕ್ಯಾಥೆಡ್ರಲ್ ಪಕ್ಕದಲ್ಲೇ ಇದೆ. ರಾಜಕೀಯ ರ್ಯಾಲಿಗಳು ಮತ್ತು ಪ್ರದರ್ಶನಗಳಿಗೆ ಪ್ರಮುಖ ತಾಣವಾಗಿದೆ.ಪ್ಲಾಜಾ ಇಟಾಲಿಯಾ (ಸ್ಯಾಂಟಿಯಾಗೊ): ಪ್ರತಿಭಟನಾಕಾರರಿಂದ ‘ಪ್ಲಾಜಾ ಡಿ ಲಾ ಡಿಗ್ನಿಡಾಡ್’ ಎಂದು ಕರೆಯಲ್ಪಡುವ ಈ ಸ್ಥಳವು ರಾಜಕೀಯ ಪ್ರತಿಭಟನೆಗಳು ಮತ್ತು ರಾಷ್ಟ್ರೀಯ ಆಚರಣೆಗಳ ಐತಿಹಾಸಿಕ ಕೇಂದ್ರವಾಗಿದೆ.ಜಂತರ್ ಮಂತರ್ ಇನ್ಮುಂದೆ ಪ್ರತಿಭಟನಾ ಸ್ಥಳವಲ್ಲ...ನವದೆಹಲಿ: ದೆಹಲಿಯ ಜಂತರ್ ಮಂತರ್ ಇನ್ನು ಮುಂದೆ ಪ್ರತಿಭಟನಾ ಸ್ಥಳವಲ್ಲ; ಅದಕ್ಕಾಗಿಯೇ ಮೂರು ಹೊಸ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸರು ಅಧಿಕೃತ ಆದೇಶದಲ್ಲಿ ತಿಳಿಸಿದ್ದಾರೆ.ರಾಮಲೀಲಾ ಮೈದಾನ, ಬುರಾರಿ ಮೈದಾನ ಹಾಗೂ ಸಿಬಿಡಿ ಮೈದಾನವನ್ನು ಪ್ರತಿಭಟನಾ ಸ್ಥಳಗಳೆಂದು ಗುರುತಿಸಲಾಗಿದೆ.ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಅವರು ಭಾನುವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ.ಕೇಂದ್ರ ಗೃಹ ಸಚಿವಾಲಯ ನಿಗದಿಪಡಿಸಿದ ಪ್ರತಿಭಟನಾ ಸ್ಥಳಕ್ಕೆ ಪರ್ಯಾಯವಾದ ಸ್ಥಳ ಗುರುತಿಸುವಂತೆ ಸಮಿತಿ ರಚನೆ ಮಾಡಿತ್ತು. ಈ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಹೊಸ ಸ್ಥಳಗಳಲ್ಲಿ ಪ್ರತಿಭಟನೆ ಮತ್ತು ಮುಷ್ಕರ ನಡೆಸುವುದಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನವನ್ನು (ಎಸ್ಒಪಿ) ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.