ಸರಗಳ್ಳತನ; ಮಹಿಳೆ ತಲೆಗೆ ಗಾಯ
ರಾಮನಗರ: ತಾಲ್ಲೂಕಿನ ಬಸವನಪುರ ಗ್ರಾಮದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬದಿಯ ಟೀ ಅಂಗಡಿಯಲ್ಲಿ ಸೋಮವಾರ ಸಂಜೆ ಇಬ್ಬರು ಸರಗಳ್ಳರು, ಮಹಿಳೆಯೊಬ್ಬರ ತಾಳಿ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಪ್ರತಿರೋಧ ತೋರಿದ ಮಹಿಳೆಯ ತಲೆಗೆ ಪೆಟ್ಟಾಗಿದೆ.ಗ್ರಾಮದ ಜಯಲಕ್ಷ್ಮಮ್ಮ ಗಾಯಗೊಂಡಿದ್ದು, ಅವರಿಗೆ ರಾಮನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕ
ರಾಮನಗರ: ತಾಲ್ಲೂಕಿನ ಬಸವನಪುರ ಗ್ರಾಮದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಬದಿಯ ಟೀ ಅಂಗಡಿಯಲ್ಲಿ ಸೋಮವಾರ ಸಂಜೆ ಇಬ್ಬರು ಸರಗಳ್ಳರು, ಮಹಿಳೆಯೊಬ್ಬರ ತಾಳಿ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಪ್ರತಿರೋಧ ತೋರಿದ ಮಹಿಳೆಯ ತಲೆಗೆ ಪೆಟ್ಟಾಗಿದೆ.ಗ್ರಾಮದ ಜಯಲಕ್ಷ್ಮಮ್ಮ ಗಾಯಗೊಂಡಿದ್ದು, ಅವರಿಗೆ ರಾಮನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಮಧ್ಯಾಹ್ನ ಪಲ್ಸರ್ ಬೈಕ್ನಲ್ಲಿ ಅಂಗಡಿಗೆ ಬಂದಿದ್ದ ಕಳ್ಳರು, ಅಲ್ಲಿಯೇ ಟೀ ಕುಡಿದು ಕೆಲ ಹೊತ್ತು ಕಳೆದಿದ್ದಾರೆ ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.ಅಂಗಡಿಯಲ್ಲಿದ್ದ ಇತರ ಗ್ರಾಹಕರು ಸ್ಥಳದಿಂದ ತೆರಳಿದ ಬಳಿಕ ಜಯಲಕ್ಷ್ಮಮ್ಮ ಅವರು ಒಬ್ಬರೇ ಇರುವುದನ್ನು ಗಮನಿಸಿದ ಕಳ್ಳರು, ಸಂಜೆ 4ರ ಸುಮಾರಿಗೆ ಮುಖಕ್ಕೆ ಮುಸುಕು ಹಾಕಿಕೊಂಡು ಜಯಲಕ್ಷ್ಮಮ್ಮ ಕೊರಳಿನಲ್ಲಿದ್ದ 70 ಗ್ರಾಂ ಚಿನ್ನದ ತಾಳಿ ಸರ ಕಿತ್ತುಕೊಳ್ಳಲು ಮುಂದಾಗಿದ್ದಾರೆ.ಕೂಡಲೇ ಜಯಮ್ಮ ಮಾಂಗಲ್ಯ ಸಮೇತ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡು ಕಸಿದುಕೊಳ್ಳದಂತೆ ಪ್ರತಿರೋಧ ತೋರಿದ್ದಾರೆ. ಈ ವೇಳೆ, ಕಳ್ಳರು ಅವರ ಮೇಲೆ ಹಲ್ಲೆ ನಡೆಸಿ ಎಳೆದಾಡಿದ್ದಾರೆ. ಈ ವೇಳೆ ಸರ ಎರಡು ತುಂಡಾಗಿದ್ದು, ಮಾಂಗಲ್ಯ ಸಮೇತ ಜಯಮ್ಮ ನೆಲಕ್ಕೆ ಬಿದ್ದು ನೆರವಿಗಾಗಿ ಕೂಗಿಕೊಂಡಿದ್ದಾರೆ. ಆಗ ಕಳ್ಳರು ತಮ್ಮ ಕೈಗೆ ಸಿಕ್ಕ ಸುಮಾರು 60 ಗ್ರಾಂ ಸರದೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಎಎಸ್ಪಿ ರಾಜೇಂದ್ರ, ಡಿವೈಎಸ್ಪಿ ಬಿ.ಎನ್. ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ