ದಸರಾ ಸ್ಪೆಷಲ್: ದುರ್ಗಾದೇವಿಯ ಶ್ರೇಷ್ಠ ನೈವೇದ್ಯ ದದ್ದೋಜನಾ ಹೀಗೆ ಮಾಡಿ
ನವರಾತ್ರಿಯ ದುರ್ಗಾಪೂಜೆ ಹಾಗೂ ವಿಜಯದಶಮಿಯಂದು ಶಕ್ತಿ ದೇವತೆಗೆ ಅರ್ಪಿಸುವ ಅತ್ಯಂತ ಶೀತಲ ಹಾಗೂ ಪವಿತ್ರ ನೈವೇದ್ಯಗಳಲ್ಲಿ ‘ದದ್ದೋಜನಾ’ (ದೇವಸ್ಥಾನ ಶೈಲಿಯ ಮೊಸರನ್ನ) ಪ್ರಮುಖವಾದದ್ದು. ಶೃಂಗೇರಿ, ಕೊಲ್ಲೂರು ಸೇರಿದಂತೆ ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ದೇವಿಯ ಮಹಾಪೂಜೆಯ ನಂತರ ಈ ಪ್ರಸಾದವನ್ನು ಅರ್ಪಿಸಲಾಗುತ್ತದೆ. ಬಿಸಿ ಅನ್ನಕ್ಕೆ ಗಟ್ಟಿ ಮೊಸರು, ಹಾಲು, ತುಪ್ಪದ ಒಗ್

ನವರಾತ್ರಿಯ ದುರ್ಗಾಪೂಜೆ ಹಾಗೂ ವಿಜಯದಶಮಿಯಂದು ಶಕ್ತಿ ದೇವತೆಗೆ ಅರ್ಪಿಸುವ ಅತ್ಯಂತ ಶೀತಲ ಹಾಗೂ ಪವಿತ್ರ ನೈವೇದ್ಯಗಳಲ್ಲಿ ‘ದದ್ದೋಜನಾ’ (ದೇವಸ್ಥಾನ ಶೈಲಿಯ ಮೊಸರನ್ನ) ಪ್ರಮುಖವಾದದ್ದು. ಶೃಂಗೇರಿ, ಕೊಲ್ಲೂರು ಸೇರಿದಂತೆ ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ದೇವಿಯ ಮಹಾಪೂಜೆಯ ನಂತರ ಈ ಪ್ರಸಾದವನ್ನು ಅರ್ಪಿಸಲಾಗುತ್ತದೆ. ಬಿಸಿ ಅನ್ನಕ್ಕೆ ಗಟ್ಟಿ ಮೊಸರು, ಹಾಲು, ತುಪ್ಪದ ಒಗ್ಗರಣೆ ಹಾಗೂ ದಾಳಿಂಬೆ ಬೀಜಗಳು ಬೆರೆತು ತಯಾರಾಗುವ ಈ ಖಾದ್ಯ, ಹಬ್ಬದ ದಿನಗಳಲ್ಲಿ ದೇಹಕ್ಕೆ ತಂಪು ನೀಡುವುದರ ಜೊತೆಗೆ ದೈವಿಕ ತೃಪ್ತಿ ನೀಡುತ್ತದೆ. ಮನೆಯಲ್ಲೇ ದೇವಸ್ಥಾನದ ಶೈಲಿಯ ದದ್ದೋಜನಾ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಅನ್ನ (ಮೃದುವಾಗಿ ಬೆಂದಿದ್ದು) ಗಟ್ಟಿ ಮೊಸರು ಕಾಯಿಸಿ ಆರಿಸಿದ ಹಾಲು ಬೆಣ್ಣೆ ಅಥವಾ ತುಪ್ಪ ಹಸಿಮೆಣಸಿನಕಾಯಿ ಶುಂಠಿ ಕರಿಬೇವು ಸಾಸಿವೆ ಉದ್ದಿನಬೇಳೆ ಕಡಲೆಬೇಳೆ ಜೀರಿಗೆ ಕಾಳುಮೆಣಸು ಇಂಗು ದಾಳಿಂಬೆ ಬೀಜ ಮತ್ತು ದ್ರಾಕ್ಷಿ ಕೊತ್ತಂಬರಿ ಸೊಪ್ಪು ಉಪ್ಪು ಮಾಡುವ ವಿಧಾನ: ಅನ್ನವನ್ನು ಎಂದಿಗಿಂತ ಸ್ವಲ್ಪ ಹೆಚ್ಚು ನೀರು ಹಾಕಿ ಮೃದುವಾಗಿ ಬೇಯಿಸಿಕೊಳ್ಳಿ. ಬಿಸಿ ಇರುವಾಗಲೇ ಅನ್ನವನ್ನು ಸೌಟಿನಿಂದ ಚೆನ್ನಾಗಿ ಮಸೆದು ತಣ್ಣಗಾಗಲು ಬಿಡಿ. ತಣ್ಣಗಾದ ಅನ್ನಕ್ಕೆ ಗಟ್ಟಿ ಮೊಸರು, ಹಾಲು, ಒಂದು ಚಮಚ ಬೆಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಗಂಟಿಲ್ಲದಂತೆ ನಯವಾಗಿ ಕಲಸಿಕೊಳ್ಳಿ. ಒಂದು ಸಣ್ಣ ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ, ಕಾಳುಮೆಣಸು ಹಾಕಿ ಚಟಪಟ ಎನ್ನಲು ಬಿಡಿ. ನಂತರ ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು ಮತ್ತು ಇಂಗು ಸೇರಿಸಿ ಸಣ್ಣ ಉರಿಯಲ್ಲಿ ಹುರಿದು ತಕ್ಷಣ ಒಗ್ಗರಣೆಯನ್ನು ಅನ್ನದ ಮಿಶ್ರಣಕ್ಕೆ ಸುರಿಯಿರಿ. ಒಗ್ಗರಣೆ ಬೆರೆಸಿದ ನಂತರ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ತಾಜಾ ದಾಳಿಂಬೆ ಕಾಳುಗಳನ್ನು ಮೇಲೆ ಉದುರಿಸಿ ನಿಧಾನವಾಗಿ ಕಲಸಿ. ಅತ್ಯಂತ ಶ್ರೇಷ್ಠವಾದ ‘ದದ್ದೋಜನಾ’ ನವರಾತ್ರಿಯ ಪೂಜೆಯ ನೈವೇದ್ಯಕ್ಕೆ ಸಿದ್ಧ.