ದೊಡ್ಡಬಳ್ಳಾಪುರ: ವಿಜಯನಗರ ಅರಸರ ಕಾಲದ ಐತಿಹಾಸಿಕ ವೀರಗಲ್ಲುಗಳ ಸಂರಕ್ಷಣೆ
ದೊಡ್ಡಬಳ್ಳಾಪುರ: ತಾಲ್ಲೂಕಿನ ಲಿಂಗನಹಳ್ಳಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಮಣ್ಣಿನಡಿ ಹೂತು ಹೋಗುವ ಅಪಾಯದಲ್ಲಿದ್ದ ವಿಜಯನಗರ ಅರಸರ ಕಾಲದ ಆರು ಐತಿಹಾಸಿಕ ವೀರಗಲ್ಲುಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಸಂರಕ್ಷಣೆ ಮಾಡಿದ್ದಾರೆ.ರಸ್ತೆ ಕಾಮಗಾರಿ ವೇಳೆ ಕಾರ್ಮಿಕರು ಅವುಗಳನ್ನು ಮಣ್ಣಿನಡಿ ಮುಚ್ಚಲು ಮುಂದಾಗಿದ್ದರು. ಇದನ್ನು ಗಮನಿಸಿದ

ದೊಡ್ಡಬಳ್ಳಾಪುರ: ತಾಲ್ಲೂಕಿನ ಲಿಂಗನಹಳ್ಳಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಮಣ್ಣಿನಡಿ ಹೂತು ಹೋಗುವ ಅಪಾಯದಲ್ಲಿದ್ದ ವಿಜಯನಗರ ಅರಸರ ಕಾಲದ ಆರು ಐತಿಹಾಸಿಕ ವೀರಗಲ್ಲುಗಳನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಸಂರಕ್ಷಣೆ ಮಾಡಿದ್ದಾರೆ.ರಸ್ತೆ ಕಾಮಗಾರಿ ವೇಳೆ ಕಾರ್ಮಿಕರು ಅವುಗಳನ್ನು ಮಣ್ಣಿನಡಿ ಮುಚ್ಚಲು ಮುಂದಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪುರಾತತ್ವ ಇಲಾಖೆ ಉಪ ನಿರ್ದೇಶಕಿ ಕಾವ್ಯಶ್ರೀ ಕಾಮಗಾರಿ ಸ್ಥಗಿತಗೊಳಿಸಿ, ಮಣ್ಣಿನಡಿ ಹುದುಗಿದ್ದ ಶಿಲೆಗಳನ್ನು ಹೊರತೆಗೆಸುವ ಮೂಲಕ ಅವುಗಳ ಸಂರಕ್ಷಣೆಗೆ ಕ್ರಮ ಕೈಗೊಂಡರು.ಮೂರು ವೀರಗಲ್ಲು, ಮೂರು ಮಾಸ್ತಿಕಲ್ಲು: ಲಿಂಗನಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿರುವ ಆರು ಶಿಲೆಗಳ ಪೈಕಿ ಮೂರು ಯುದ್ಧ ವೀರಗಲ್ಲುಗಳು ಹಾಗೂ ಮೂರು ವೀರ ಮಾಸ್ತಿಕಲ್ಲುಗಳಿವೆ. ಇವುಗಳ ಕೆತ್ತನೆ ಮತ್ತು ಕಲಾತ್ಮಕ ವಿನ್ಯಾಸಗಳು ವಿಜಯನಗರ ಅರಸರ ಕಾಲದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಒಂದು ವೀರಗಲ್ಲಿನಲ್ಲಿ ವೀರನು ಬಿಲ್ಲು ಮತ್ತು ಕತ್ತಿ ಹಿಡಿದಿರುವ ಚಿತ್ರವಿದೆ. ಆತನ ಬಲಭಾಗದಲ್ಲಿ ಸರ್ವಾಲಂಕಾರಭೂಷಿತಳಾದ ಪತ್ನಿ ನಿಂತ ದೃಶ್ಯವಿದೆ. ಇತರ ಕಲ್ಲುಗಳಲ್ಲೂ ಆಕರ್ಷಕ ಕೆತ್ತನೆಗಳಿದ್ದು, ಅಂದಿನ ಕಾಲದ ಶಿಲ್ಪಕಲೆ, ಸಾಮಾಜಿಕ ಜೀವನ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಅಧ್ಯಯನ ಮಾಡಲು ಇವು ಸಹಕಾರಿಯಾಗಲಿವೆ ಎಂದರು.ಲಿಂಗನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನಷ್ಟು ಐತಿಹಾಸಿಕ ಅವಶೇಷಗಳು ದೊರೆಯುವ ಸಾಧ್ಯತೆಯಿದ್ದು, ಅವುಗಳನ್ನು ಗುರುತಿಸಿ ಸಂರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪುರಾತತ್ವ ಇಲಾಖೆ ತಿಳಿಸಿದೆ.ಈ ವೇಳೆ ಕೆಐಎಡಿಬಿ ವ್ಯವಸ್ಥಾಪಕ ಡಾ.ಆರ್.ಯುವರಾಜು, ಕೆ.ಆರ್.ಮಧುಸೂದನ್, ಹರ್ಷಿತ್, ರಾಮಚಂದ್ರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.ಸ್ಥಳೀಯವಾಗಿಯೇ ರಕ್ಷಣೆದೊರೆತ ಐತಿಹಾಸಿಕ ಅವಶೇಷಗಳನ್ನು ಬೇರೆಡೆಗೆ ಸ್ಥಳಾಂತರಿಸು ವುದರಿಂದ ಅವುಗಳ ಮೂಲ ಸ್ಥಳದ ಇತಿಹಾಸದ ಕೊಂಡಿ ತಪ್ಪುವ ಸಾಧ್ಯತೆ ಯಿದೆ. ಹಾಗಾಗಿ, ಅವು ದೊರೆತ ಪ್ರದೇಶದಲ್ಲಿಯೇ ಸೂಕ್ತ ಸ್ಥಳದಲ್ಲಿ ಸಂರಕ್ಷಿಸುವುದು ಮಹತ್ವದ್ದಾಗಿದೆ ಎಂದು ಪುರಾತತ್ವ ಇಲಾಖೆ ಅಭಿಪ್ರಾಯಪಟ್ಟಿದೆ.ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಆರು ವೀರಗಲ್ಲುಗಳನ್ನು ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಇರಿಸಿ ಸಂರಕ್ಷಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಇತಿಹಾಸ ಸಂಶೋಧಕರು ಹಾಗೂ ಪಿ.ಎಚ್.ಡಿ. ವಿದ್ಯಾರ್ಥಿಗಳಿಗೆ ಈ ಅವಶೇಷಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ ಇಲಾಖೆ ತಿಳಿಸಿದೆ.261012-15-1882221676