ಬಾಲಕಿಯರ ಗರ್ಭಧಾರಣೆ: ಹೈಕೋರ್ಟ್ ನಿರ್ದೇಶನದ ಅನುಸಾರ ಸರ್ಕಾರದಿಂದ ಮಾರ್ಗಸೂಚಿ
ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯರಲ್ಲಿ ಗರ್ಭಧಾರಣೆಯನ್ನು ಆರಂಭದಲ್ಲೇ ಗುರುತಿಸಿ, ಸಕಾಲದಲ್ಲಿ ವೈದ್ಯಕೀಯ ನೆರವು, ಸಮಾಲೋಚನೆ ಹಾಗೂ ಕಾನೂನು ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಮಾಣಿತ ಕಾರ್ಯವಿಧಾನವೊಂದನ್ನು (ಎಸ್ಒಪಿ) ರೂಪಿಸಿ ಅಧಿಸೂಚನೆ ಹೊರಡಿಸಿದೆ.ಗರ್ಭಪಾತಕ್ಕೆ ಅನುಮತಿ ಕೋರಿ ಸಂತ್ರಸ್ತ ಬಾಲಕಿಯೊಬ್ಬರ ತಾಯಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರ

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯರಲ್ಲಿ ಗರ್ಭಧಾರಣೆಯನ್ನು ಆರಂಭದಲ್ಲೇ ಗುರುತಿಸಿ, ಸಕಾಲದಲ್ಲಿ ವೈದ್ಯಕೀಯ ನೆರವು, ಸಮಾಲೋಚನೆ ಹಾಗೂ ಕಾನೂನು ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಮಾಣಿತ ಕಾರ್ಯವಿಧಾನವೊಂದನ್ನು (ಎಸ್ಒಪಿ) ರೂಪಿಸಿ ಅಧಿಸೂಚನೆ ಹೊರಡಿಸಿದೆ.ಗರ್ಭಪಾತಕ್ಕೆ ಅನುಮತಿ ಕೋರಿ ಸಂತ್ರಸ್ತ ಬಾಲಕಿಯೊಬ್ಬರ ತಾಯಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರ ಜಾರಿಗೊಳಿಸಿರುವ ಎಸ್ಒಪಿ ಅಧಿಸೂಚನೆಯನ್ನು ದಾಖಲಿಸಿಕೊಂಡು ಅರ್ಜಿ ವಿಲೇವಾರಿ ಮಾಡಿದೆ.ಹೈಕೋರ್ಟ್ನ ನಿರ್ದೇಶನದ ಅನುಸಾರ ರೂಪಿಸಲಾಗಿರುವ ಈ ಎಸ್ಒಪಿ; ಪೊಲೀಸ್, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ ಇಲಾಖೆಗಳು ಹಾಗೂ ಕಾನೂನು ಸೇವಾ ಪ್ರಾಧಿಕಾರಗಳ ಜವಾಬ್ದಾರಿಗಳನ್ನು ವಿಶದಪಡಿಸಿದೆ.ಅಪ್ರಾಪ್ತ ವಯಸ್ಸಿನ ಬಾಲಕಿಯರ ಗರ್ಭಧಾರಣೆಯನ್ನು ಆರಂಭದಲ್ಲೇ ಪತ್ತೆಹಚ್ಚುವುದು, ಲೈಂಗಿಕ ದೌರ್ಜನ್ಯದಿಂದ ಉಂಟಾಗುವ ಅನಪೇಕ್ಷಿತ ಗರ್ಭಧಾರಣೆಯ ಸಂದರ್ಭದಲ್ಲಿ ಸಕಾಲದಲ್ಲಿ ವೈದ್ಯಕೀಯ ನೆರವು ಒದಗಿಸುವುದು ಹಾಗೂ ಬಾಲಕಿ ಮತ್ತು ನವಜಾತ ಶಿಶುವಿನ ಹಕ್ಕುಗಳನ್ನು ರಕ್ಷಿಸುವ ಪ್ರಮುಖ ಉದ್ದೇಶಗಳನ್ನು ಎಸ್ಒಪಿಯಲ್ಲಿ ಅಡಕಗೊಳಿಸಲಾಗಿದೆ. ಸಂತ್ರಸ್ತ ಬಾಲಕಿಯರ ಗೌರವ, ಖಾಸಗಿತನ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸುವುದು ಮಾರ್ಗಸೂಚಿಯ ಪ್ರಮುಖ ಅಂಶವಾಗಿದೆ.ವಿಚಾರಣೆಯಲ್ಲಿ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ನ್ಯಾಯಾಲಯಕ್ಕೆ ಅಗತ್ಯ ಸಲಹೆಗಳನ್ನು ನೀಡಿದ್ದರು. ಅರ್ಜಿದಾರರ ಪರ ಹೈಕೋರ್ಟ್ ವಕೀಲೆ ರಿತಿಕಾ ರವಿಕುಮಾರ್ ವಾದ ಮಂಡಿಸಿದ್ದರು.ಪ್ರಕರಣ: ಒಂಬತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದ 16 ವರ್ಷದ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ದೌರ್ಜನ್ಯದ ಪರಿಣಾಮ ಗರ್ಭಿಣಿಯಾಗಿದ್ದ ಆಕೆ ಈ ಕುರಿತು ತಾಯಿಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಗರ್ಭ 32 ವಾರ ತಲುಪಿದ ನಂತರ ವಿಷಯ ತಾಯಿಗೆ ಗೊತ್ತಾಗಿತ್ತು. ಕೂಡಲೇ ಅವರು ಗರ್ಭಪಾತಕ್ಕೆ ಅನುಮತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ವೈದ್ಯಕೀಯ ಮಂಡಳಿಯ ಅಭಿಪ್ರಾಯ ಪಡೆದು ಗರ್ಭಪಾತದ ಪ್ರಕ್ರಿಯೆಗೆ ಅನುಮತಿ ನೀಡಿತ್ತು. ಆದರೆ, ಮಗು ಜೀವಂತವಾಗಿ ಜನಿಸಿತ್ತು. ಬಾಲಕಿ ಮಗುವಿನ ಆರೈಕೆಯ ಹೊಣೆಗಾರಿಕೆಯನ್ನು ಮುಂದುವರಿಸಲು ಇಚ್ಛಿಸಲಿಲ್ಲ. ಈ ಹಿನ್ನೆಲೆಯಲ್ಲಿ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿತ್ತು.ವಿಚಾರಣೆ ವೇಳೆ ನ್ಯಾಯಪೀಠ, ‘ಅಪ್ರಾಪ್ತ ವಯಸ್ಸಿನ ಬಾಲಕಿಯರಲ್ಲಿ ಗರ್ಭಧಾರಣೆ ತಡವಾಗಿ ಪತ್ತೆಯಾಗುವುದು, ಸಂತ್ರಸ್ತರು ಸಾಮಾಜಿಕ ಕಳಂಕದ ಭಯ ಮತ್ತು ಕುಟುಂಬದ ಪ್ರತಿಕ್ರಿಯೆಗಳ ಆತಂಕದಿಂದ ನಲುಗುವುದು, ಲೈಂಗಿಕ ಶಿಕ್ಷಣದ ಕೊರತೆ ಹಾಗೂ ಕಾನೂನು ಹಕ್ಕುಗಳ ಅರಿವಿನ ಅಭಾವ ಹೊಂದಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು.‘ಇಂತಹ ಪ್ರಕರಣಗಳಲ್ಲಿ ಬಾಲಕಿಯರ ಆರೋಗ್ಯ ಮತ್ತು ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ, ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ಅಗತ್ಯ’ ಎಂಬ ಅಭಿಪ್ರಾಯ ಹೊರಹಾಕಿತ್ತು.ಮಾರ್ಗಸೂಚಿಯ ಪ್ರಮುಖ ಅಂಶಗಳುಗರ್ಭಧಾರಣೆ ಅವಧಿ 24 ವಾರಗಳ ಒಳಗಿದ್ದರೆ, ವೈದ್ಯಕೀಯ ಗರ್ಭಪಾತಕ್ಕೆ ನ್ಯಾಯಾಲಯ ಅಥವಾ ಮಕ್ಕಳ ಕಲ್ಯಾಣ ಸಮಿತಿಯ ಪ್ರತ್ಯೇಕ ಆದೇಶದ ಅಗತ್ಯವಿಲ್ಲ. ವೈದ್ಯಕೀಯ ಗರ್ಭಪಾತ ಕಾಯ್ದೆಯ ನಿಯಮಗಳಿಗೆ ಅನುಗುಣವಾಗಿ ಅಗತ್ಯ ವೈದ್ಯಕೀಯ ಅಭಿಪ್ರಾಯ ಹಾಗೂ ಅಪ್ರಾಪ್ತ ವಯಸ್ಕರ ಪ್ರಕರಣಗಳಲ್ಲಿ ಕಾನೂನುಬದ್ಧ ಪಾಲಕರ ಲಿಖಿತ ಒಪ್ಪಿಗೆ ಪಡೆಯಬೇಕು. 20 ವಾರಗಳವರೆಗಿನ ಗರ್ಭಧಾರಣೆಗೆ ಒಬ್ಬ ನೋಂದಾಯಿತ ವೈದ್ಯರ ಅಭಿಪ್ರಾಯ ಹಾಗೂ 20 ರಿಂದ 24 ವಾರಗಳ ಅವಧಿಯಲ್ಲಿ ಕಾಯ್ದೆಯಲ್ಲಿ ನಿರ್ದಿಷ್ಟಪಡಿಸಿರುವ ವರ್ಗಗಳಿಗೆ ಇಬ್ಬರು ನೋಂದಾಯಿತ ವೈದ್ಯರ ಅಭಿಪ್ರಾಯ ಅಗತ್ಯ.24 ವಾರಗಳ ನಂತರದ ಪ್ರಕರಣಗಳಲ್ಲಿ ಅನ್ವಯಿಸುವ ಕಾನೂನು ನಿಯಮಗಳು ಮತ್ತು ವೈದ್ಯಕೀಯ ಮಂಡಳಿಯ ಅಭಿಪ್ರಾಯಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕು.ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯ ಕುರಿತು ಮಾಹಿತಿ ದೊರೆತರೆ, ತುರ್ತು ವೈದ್ಯಕೀಯ ನೆರವು ಹಾಗೂ ವೈದ್ಯಕೀಯ ಪರೀಕ್ಷೆಗೆ ಆದ್ಯತೆ ನೀಡಬೇಕು. ಅಗತ್ಯವಿದ್ದಲ್ಲಿ ಝೀರೊ ಎಫ್ಐಆರ್ ದಾಖಲಿಸಿ, ಪ್ರಕರಣದ ತನಿಖೆಯನ್ನು ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಗೆ ವರ್ಗಾಯಿಸುವ ವ್ಯವಸ್ಥೆ ಮಾಡಬೇಕು.ಗರ್ಭಪಾತದ ವೇಳೆ ಸಂಗ್ರಹಿಸುವ ಭ್ರೂಣದ ಮಾದರಿಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸುವ ಜವಾಬ್ದಾರಿ ಪೊಲೀಸರದ್ದು. ಮಾದರಿಗಳನ್ನು ಸಾಧ್ಯವಾದಷ್ಟು ಬೇಗ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ತಲುಪಿಸಬೇಕು. ಅದೇ ಜಿಲ್ಲೆಯಲ್ಲಿ ಪ್ರಯೋಗಾಲಯವಿದ್ದರೆ 24 ಗಂಟೆ ಒಳಗಾಗಿ ಹಸ್ತಾಂತರಿಸಬೇಕು. ಇತರೆ ಸಂದರ್ಭಗಳಲ್ಲಿ ಏಳು ದಿನ ಮೀರದಂತೆ ಕ್ರಮ ಕೈಗೊಳ್ಳಬೇಕು.ವೈದ್ಯಕೀಯ ನೆರವು ನೀಡುವ ಮೊದಲು ಎಫ್ಐಆರ್ ಅಥವಾ ನ್ಯಾಯಾಲಯದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಚಿಕಿತ್ಸೆಯನ್ನು ವಿಳಂಬಗೊಳಿಸಬಾರದು. ಅಗತ್ಯ ಸಮಾಲೋಚನೆ, ತುರ್ತು ಗರ್ಭನಿರೋಧಕ ಸೇವೆ, ಎಚ್ಐವಿ ಸೇರಿದಂತೆ ಲೈಂಗಿಕವಾಗಿ ಹರಡುವ ಸೋಂಕುಗಳ ತಡೆ ಹಾಗೂ ನಂತರದ ವೈದ್ಯಕೀಯ ತಪಾಸಣೆಗೆ ವ್ಯವಸ್ಥೆ ಮಾಡಬೇಕು.ಲೈಂಗಿಕ ದೌರ್ಜನ್ಯದಿಂದ ಗರ್ಭಧಾರಣೆಯಾದ ಪ್ರಕರಣಗಳಲ್ಲಿ ಬಾಲಕಿ ಮತ್ತು ಪಾಲಕರಿಗೆ ಲಭ್ಯವಿರುವ ವೈದ್ಯಕೀಯ ಹಾಗೂ ಕಾನೂನು ಆಯ್ಕೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು.ಬಾಲಕಿಯ ಇಚ್ಛೆ, ವಯಸ್ಸು, ಮಾನಸಿಕ ಸ್ಥಿತಿ ಮತ್ತು ಹಿತಾಸಕ್ತಿಯನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಮನೋವೈದ್ಯಕೀಯ ಸಮಾಲೋಚನೆ, ಅನುವಾದಕರು ಹಾಗೂ ವಿಶೇಷ ಶಿಕ್ಷಕರ ನೆರವು ಒದಗಿಸಬೇಕು.ಗರ್ಭಪಾತದ ಪ್ರಕ್ರಿಯೆಯಲ್ಲಿ ಮಗು ಜೀವಂತವಾಗಿ ಜನಿಸಿದರೆ, ಮಗುವಿನ ಆರೋಗ್ಯ ಮತ್ತು ಆರೈಕೆಗೆ ತಕ್ಷಣದ ವ್ಯವಸ್ಥೆ ಮಾಡಬೇಕು. ತಾಯಿ ಮಗುವನ್ನು ತನ್ನೊಂದಿಗೆ ಇರಿಸಿಕೊಳ್ಳಲು ಬಯಸುತ್ತಾಳೆಯೋ ಅಥವಾ ದತ್ತು ನೀಡಲು ಬಯಸುತ್ತಾಳೆಯೋ ಎಂಬುದನ್ನು ತಿಳಿದುಕೊಂಡು, ಆಕೆಯ ನಿರ್ಧಾರಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕು.ಮಗುವನ್ನು ಒಪ್ಪಿಸುವ ನಿರ್ಧಾರ ಕೈಗೊಂಡಲ್ಲಿ ಬಾಲ ನ್ಯಾಯ ಕಾಯ್ದೆ ಮತ್ತು ದತ್ತು ನಿಯಮಗಳ ಪ್ರಕಾರ ಮಕ್ಕಳ ಕಲ್ಯಾಣ ಸಮಿತಿಯು ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಬೇಕು. ದತ್ತು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮಗುವಿನ ವೈದ್ಯಕೀಯ ಆರೈಕೆ ಹಾಗೂ ಅಗತ್ಯ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆಯನ್ನು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.ಗರ್ಭಧಾರಣೆಯ ಅವಧಿ 24 ವಾರ ಮೀರಿದ ಪ್ರಕರಣಗಳಿಗೆ ಸಂಬಂಧಿಸಿದಂತೆ, ವೈದ್ಯಕೀಯ ಗರ್ಭಪಾತ ಬಯಸುವ ಬಾಲಕಿಯರಿಗೆ ತ್ವರಿತ ನ್ಯಾಯ ದೊರಕಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ವಿಭಾಗಗಳಲ್ಲಿ ತಲಾ ಕನಿಷ್ಠ ಐವರು ವಕೀಲರನ್ನು ನಿಯೋಜಿಸಬೇಕು. ಮಾಹಿತಿ ದೊರೆತ 48 ಗಂಟೆ ಒಳಗೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ವಕೀಲರು ಕ್ರಮ ಕೈಗೊಳ್ಳಬೇಕು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಕ್ಕಳ ಕಲ್ಯಾಣ ಸಮಿತಿಗಳು ಬಾಲಕಿಯರಿಗೆ ಅಗತ್ಯ ನೆರವು ಒದಗಿಸಬೇಕು. ವಿಶೇಷ ಪರಿಹಾರ ಮೊತ್ತವನ್ನು ಶಿಫಾರಸು ಮಾಡಿದ ಒಂದು ವಾರದೊಳಗೆ ಮೊತ್ತ ವಿತರಣೆ ಸೇರಿದಂತೆ ಪರಿಹಾರ ಪ್ರಕ್ರಿಯೆಗಳು ಕಾಲಮಿತಿಯಲ್ಲಿ ನಡೆಯಬೇಕು.5ರಿಂದ 18 ವರ್ಷದ ಮಕ್ಕಳಿಗೆ ವಯೋಮಾನಕ್ಕೆ ಅನುಗುಣವಾಗಿ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಶಿಕ್ಷಣ ದೊರೆಯುವಂತಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಲೆಗಳು, ಮಕ್ಕಳ ಆರೈಕೆ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಸಂಬಂಧಿತ ಇಲಾಖೆಗಳ ಸಿಬ್ಬಂದಿಗೆ ತರಬೇತಿ ನೀಡಬೇಕು.ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಿ, ಮಾರ್ಗಸೂಚಿಯ ಅನುಷ್ಠಾನ ಪರಿಶೀಲನೆ, ವಿಳಂಬದ ಕಾರಣಗಳ ಗುರುತಿಸುವಿಕೆ ಹಾಗೂ ದೂರುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು.ಅಪ್ರಾಪ್ತ ವಯಸ್ಸಿನ ಬಾಲಕಿಯರ ಗರ್ಭಧಾರಣೆಯನ್ನು ಕೇವಲ ವೈದ್ಯಕೀಯ ಸಮಸ್ಯೆಯಾಗಿ ಪರಿಗಣಿಸದೆ, ಮಕ್ಕಳ ಹಕ್ಕುಗಳು, ಆರೋಗ್ಯ, ಶಿಕ್ಷಣ, ಗೋಪ್ಯತೆ ಮತ್ತು ಸಾಮಾಜಿಕ ರಕ್ಷಣೆಗೆ ಸಂಬಂಧಿಸಿದ ಸಮಗ್ರ ವಿಚಾರ ಎಂದು ಪರಿಗಣಿಸಿ ಸಕಾಲದಲ್ಲಿ ನೆರವು ಒದಗಿಸಬೇಕು.