ಮಂಗಳೂರು: ಪೂರಕ ದಾಖಲೆ ಹೊಂದಿಸಲು ಡಿ.ಸಿ ನೇತೃತ್ವದ ಸಮಿತಿ ರಚನೆ
ಮಂಗಳೂರು: ‘ನಗರದಲ್ಲಿ ಹೈಕೋರ್ಟ್ ಸಂಚಾರ ಪೀಠ/ಕಾಯಂ ಪೀಠ ಸ್ಥಾಪನೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಹೈಕೋರ್ಟ್ ರಚಿಸಿರುವ ಮೂವರು ಸದಸ್ಯರ ಸಮಿತಿಯು ನಗರಕ್ಕೆ ಶೀಘ್ರವೇ ಭೇಟಿ ನೀಡಲಿದೆ. ಪೀಠ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯ ಮತ್ತಿತರ ಸೌಲಭ್ಯಗಳ ಪಟ್ಟಿ ತಯಾರಿಸಲು, ಅಗತ್ಯ ದಾಖಲೆ ಕ್ರೋಡೀಕರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಮಿತಿ ರಚಿಸಲಾಗುತ್

ಮಂಗಳೂರು: ‘ನಗರದಲ್ಲಿ ಹೈಕೋರ್ಟ್ ಸಂಚಾರ ಪೀಠ/ಕಾಯಂ ಪೀಠ ಸ್ಥಾಪನೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಹೈಕೋರ್ಟ್ ರಚಿಸಿರುವ ಮೂವರು ಸದಸ್ಯರ ಸಮಿತಿಯು ನಗರಕ್ಕೆ ಶೀಘ್ರವೇ ಭೇಟಿ ನೀಡಲಿದೆ. ಪೀಠ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯ ಮತ್ತಿತರ ಸೌಲಭ್ಯಗಳ ಪಟ್ಟಿ ತಯಾರಿಸಲು, ಅಗತ್ಯ ದಾಖಲೆ ಕ್ರೋಡೀಕರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಮಿತಿ ರಚಿಸಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದರು.ರಾಜ್ಯದ ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಕುರಿತು ಜನಪ್ರತಿನಿಧಿಗಳು ಹಾಗೂ ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಇಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.‘ಈ ಬಗ್ಗೆ ಒಮ್ಮತ ಮೂಡಿಸಲು ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲೂ ದಸರಾ ನಂತರ ಪ್ರಯತ್ನಿಸುತ್ತೇವೆ. ಈ ಪ್ರಸ್ತಾವದ ಕುರಿತು ಚರ್ಚಿಸಲು ಮತ್ತು ಆ ಜಿಲ್ಲೆಯವರ ಬೆಂಬಲ ಪಡೆಯಲು ಜನಪ್ರತಿನಿಧಿಗಳ ಹಾಗೂ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರ ಸಭೆಯನ್ನು ಕರೆಯಲಿದ್ದೇವೆ’ ಎಂದು ತಿಳಿಸಿದರು.‘ಹೈಕೋರ್ಟ್ ಪೀಠ ಸ್ಥಾಪನೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಭಿವೃದ್ಧಿಗೆ ನೆರವಾಗಲಿದೆ. ಮಂಗಳೂರಿನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೆ ಸಂಪರ್ಕ ಮತ್ತು ಸಾರಿಗೆ ಮೂಲಸೌಕರ್ಯ ಪರಿಗಣಿಸಿದರೆ, ಇದು ಹೈಕೋರ್ಟ್ ಪೀಠವನ್ನು ಹೊಂದಲು ಅತ್ಯಂತ ಸೂಕ್ತ ಸ್ಥಳ. ಅಕ್ಕ ಪಕ್ಕದ ಜಿಲ್ಲೆಗಳ ಬೆಂಬಲ ಕೋರುವಾಗ ಈ ಅನುಕೂಲಗಳ ಬಗ್ಗೆಯೂ ವಿವರಿಸಲಿದ್ದೇವೆ’ ಎಂದರು.ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ‘ಭೂ ಸುಧಾರಣಾ ಕಾಯ್ದೆ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಭೂಸ್ವಾಧೀನ ಪ್ರಕರಣಗಳು ಮತ್ತು ಮೂಲಗೇಣಿ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಸುಮಾರು ಶೇ 40ರಷ್ಟು ಪ್ರಕರಣಗಳು ಹೈಕೋರ್ಟ್ನಲ್ಲಿ ಹಲವು ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಇವೆ. ದಾವೆದಾರರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ’ ಎಂದರು.ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ‘ಈ ಬೇಡಿಕೆಯು ವಕೀಲರಿಗೆ ಸೀಮಿತವಲ್ಲ. ಈ ಪ್ರದೇಶದ ಎಲ್ಲ ನಾಗರಿಕರಿಗೂ ಸಂಬಂಧಿಸಿದ್ದು. ಈ ಪ್ರದೇಶದ ಜನರ ಬೇಡಿಕೆಗೆ ಪೂರಕವಾಗಿ ಮೂವರು ಸದಸ್ಯರ ಸಮಿತಿಯು ವರದಿ ಸಲ್ಲಿಸುವಂತಾಗಲೂ ಎಲ್ಲರೂ ಸೇರಿ ಪ್ರಯತ್ನ ಮಾಡಬೇಕು’ ಎಂದರು.ಶಾಸಕ ಡಿ. ವೇದವ್ಯಾಸ ಕಾಮತ್, ‘ಕರಾವಳಿ ಕರ್ನಾಟಕದಲ್ಲಿ ಹೈಕೋರ್ಟ್ ಪೀಠದ ಅಗತ್ಯ ವಿವರಿಸುವ ವರದಿಯನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ಸಲ್ಲಿಸಬೇಕು ಈ ಪ್ರಸ್ತಾವಕ್ಕೆ ರಾಜ್ಯ ಹಣಕಾಸು ಇಲಾಖೆಯ ಅನುಮೋದನೆಯೊಂದಿಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕು’ ಎಂದು ಒತ್ತಾಯಿಸಿದರು.ವಕೀಲ ಎಂ.ಪಿ. ನೊರೊನ್ಹ, ‘ಬೆಂಗಳೂರಿನ ಹೈಕೋರ್ಟ್ನಲ್ಲಿ ಪ್ರಕರಣಗಳು ಇತ್ಯಾರ್ಥಕ್ಕೆ ಬಾಕಿ ಇರುವುದರಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸುವ ಮನವಿಯನ್ನು ಸಮಿತಿಗೆ ದಾವೆದಾರರು ಸಲ್ಲಿಸಬೇಕು. ಬೆಂಗಳೂರಿಗೆ ಪ್ರಯಾಣಿಸುವಾಗ ಎದುರಾಗುವ ಸಮಸ್ಯೆಗಳು ಮತ್ತು ಅದಕ್ಕೆ ತಗಲುವ ವೆಚ್ಚಕ್ಕೆ ಸಂಬಂಧಿಸಿದ ಸಂಗತಿಗಳನ್ನು ಹಾಗೂ ಅಂಕಿ- ಅಂಶಗಳನ್ನು ಅದರಲ್ಲಿ ಉಲ್ಲೇಖಿಸಬೇಕು’ ಎಂದು ಸಲಹೆ ನೀಡಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ., ವಕೀಲ ಮೋನಪ್ಪ ಭಂಡಾರಿ ಮೊದಲಾದವರು ಭಾಗವಹಿಸಿದ್ದರು.‘ವಿದ್ಯಾರ್ಥಿಗಳಿಂದ ಅಂಚೆ ಕಾರ್ಡ್ ಅಭಿಯಾನ’‘ವಿಶ್ವವಿದ್ಯಾನಿಲಯದ ಎಲ್ಲಾ ಸಂಯೋಜಿತ ಕಾಲೇಜುಗಳಿಗೆ ಮಂಗಳೂರಿನಲ್ಲಿ ಹೈಕೋರ್ಟ್ ಪೀಠದ ಅಗತ್ಯ ವಿವರಿಸುವ ಸುತ್ತೋಲೆ ಹೊರಡಿಸುತ್ತೇವೆ. ಈ ಬೇಡಿಕೆ ಕುರಿತ ಅಂಚೆಕಾರ್ಡ್ ಅಭಿಯಾನ ಆರಂಭಿಸಲು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತೇವೆ’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದರು.‘ಬಾಕಿ ಪ್ರಕರಣ ಇತ್ಯರ್ಥಕ್ಕೆ ಬೇಕು 10 ವರ್ಷ’‘ಹೈಕೋರ್ಟ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪ್ರಕರಣಗಳ ವಿಲೇವಾರಿಗೆ ಕನಿಷ್ಠ 10 ವರ್ಷಗಳು ಬೇಕಾದೀತು. ಪ್ರತಿ ವರ್ಷ ಕನಿಷ್ಠ 2 ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಅವೂ ಸೇರಿದರೆ, ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಇಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ವರ್ಷದಲ್ಲಿ 1,200 ಪ್ರಕರಣಗಳವರೆಗೆ ವಿಲೇವಾರಿ ಮಾಡಬಹುದು’ ಎಂದು ಮಂಗಳೂರು ವಕೀಲರದ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಹೇಳಿದರು.ಧಾರವಾಡ ಮತ್ತು ಕಲಬುರಗಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಸಾಧ್ಯ ಎಂದಾದರೆ ಕರಾವಳಿಯಲ್ಲಿ ಅಂತಹ ಸೌಲಭ್ಯ ಸ್ಥಾಪಿಸಲು ಏಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದರು.261012-29-22685545