ಉಡುಪಿ: ಶಕ್ತಿಯ ಆರಾಧನೆಗೆ ಸಜ್ಜಾಗಿದೆ ನಾಡು
ಉಡುಪಿ: ಶಕ್ತಿ ಆರಾಧನೆಯ ನವರಾತ್ರಿ ಹಬ್ಬ ಆರಂಭವಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ದೇವಿ ಕ್ಷೇತ್ರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.ದೇವಿ ಕ್ಷೇತ್ರಗಳು ಅಲಂಕೃತವಾಗಿದ್ದು, ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಕಳೆಗಟ್ಟಿವೆ.ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ವಿವಿಧ ರಾಜ್ಯಗಳಿಂದಲೂ ಭಕ್ತರು ನವರಾತ್ರ

ಉಡುಪಿ: ಶಕ್ತಿ ಆರಾಧನೆಯ ನವರಾತ್ರಿ ಹಬ್ಬ ಆರಂಭವಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ದೇವಿ ಕ್ಷೇತ್ರಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.ದೇವಿ ಕ್ಷೇತ್ರಗಳು ಅಲಂಕೃತವಾಗಿದ್ದು, ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಕಳೆಗಟ್ಟಿವೆ.ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ವಿವಿಧ ರಾಜ್ಯಗಳಿಂದಲೂ ಭಕ್ತರು ನವರಾತ್ರಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಉಡುಪಿ ನಗರ ವ್ಯಾಪ್ತಿಯಲ್ಲಿಕೆಲವೆಡೆ ಸಾರ್ವಜನಿಕ ಶಾರದೋತ್ಸವವೂ ನಡೆಯುತ್ತಿದ್ದು, ಶಾರದೆಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ.ನವರಾತ್ರಿ ಅಂಗವಾಗಿ ಪ್ರಮುಖ ದೇವಾಲಯಗಳಲ್ಲಿ ಯಕ್ಷಗಾನ, ನಾಟಕ, ನೃತ್ಯ, ಸಂಗೀತ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಭಕ್ತರಿಗೆ ಮನೋರಂಜನೆ ನೀಡಲಾಗುತ್ತದೆ. ಶರನ್ನವರಾತ್ರಿ ಸಂದರ್ಭದಲ್ಲೇ ಹಲವೆಡೆ ಕೃಷಿ ಪ್ರಧಾನ ಸಂಪ್ರದಾಯವಾದ ಕದಿರು ಕಟ್ಟುವ ಹಬ್ಬ ಆಚರಿಸಲಾಗುತ್ತದೆ.ಉಡುಪಿ ನಗರ ವ್ಯಾಪ್ತಿಯಲ್ಲಿ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಾಲಯ, ಕಡಿಯಾಳಿಯ ಮಹಿಷಮರ್ದಿನಿ ದೇಗುಲ, ಕನ್ನರ್ಪಾಡಿ ಜಯದುರ್ಗಾ ಪರಮೇಶ್ವರಿ, ಅಂಬಾಗಿಲು ದುರ್ಗಾಪರಮೇಶ್ವರಿ, ಮಣಿಪಾಲದ ದುರ್ಗಾಂಬ ದೇವಾಲಯ ಹಾಗೂ ದೊಡ್ಡಣಗುಡ್ಡೆ ಆದಿಶಕ್ತಿ ಕ್ಷೇತ್ರ, ಬೈಲೂರಿನ ಮಹಿಷಮರ್ದಿನ ದೇವಸ್ಥಾನದಲ್ಲಿ ನವರಾತ್ರಿಯ ಆಚರಣೆ ವಿಜೃಂಭಣೆಯಿಂದ ನಡೆಯುತ್ತದೆ.ನವರಾತ್ರಿಯ ಅಂಗವಾಗಿ ದೇವಾಲಯಗಳಲ್ಲಿ ಚಂಡಿಕಾ ಯಾಗ, ಸಹಸ್ರನಾಮಾರ್ಚನೆ, ದುರ್ಗಾ ನಮಸ್ಕಾರ ಪೂಜೆಗಳು ನಡೆಯಲಿವೆ. ಒಂಬತ್ತು ದಿನಗಳ ಕಾಲ ದೇವಿಯನ್ನು ವಿವಿಧ ರೂಪಗಳಲ್ಲಿ ಅಲಂಕರಿಸಿ ಪೂಜಿಸಲಾಗುತ್ತಿದೆ. ಕೆಲವು ದೇವಾಲಯಗಳಲ್ಲಿ ಪ್ರತಿದಿನ ಭಕ್ತರಿಗೆ ಅನ್ನಸಂತರ್ಪಣೆಯೂ ನಡೆಯಲಿವೆ.ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ವಿವಿಧೆಡೆಯಿಂದ ಭಕ್ತರು ಭೇಟಿ ನೀಡುತ್ತಿದ್ದಾರೆ.ಮಂದಾರ್ತಿ ದುರ್ಗಾಪರಮೇಶ್ವರಿ ದೇವಿ ಉಪ್ಪುಂದದಲ್ಲಿ ನವರಾತ್ರಿ ಉತ್ಸವಬೈಂದೂರು: ತಾಲ್ಲೂಕಿನ ಪ್ರಸಿದ್ಧ ಶಕ್ತಿ ಕೇಂದ್ರಗಳಲ್ಲಿ ಪ್ರಾಮುಖ್ಯ ಪಡೆದ ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಆರಂಭಗೊಂಡಿದೆ. ಅರಬ್ಬಿಸಮುದ್ರ ಹಾಗೂ ಸುಮನಾವತಿ ನದಿಯ ನಡುವಿನ ಭೂ ಪ್ರದೇಶದಲ್ಲಿರುವ ಈ ಕ್ಷೇತ್ರದಲ್ಲಿ 8ನೇ ಶತಮಾನದಲ್ಲಿ ಆದಿಶಂಕರರು ಆಗಮ ಶಾಸ್ತ್ರದ ಆಧಾರದಂತೆ ಶ್ರೀಚಕ್ರದ ಮೇಲೆ ಲಿಂಗರೂಪದಲ್ಲಿ ಶಕ್ತಿ ದೇವತೆಯಾದ ದುರ್ಗಾಪರಮೇಶ್ವರಿಯನ್ನು ಪ್ರತಿಷ್ಠಾಪಿಸಿದರು ಎಂಬ ಉಲ್ಲೇಖವಿದೆ.ಬೈಂದೂರು ಪಡುವರಿಯ ಪಂಚಲಿಂಗೇಶ್ವರ ದೇವಸ್ಥಾನ, ಮಹತೋಭಾರ ಸೇನೇಶ್ವರ ದೇವಸ್ಥಾನದ ಮಹಿಷಮರ್ದಿನಿ ಅಮ್ಮನವರ ಸನ್ನಿಧಿ, ಉಪ್ರಳ್ಳಿ ಕಾಳಿಕಾಂಬ ದೇವಸ್ಥಾನ, ವತ್ತಿನಕಟ್ಟೆ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.ನೀಲಾವರ ಮಹಿಷಮರ್ದಿನಿ ದೇವಿ ನವರಾತ್ರಿ ಮಹೋತ್ಸವ ಸಂಭ್ರಮಕಾರ್ಕಳ: ನಗರದ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ತಾಲ್ಲೂಕಿನ ಪಳ್ಳಿಯ ಅಡಪಾಡಿ ಉಮಾಮಹೇಶ್ವರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಶರನ್ನವರಾತ್ರಿ ಉತ್ಸವ ಸಂಭ್ರಮದಿಂದ ನಡೆಯುತ್ತಿದೆ. ಪ್ರತಿದಿನ ಬೆಳಿಗ್ಗೆ ಏಕಾದಶ ರುದ್ರಾಭಿಷೇಕ, ಸಪ್ತಶತೀ ಪಾರಾಯಣ, ನವಚಂಡಿಕಾ ಹವನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.ಉಪ್ರಳ್ಳಿ ಕಾಳಿಕಾಂಬಾ ದೇವಿ ಮಂದಾರ್ತಿಯಲ್ಲಿ ಶರನ್ನವರಾತ್ರಿ ಮಹೋತ್ಸವಬ್ರಹ್ಮಾವರ: ತಾಲ್ಲೂಕಿನ ಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲಿ ಒಂದಾದ ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ನವರಾತ್ರಿಯ ಪರ್ವ ಕಾಲದಲ್ಲಿ ಪ್ರತಿನಿತ್ಯ ವಿಶೇಷ ಪೂಜೆಗಳು ನೆರವೇರಲಿದ್ದು, ಇದೇ 16ರಂದು ಮೂಲ ನಕ್ಷತ್ರದ ದಿನ ಚಂಡಿಕಾಯಾಗ ನಡೆಯಲಿದೆ. ವಿಜಯ ದಶಮಿಯಂದು ಅಕ್ಷರಾಭ್ಯಾಸ ಸೇವೆ ಜರುಗಲಿದೆ.ನೀಲಾವರ ದೇವಸ್ಥಾನ: ಸೀತಾನದಿಯ ತಟದ ಪ್ರಕೃತಿ ರಮಣೀಯ ಪ್ರದೇಶದಲ್ಲಿರುವ ನೀಲಾವರ ಮಹಿಷಮರ್ದಿನಿ ದೇಗುಲದ ಸೌಂದರ್ಯವು ಶರನ್ನವರಾತ್ರಿಯ ಸುಸಂದರ್ಭದಲ್ಲಿ ಇಮ್ಮಡಿಗೊಂಡಿದೆ. ಹಬ್ಬದ ದಿನಗಳಲ್ಲಿ ಪ್ರತಿದಿನ ದುರ್ಗಾ ಹೋಮ ಮೊದಲಾದ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ.ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ದೇವಿಯ ಮೂರ್ತಿ ಕಾಪು, ಉಚ್ಚಿಲದಲ್ಲಿ ಉತ್ಸವದ ಕಳೆಪಡುಬಿದ್ರಿ: ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನ ಹಾಗೂ ಉಚ್ಚಿಲದ ಮಹಾಲಕ್ಷ್ಮೀ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ದೇವಿ ಆರಾಧನೆಯೊಂದಿಗೆ ನವರಾತ್ರಿ ಉತ್ಸವ ಭಕ್ತಿಭಾವದಿಂದ ನಡೆಯುತ್ತಿದೆ. ಕಾಪು ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಮಾರಿಯಮ್ಮನಿಗೆ ವಿಶೇಷ ಅಲಂಕಾರ, ಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿವೆ. ದೇವಿಯ ದರ್ಶನ ಪಡೆಯಲು ವಿವಿಧ ಭಾಗಗಳಿಂದ ಭಕ್ತರು ಬರುತ್ತಿದ್ದು, ದೇವಸ್ಥಾನದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿಯೂ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆಗಳು, ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಎರಡೂ ಕ್ಷೇತ್ರಗಳಿಗೂ ಜಿಲ್ಲೆ ಮಾತ್ರವಲ್ಲದೆ ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರ ದಂಡೇ ಬರುತ್ತಿದೆ. ಇಲ್ಲಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.ಪೂರಕ ಮಾಹಿತಿ: ವಿಶ್ವನಾಥ ಆಚಾರ್ಯ, ಹರೀಶ್ ಕಿರಣ್ ತುಂಗ, ವಾಸುದೇವ ಭಟ್, ಹಮೀದ್ ಪಡುಬಿದ್ರಿ