ದೇವನಹಳ್ಳಿ: ಘಾಟಿಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದ 3 ಮಕ್ಕಳ ರಕ್ಷಣೆ
ದೇವನಹಳ್ಳಿ: ಪಾಲಕರಿದ್ದರೂ ಸೂಕ್ತ ಆರೈಕೆ ಇಲ್ಲದೆ, ದೇವಸ್ಥಾನದ ಪ್ರಸಾದ ನಂಬಿ ಬದುಕುತ್ತಿದ್ದ ಮೂವರು ಮಕ್ಕಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿ, ದೇವನಹಳ್ಳಿಯ ಬಾಲಮಂದಿರದಲ್ಲಿ ದಾಖಲಿಸಿದ್ದಾರೆ.ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಭಿಕ್ಷಾಟನೆ ಮಾಡುತ್ತಾ, ರಾತ್ರಿ ವೇಳೆ ಕಾಡಂಚಿನ ಬಂಡೆ

ದೇವನಹಳ್ಳಿ: ಪಾಲಕರಿದ್ದರೂ ಸೂಕ್ತ ಆರೈಕೆ ಇಲ್ಲದೆ, ದೇವಸ್ಥಾನದ ಪ್ರಸಾದ ನಂಬಿ ಬದುಕುತ್ತಿದ್ದ ಮೂವರು ಮಕ್ಕಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿ, ದೇವನಹಳ್ಳಿಯ ಬಾಲಮಂದಿರದಲ್ಲಿ ದಾಖಲಿಸಿದ್ದಾರೆ.ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಭಿಕ್ಷಾಟನೆ ಮಾಡುತ್ತಾ, ರಾತ್ರಿ ವೇಳೆ ಕಾಡಂಚಿನ ಬಂಡೆಗಳ ಪೊಟರೆ ಹಾಗೂ ಪೊದೆಗಳಲ್ಲಿ ಮಲಗುತ್ತಿದ್ದ ಮಕ್ಕಳಿಗೆ ಇದೀಗ ಸುರಕ್ಷಿತ ಆಶ್ರಯ ಕಲ್ಪಿಸಲಾಗಿದೆ.ದೇವಸ್ಥಾನದ ಸುತ್ತಮುತ್ತ ಕಳೆದ ಮೂರು ತಿಂಗಳಿನಿಂದ ಸುಮಾರು ಆರೇಳು ವರ್ಷದ ಒಬ್ಬ ಬಾಲಕಿ ಹಾಗೂ ಇಬ್ಬರು ಬಾಲಕರು ಭಿಕ್ಷಾಟನೆ ಮಾಡುತ್ತಿರುವ ಬಗ್ಗೆ ಮುಜರಾಯಿ ಇಲಾಖೆ ಸಿಬ್ಬಂದಿಯು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು.ಈ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ಮೂವರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ಸಿಬ್ಬಂದಿಯನ್ನು ಕಂಡ ಕೂಡಲೇ ಮಕ್ಕಳು ಭಯಗೊಂಡು ಸ್ಥಳದಿಂದ ಓಡಿಹೋಗಿದ್ದರು. ಬಳಿಕ ಸ್ಥಳೀಯರ ನೆರವಿನಿಂದ ಸುಮಾರು ಮೂರ್ನಾಲ್ಕು ಗಂಟೆ ಹುಡುಕಾಟ ನಡೆಸಿದ ಸಿಬ್ಬಂದಿ, ಮಕ್ಕಳನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ.ಹಲವು ತಿಂಗಳುಗಳಿಂದ ಸ್ನಾನ ಮಾಡದೆ, ಬಟ್ಟೆ ಬದಲಾಯಿಸದೆ ಇದ್ದ ಮಕ್ಕಳು ಅಶುಚಿತ್ವದ ಸ್ಥಿತಿಯಲ್ಲಿದ್ದರು. ಅವರಿಗೆ ಸ್ನಾನ ಮಾಡಿಸಿ, ಆಹಾರ ಒದಗಿಸಲಾಗಿದೆ. ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿದ ಬಳಿಕ ದೇವನಹಳ್ಳಿಯ ಬಾಲಮಂದಿರಕ್ಕೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪ್ರಸಾದವೇ ಹೊಟ್ಟೆಪಾಡು: ದೇವಸ್ಥಾನಕ್ಕೆ ಬರುವ ಭಕ್ತರ ಬಳಿ ಭಿಕ್ಷೆ ಬೇಡುವುದು. ದೇಗುಲದಲ್ಲಿ ದೊರೆಯುವ ಪ್ರಸಾದ ಸೇವಿಸಿ ಹಸಿವು ನೀಗಿಸಿಕೊಳ್ಳುವುದು ಮಕ್ಕಳ ದಿನಚರಿಯಾಗಿತ್ತು. ಸ್ಥಳೀಯರು ನೀಡುವ ಬಟ್ಟೆಗಳನ್ನು ಧರಿಸುತ್ತಿದ್ದ ಮಕ್ಕಳು, ರಾತ್ರಿ ವೇಳೆ ಅರಣ್ಯದಂಚಿನ ಮರಗಿಡಗಳು ಹಾಗೂ ಬಂಡೆಗಳ ಸಂದಿಗೊಂದಿಗಳಲ್ಲಿ ಮಲಗುತ್ತಿದ್ದರು ಎಂಬುದು ಅಧಿಕಾರಿಗಳ ವಿಚಾರಣೆಯಿಂದ ತಿಳಿದುಬಂದಿದೆ.ಕಾಡಂಚಿನಲ್ಲಿ ಪಾಲಕರ ವಾಸ: ಪ್ರಾಥಮಿಕ ಮಾಹಿತಿ ಪ್ರಕಾರ, ತಮಿಳುನಾಡು ಮೂಲದ ಕುಟುಂಬವೊಂದು ಘಾಟಿ ದೇವಸ್ಥಾನದ ಸಮೀಪದ ಅರಣ್ಯದಂಚಿನಲ್ಲಿ ಸಣ್ಣ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದೆ. ಕುಟುಂಬದವರು ಕಾಡಿನಲ್ಲಿ ಜೇನು ಸಂಗ್ರಹಿಸಿ ಮಾರಾಟ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಈ ಮೂವರು ಮಕ್ಕಳು ಇದೇ ಕುಟುಂಬಕ್ಕೆ ಸೇರಿದವರಾಗಿದ್ದು, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಪಾಲಕರ ಆರೈಕೆಯಿಂದ ದೂರು ಉಳಿದಿದ್ದಾರೆ ಎಂದು ತಿಳಿದುಬಂದಿದೆ.ಮಕ್ಕಳ ಸ್ಥಿತಿಗತಿ ಕುರಿತು ಪಾಲಕರನ್ನು ಸಂಪರ್ಕಿಸಿದಾಗ ಸೂಕ್ತ ಸ್ಪಂದನೆ ದೊರೆತಿಲ್ಲ. ಆ ಸಂದರ್ಭದಲ್ಲಿ ಪಾಲಕರು ಮದ್ಯದ ಅಮಲಿನಲ್ಲಿದ್ದರು ಎಂದು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ತಿಳಿಸಿದ್ದಾರೆ.ಕನ್ನಡ ಮತ್ತು ತಮಿಳು ಮಿಶ್ರಿತ ಭಾಷೆಯಲ್ಲಿ ಮಾತನಾಡುವ ಪಾಲಕರಿಗೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಆದರೆ, ಶುಕ್ರವಾರವೂ ಅವರು ಹಾಜರಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅನಿತಾಲಕ್ಷ್ಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಮೂವರು ಮಕ್ಕಳನ್ನು ರಕ್ಷಿಸಲಾಗಿದೆ. ಪಾಲಕರಿಗೆ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗುವಂತೆ ಸೂಚಿಸಲಾಗಿದೆ. ವಿಚಾರಣೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು261012-15-2118408946