ಮಾರುವೇಷ ಕಾರ್ಯಾಚರಣೆ ಆರೋಪ ಸತ್ಯಾಸತ್ಯ ಹೊರಬರುವುದು ಅತ್ಯಗತ್ಯ
ಮಾರುವೇಷದ ಕಾರ್ಯಾಚರಣೆಗಳ (ಸ್ಟಿಂಗ್ ಆಪರೇಷನ್) ವಿವಾದ ರಾಜ್ಯ ರಾಜಕಾರಣದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬೆಳವಣಿಗೆ, ರಾಜಕೀಯ ಎದುರಾಳಿಗಳ ಪರಸ್ಪರ ಕೆಸರೆ ರಚಾಟದ ಮತ್ತೊಂದು ಪ್ರಸಂಗವೆಂದು ತಳ್ಳಿಹಾಕಲು ಸಾಧ್ಯವಾಗದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಸ್ತುತ ಆರೋಪಗಳನ್ನು ಮಾಡುತ್ತಿರುವವರು ರಾಜಕೀಯ ಪ್ರತಿಸ್ಪರ್ಧಿಗಳು ಮಾತ್ರವಾಗಿರದೆ, ಉನ್ನತ ಸಾರ್ವಜನ

ಮಾರುವೇಷದ ಕಾರ್ಯಾಚರಣೆಗಳ (ಸ್ಟಿಂಗ್ ಆಪರೇಷನ್) ವಿವಾದ ರಾಜ್ಯ ರಾಜಕಾರಣದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬೆಳವಣಿಗೆ, ರಾಜಕೀಯ ಎದುರಾಳಿಗಳ ಪರಸ್ಪರ ಕೆಸರೆ ರಚಾಟದ ಮತ್ತೊಂದು ಪ್ರಸಂಗವೆಂದು ತಳ್ಳಿಹಾಕಲು ಸಾಧ್ಯವಾಗದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಸ್ತುತ ಆರೋಪಗಳನ್ನು ಮಾಡುತ್ತಿರುವವರು ರಾಜಕೀಯ ಪ್ರತಿಸ್ಪರ್ಧಿಗಳು ಮಾತ್ರವಾಗಿರದೆ, ಉನ್ನತ ಸಾರ್ವಜನಿಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರೂ ಆಗಿದ್ದಾರೆ. ಮಾತುಕತೆಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳುವವರ ಬಗ್ಗೆ ಮತ್ತು ಹನಿಟ್ರ್ಯಾಪ್ ಕುರಿತು ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗಷ್ಟೇ ಸಂಪುಟ ಸಹೋದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದರು. ಸಚಿವರನ್ನು ಗುರಿಯಾಗಿಸಿಕೊಂಡು ಇಂತಹ ವ್ಯವಸ್ಥಿತ ಪ್ರಯತ್ನಗಳು ನಡೆದಿರುವುದಕ್ಕೆ ಸಂಬಂಧಿಸಿ ತಮ್ಮ ಬಳಿ ಸಾಕ್ಷ್ಯಗಳಿರುವುದಾಗಿ ಹೇಳಿದ್ದರು. ಮಾರುವೇಷ ಕಾರ್ಯಾಚರಣೆಗೆ ಸಂಬಂಧಿಸಿದ ಫೋಟೊ, ಆಡಿಯೊ ವಿಡಿಯೊ, ಸಿಸಿಟಿವಿ ದೃಶ್ಯಾವಳಿ ದಾಖಲೆಗಳು ತಮ್ಮ ಬಳಿ ಇವೆ ಎಂದು ಮಂಡ್ಯದ ಕಾಂಗ್ರೆಸ್ ಶಾಸಕ ಪಿ. ರವಿಕುಮಾರ್ (ಗಣಿಗ) ಪೆನ್ಡ್ರೈವ್ ಪ್ರದರ್ಶಿಸಿದ್ದರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಸ್ಫೋಟಕ ಆರೋಪ ಮಾಡಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಡ ಹೇರಲು ಡಿ.ಕೆ. ಶಿವಕುಮಾರ್ ಅವರೇ ಮಾರುವೇಷದ ಕಾರ್ಯಾಚರಣೆ ರೂಪಿಸಿದ್ದರು ಎಂದು ಆರೋಪ ಮಾಡಿದ್ದಾರೆ. ಮತ್ತೊಂದೆಡೆ, ಇಂಥ ಕಾರ್ಯಾಚರಣೆಗಳಲ್ಲಿ ತೊಡಗಿರುವ ಸಿಂಡಿಕೇಟ್ ಒಂದಕ್ಕೆ ಕೇಂದ್ರ ಸಚಿವರೊಬ್ಬರು ಬೆಂಬಲ ನೀಡುತ್ತಿದ್ದಾರೆ ಎಂದು ಯಾರ ಹೆಸರನ್ನೂ ಹೇಳದೆ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಈ ಆರೋಪ ಪ್ರತ್ಯಾರೋಪಗಳು ದೊಡ್ಡ ಮಟ್ಟದ ರಾಜಕೀಯ ಪಿತೂರಿಯ ಸಾಧ್ಯತೆಯನ್ನು ಸೂಚಿಸುತ್ತವಾದರೂ, ಆರೋಪಗಳಿಂದಷ್ಟೇ ಸತ್ಯ ಅನಾವರಣಗೊಳ್ಳಲಾರದು.ಮಾರುವೇಷ ಕಾರ್ಯಾಚರಣೆ ವಿವಾದಗಳನ್ನು ರಾಜ್ಯ ಈ ಮೊದಲೂ ಕಂಡಿದೆ. 2021ರಲ್ಲಿ ಲೈಂಗಿಕ ವಿಡಿಯೊ ಹಗರಣದಲ್ಲಿ ಆಗಿನ ಬಿಜೆಪಿ ಸರ್ಕಾರದ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮಾಜಿಸಂಸದರೊಬ್ಬರ ಖಾಸಗಿ ಕ್ಷಣಗಳ ಆಕ್ಷೇಪಾರ್ಹ ವಿಡಿಯೊ ಬಹಿರಂಗಗೊಂಡಿತ್ತು ಹಾಗೂ ಅದನ್ನು ಡೀಪ್ಫೇಕ್ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ ಎಂದವರು ಹೇಳಿದ್ದರು. 2019ರಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡಿ ಸಚಿವರಾದವರೂ ಸೇರಿದಂತೆ ಹಲವು ರಾಜಕೀಯ ಮುಖಂಡರು, ತಮ್ಮ ವಿರುದ್ಧದ ರೆಕಾರ್ಡಿಂಗ್ಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯಗಳಿಂದ ಏಕಪಕ್ಷೀಯ ಆದೇಶಗಳನ್ನು ಪಡೆದಿದ್ದಾರೆ. ಈ ಎಲ್ಲ ಘಟನೆಗಳನ್ನು ಒಟ್ಟಾಗಿ ಗಮನಿಸಿದರೆ, ವೈಯಕ್ತಿಕ ಹಗರಣಗಳ ಆಚೆಗೂ ಸಮಸ್ಯೆ ಚಾಚಿಕೊಂಡಿರುವುದು ಸ್ಪಷ್ಟವಾಗುತ್ತದೆ. ಹಣ ಸುಲಿಗೆ ಮಾಡುವ, ನೇಮಕಾತಿಗಳ ಮೇಲೆ ಪ್ರಭಾವ ಬೀರುವ, ರಾಜಕೀಯ ನಿರ್ಧಾರಗಳನ್ನು ತಿರುಚುವ ಅಥವಾ ಸರ್ಕಾರಿ ಗುತ್ತಿಗೆಗಳನ್ನು ಪಡೆಯುವ ಉದ್ದೇಶಕ್ಕೆ ಮಾರುವೇಷದ ಕಾರ್ಯಾಚರಣೆಗಳನ್ನು ಸಂಘಟಿತ ಜಾಲಗಳು ಬಳಸಿಕೊಳ್ಳುತ್ತಿದ್ದರೆ, ಅದರ ಪರಿಣಾಮಗಳು ಗಂಭೀರವಾಗಿರುತ್ತವೆ. ಅಂತಹ ಚಟುವಟಿಕೆಗಳು ಭ್ರಷ್ಟಾಚಾರ ಮತ್ತು ಅಪರಾಧಕ್ಕೆ ಆಸ್ಪದ ಕಲ್ಪಿಸುವ ಕಳವಳಕ್ಕಷ್ಟೇ ಸೀಮಿತವಾಗದೆ, ಸೂಕ್ಷ್ಮ ಮಾಹಿತಿಯ ದುರುಪಯೋಗ ಹಾಗೂ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಆತಂಕವನ್ನೂ ಉಂಟುಮಾಡುತ್ತವೆ.ಸದ್ಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎದುರಾಗುವ ಅತ್ಯಂತ ಆತಂಕಕಾರಿ ಪ್ರಶ್ನೆ, ಮಾರುವೇಷದ ಕಾರ್ಯಾಚರಣೆಗಳ ಕುರಿತು ಸರ್ಕಾರ ಇದುವರೆಗೆ ವಿಶ್ವಾಸಾರ್ಹ ತನಿಖೆಗೆ ಏಕೆ ಆದೇಶಿಸಿಲ್ಲ ಎನ್ನುವುದಾಗಿದೆ. ಈ ಹಿಂದೆ ಕೇಂದ್ರ ಅಪರಾಧ ವಿಭಾಗವು (ಸಿಸಿಬಿ) ಕೆಲವು ಬಂಧನಗಳನ್ನು ಮಾಡಿದೆ. ಆ ಬಂಧನಗಳಿಂದ, ಅಧಿಕೃತ ದೂರುಗಳು ಸಲ್ಲಿಕೆಯಾದರೆ ಪೊಲೀಸ್ ಕ್ರಮ ಸಾಧ್ಯ ಎನ್ನುವುದು ಸಾಬೀತಾಗಿದೆ. ಕುಮಾರಸ್ವಾಮಿ, ರವಿಕುಮಾರ್ ಮತ್ತು ಶಿವಕುಮಾರ್ ಅವರು ತಮ್ಮ ಬಳಿ ಸಾಕ್ಷ್ಯಗಳು ಇರುವುದಾಗಿ ಹೇಳಿಕೊಂಡಿದ್ದಾರೆ. ಸಾಕ್ಷ್ಯಗಳು ಇರುವುದೇ ಆಗಿದ್ದಲ್ಲಿ, ಅವುಗಳನ್ನು ಅವರು ಕಾನೂನು ಜಾರಿ ಪ್ರಾಧಿಕಾರಗಳಿಗೆ ಏಕೆ ಹಸ್ತಾಂತರಿಸಿಲ್ಲ? ಸಂಘಟಿತ ಜಾಲವೊಂದು ಕಾರ್ಯ ನಿರ್ವಹಿಸುತ್ತಿರುವ ಸಾಧ್ಯತೆಯನ್ನು ವಿವಿಧ ರಾಜಕೀಯ ಮುಖಂಡರೇ ಒಪ್ಪಿಕೊಂಡಿರುವಾಗ, ತನಿಖೆ ನಡೆಸಲು ಮುಂದಾಗದಿರುವುದನ್ನು ಸಮರ್ಥಿಸಿಕೊಳ್ಳುವುದು ಸಾಧ್ಯವಿಲ್ಲ. ತನಿಖೆ ನಡೆಸಲು ತೋರುತ್ತಿರುವ ಹಿಂಜರಿಕೆ ಸಹಜವಾಗಿಯೇ ಅನುಮಾನಗಳಿಗೆ ಆಸ್ಪದ ಕಲ್ಪಿಸುತ್ತಿದೆ. ಈ ಹಿಂಜರಿಕೆಯ ಹಿಂದೆ ಪ್ರಭಾವಿಗಳನ್ನು ರಕ್ಷಿಸುವ ಉದ್ದೇಶ ಇದೆಯೆ? ಹಲವು ರಾಜಕೀಯ ನಾಯಕರಿಗೆ ಮುಜುಗರ ಆಗುವುದನ್ನು ತಪ್ಪಿಸುವ ಪ್ರಯತ್ನ ಇದಾಗಿದೆಯೆ? ಕಾರಣಗಳು ಏನೇ ಇರಲಿ, ಮಾರುವೇಷದ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಾರ್ವಜನಿಕ ಹಿತಾಸಕ್ತಿಯು ಉತ್ತರಗಳನ್ನು ಅಪೇಕ್ಷಿಸುತ್ತದೆ. ಸತ್ಯ ಬಹಿರಂಗಗೊಳ್ಳಲು, ಹೊಣೆಗಾರರನ್ನು ಗುರ್ತಿಸಲು ಮತ್ತು ರಾಜಕೀಯ ಪ್ರಹಸನದಿಂದ ವಾಸ್ತವವನ್ನು ಪ್ರತ್ಯೇಕಿಸಲು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಯುವುದು ಅಗತ್ಯ. ಮಾರುವೇಷದ ಆರೋಪಗಳು ಸತ್ಯವೋ ಸುಳ್ಳೋ ಎನ್ನುವುದಷ್ಟೇ ಮುಖ್ಯವಲ್ಲ, ಅಧಿಕಾರ ಸ್ಥಾನದಲ್ಲಿ ಇರುವವರು ಸತ್ಯಾಸತ್ಯ ಪತ್ತೆಹಚ್ಚುವ ಕೆಲಸಕ್ಕೆ ಏಕೆ ಸಿದ್ಧರಿಲ್ಲ ಎನ್ನುವುದು ಈಗಿನ ಮುಖ್ಯ ಪ್ರಶ್ನೆಯಾಗಿದೆ.