ಡಿಜಿಟಲ್ ಅರೆಸ್ಟ್ ಪ್ರಕರಣ ಇಳಿಮುಖ
ಬೆಂಗಳೂರು: ಪೊಲೀಸರ ನಿರಂತರ ಜಾಗೃತಿ ಅಭಿಯಾನ ಹಾಗೂ ಸಂತ್ರಸ್ತರು ಸಹಾಯವಾಣಿಗೆ ತಕ್ಷಣ ದೂರು ನೀಡುತ್ತಿರುವ ಪರಿಣಾಮ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. 2025ರ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 140ರಷ್ಟು ಕಡಿಮೆಯಾಗಿದೆ. ಮೂರು ವರ್ಷಗಳಲ್ಲಿ (2024 ರಿಂದ 2026) ಒಟ್ಟು 1,222 ಪ್ರಕರಣಗಳು ದಾಖಲಾ

ಬೆಂಗಳೂರು: ಪೊಲೀಸರ ನಿರಂತರ ಜಾಗೃತಿ ಅಭಿಯಾನ ಹಾಗೂ ಸಂತ್ರಸ್ತರು ಸಹಾಯವಾಣಿಗೆ ತಕ್ಷಣ ದೂರು ನೀಡುತ್ತಿರುವ ಪರಿಣಾಮ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. 2025ರ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 140ರಷ್ಟು ಕಡಿಮೆಯಾಗಿದೆ. ಮೂರು ವರ್ಷಗಳಲ್ಲಿ (2024 ರಿಂದ 2026) ಒಟ್ಟು 1,222 ಪ್ರಕರಣಗಳು ದಾಖಲಾಗಿದ್ದು, ಪೊಲೀಸರು 58 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಅವಧಿಯಲ್ಲಿ ನಗರದ ನಾಗರಿಕರು ₹306 ಕೋಟಿ ಕಳೆದುಕೊಂಡಿದ್ದಾರೆ. ಈ ಪೈಕಿ ವಂಚಕರಿಗೆ ಸೇರಿದ ಬ್ಯಾಂಕ್ ಖಾತೆಗಳಲ್ಲಿ ₹97.75 ಕೋಟಿ ಹಣವನ್ನು ‘ಫ್ರೀಜ್’ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಆರೋಪಿಗಳಿಂದ ₹21.33 ಕೋಟಿ ಜಪ್ತಿ ಮಾಡಿರುವ ಸೈಬರ್ ಪೊಲೀಸರು, ₹12.44 ಕೋಟಿಯನ್ನು ಸಂತ್ರಸ್ತರಿಗೆ ವಾಪಸ್ ಕೊಡಿಸಿದ್ದಾರೆ. ವಂಚನೆಗೆ ಬಳಸಿದ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ‘ಫ್ರೀಜ್’ (ಹಣ ವರ್ಗಾವಣೆಗೆ ತಡೆ) ಮಾಡಿ, ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ.ಪೊಲೀಸ್ ಇಲಾಖೆ ಅಂಕಿ ಅಂಶಗಳ ಪ್ರಕಾರ, 2024ರಲ್ಲಿ ದಾಖಲಾದ 936 ಪ್ರಕರಣಗಳಲ್ಲಿ ₹132 ಕೋಟಿ ವಂಚಕರ ಪಾಲಾಗಿದೆ. 2025ರಲ್ಲಿ ಪ್ರಕರಣಗಳ ಸಂಖ್ಯೆ 217ಕ್ಕೆ ಇಳಿದಿದ್ದರೂ ವಂಚನೆಯ ಮೊತ್ತ ₹111 ಕೋಟಿ ತಲುಪಿತ್ತು. 2026ರಲ್ಲಿ (ಸೆಪ್ಟೆಂಬರ್ವರೆಗೆ) 69 ಪ್ರಕರಣಗಳು ದಾಖಲಾಗಿದ್ದು, ವಂಚಕರು ₹ 61 ಕೋಟಿ ದೋಚಿದ್ದಾರೆ.ವಂಚಕರು ಹೆಣೆದ ಬಲೆಗೆ ಬಿದ್ದು ವಿದ್ಯಾವಂತರು, ಹಿರಿಯ ನಾಗರಿಕರು, ಶಿಕ್ಷಕರು, ಸಾಫ್ಟ್ವೇರ್ ಉದ್ಯೋಗಿಗಳು, ಮಾಜಿ ಶಾಸಕರು, ನಾಗರಿಕರು ಹಣ ಕಳೆದುಕೊಳ್ಳುತ್ತಿದ್ದರು. ಆದರೆ, ಪೊಲೀಸರ ನಿರಂತರ ಜಾಗೃತಿ ಅಭಿಯಾನ, ಸಾರ್ವಜನಿಕರಿಗೆ ನೀಡುತ್ತಿರುವ ಎಚ್ಚರಿಕೆ ಸಂದೇಶ ಹಾಗೂ ಸೈಬರ್ ಅಪರಾಧ ಕುರಿತು ಹೆಚ್ಚುತ್ತಿರುವ ಅರಿವಿನಿಂದ ಕಳೆದ ಎರಡು ವರ್ಷಗಳಲ್ಲಿ ಪ್ರಕರಣಗಳ ಸಂಖ್ಯೆ ಹಾಗೂ ಕಳೆದುಕೊಂಡ ಹಣದ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ.‘ಜಾರಿ ನಿರ್ದೇಶನಾಲಯ, ಕೇಂದ್ರೀಯ ತನಿಖಾ ದಳ, ಪೊಲೀಸ್ ಇಲಾಖೆ, ಆದಾಯ ತೆರಿಗೆ ಇಲಾಖೆ ಮತ್ತು ಮಾದಕ ವಸ್ತು ನಿಯಂತ್ರಣ ಸಂಸ್ಥೆಯ ಹೆಸರಿನಲ್ಲಿ ವಂಚಕರು ಕರೆ ಮಾಡಿ, ‘ನಿಮ್ಮ ಹೆಸರಿನಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿದೆ. ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆ ಅಪರಾಧ ಕೃತ್ಯಕ್ಕೆ ಬಳಕೆಯಾಗಿದೆ. ಪಾರ್ಸೆಲ್ನಲ್ಲಿ ಮಾದಕ ವಸ್ತು ಪತ್ತೆಯಾಗಿದೆ’ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಬಳಿಕ ವಿಚಾರಣೆ ನೆಪ ಹಾಗೂ ಬಂಧನದ ಭಯ ಹುಟ್ಟಿಸಿ ಹಣ ವರ್ಗಾಯಿಸುವಂತೆ ನಾಗರಿಕರ ಮೇಲೆ ಒತ್ತಡ ಹೇರುತ್ತಾರೆ’ ಎಂದು ಪೊಲೀಸರು ತಿಳಿಸಿದರು.‘ವಾಟ್ಸ್ ಆ್ಯಪ್ ಮತ್ತು ಟೆಲಿಗ್ರಾಂ ಮೂಲಕ ತನಿಖಾಧಿಕಾರಿಗಳ ಸೋಗಿನಲ್ಲಿ ವಿಡಿಯೊ ಕರೆ ಮಾಡಿ, ‘ನಿಮ್ಮ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ‘ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದೇವೆ’ ಎಂದು ಬೆದರಿಸುತ್ತಾರೆ. ಯಾರೊಂದಿಗೂ ಮಾತನಾಡುವಂತಿಲ್ಲ, ಎಲ್ಲಿಗೂ ಹೋಗುವಂತಿಲ್ಲ ಎಂದು ಸೂಚಿಸುತ್ತಾರೆ. ನಂತರ ಈ ಪ್ರಕರಣದಿಂದ ಪಾರು ಮಾಡಬೇಕಾದರೆ ಕೇಂದ್ರ ಸರ್ಕಾರದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದರೆ, ತನಿಖೆ ಬಳಿಕ ವಾಪಸ್ ನೀಡುತ್ತೇವೆ ಎನ್ನುತ್ತಾರೆ. ವಂಚಕರು ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡುತ್ತಾರೆ’ ಎಂದು ಹೇಳಿದರು.‘ಸರ್ಕಾರದ ಯಾವುದೇ ತನಿಖಾ ಸಂಸ್ಥೆಗಳು ವಿಡಿಯೊ ಕರೆ ಮೂಲಕ ತನಿಖೆ ಕೈಗೊಳ್ಳುವುದಿಲ್ಲ. ಮೊದಲು ವ್ಯಕ್ತಿಗೆ ನೋಟಿಸ್ ನೀಡಿ ಅಥವಾ ನೇರವಾಗಿ ಅವರನ್ನು ಭೇಟಿಯಾಗಿ ವಶಕ್ಕೆ ಪಡೆದು, ಬಳಿಕ ಬಂಧಿಸಲು ಮಾತ್ರ ಕಾನೂನಿನಲ್ಲಿ ಅವಕಾಶ ಇದೆ. ಬಂಧಿಸಿದ ಆರೋಪಿಗಳನ್ನು 24 ಗಂಟೆಯೊಳಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂಬ ಕಾನೂನು ಇದೆ’ ಎಂದು ತಿಳಿಸಿದರು.ಕೆಲ ದಿನಗಳ ಹಿಂದೆ ಬೆಂಗಳೂರು ನಗರದಲ್ಲಿ ನಿವೃತ್ತ ಶಿಕ್ಷಕಿಯೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಒತ್ತೆ ಇರಿಸಿಕೊಂಡಿದ್ದ ಸೈಬರ್ ವಂಚಕರು, ₹24 ಕೋಟಿ ವರ್ಗಾವಣೆ ಮಾಡಿಸಿಕೊಂಡಿದ್ದರು. ವ್ಯಕ್ತಿಯೊಬ್ಬರು ‘ಡಿಜಿಟಲ್ ಅರೆಸ್ಟ್’ ವಂಚನೆಯಲ್ಲಿ ಅತ್ಯಧಿಕ ಮೊತ್ತ ಕಳೆದುಕೊಂಡ ಪ್ರಕರಣ ಇದಾಗಿದೆ.ಮಾಹಿತಿ ನೀಡುವವರ ಸಂಖ್ಯೆ ಕಡಿಮೆ ಸೈಬರ್ ವಂಚನೆಗೆ ಒಳಗಾದವರ ನೆರವಿಗೆ ‘ರಾಷ್ಟ್ರೀಯ ಸೈಬರ್ ಸಹಾಯವಾಣಿ’ (ಎನ್ಸಿಆರ್ಪಿ) ಸ್ಥಾಪಿಸಿದ್ದರೂ ‘ಗೋಲ್ಡನ್ ಅವರ್’ನಲ್ಲಿ (ಕೃತ್ಯ ನಡೆದ ಒಂದು ತಾಸಿನ ಒಳಗಾಗಿ) ಸಹಾಯವಾಣಿಗೆ (1930) ಕರೆ ಮಾಡಿ ವಂಚನೆಯ ಬಗ್ಗೆ ಮಾಹಿತಿ ನೀಡುತ್ತಿರುವವರ ಸಂಖ್ಯೆ ತೀರಾ ಕಡಿಮೆ. ಮಾಹಿತಿ ನೀಡದ ಕಾರಣಕ್ಕೆ ವಂಚನೆಗೆ ಒಳಗಾದವರಿಗೆ ಹಣವನ್ನು ಮರಳಿ ಕೊಡಿಸಲು ಸಾಧ್ಯವಾಗುತ್ತಿಲ್ಲ. ‘ಡಿಜಿಟಲ್ ಅರೆಸ್ಟ್’ ಅಥವಾ ಅಪರಿಚಿತರಿಗೆ ಒಟಿಪಿ ನೀಡಿ ವಂಚನೆಗೆ ಒಳಗಾದವರು ಭಯದ ಕಾರಣದಿಂದ ಸೈಬರ್ ಸಹಾಯವಾಣಿ ಹಾಗೂ ಠಾಣೆಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ‘ಪೊಲೀಸರು ಹಾಗೂ ತನಿಖಾ ಏಜೆನ್ಸಿಗಳ ಹೆಸರಲ್ಲಿ ಯಾರಾದರೂ ಕರೆ ಮಾಡಿ ವಿಚಾರಣೆ ನಡೆಸಲು ಮುಂದಾದರೆ ನಾಗರಿಕರು ಭಯಪಡಬಾರದು. ಯಾವ ತನಿಖಾ ಏಜೆನ್ಸಿಯು ಆನ್ಲೈನ್ ವಿಚಾರಣೆ ನಡೆಸುವುದಿಲ್ಲ ಎಂಬುದನ್ನು ಅರಿತಿರಬೇಕು. ಸೈಬರ್ ವಂಚನೆಗೆ ಒಳಗಾದರೆ ತಕ್ಷಣ ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬೇಕು’ ಎಂದು ಸಲಹೆ ನೀಡಿದರು.