ಡಿಯರ್ ಸೂರ್ಯಕಾಂತ್ ರಾಜೀನಾಮೆ ನೀಡಿ, ಮತ್ತೊಬ್ಬರನ್ನು ನಾವು ಹುಡುಕಿಕೊಳ್ಳುತ್ತೇವೆ: ಕೇರಳ ಕಾಗ್ರೆಸ್ ವಿವಾದ
ನವದೆಹಲಿ: ಸುಪ್ರೀಂ ಕೋರ್ಟ್(Supreme Court) ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್(Surya Kant) ರಾಜೀನಾಮೆಗೆ ಆಗ್ರಹಿಸಿ ಕೇರಳ ಕಾಂಗ್ರೆಸ್(Kerala Congress) ಮಾಡಿರುವ ಪೋಸ್ಟ್ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆಗೆ ವಿಧಿಸಲಾದ ನಿರ್ಬಂಧಗಳು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿದ್ದು, ಅದು ತಮ್ಮ ಅಧಿಕ

ನವದೆಹಲಿ: ಸುಪ್ರೀಂ ಕೋರ್ಟ್(Supreme Court) ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್(Surya Kant) ರಾಜೀನಾಮೆಗೆ ಆಗ್ರಹಿಸಿ ಕೇರಳ ಕಾಂಗ್ರೆಸ್(Kerala Congress) ಮಾಡಿರುವ ಪೋಸ್ಟ್ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆಗೆ ವಿಧಿಸಲಾದ ನಿರ್ಬಂಧಗಳು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿದ್ದು, ಅದು ತಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಿಜೆಐ ಸೂರ್ಯ ಕಾಂತ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಪಕ್ಷ ಸೋಮವಾರ ತೀವ್ರ ವಿವಾದಕ್ಕೆ ಸಿಲುಕಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದ ಕಾಂಗ್ರೆಸ್ನ ಕೇರಳ ಘಟಕ, ಮುಖ್ಯ ನ್ಯಾಯಮೂರ್ತಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡು, ಕಾನೂನು-ಸುವ್ಯವಸ್ಥೆ ನಿಭಾಯಿಸಲು ಸಾಧ್ಯವಾಗದಿದ್ದರೆ ತಕ್ಷಣ ರಾಜೀನಾಮೆ ನೀಡುವಂತೆ ಆಗ್ರಹಿಸಿತ್ತು. ಇದನ್ನೂ ಓದಿ: 220 ರೂ. ಶುಲ್ಕ ಬಾಕಿ – ರಾಹುಲ್ ಸುಪ್ರೀಂಗೆ ಸಲ್ಲಿಸಿದ ಅರ್ಜಿಯಲ್ಲಿ 14 ದೋಷಗಳು ವಕೀಲರ ಸಮುದಾಯ ಹಾಗೂ ಬಿಜೆಪಿಯಿಂದ(BJP) ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಕಾಂಗ್ರೆಸ್ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. ಅಲ್ಲದೆ, ಪಕ್ಷದ ನಾಯಕರ ಅನುಮತಿ ಅಥವಾ ಗಮನಕ್ಕೆ ಬಾರದೆ ಈ ಪೋಸ್ಟ್ ಪ್ರಕಟಿಸಲಾಗಿದ್ದು, ಇದಕ್ಕೆ ಕಾರಣರಾದ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಪಕ್ಷ ಸ್ಪಷ್ಟಪಡಿಸಿದೆ. ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು (KPCC) ತನ್ನ ಅಧಿಕೃತ X ಖಾತೆಯಲ್ಲಿ, “ಡಿಯರ್ ಸೂರ್ಯ ಕಾಂತ್, ಕಾನೂನು ಮತ್ತು ಸುವ್ಯವಸ್ಥೆ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಾದರೆ ಈಗಲೇ ರಾಜೀನಾಮೆ ನೀಡಿ. ಅದನ್ನು ನಿಭಾಯಿಸಬಲ್ಲ ಮತ್ತೊಬ್ಬರನ್ನು ನಾವು ಹುಡುಕಿಕೊಳ್ಳುತ್ತೇವೆ” ಎಂದು ಪೋಸ್ಟ್ ಮಾಡಿತ್ತು. ವಿರೋಧ ಪಕ್ಷದ ನಾಯಕರ ಭೇಟಿಯ ಮನವಿಯನ್ನು ಸಿಜೆಐ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ನಡೆದಿದ್ದವು. ವಿಪಕ್ಷಗಳು ಪ್ರಸ್ತಾಪಿಸಲು ಬಯಸಿದ ವಿಷಯಗಳು ಈಗಾಗಲೇ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿರುವುದರಿಂದ ಭೇಟಿ ಸಾಧ್ಯವಿಲ್ಲ ಎಂದಿದ್ದ ಸಿಜೆಐ, ಇಂತಹ ಸಭೆಗಳು ಸಂವಿಧಾನದ ‘ಅಧಿಕಾರ ಪ್ರತ್ಯೇಕತೆ’ ತತ್ವಕ್ಕೆ ವಿರುದ್ಧವಾಗುತ್ತವೆ ಎಂದು ಸ್ಪಷ್ಟಪಡಿಸಿದ್ದರು. I had said it earlier, next target of the Congress Party is Judiciary. Congress wants to destroy all the constitutional and democratic institutions of India. All Anti-India gangs are joining hands. All patriotic Indians will also come together https://t.co/oOLST1yuUL — Kiren Rijiju (@KirenRijiju) October 12, 2026 ಬಿಜೆಪಿ ಕಿಡಿ: ಸಿಜೆಐ ವಿರುದ್ಧ ಕಾಂಗ್ರೆಸ್ ನಡೆಸಿದ ವಾಗ್ದಾಳಿಯನ್ನು ಬಿಜೆಪಿ ಕಟುವಾಗಿ ಖಂಡಿಸಿದ್ದು, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆರೋಪಿಸಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿ, “ನಾನು ಮೊದಲೇ ಹೇಳಿದ್ದೆ, ಕಾಂಗ್ರೆಸ್ ಪಕ್ಷದ ಮುಂದಿನ ಗುರಿ ನ್ಯಾಯಾಂಗ ವ್ಯವಸ್ಥೆ. ಭಾರತದ ಎಲ್ಲಾ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನಾಶಮಾಡಲು ಕಾಂಗ್ರೆಸ್ ಬಯಸಿದೆ. ದೇಶವಿರೋಧಿ ಗ್ಯಾಂಗ್ಗಳು ಕೈಜೋಡಿಸುತ್ತಿವೆ. ಆದರೆ ದೇಶಭಕ್ತ ಭಾರತೀಯರೆಲ್ಲರೂ ಒಗ್ಗೂಡಲಿದ್ದಾರೆ” ಎಂದು ಎಚ್ಚರಿಸಿದ್ದಾರೆ. ವಕೀಲರ ಸಂಘದಿಂದ ಖಂಡನೆ ಮುಖ್ಯ ನ್ಯಾಯಮೂರ್ತಿಗಳ ರಾಜೀನಾಮೆಗೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪೋಸ್ಟ್ಗಳನ್ನು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ (SCAORA) ನಿರ್ಣಯ ಅಂಗೀಕರಿಸಿ ತೀವ್ರವಾಗಿ ಖಂಡಿಸಿದೆ. ನ್ಯಾಯಾಂಗವು ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯುವ ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಸಾಂವಿಧಾನಿಕ ಸಂಸ್ಥೆಯಾಗಿದೆ. ನ್ಯಾಯಾಂಗದ ಕಾರ್ಯವೈಖರಿ ಕುರಿತು ಯಾವುದೇ ಕುಂದುಕೊರತೆಗಳಿದ್ದರೂ ಸೂಕ್ತವಾದ ಕಾನೂನು ಮತ್ತು ಸಾಂವಿಧಾನಿಕ ಮಾರ್ಗಗಳ ಮೂಲಕವೇ ಪ್ರಸ್ತಾಪಿಸಬೇಕು. ನ್ಯಾಯಾಂಗದ ಮುಖ್ಯಸ್ಥರ ರಾಜೀನಾಮೆಗೆ ಆಗ್ರಹಿಸುವ ಬಹಿರಂಗ ಹೇಳಿಕೆಗಳು ಸಂಸ್ಥೆಯ ಘನತೆಯನ್ನು ಕುಂದಿಸುತ್ತವೆ ಮತ್ತು ಸಾರ್ವಜನಿಕರಲ್ಲಿ ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಕುಗ್ಗಿಸುತ್ತವೆ ಎಂದು ಸಂಘಟನೆ ತಿಳಿಸಿದೆ. ಜತೆಗೆ ನ್ಯಾಯಾಂಗದ ಸ್ವಾತಂತ್ರ್ಯವನ್ನು ಗೌರವಿಸಿ, ಯಾವುದೇ ಒತ್ತಡ ಅಥವಾ ಹಸ್ತಕ್ಷೇಪವಿಲ್ಲದೆ ಕಾರ್ಯನಿರ್ವಹಿಸಲು ಬಿಡಬೇಕು ಎಂದು ಕರೆ ನೀಡಿದೆ. ಕಾಂಗ್ರೆಸ್ ಸ್ಪಷ್ಟನೆ: ವಿವಾದ ಭುಗಿಲೇಳುತ್ತಿದ್ದಂತೆ ಸ್ಪಷ್ಟನೆ ನೀಡಿದ ಕೇರಳ ಕಾಂಗ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್, ಅಧಿಕೃತ ಎಕ್ಸ್ ಖಾತೆಯಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ ವ್ಯಕ್ತಿಯನ್ನು ಕರ್ತವ್ಯದಿಂದ ತಕ್ಷಣವೇ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ. ಕೆಪಿಸಿಸಿ ನಾಯಕತ್ವದ ಯಾವುದೇ ಮಾಹಿತಿ, ಒಪ್ಪಿಗೆ ಇಲ್ಲದೆ ಈ ಪೋಸ್ಟ್ ಪ್ರಕಟವಾಗಿದ್ದು, ಇದು ಯಾವ ಸಂದರ್ಭದಲ್ಲಿ ನಡೆಯಿತು ಎಂಬುದನ್ನು ಪಕ್ಷ ಪರಿಶೀಲಿಸಲಿದೆ ಎಂದಿದ್ದಾರೆ. ನ್ಯಾಯಾಂಗದ ನಿಷ್ಪಕ್ಷಪಾತತೆಯ ಬಗ್ಗೆ ಕಾಂಗ್ರೆಸ್ಗೆ ಯಾವುದೇ ಅಪನಂಬಿಕೆಯಿಲ್ಲ ಮತ್ತು ನ್ಯಾಯಾಂಗವನ್ನು ಕೀಳಾಗಿ ಕಾಣುವ ಇಂತಹ ಪೋಸ್ಟ್ಗಳು ಕೆಪಿಸಿಸಿ ನಿಲುವನ್ನು ಬಿಂಬಿಸುವುದಿಲ್ಲ ಎಂದು ಜೋಸೆಫ್ ಸ್ಪಷ್ಟಪಡಿಸಿದ್ದಾರೆ.