‘ಸುಪ್ರೀಂ’ ಅಂಗಳಕ್ಕೆ ‘ಇಂಡಿಯಾ’
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿರುವ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಸೋಮವಾರ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪ್ರಶ್ನಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿರುವ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಸೋಮವಾರ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪ್ರಶ್ನಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.‘ಮತ ಕಳ್ಳತನ’ ವಿರುದ್ಧ ಸಿಡಿದೆದ್ದು ಈ ಹಿಂದೆ ಹಲವು ಪ್ರತಿಭಟನೆಗಳನ್ನು ನಡೆಸಿದ್ದ ಕಾಂಗ್ರೆಸ್ ಪಕ್ಷವು ‘ಇಂಡಿಯಾ’ ಬಣದ ದಿಗ್ಗಜ ನಾಯಕರನ್ನು ಒಗ್ಗೂಡಿಸಿಕೊಂಡು ಅಸಂಖ್ಯ ಕಾರ್ಯಕರ್ತರೊಂದಿಗೆ ಸುಪ್ರೀಂ ಕೋರ್ಟ್ ವರೆಗೆ ಸೋಮವಾರ ಚಲೋ ನಡೆಸಿತು. ಕಳೆದ ವಾರದ ಪ್ರತಿಭಟನೆಗಳ ಸಂದರ್ಭದಲ್ಲಿ ಪ್ರತಿಭಟನೆನಿರತರ ಮೇಲೆ ದೌರ್ಜನ್ಯ ನಡೆಸಿದ ಕಾರಣಕ್ಕೆ ವ್ಯಾಪಕ ಟೀಕೆ ಹಾಗೂ ಸುಪ್ರೀಂ ಕೋರ್ಟ್ನಿಂದ ತಪರಾಕಿಗೆ ಗುರಿಯಾಗಿದ್ದ ದೆಹಲಿ ಪೊಲೀಸರು ಸೋಮವಾರ ತಣ್ಣಗಾಗಿದ್ದರು. ಪ್ರತಿಭಟನೆನಿರತರು ಹಾಗೂ ಜನರೊಂದಿಗೆ ಸಂಯಮದಿಂದ ವರ್ತಿಸಿದರು. ಸಂಸತ್-ಸುಪ್ರೀಂ ಕೋರ್ಟ್ ನಡುವಿನ ಐದು ಮೆಟ್ರೊ ನಿಲ್ದಾಣಗಳನ್ನು ಸಂಜೆವರೆಗೆ ಬಂದ್ ಮಾಡಲಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಸಿಪಿಐನ ಡಿ. ರಾಜಾ, ಸಿಪಿಎಂ ನಾಯಕ ಎಂ.ಎ. ಬೇಬಿ, ಆರ್ಜೆಡಿಯ ತೇಜಸ್ವಿ ಯಾದವ್, ಎನ್ಸಿಪಿ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ, ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ನೇಹಾ ಬೋರಾ ಸೇರಿದಂತೆ ಹಲವು ನಾಯಕರು ಈ ಚಲೋದಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ರಣಕಹಳೆ ಮೊಳಗಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವರು, ಶಾಸಕರು ಸೇರಿದಂತೆ ಕರ್ನಾಟಕದ ನೂರಾರು ಕಾರ್ಯಕರ್ತರು ಭಾಗವಹಿಸಿ ಘೋಷಣೆಗಳನ್ನು ಕೂಗಿದರು. ಈ ವಿಷಯವು ನ್ಯಾಯಾಲಯದ ಎದುರು ವಿಚಾರಣೆಯಲ್ಲಿದೆ ಎಂಬ ಕಾರಣಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಲು ನಿರಾಕರಿಸಿದ್ದರು. ಮತ ಕಳ್ಳತನ ತಡೆಯುವುದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ, ಎಸ್ಐಆರ್ ಪ್ರಕ್ರಿಯೆ ನಿಲ್ಲಿಸುವುದು ಮತ್ತು ಮತ್ತೆ ಮತಪತ್ರ ಪದ್ಧತಿಗೆ ಮರಳುವಂತೆ ಒತ್ತಾಯಿಸಿ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಲು ವಿರೋಧ ಪಕ್ಷದ ನಾಯಕರು ಬಯಸಿದ್ದರು.ಭಗವಾನ್ ದಾಸ್ ರಸ್ತೆಯಲ್ಲಿ ಪೊಲೀಸರು ಮೆರವಣಿಗೆಯನ್ನು ತಡೆದರು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ತೇಜಸ್ವಿ ಯಾದವ್ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ವಾಹನವೊಂದರ ಮೇಲೆ ಹತ್ತಿದರು. ಬೆಂಬಲಿಗರ ಘೋಷಣೆಗಳ ನಡುವೆ ಬ್ಯಾರಿಕೇಡ್ಗಳನ್ನು ದಾಟಿ ಮೆರವಣಿಗೆ ಮುಂದುವರಿಯಿತು.ಕೇಂದ್ರ ಸರ್ಕಾರ ಹಾಗೂ ಜ್ಞಾನೇಶ್ ಕುಮಾರ್ ವಿರುದ್ಧ ವಿಪಕ್ಷ ನಾಯಕರು ಹಾಗೂ ಅವರ ಬೆಂಬಲಿಗರು ಘೋಷಣೆಗಳನ್ನು ಕೂಗಿದರು. ಅಲ್ಲದೆ, ‘ಮತ ಕಳ್ಳತನ’ ಮತ್ತು ಎಸ್ಐಆರ್ ಪ್ರಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಪಾದಿಸಿದರು.ರಾಹುಲ್ ಗಾಂಧಿ ಮಾಧ್ಯಮಗೋಷ್ಠಿಯ ಬಳಿಕ ಇಂಡಿಯಾ ಮೈತ್ರಿಕೂಟದ ನಾಯಕರು ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ‘ಕಾನ್ಸ್ಟಿಟ್ಯೂಷನ್ ಕ್ಲಬ್ನ’ಲ್ಲಿ ಜಮಾಯಿಸಿದರು. ಅಲ್ಲಿಂದ ನಾಲ್ಕು ಹವಾನಿಯಂತ್ರಿತ ಬಸ್ಗಳಲ್ಲಿ ಬರಾಖಂಬಾ ರಸ್ತೆ ಜಂಕ್ಷನ್ಗೆ ತೆರಳಿದರು. ಅಲ್ಲಿಂದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ನೇಹಾ ಬೋರಾ ನೇತೃತ್ವದಲ್ಲಿ ಪ್ರತಿಭಟನೆಕಾರರು ಮಂಡಿ ಹೌಸ್ವರೆಗೆ ಸಾಗಿದರು. ಸುಪ್ರೀಂ ಕೋರ್ಟ್ವರೆಗೆ ಮೆರವಣಿಗೆ ತೆರಳಲು ಪೊಲೀಸರು ಅನುವು ಮಾಡಿಕೊಡಲಿಲ್ಲ. ಶಿವಸೇನಾ-ಯುಬಿಟಿ ನಾಯಕ ಸಂಜಯ್ ರಾವುತ್, ಸಿಪಿಐ-ಎಂಎಲ್ ನಾಯಕ ದೀಪಂಕರ್ ಭಟ್ಟಾಚಾರ್ಯ, ಐಯುಎಂಎಲ್ ನಾಯಕ ಇ.ಟಿ. ಮೊಹಮ್ಮದ್ ಬಶೀರ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಕಾಂಗ್ರೆಸ್ ಸಂಸದರಾದ ಶಶಿ ತರೂರ್, ಸಚಿನ್ ಪೈಲಟ್, ಮುಕುಲ್ ವಾಸ್ನಿಕ್, ಟಿಎಂಸಿ ನಾಯಕಿ ಸಾಗರಿಕಾ ಘೋಷ್, ಸಾಮಾಜಿಕ ಹೋರಾಟಗಾರರಾದ ಯೋಗೇಂದ್ರ ಯಾದವ್ ಮತ್ತು ನಂದಿತಾ ನಾರಾಯಣ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.ರಿಟ್ ಅರ್ಜಿ: ವಿಚಾರಣೆ ಇಂದು?ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ರಾಷ್ಟ್ರೀಯ ಜನತಾ ದಳ ನಾಯಕ ತೇಜಸ್ವಿ ಯಾದವ್, ಎನ್ಸಿಪಿ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ, ಶಿವಸೇನಾ-ಯುಬಿಟಿ ನಾಯಕ ಸಂಜಯ್ ರಾವುತ್, ಸಿಪಿಐ ನಾಯಕ ಡಿ. ರಾಜಾ, ಜಾರ್ಖಂಡ್ ಮುಕ್ತಿ ಮೋರ್ಚಾ ಸಂಸದೆ ಮಹುವಾ ಮಾಜಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಇ.ಟಿ. ಮೊಹಮ್ಮದ್ ಬಶೀರ್ ಒಟ್ಟಾಗಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸುವ ಸಂಭವ ಇದೆ. ನನ್ನ ವ್ಯಾಪ್ತಿಗೆ ಬರುವುದಿಲ್ಲ: ಸಿಜೆಐನವದೆಹಲಿ (ಪಿಟಿಐ): ‘ಈ ವಿಷಯಗಳು ನನ್ನ ವ್ಯಾಪ್ತಿಗೆ ಬರುವುದಿಲ್ಲ’ ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆ, ನಿರ್ಬಂಧಗಳ ಕುರಿತಂತೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಪತ್ರಕರ್ತರ ಪ್ರಶ್ನೆಗೆ ಕೊಟ್ಟ ಏಕಸಾಲಿನ ಉತ್ತರವಿದು.ನಗರದ ವಿಜ್ಞಾನ ಭವನದಲ್ಲಿ ನಡೆದ 33ನೇ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸಮಾರಂಭದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದರು.‘ಸುಪ್ರೀಂ ಕೋರ್ಟ್ ಎಲ್ಲರಿಗೂ ಮುಕ್ತವಾಗಿದೆ. ಸಾಮಾನ್ಯ ನಾಗರಿಕನಿಂದ ಹಿಡಿದು, ಚುನಾಯಿತ ಸಂಸ್ಥೆಗಳ ಸದಸ್ಯರವರೆಗೂ ಯಾರು ಬೇಕಾದರೂಸಂಪರ್ಕಿಸಬಹುದಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.‘ಪ್ರತಿಭಟನೆ ಹಾಗೂ ನಿರ್ಬಂಧಗಳು ಕಾನೂನು ಹಾಗೂ ಸುವ್ಯವಸ್ಥೆಯ ವ್ಯಾಪ್ತಿಗೆ ಒಳಪಟ್ಟಿವೆ; ನನ್ನ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಹೇಳಿದರು.ಖರ್ಗೆ, ರಾಹುಲ್ ಭೇಟಿಗೆ ನಿರಾಕರಿಸಿದ ಸಿಜೆಐನವದೆಹಲಿ (ಪಿಟಿಐ): ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ, ಚುನಾವಣಾ ಆಯೋಗ ಹಾಗೂ ಆಯುಕ್ತ ಜ್ಞಾನೇಶ್ ಕುಮಾರ್ ಕಾರ್ಯವೈಖರಿ ಕುರಿತು ಚರ್ಚಿಸಲು ವಿರೋಧ ಪಕ್ಷಗಳ ನಾಯಕರನ್ನು ಭೇಟಿಯಾಗಲು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನಿರಾಕರಿಸಿದ್ದಾರೆ.‘ವಿರೋಧ ಪಕ್ಷಗಳ ಮುಖಂಡರನ್ನು ಭೇಟಿಯಾಗುವುದು ಸ್ಥಾಪಿತ ನೀತಿ ಹಾಗೂ ನ್ಯಾಯಾಂಗದ ಬದ್ಧತೆಗೆ ಅನುಗುಣವಲ್ಲ. ಅವರು ಎತ್ತಿರುವ ವಿಚಾರವು ನ್ಯಾಯಾಲಯದ ಎದುರು ವಿಚಾರಣೆಯಲ್ಲಿದೆ’ ಎಂದು ತಿಳಿಸಿದ್ದಾರೆ.‘ಬಾಕಿ ಉಳಿದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಚರ್ಚಿಸುವುದು ಸೂಕ್ತವಲ್ಲ. ಈ ಕುರಿತು ನ್ಯಾಯಾಲಯಕ್ಕೆ ನೇರವಾಗಿ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ’ ಎಂದು ತಿಳಿಸಿದ್ದಾರೆ. ‘ಆರಂಭದಲ್ಲಿಯೇ ನೀವು ಉಲ್ಲೇಖಿಸಿದ ವಿಚಾರವು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಯ ಹಂತದಲ್ಲಿದೆ. ಬಾಕಿ ಉಳಿದ ಪ್ರಕರಣಗಳ ಕುರಿತು ಚರ್ಚಿಸುವುದು ಭಾರತದ ಸಾಂವಿಧಾನಿಕ ಸಿದ್ಧಾಂತದ ಮೂಲ ಅಂಶವನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದು ಉತ್ತರಿಸಿದ್ದಾರೆ.‘ನೀವು ಎತ್ತಿರುವ ವಿಚಾರಗಳಿಗೆ ಸಂಬಂಧಿಸಿದಂತೆ ಸಂವಿಧಾನದ ಚೌಕಟ್ಟಿನಲ್ಲಿ ಭಾರತೀಯ ಸುಪ್ರೀಂ ಕೋರ್ಟ್ಗೆ ಯಾವುದೇ ಆಡಳಿತಾತ್ಮಕ ಅಧಿಕಾರವಿಲ್ಲ. ಆದಾಗ್ಯೂ, ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ನ್ಯಾಯಾಂಗ ಪರಿಶೀಲನೆ ಹಾಗೂ ಪೂರ್ಣ ಅಧಿಕಾರಗಳ ಜೊತೆಗೆ ಜನಸಾಮಾನ್ಯರನ್ನು ಬಾಧಿಸುವ ವಿಚಾರಗಳಿಗೆ ಸಂಬಂಧಿಸಿದಂತೆ, ವಿಚಾರಣೆ ನಡೆಸುವುದು ನ್ಯಾಯಾಂಗದ ಕರ್ತವ್ಯವಾಗಿದೆ’ ಎಂದು ಸಿಜೆಐ ಪತ್ರದಲ್ಲಿ ತಿಳಿಸಿದ್ದಾರೆ.ಸೂರ್ಯಕಾಂತ್ ಅವರು ನೀಡಿದ ಉತ್ತರವನ್ನು ಕಾಂಗ್ರೆಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದೆ. ಹಕ್ಕು ರಕ್ಷಣೆಗೆ ಬದ್ಧ: ‘ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಲು ಸುಪ್ರೀಂ ಕೋರ್ಟ್ ಬದ್ಧವಾಗಿದೆ. ಕಾನೂನಿನ ಕಾರ್ಯವಿಧಾನದ ಮೂಲಕ ಯಾವುದೇ ಸಂದರ್ಭದಲ್ಲಿಯೂ ಅಂತಹ ಹಕ್ಕುಗಳಿಗಾಗಿ ಹೋರಾಡಬಹುದಾಗಿದೆ’ ಎಂದು ಸೂರ್ಯಕಾಂತ್ ತಿಳಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಹಾಗೂ ಆಯುಕ್ತ ಜ್ಞಾನೇಶ್ ಕುಮಾರ್ ಕುರಿತ ಕಳವಳ, ಸ್ವಯಂಪ್ರೇರಿತವಾಗಿ ಹಲವು ವಿದ್ಯಾರ್ಥಿಗಳ ಬಂಧನ, ಮೆಟ್ರೊ ನಿಲ್ದಾಣಗಳನ್ನು ಮುಚ್ಚಿರುವುದು, ಹಲವು ರೈಲುಗಳನ್ನು ರದ್ದುಗೊಳಿಸಿರುವ ಕುರಿತಂತೆ ಮನವಿ ಸಲ್ಲಿಸಲು ಅಕ್ಟೋಬರ್ 12ರ ಸಂಜೆ 4ರಿಂದ 5 ಗಂಟೆಯವರೆಗೂ ಅವಕಾಶ ನೀಡುವಂತೆ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಿಜೆಐ ಸೂರ್ಯಕಾಂತ್ ಅವರಿಗೆ ಪತ್ರ ಬರೆದು ಕೋರಿದ್ದರು. ಜಂತರ್ ಮಂತರ್ ಇನ್ಮುಂದೆ ಪ್ರತಿಭಟನಾ ಸ್ಥಳವಲ್ಲನವದೆಹಲಿ (ಪಿಟಿಐ): ದೆಹಲಿಯ ಜಂತರ್ ಮಂತರ್ ಇನ್ನು ಮುಂದೆ ಪ್ರತಿಭಟನಾ ಸ್ಥಳವಲ್ಲ; ಅದಕ್ಕಾಗಿಯೇ ಮೂರು ಹೊಸ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸರು ಅಧಿಕೃತ ಆದೇಶದಲ್ಲಿ ತಿಳಿಸಿದ್ದಾರೆ.ರಾಮಲೀಲಾ ಮೈದಾನ, ಬುರಾರಿ ಮೈದಾನ ಹಾಗೂ ಸಿಬಿಡಿ ಮೈದಾನವನ್ನು ಪ್ರತಿಭಟನಾ ಸ್ಥಳಗಳೆಂದು ಗುರುತಿಸಲಾಗಿದೆ.ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಅವರು ಭಾನುವಾರ ಈ ಕುರಿತು ಆದೇಶ ಹೊರಡಿಸಿದ್ದಾರೆ.ಕೇಂದ್ರ ಗೃಹ ಸಚಿವಾಲಯ ನಿಗದಿಪಡಿಸಿದ ಪ್ರತಿಭಟನಾ ಸ್ಥಳಕ್ಕೆ ಪರ್ಯಾಯವಾದ ಸ್ಥಳ ಗುರುತಿಸುವಂತೆ ಸಮಿತಿ ರಚನೆ ಮಾಡಿತ್ತು. ಈ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಹೊಸ ಸ್ಥಳಗಳಲ್ಲಿ ಪ್ರತಿಭಟನೆ ಮತ್ತು ಮುಷ್ಕರ ನಡೆಸುವುದಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನವನ್ನು (ಎಸ್ಒಪಿ) ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.ನಿರ್ಧಾರ ಸ್ವೀಕಾರಾರ್ಹವಲ್ಲ: ಸಿಜೆಪಿ ಜಂತರ್ ಮಂತರ್ ಪ್ರತಿಭಟನಾ ಸ್ಥಳವಲ್ಲ ಎಂಬ ನಿರ್ಧಾರವು ಸ್ವೀಕಾರಾರ್ಹವಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಹ–ಸಂಚಾಲಕ ಸೌರವ್ ದಾಸ್ ಹೇಳಿದ್ದಾರೆ. ‘ನರೇಂದ್ರ ಮೋದಿ ಅವರಿಗೆ ಜಂತರ್ ಮಂತರ್ ಎಂದರೆ ಭಯ ಏಕೆ’ ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ. ‘ಜಂತರ್ ಮಂತರ್ ದೇಶದ ಜನರಿಗೆ ಸೇರಿದ್ದು. ಕೇಂದ್ರ ಗೃಹ ಸಚಿವಾಲಯವು ಜನರೊಂದಿಗೆ ಸಮಾಲೋಚನೆ ನಡೆಸಿದೆಯೇ ಅಥವಾ ಸಂಬಂಧಿಸಿದವರು ಅಥವಾ ಆಯೋಜಕರ ಅಭಿಪ್ರಾಯ ಪಡೆದಿದ್ದಾರೆಯೇ?’ ಎಂದು ಕೇಳಿದ್ದಾರೆ. ರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ವಿದೇಶಾಂಗ ಸಚಿವಾಲಯ ಸೇರಿ ಮೋದಿ ಸರ್ಕಾರದ ಹಲವು ಇಲಾಖೆಗಳ 200 ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದು, ನಮಗೆ ಮಾಹಿತಿ ನೀಡುತ್ತಿದ್ದಾರೆ. ಸತ್ಯ ನಮ್ಮೊಂದಿಗಿದೆ–ಶಿವರಾಜ್ ಸಿಂಗ್ ಚವಾಣ್, ಕೇಂದ್ರ ಸಚಿವರಾಹುಲ್ ಗಾಂಧಿ ‘ಸುಪ್ರೀಂ ಕೋರ್ಟ್ ಚಲೋ’ ಎಂಬ ಹೊಸ ನಾಟಕ ಆಡಿದ್ದಾರೆ. ತಮ್ಮ ದೂರದೃಷ್ಟಿ ವೈಫಲ್ಯದಿಂದ ಚುನಾವಣೆ ಸೋತದ್ದನ್ನು ಒಪ್ಪಿಕೊಳ್ಳದೆ ಚುನಾವಣಾ ಆಯೋಗದತ್ತ ಬೆಟ್ಟು ತೋರುತ್ತಿದ್ದಾರೆ..