ಮೈಸೂರು: ಜಂಬೂ ಸವಾರಿಗೆ ಅಂತಿಮ ಸಿದ್ಧತೆ ಹಂತದಲ್ಲಿ ಗಜಪಡೆ
ಮೈಸೂರು: ಜಂಬೂಸವಾರಿಯ ಅಂತಿಮ ಸಿದ್ಧತೆಗಳು ನಡೆಯುತ್ತಿದ್ದು, ಕುಶಾಲತೋಪು ಅಂತಿಮ ತಾಲೀಮಿನ ಸಿಡಿಮದ್ದಿನ ಮೊರೆತಕ್ಕೆ ಗಜಪಡೆ ಹಾಗೂ ಅಶ್ವಪಡೆ ಅಂಜದೆ ಧೈರ್ಯ ಪ್ರದರ್ಶಿಸಿದವು.ದಸರಾ ವಸ್ತುಪ್ರದರ್ಶನ ಮೈದಾನದ ವಾಹನ ನಿಲ್ದಾಣದಲ್ಲಿ ಸೋಮವಾರ ನಡೆದ ತಾಲೀಮು ಯಶಸ್ವಿಯಾಗಿ ನೆರವೇರಿತು. ಜಂಬೂಸವಾರಿಗೆ 9 ದಿನವಷ್ಟೇ ಬಾಕಿ ಇದ್ದು, 13 ಆನೆಗಳು ಹಾಗೂ ಅಶ್ವಾರೋಹಿ ದಳದ 46 ಕುದುರೆಗ

ಮೈಸೂರು: ಜಂಬೂಸವಾರಿಯ ಅಂತಿಮ ಸಿದ್ಧತೆಗಳು ನಡೆಯುತ್ತಿದ್ದು, ಕುಶಾಲತೋಪು ಅಂತಿಮ ತಾಲೀಮಿನ ಸಿಡಿಮದ್ದಿನ ಮೊರೆತಕ್ಕೆ ಗಜಪಡೆ ಹಾಗೂ ಅಶ್ವಪಡೆ ಅಂಜದೆ ಧೈರ್ಯ ಪ್ರದರ್ಶಿಸಿದವು.ದಸರಾ ವಸ್ತುಪ್ರದರ್ಶನ ಮೈದಾನದ ವಾಹನ ನಿಲ್ದಾಣದಲ್ಲಿ ಸೋಮವಾರ ನಡೆದ ತಾಲೀಮು ಯಶಸ್ವಿಯಾಗಿ ನೆರವೇರಿತು. ಜಂಬೂಸವಾರಿಗೆ 9 ದಿನವಷ್ಟೇ ಬಾಕಿ ಇದ್ದು, 13 ಆನೆಗಳು ಹಾಗೂ ಅಶ್ವಾರೋಹಿ ದಳದ 46 ಕುದುರೆಗಳು ಸಜ್ಜುಗೊಂಡಿವೆ.ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಸಿದ್ದನಗೌಡ ಪಾಟೀಲ್ ನೇತೃತ್ವದಲ್ಲಿ ಫಿರಂಗಿ ದಳದ 35 ಸಿಬ್ಬಂದಿ 7 ಫಿರಂಗಿಗಳಲ್ಲಿ ಮೂರು ಸುತ್ತಿನಂತೆ 21 ಸಿಡಿಮದ್ದು ಹಾರಿಸಿದರು. ಅಭಿಮನ್ಯು, ಸುಗ್ರೀವ, ಮಹೇಂದ್ರ, ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಚೈತ್ರ, ಕಾವೇರಿ, ರೂಪಾ, ಲಕ್ಷ್ಮಿ ಒಂದೇ ಸಾಲಿನಲ್ಲಿ ನಿಂತು ದಿಟ್ಟತನ ತೋರಿದವು.ಅರಮನೆ ಪಟ್ಟದ ಆನೆ ಶ್ರೀಕಂಠ ಮತ್ತು ನಿಶಾನೆ ಆನೆ ಏಕಲವ್ಯ ತಾಲೀಮಿನಲ್ಲಿ ಭಾಗವಹಿಸಿರಲಿಲ್ಲ. ಸಿಡಿಮದ್ದು ಸಿಡಿಯುವ ವೇಳೆ ಆನೆಗಳು ಘೀಳಿಟ್ಟವು. ಮಾವುತರು ಹಾಗೂ ಕಾವಾಡಿಗಳು ಆನೆಗಳ ಸೊಂಡಿಲು ನೇವರಿಸಿ, ಕಬ್ಬು, ಬೆಲ್ಲದ ಹುಲ್ಲು ನೀಡುತ್ತಿದ್ದರು.ಸಿಡಿಮದ್ದು ತಾಲೀಮಿನ ವೇಳೆ ಆನೆಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಎಡಭಾಗದಲ್ಲಿ ಅಶ್ವದಳದ ಕುದುರೆಗಳನ್ನು ನಿಲ್ಲಿಸಲಾಗಿತ್ತು. ಸಿಡಿಮದ್ದು ಮೊರೆಯುವ ವೇಳೆ ಅಶ್ವದಳದ ಕೆಲ ಕುದುರೆಗಳು ಗಾಬರಿಯಾಗಿ ಕೆನೆದವು. ನಂತರ ಹೊಂದಿಕೊಂಡವು.ಸಿಎಫ್ ರವಿಶಂಕರ್, ಡಿಸಿಎಫ್ ಐ.ಬಿ.ಪ್ರಭುಗೌಡ ಭಾಗವಹಿಸಿದ್ದರು.ಪ್ರಶಾಂತ ಅಂಬಾರಿ ಆನೆ..?ದುಬಾರೆ ಆನೆ ಶಿಬಿರದ ಅನುಭವಿ ಪ್ರಶಾಂತ ಚಿನ್ನದ ಅಂಬಾರಿ ಹೊರುವ ಆನೆಯಾಗಿ ಆಯ್ಕೆಯಾಗಲಿದ್ದಾನೆ ಎಂಬ ಮಾತು ಓಡಾಡುತ್ತಿದೆ. ಪ್ರಶಾಂತ ಹಾಗೂ ಧನಂಜಯ ಆನೆ ನಡುವೆ ಅಂಬಾರಿ ಹೊರಲು ತೀವ್ರ ಸ್ಪರ್ಧೆ ಏರ್ಪಟ್ಟಿತ್ತು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ‘ಆದರೆ ಧನಂಜಯ ಶ್ರೀರಂಗಪಟ್ಟಣ ದಸರಾದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾನೆ. ಸಾಮಾನ್ಯವಾಗಿ ಶ್ರೀರಂಗಪಟ್ಟಣದಲ್ಲಿ ಭಾಗವಹಿಸಿದ ಆನೆಗೆ ಮೈಸೂರಿನಲ್ಲಿ ಅಂಬಾರಿ ಹೊರುವ ಎರಡು ಜವಬ್ದಾರಿ ನೀಡುವುದಿಲ್ಲ. ಹೀಗಾಗಿ ಪ್ರಶಾಂತನೇ ಚಿನ್ನದ ಅಂಬಾರಿ ಹೊರುತ್ತಾನೆ’ ಎಂಬ ಮಾತುಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಚರ್ಚೆಗಳಾಗುತ್ತಿವೆ.ಪ್ರಶಾಂತ ಆನೆಯನ್ನು ಮಾವುತ ಜೆ.ಎ.ಚಿನ್ನಪ್ಪ ಮುಂದುವರೆಸುತ್ತಿದ್ದು, ಧನಂಜಯ ಆನೆಯನ್ನು ಚಿನ್ನಪ್ಪ ಅವರ ಮಗ ಭಾಸ್ಕರ್.ಜೆ.ಸಿ ಮುನ್ನಡೆಸುತ್ತಿದ್ದಾನೆ. ಹೀಗಾಗಿ ತಂದೆ– ಮಗನ ನಡುವೆ ಸ್ಪರ್ಧೆ ಏರ್ಪಟ್ಟಿದೆ.261013-39-817766390