ಮೆಕ್ಕಾ ಒಪ್ಪಂದಕ್ಕೆ ಅಗ್ನಿಪರೀಕ್ಷೆ: ಸೌದಿಯ ಬೆಂಬಲಕ್ಕೆ ನಿಲ್ಲುವವರಾರು?
ಸೌದಿ ಅರೇಬಿಯಾದ ದಕ್ಷಿಣದ ನೆರೆ ರಾಷ್ಟ್ರವಾದ ಯೆಮೆನ್ ಕಳೆದ ಹಲವಾರು ವರ್ಷಗಳಿಂದ ಯುದ್ಧ ನಿರತವಾಗಿದೆ. ಒಂದು ಬದಿಯಲ್ಲಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪಾದ ಹೌತಿಗಳಿದ್ದಾರೆ. ಇನ್ನೊಂದು ಬದಿಯಲ್ಲಿ 2015ರಿಂದಲೂ ಸೌದಿ ನೇತೃತ್ವದ ಮಿಲಿಟರಿ ಸಹಯೋಗದ ಬೆಂಬಲ ಹೊಂದಿರುವ ಯೆಮೆನಿ ಮಿಲಿಟರಿ ಇದೆ. ಈ ಶರತ್ಕಾಲದಲ್ಲಿ ಹಳೆಯ ಯುದ್ಧ ಮರಳಿ ತೀವ್ರಗೊಂಡಿದ್ದು, ಇದು ಇತ್ತೀಚಿನ ತ್ರಿ

ಸೌದಿ ಅರೇಬಿಯಾದ ದಕ್ಷಿಣದ ನೆರೆ ರಾಷ್ಟ್ರವಾದ ಯೆಮೆನ್ ಕಳೆದ ಹಲವಾರು ವರ್ಷಗಳಿಂದ ಯುದ್ಧ ನಿರತವಾಗಿದೆ. ಒಂದು ಬದಿಯಲ್ಲಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪಾದ ಹೌತಿಗಳಿದ್ದಾರೆ. ಇನ್ನೊಂದು ಬದಿಯಲ್ಲಿ 2015ರಿಂದಲೂ ಸೌದಿ ನೇತೃತ್ವದ ಮಿಲಿಟರಿ ಸಹಯೋಗದ ಬೆಂಬಲ ಹೊಂದಿರುವ ಯೆಮೆನಿ ಮಿಲಿಟರಿ ಇದೆ. ಈ ಶರತ್ಕಾಲದಲ್ಲಿ ಹಳೆಯ ಯುದ್ಧ ಮರಳಿ ತೀವ್ರಗೊಂಡಿದ್ದು, ಇದು ಇತ್ತೀಚಿನ ತ್ರಿರಾಷ್ಟ್ರ ಮೈತ್ರಿಕೂಟದ ಮೊದಲ ನೈಜ ಪರೀಕ್ಷೆಯಾಗಿದೆ.ಸೆಪ್ಟೆಂಬರ್ ತಿಂಗಳಲ್ಲಿ, ಹೌತಿಗಳು ಬಾಬ್ ಅಲ್ ಮಾಂದೇಬ್ ಎನ್ನುವ ಕಿರಿದಾದ, ಕೆಂಪು ಸಮುದ್ರ ಮತ್ತು ಗಲ್ಫ್ ಆಫ್ ಏಡನ್ ನಡುವೆ ಹಡಗುಗಳು ಸಾಗಿ ಹೋಗುವ ಪ್ರದೇಶದ ಬಳಿಯ ಮಹತ್ವದ ಸ್ಥಳಗಳನ್ನು ವಶಪಡಿಸಿಕೊಂಡರು. ಅಕ್ಟೋಬರ್ ತಿಂಗಳ ಆರಂಭದಲ್ಲಿ ಸೌದಿ ಯುದ್ಧ ವಿಮಾನಗಳ ನೆರವು ಪಡೆದ ಯೆಮೆನಿ ಸೇನೆ ಪ್ರತಿದಾಳಿ ನಡೆಸಿ, ಈ ಪ್ರದೇಶಗಳನ್ನು ಮರಳಿ ವಶಪಡಿಸಿಕೊಂಡಿತು. ಅಂದಿನಿಂದ ಉಭಯ ದೇಶಗಳಲ್ಲಿ ಕ್ಷಿಪಣಿ ದಾಳಿ ಮಾಡಿ ವಾಯು ದಾಳಿಗಳು ನಡೆಯುತ್ತಿವೆ. ಹೌತಿ ಕ್ಷಿಪಣಿ ದಾಳಿಗೆ ತುತ್ತಾದ ರಿಯಾದ್ ವಿಮಾನ ನಿಲ್ದಾಣ ಅಕ್ಟೋಬರ್ 12ರ ಸೋಮವಾರವೂ ಸ್ಥಗಿತಗೊಂಡಿತ್ತು. ಆ ದಿನವೂ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಾಗುತ್ತಿರುವ ವರದಿಗಳು ಬಂದಿವೆ. ಈ ಕದನ ಅಮೆರಿಕ - ಇರಾನ್ ಯುದ್ಧಕ್ಕಿಂತ ಪ್ರತ್ಯೇಕವಾಗಿದೆ. ಆದರೆ, ಉಭಯ ಬದಿಗಳ ನಾಗರಿಕ ಕುಟುಂಬಗಳಿಗೂ ಭಯ ಮಾತ್ರ ನೈಜ.ಈ ಯುದ್ಧದಲ್ಲಿ ಪರೀಕ್ಷೆಗೊಳಗಾಗುತ್ತಿರುವ ಮೈತ್ರಿಕೂಟವೆಂದರೆ ಮೆಕ್ಕಾ ಒಪ್ಪಂದ. ಮೆಕ್ಕಾ ಡಿಫೆನ್ಸ್ ಅಲಯನ್ಸ್ ಹೆಸರಿನ ಈ ಮೈತ್ರಿಕೂಟ 2026ರಲ್ಲಿ ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನಗಳ ನಡುವಿನ ಒಪ್ಪಂದವಾಗಿದ್ದು, ರಕ್ಷಣೆ ಮತ್ತು ಭದ್ರತಾ ವಿಚಾರದಲ್ಲಿ ಪರಸ್ಪರರ ನೆರವಿಗೆ ಬರುವ ಭರವಸೆ ನೀಡಿತ್ತು. ಇದು ಹಳೆಯದಾದ ಉಭಯ ದೇಶಗಳ ನಡುವಿನ ಒಪ್ಪಂದದ ವಿಸ್ತೃತ ರೂಪವಾಗಿದೆ. ಮೂಲ ಒಪ್ಪಂದವಾದ ಸ್ಟ್ರಾಟಜಿಕ್ ಮ್ಯೂಚುವಲ್ ಡಿಫೆನ್ಸ್ ಅಗ್ರಿಮೆಂಟ್ ಅಥವಾ ಎಸ್ಎಂಡಿಎ ಎನ್ನುವುದು ರಿಯಾದ್ ಮತ್ತು ಇಸ್ಲಾಮಾಬಾದ್ ನಡುವೆ ಸೆಪ್ಟೆಂಬರ್ 2025ರಲ್ಲಿ ದಶಕಗಳ ಸಹಕಾರವನ್ನು ಅಧಿಕೃತಗೊಳಿಸಲು ಮಾಡಿಕೊಂಡ ಒಪ್ಪಂದವಾಗಿತ್ತು. ಎಸ್ಎಂಡಿಎ ಅನ್ನು ಎರಡು ಕುಟುಂಬಗಳ ನಡುವಿನ ಬಾಂಧವ್ಯ ಎಂದುಕೊಂಡರೆ, ಮೆಕ್ಕಾ ಒಪ್ಪಂದವನ್ನು ಅದರ ವಿಸ್ತೃತವಾದ, ನೆರೆಹೊರೆಯನ್ನು ಒಳಗೊಂಡ ಒಪ್ಪಂದ ಎಂದುಕೊಳ್ಳಬಹುದು.2023ರ ಬಳಿಕ ಸಹಯೋಗಿಗಳು ಪರಸ್ಪರ ಆತ್ಮೀಯವಾಗುತ್ತಾ ಬರುತ್ತಿವೆ. ಟರ್ಕಿ ಆಧುನಿಕ ತಂತ್ರಜ್ಞಾನ ಮತ್ತು ಆಯುಧ ನಿರ್ಮಾಣದ ಅನುಭವ ಹೊಂದಿದ್ದರೆ, ಸೌದಿ ಅರೇಬಿಯಾ ಹಣವನ್ನು ಹೊಂದಿದೆ. ಪಾಕಿಸ್ತಾನ ಯುದ್ಧಗಳ ಅನುಭವ ಹೊಂದಿದ್ದು, ವಿದೇಶಗಳಲ್ಲೂ ಅಪಾಯ ಕೈಗೆತ್ತಿಕೊಳ್ಳಬಲ್ಲದು. ಪ್ರತಿಯಾಗಿ ಟರ್ಕಿಗೆ ದೊಡ್ಡ ಪ್ರಾದೇಶಿಕ ಉಪಸ್ಥಿತಿ ಬೇಕಾಗಿದ್ದು, ಸೌದಿ ಅರೇಬಿಯಾಗಿ ಆಮದು ಆಯುಧಗಳ ಬದಲು ತನ್ನದೇ ಸ್ವಂತ ರಕ್ಷಣಾ ಉದ್ಯಮ ಬೇಕಿದೆ. ಪಾಕಿಸ್ತಾನಕ್ಕೆ ತನ್ನ ಆರ್ಥಿಕ ಸಂಕಷ್ಟಗಳಿಂದ ಹೊರಬರಲು ಹಣಕಾಸಿನ ತುರ್ತು ಅಗತ್ಯವಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ಯುದ್ಧ ರಕ್ಷಣೆಗಾಗಿ ವಿದೇಶಗಳನ್ನು ಅವಲಂಬಿಸಿದರೆ ಏನಾಗುತ್ತದೆ ಎನ್ನುವ ಪಾಠವನ್ನು ಅರಬ್ ದೇಶಗಳಿಗೆ ಕಲಿಸಿದ್ದು, ಸೌದಿಯ ರಕ್ಷಣಾ ಉದ್ಯಮದ ತುರ್ತು ಇನ್ನಷ್ಟು ಹೆಚ್ಚಾಯಿತು.ಅಕ್ಟೋಬರ್ ಆರಂಭದಲ್ಲಿ ಮೂರೂ ದೇಶಗಳು ಒಂದು ತುರ್ತು ಸಭೆ ಸೇರಿ, ಜೊತೆಯಾಗಿ ಕಾರ್ಯಾಚರಿಸಲು ನಿರ್ಧರಿಸಿದವು. ಎರಡು ದಿನಗಳ ಬಳಿಕ, ಪಾಕಿಸ್ತಾನಿ ಯುದ್ಧ ವಿಮಾನಗಳು ಯೆಮೆನ್ನಲ್ಲಿ ಸೌದಿಯ ವಾಯು ಕಾರ್ಯಾಚರಣೆಗಳಿಗೆ ನೆರವಾಗಿವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆದರೆ, ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ವರದಿ ಸತ್ಯಕ್ಕೆ ದೂರವಾದುದು ಎಂದಿತು. ಅಕ್ಟೋಬರ್ 8ರ ವೇಳೆಗೆ, ಟರ್ಕಿಯ ವಿದೇಶಾಂಗ ಸಚಿವ ಹಕಾನ್ ಫಿದಾನ್ ತನ್ನದೇ ವ್ಯಾಖ್ಯಾನ ನೀಡಿದ್ದು, ಈ ಒಪ್ಪಂದ ಸದಸ್ಯರನ್ನು ರಕ್ಷಿಸಲು ಏರ್ಪಟ್ಟಿದೆಯೇ ಹೊರತು ದಾಳಿ ಮಾಡಲಲ್ಲ ಎಂದರು. ಟರ್ಕಿಯ ಸೈನಿಕರು ಯುದ್ಧಕ್ಕೆ ತೆರಳುವುದಿಲ್ಲ. ಅಂಕಾರಾದ ಬೆಂಬಲ ದ್ವಿಪಕ್ಷೀಯ ಒಪ್ಪಂದಗಳಡಿಯಲ್ಲಿ ತಾಂತ್ರಿಕ ಮತ್ತು ರಕ್ಷಣಾ ಸಹಕಾರಕ್ಕೆ ಸೀಮಿತವಾಗಲಿದೆ ಎಂದಿದ್ದರು.ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಇದು ಯುದ್ಧ ವಿಫಲವಾಗಿದೆ ಎಂದರ್ಥವಲ್ಲ. ಬದಲಿಗೆ, ಪ್ರತಿಯೊಂದು ದೇಶವೂ ಯಾವ ಮಿತಿಯ ತನಕ ತೆರಳಲಿದೆ ಎನ್ನುವುದನ್ನು ಇದು ತೋರಿಸಿಕೊಟ್ಟಿದೆ. ಈ ಮೈತ್ರಿಕೂಟವನ್ನು ದೀರ್ಘ ವ್ಯಾಪ್ತಿಯ ಮಿಲಿಟರಿ ತಂತ್ರಜ್ಞಾನ ಸಹಕಾರಕ್ಕಾಗಿ ರೂಪಿಸಲಾಗಿದ್ದು, ರಾಜಕೀಯ ಕಾರಣಗಳಿಗಲ್ಲ.ಅಧ್ಯಕ್ಷ ರೆಸಿಪ್ ತಯ್ಯಿಪ್ ಎರ್ದೋಗನ್ ಅವಧಿಯಲ್ಲಿ, ಟರ್ಕಿ ಯೆಮೆನನ್ನು ತನ್ನ ಪ್ರಭಾವಕ್ಕಾಗಿ ಸೌದಿ ಅರೇಬಿಯಾ ಜೊತೆ ಸ್ಪರ್ಧಿಸುವ ಸ್ಥಳವಾಗಿ ಪರಿಗಣಿಸಿತ್ತು. ಅದು ಹೌತಿಗಳನ್ನು ದೀರ್ಘಕಾಲದಿಂದಲೂ ವಿರೋಧಿಸುತ್ತಾ ಬಂದಿದ್ದು, ಬಹಿರಂಗವಾಗಿಯೇ ಸೌದಿ ಬೆಂಬಲಿತ ಮೈತ್ರಿಕೂಟವನ್ನು ಬೆಂಬಲಿಸಿದೆ. ಆದರೆ, ಟರ್ಕಿ ತನ್ನ ಪಡೆಗಳನ್ನಾಗಲಿ ಅಥವಾ ಪ್ರಮುಖ ಉಪಕರಣಗಳನ್ನಾಗಲಿ ಕಳುಹಿಸಿಲ್ಲ. ಬದಲಿಗೆ, ಪೂರೈಕೆ, ಸಾಗಾಣಿಕೆ ಮತ್ತು ಗುಪ್ತಚರ ನೆರವನ್ನು ಅಪರೂಪಕ್ಕೆ ಒದಗಿಸಿದೆ.ಆದರೆ, ಪಾಕಿಸ್ತಾನದ ಕಥೆ ಹಳೆಯದಾಗಿದೆ. ಅದು 1960ರ ದಶಕದಿಂದಲೂ ಸೌದಿ ಅರೇಬಿಯಾದ ದಕ್ಷಿಣದ ಗಡಿಯನ್ನು ಕಾಯಲು ನೆರವಾಗುತ್ತಾ ಬಂದಿದೆ. 1969ರಲ್ಲಿ, ಪಾಕಿಸ್ತಾನಿ ಪೈಲಟ್ಗಳು ಸೌದಿ ವಾಯು ಪಡೆಯ ಇಂಗ್ಲಿಷ್ ಇಲೆಕ್ಟ್ರಿಕ್ ಲೈಟ್ನಿಂಗ್ ಯುದ್ಧ ವಿಮಾನಗಳನ್ನು ಚಲಾಯಿಸಿ, ಯೆಮೆನ್ನ ಹದ್ರಾಮೌಟ್ ಪ್ರದೇಶದ ಬಳಿಯ ಅಲ್ ವಾದಿಯಾ ಗಡಿ ಪ್ರದೇಶದಲ್ಲಿ ದಕ್ಷಿಣ ಯೆಮೆನಿ ಸೇನೆಯ ಮೇಲೆ ಬಾಂಬ್ ದಾಳಿ ನಡೆಸಿತ್ತು. ಈಗ ಪಾಕಿಸ್ತಾನ ತನ್ನ ಹಸ್ತಕ್ಷೇಪವನ್ನು ನಿರಾಕರಿಸುವ ರೀತಿಯಲ್ಲೇ ಆಗಲೂ ಪಾಕಿಸ್ತಾನದ ಮಿಲಿಟರಿ ಆಡಳಿತಗಾರ ಯಾಹ್ಯಾ ಖಾನ್ ತನ್ನ ದೇಶದ ಪಾಲ್ಗೊಳ್ಳುವಿಕೆಯನ್ನು ತಳ್ಳಿಹಾಕಿದ್ದರು.ಪಾಕಿಸ್ತಾನ ಮೌನವಾಗಿ ಬೆಂಬಲಿಸಿ, ಬಹಿರಂಗವಾಗಿ ನಿರಾಕರಿಸುವುದೇಕೆ? ಇದಕ್ಕೆ ಒಂದು ಕಾರಣ ಇರಾನ್. ಪಾಕಿಸ್ತಾನ ತನ್ನ ಪಶ್ಚಿಮದ ನೆರೆಹೊರೆಯಲ್ಲಿ ಗಡಿ ಉದ್ವಿಗ್ನತೆ ಹೊಂದಿದೆ. ಟೆಹರಾನ್ ಯುದ್ಧ ತೀವ್ರತೆಯ ವಿರುದ್ಧ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಒಪ್ಪಂದ ರೂಪುಗೊಂಡ ಬಳಿಕವಂತೂ ಅಪನಂಬಿಕೆ ತೀವ್ರಗೊಂಡಿದ್ದು, ಇರಾನ್ ಮತ್ತು ಅಮೆರಿಕದ ನಡುವೆ ಪಾಕಿಸ್ತಾನದ ಮಧ್ಯಸ್ಥಿಕೆಯ ಪ್ರಾಮಾಣಿಕತೆಯ ಕುರಿತು ಅನುಮಾನ ವ್ಯಕ್ತಪಡಿಸಿದೆ. ಅಕ್ಟೋಬರ್ 10ರಂದು, ಇರಾನ್ ಸಂಸತ್ ಸದಸ್ಯ ಮೊಹ್ಸೆನ್ ಜ಼ಂಗಾನೆಹ್ ಅವರು ಪಾಕಿಸ್ತಾನದ ಪ್ರಧಾನಿಯ ಸಾಮಾಜಿಕ ಜಾಲತಾಣದ ಪೋಸ್ಟ್ಗಳನ್ನೂ ಅಮೆರಿಕನ್ ಅಧಿಕಾರಿ ಸ್ಟೀವ್ ವಿಟ್ಕಾಫ್ ಬರೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಪಾಕಿಸ್ತಾನ ತನ್ನನ್ನು ತಾನು ಜಗತ್ತಿನಾದ್ಯಂತ ಮುಸ್ಲಿಂ ಹಿತಾಸಕ್ತಿಗಳ ರಕ್ಷಕನಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ.ಇದಕ್ಕೆ ಇನ್ನೊಂದು ಕಾರಣವೆಂದರೆ ಮುಸ್ಲಿಂ ಜಗತ್ತಿನಲ್ಲಿ ಸೌದಿ ನಾಯಕತ್ವಕ್ಕೆ ಇರುವ ಗೌರವ. ಸೌದಿ ನಾಯಕತ್ವಕ್ಕೆ ಪರ್ಯಾಯ ಹುಡುಕಲು 2019ರಲ್ಲಿ ಮಲೇಷ್ಯಾದಲ್ಲಿ ನಡೆಸಿದ ಸಭೆಗೆ ಪಾಕಿಸ್ತಾನ ಗೈರಾಗಿತ್ತು. ಇದರೊಡನೆ, ಪಾಕಿಸ್ತಾನ ರಿಯಾದ್ ತನ್ನನ್ನು ಸ್ವತಂತ್ರನಾಗಿ ಪರಿಗಣಿಸಬೇಕು ಎಂದೂ ಬಯಸುತ್ತಿದೆ. ನಾಗರಿಕ ಸರ್ಕಾರಕ್ಕಿಂತಲೂ ಹೆಚ್ಚಾಗಿ ಮಿಲಿಟರಿ ನಾಯಕತ್ವ ಈ ಸಂಬಂಧವನ್ನು ನಿಭಾಯಿಸಿದ್ದು, ಆಗಾಗ್ಗೆ ಸೌದಿಗೆ ಭೇಟಿ ನೀಡಿದ್ದಾರೆ. ಪಾಕಿಸ್ತಾನದ ಈಗಿನ ಸೇನಾ ಮುಖ್ಯಸ್ಥ ಮತ್ತು ಚೀಫ್ ಆಫ್ ಡಿಫೆನ್ಸ್ ಫೋರ್ಸಸ್ ಆಸಿಮ್ ಮುನೀರ್ ಅವರು ಜೂನ್ 2025ರ ಬಳಿಕ ವಿದೇಶೀ ಸಂಪರ್ಕವನ್ನು ವಿಸ್ತರಿಸಿದ್ದಾರೆ.2015ರಲ್ಲಿ, ಪಾಕಿಸ್ತಾನಿ ಸಂಸತ್ತು ಯೆಮೆನ್ ಯುದ್ಧದಲ್ಲಿ ಪಾಲ್ಗೊಳ್ಳುವುದರ ವಿರುದ್ಧ ಮತ ಚಲಾಯಿಸಿತ್ತು. ಇಷ್ಟಾದರೂ, 2018ರಲ್ಲಿ, ಆ ಕಾಲದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರ ಅವಧಿಯಲ್ಲಿ 1,000ಕ್ಕೂ ಹೆಚ್ಚು ಯೋಧರು ಸೇರ್ಪಡೆಗೊಂಡು, 1,500ಕ್ಕೂ ಹೆಚ್ಚು ಜನರು ಸೌದಿಯಲ್ಲಿದ್ದರು. ಪಾಕಿಸ್ತಾನಿ ಸೇನೆ ಬಳಿಕ ತನ್ನ ಪಾತ್ರವನ್ನು ಕಡಿಮೆಗೊಳಿಸಿತು. ಅಧಿಕೃತವಾಗಿ ಪಾಕಿಸ್ತಾನಿ ಯೋಧರು ಸೌದಿ ನೆಲವನ್ನು ಕಾಯುತ್ತಾರೆ. ಅನಧಿಕೃತವಾಗಿ, ಪಾಕಿಸ್ತಾನ ಯೆಮೆನ್ ಮತ್ತು ಬಹರೇನ್ಗಳಲ್ಲಿ ಸೌದಿಯ ಕ್ರಮಗಳನ್ನು ಬೆಂಬಲಿಸಿದೆ. ಬಹರೇನ್ನಲ್ಲಿ 2011ರ ಪ್ರತಿಭಟನೆಯ ಸಂದರ್ಭದಲ್ಲಿ ರಿಯಾದ್ ತನ್ನ ಸೇನೆಯನ್ನು ಕಳುಹಿಸಿದ್ದು, ಪಾಕಿಸ್ತಾನಿಯರು ಅಲ್ಲಿ ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಾರೆ.ಹೌತಿ ದಾಳಿಗಳು ಈಗ ನಿರಂತರವಾಗಿ ಸೌದಿಯ ಮೂಲಭೂತ ವ್ಯವಸ್ಥೆಗಳನ್ನು ಗುರಿಯಾಗಿಸುತ್ತಿವೆ. ಇಂತಹ ಸಂದರ್ಭದಲ್ಲಿ, ಎಸ್ಎಂಡಿಎ ಎಂಬ ಹಳೆಯ ಒಪ್ಪಂದಕ್ಕೆ ಹೊಸ ಮಹತ್ವ ಬಂದಿದೆ.(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)