ಮೈಸೂರು ಯುವ ದಸರಾಗೆ ಚಾಲನೆ ನೀಡಿದ ನಟ ಪ್ರಭುದೇವ
ಮೈಸೂರು: ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಟ, ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಚಾಲನೆ ನೀಡಿದರು. ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ರೇಷ್ಮೆ ಶರ್ಟ್ ಮತ್ತು ಪಂಚೆ ಧರಿಸಿದ್ದ ಪ್ರಭುದೇವ ಅವರ ಸಾಂಸ್ಕೃತಿಕ ಲುಕ್ ಅಭಿಮಾನಿಗಳ ಗಮನ ಸೆಳೆಯಿತು. ಎಲ್ಲರಿಗೂ ದಸರಾ ಶುಭಾಶಯ ತಿಳಿಸಿದ ನಟ, ವೇದಿಕೆ ಮೇಲೆ ಸ್ಟೆಪ್ ಹಾಕಿ ಪ್ರೇಕ್ಷಕರಿಗೆ ರಸ

ಮೈಸೂರು: ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಟ, ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಚಾಲನೆ ನೀಡಿದರು. ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ರೇಷ್ಮೆ ಶರ್ಟ್ ಮತ್ತು ಪಂಚೆ ಧರಿಸಿದ್ದ ಪ್ರಭುದೇವ ಅವರ ಸಾಂಸ್ಕೃತಿಕ ಲುಕ್ ಅಭಿಮಾನಿಗಳ ಗಮನ ಸೆಳೆಯಿತು. ಎಲ್ಲರಿಗೂ ದಸರಾ ಶುಭಾಶಯ ತಿಳಿಸಿದ ನಟ, ವೇದಿಕೆ ಮೇಲೆ ಸ್ಟೆಪ್ ಹಾಕಿ ಪ್ರೇಕ್ಷಕರಿಗೆ ರಸದೌತಣ ನೀಡಿದರು. ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಯತೀಂದ್ರ ಸಿದ್ದರಾಮಯ್ಯ, ಯುವಜನರು ತಮ್ಮ ವೈಯಕ್ತಿಕ ಜೀವನದಲ್ಲಿ ಸಾಧನೆ ಮಾಡುವುದರ ಜೊತೆಗೆ ಸಮಾಜದ ಉದ್ಧಾರ ಮತ್ತು ದೇಶದ ಉಜ್ವಲ ಭವಿಷ್ಯಕ್ಕೆ ಶ್ರಮಿಸಬೇಕು. ಮೈಸೂರು ದಸರಾದಲ್ಲಿ ಅತಿ ಹೆಚ್ಚು ಜನರನ್ನು ಆಕರ್ಷಿಸುವ ಈ ಯುವದಸರಾ ಕಾರ್ಯಕ್ರಮವು ಇಡೀ ಭಾರತದಲ್ಲೇ ಅತ್ಯಂತ ದೊಡ್ಡ ಮಟ್ಟದಲ್ಲಿ ಸರ್ಕಾರದ ವತಿಯಿಂದ ಆಯೋಜಿಸಲ್ಪಡುವ ಏಕೈಕ ಸಂಗೀತ ಕನ್ಸರ್ಟ್ ಆಗಿದೆ ಎಂದರು. ಚಾಮುಂಡೇಶ್ವರಿ ಕ್ಷೆತ್ರದ ಶಾಸಕ ಜಿ.ಟಿ ದೇವೇಗೌಡ ಅವರು ಮಾತನಾಡಿ, ದೇಶದ ನಾನಾ ಮೂಲೆಗಳಿಂದ ಅತ್ಯಂತ ಪ್ರಸಿದ್ಧ ನೃತ್ಯ ಸಂಯೋಜಕರು, ನಟರು, ನಿರ್ದೇಶಕರು ಹಾಗೂ ಕಲಾವಿದರನ್ನು ಆಹ್ವಾನಿಸಿ ಮೈಸೂರಿನ ಜನತೆಗೆ ಮನರಂಜನೆ ನೀಡಲು ಈ ವೇದಿಕೆ ಕಲ್ಪಿಸಲಾಗಿದೆ. ನವರಾತ್ರಿಯಲ್ಲಿ ಪ್ರತಿಯೊಬ್ಬರೂ ದೇವರಿಗೆ ಮಳೆ ಬರಲಿ ಎಂದು ಪ್ರಾರ್ಥಿಸಬೇಕು. ಎಲ್ಲರೂ ಪ್ರಾರ್ಥಿಸಿದರೆ ಮಳೆ ಬರುತ್ತದೆ ಮತ್ತು ರೈತರು ಹಾಗೂ ಜನಸಾಮಾನ್ಯರಿಗೆ ಕುಡಿಯುವ ನೀರು ಸಿಗುತ್ತದೆ ಎಂದರು. ಮೈಸೂರು ನಗರದಲ್ಲಿ ಗಣಪತಿ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮಾಡಲಾಗಿದ್ದು, ಎಲ್ಲೆಲ್ಲೂ 16 ರಿಂದ 21 ಅಡಿ ಎತ್ತರದ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಯಾವುದೇ ಗಲಭೆ ಇಲ್ಲದೆ ಗಣಪತಿ ಹಬ್ಬವು ಯಶಸ್ವಿಯಾಗಿ ನಡೆದಿರುವುದು ಮೈಸೂರು ನಗರಕ್ಕೆ ಕೀರ್ತಿ ತಂದಿದೆ ಎಂದು ತಿಳಿಸಿದರು. ಈ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಪೊಲೀಸ್ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದು, ಅವರಿಗೆ ಅಭಿವೃದ್ಧಿಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು. ಯುವ ದಸರಾ, ಜಂಬೂ ಸವಾರಿ, ಫ್ಲವರ್ ಶೋ ಮತ್ತು ಕುಸ್ತಿ ಪಂದ್ಯಾವಳಿಗಳು ಎಲ್ಲವೂ ಶಾಂತಿಯುತವಾಗಿ ನಡೆಯಬೇಕು. ದೇಶ-ವಿದೇಶಗಳಿಂದ ಬರುವಂತಹ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಡಿ.ರವಿಶಂಕರ್, ಎಂಎಲ್ಸಿಗಳಾದ ಸಿ.ಎನ್.ಮಂಜೇಗೌಡ, ರಘು ಆರ್., ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಕೇಶ್ ಕುಮಾರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ.ರಂಗಸ್ವಾಮಿ, ಗಾಣಿಗ ಅಭಿವೃದ್ಧಿ ನಿಗಮ ಅನಂತ್, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಐಜಿಪಿ (ದಕ್ಷಿಣ ವಲಯ) ಡಾ.ಬೋರಲಿಂಗಯ್ಯ, ಮೈಸೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬೀರಿಹುಂಡಿ ಬಸವಣ್ಣ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.