ಡಿಕೆಶಿ ಹಿಡಿದೆಳೆದ ರಾಹುಲ್: ನಿಜಕ್ಕೂ ನಡೆದಿದ್ದೇನು?
ದೇಶದ ಆಡಳಿತಾತ್ಮಕ ರಾಜಧಾನಿಯಾಗಿದ್ದ ದೆಹಲಿ ಇತ್ತೀಚೆಗೆ ಪ್ರತಿಭಟನೆಯ ನವೀನ ಸ್ವರೂಪ ಮತ್ತು ಪ್ರಭುತ್ವದ ದಮನಕಾರಿ ಪ್ರಯೋಗಗಳ ರಾಜಧಾನಿಯಾಗಿಯೂ ಜಗತ್ತಿನ ಗಮನ ಸೆಳೆಯುತ್ತಿದೆ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು 2026ರ ಮೇ 15ರಂದು ವಿಚಾರಣೆಯೊಂದರ ವೇಳೆ ಯುವಜನಾಂಗವನ್ನು 'ಜಿರಳೆ' ಎಂದು ಮೌಖಿಕವಾಗಿ ಛೇಡಿಸಿದಾಗಿನಿಂದ ವಿವಾದ ತರಹೇವಾರಿ ವೇಷಗಳ

ದೇಶದ ಆಡಳಿತಾತ್ಮಕ ರಾಜಧಾನಿಯಾಗಿದ್ದ ದೆಹಲಿ ಇತ್ತೀಚೆಗೆ ಪ್ರತಿಭಟನೆಯ ನವೀನ ಸ್ವರೂಪ ಮತ್ತು ಪ್ರಭುತ್ವದ ದಮನಕಾರಿ ಪ್ರಯೋಗಗಳ ರಾಜಧಾನಿಯಾಗಿಯೂ ಜಗತ್ತಿನ ಗಮನ ಸೆಳೆಯುತ್ತಿದೆ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು 2026ರ ಮೇ 15ರಂದು ವಿಚಾರಣೆಯೊಂದರ ವೇಳೆ ಯುವಜನಾಂಗವನ್ನು 'ಜಿರಳೆ' ಎಂದು ಮೌಖಿಕವಾಗಿ ಛೇಡಿಸಿದಾಗಿನಿಂದ ವಿವಾದ ತರಹೇವಾರಿ ವೇಷಗಳಲ್ಲಿ ವಿಜೃಂಭಿಸುವುದನ್ನು ಕಾಣುತ್ತಿದ್ದೇವೆ. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ, ವಿವಾದ ಹಾಗೂ ವಿಭಿನ್ನ ವ್ಯಾಖ್ಯಾನಗಳಿಗೆ ಕಾರಣವಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿನ ಟ್ರೋಲ್ಗಳು ಜೆನ್-ಝೀ ಸಮುದಾಯದ ಸೃಜನಶೀಲ ಅಭಿವ್ಯಕ್ತಿಗೆ, ಶಕ್ತಿಗೆ ವ್ಯಾಪಕ ವೇದಿಕೆ ಒದಗಿಸಿತು.ಇದನ್ನೇ ಅಸ್ತ್ರವಾಗಿಸಿಕೊಂಡ ಅಭಿಜಿತ್ ದೀಪ್ಕೆ ಎಂಬ ಯುವಕ 2026ರ ಮೇ 16ರಂದು ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಎಂಬ ಆನ್ಲೈನ್ ವ್ಯಂಗ್ಯ ವೇದಿಕೆ ಮತ್ತು ರಾಜಕೀಯ ಚಳವಳಿಯನ್ನು ಹುಟ್ಟುಹಾಕಿದ್ದು ಈಗ ಹಳೆಯ ಕಥೆಯಾಗಿದೆ. ಅದರ ಮುಂದುವರಿದ ಭಾಗದ ಬೆಳವಣಿಗೆಗಳು ಊಹಾತೀತ ಆಯಾಮಗಳನ್ನು ಪಡೆದುಕೊಳ್ಳುತ್ತಿವೆ; ದೇಶದುದ್ದಕ್ಕೂ ವಿಸ್ಮಯದ ಜೊತೆಗೆ ಹೊಸ ಭರವಸೆಯ ಹುಟ್ಟಿಗೂ ಕಾರಣವಾಗಿವೆ. ಕೇಂದ್ರದಲ್ಲಿರುವ ಆಡಳಿತ ಪಕ್ಷ, ಅದರ ನೇತಾರರು ಮತ್ತು ಅಭಿಮಾನಿಗಳಲ್ಲಿ ದೆಹಲಿಯ ಆಗುಹೋಗುಗಳು ಆತಂಕ ಮೂಡಿಸಿರುವುದು ಕೂಡ ಅಷ್ಟೇ ನಿಜ. ಈ ನಡುವೆ ನಿಸ್ತೇಜಗೊಂಡಿದ್ದ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಹಿಂದೆಂದೂ ಕಾಣದ ಉತ್ಸಾಹದಲ್ಲಿ ಗರಿಗೆದರತೊಡಗಿದೆ.ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸುಪ್ರೀಂ ಕೋರ್ಟ್ ಚಲೋ’ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಹಿಡಿದೆಳೆದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೊವನ್ನು ಮುಂದಿಟ್ಟುಕೊಂಡು ಭಾರತೀಯ ಜನತಾ ಪಕ್ಷದ ನಾಯಕರು ರಾಹುಲ್ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅವರು ಕರ್ನಾಟಕದ ನಾಯಕರನ್ನು ಅವಮಾನಿಸಿದ್ದಾರೆ ಮತ್ತು ಇದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎನ್ನುವಷ್ಟರ ಮಟ್ಟಿಗೆ ಈ ವಿವಾದ ಮುನ್ನೆಲೆ ಬಂದಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಂತೂ ಈ ಕುರಿತು ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ಪಕ್ಷವು ಭವಿಷ್ಯದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದಲೇ ದೂರ ತಳ್ಳಲಿದೆ ಎಂಬುದಕ್ಕೆ ಇದು ಮುನ್ಸೂಚನೆ’ ಎಂದು ಆ ಘಟನೆಗೆ ರಾಜಕೀಯ ಬಣ್ಣ ಬೆರೆಸಿದ್ದಾರೆ.ಟೀಕಾಕಾರರ ಮಾತುಗಳನ್ನು ಸಾರಾಸಗಟಾಗಿ ತಿರಸ್ಕರಿಸಲೂ ಆಗದ, ಸ್ವೀಕರಿಸಲೂ ಆಗದ ಸಂದಿಗ್ಧ ಪ್ರಸಂಗವಿದು. ಹಿಂದೆಯೂ ಈ ರಾಜ್ಯದ ನಾಯಕರು ದೆಹಲಿ ದೊರೆಗಳ ದರ್ಶನಕ್ಕಾಗಿ ಕಾದು, ದರ್ಶನ ಭಾಗ್ಯ ಸಿಗದೆ ವಾಪಸಾದ ಪ್ರಸಂಗಗಳ ಬಗ್ಗೆ ಕೇಳಿದ್ದೇವೆ. ಬಳಿಕ ಪಕ್ಷದ ಪ್ರಮುಖರನ್ನು ಭೇಟಿಯಾಗಿ, ಆ ಭೇಟಿಯನ್ನೇ ರಾಜಕೀಯ ಯಶಸ್ಸಿನಂತೆ ಬಿಂಬಿಸುವ ಹೇಳಿಕೆಗಳನ್ನೂ ನೋಡಿದ್ದೇವೆ. ಬಹುಶಃ ಹೈಕಮಾಂಡ್ ರಾಜಕಾರಣದಲ್ಲಿ ಕಾಯುವುದೂ ಒಂದು ಅರ್ಹತೆ, ಒಂದು ಕಲೆ! ಈ ಹಿನ್ನೆಲೆಯೇ ವಿಪಕ್ಷಗಳ ಆರೋಪಗಳಿಗೆ ಬೆನ್ನೆಲುಬು. ಈಗಿನ ಪ್ರಕರಣ ಕೂಡ ಅದೇ ಹಳೆಯ ನಾಟಕದ ಹೊಸ ದೃಶ್ಯದಂತೆ ಕಾಣಿಸಿದರೆ ಯಾರಿಗೂ ಆಶ್ಚರ್ಯ ಆಗುವುದಿಲ್ಲ.ಹಾಗಾದರೆ ನಿಜಕ್ಕೂ ಅಂದು ಅಲ್ಲಿ ನಡೆದಿದ್ದೇನು? ಆ ವಿಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ವಿರೋಧ ಪಕ್ಷಗಳು ಆರೋಪಿಸುವ ರೀತಿಯಲ್ಲಿ ರಾಹುಲ್ ಗಾಂಧಿಯವರು ಮುಖ್ಯಮಂತ್ರಿಯನ್ನು ಮುದ್ದಾಂ ಅವಮಾನಿಸಿದ್ದಾಗಲೀ, ಕರುನಾಡಿನ ಘನತೆಗೆ ಧಕ್ಕೆ ತಂದದ್ದಾಗಲೀ ಗೋಚರಿಸುವುದಿಲ್ಲ. ಆ ಸಂದರ್ಭದಲ್ಲಿ ಜನದಟ್ಟಣೆಯ ನಡುವೆ ವಿಪರೀತ ತಳ್ಳಾಟ ನೂಕಾಟ ನಡೆದಿದ್ದನ್ನು ಗಮನಿಸಬಹುದು. ರಾಹುಲ್ ಗಾಂಧಿಗೆ ಹಾದಿ ಸುಗಮ ಮಾಡುವ ಭರದಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಎಂದಿನ ಸ್ವಭಾವದಂತೆ ಬಾಡಿಗಾರ್ಡ್ ಶೈಲಿಯಲ್ಲಿ ಮುಂದೆ ನುಗ್ಗಿ ಅಕ್ಕಪಕ್ಕದವರನ್ನು ತುಸು ಒರಟಾಗಿಯೇ ದೂಡಲು ಪ್ರಯಾಸಪಡುತ್ತಾರೆ. ಅಂತಹ ಗೊಂದಲದ ವಾತಾವರಣದಲ್ಲಿಯೂ ಇದನ್ನು ಗಮನಿಸಿದ ರಾಹುಲ್ ತಮ್ಮ ಮುಖ್ಯಮಂತ್ರಿಯ ವರ್ತನೆಯನ್ನು ತಡೆಯಲೆಂದೇ ತಕ್ಷಣಕ್ಕೆ ಸಿಕ್ಕ ಡಿಕೆಶಿಯ ಜುಬ್ಬ ಹಿಡಿದು ಹಿಂದಕ್ಕೆ ಎಳೆಯುತ್ತಾರೆ. ಅದೇ ಸಮಯದಲ್ಲಿ ಶಾಂತಿ ಶಾಂತಿ ಎಂಬಂತೆ ರಾಹುಲ್ ಮತ್ತು ಡಿಕೆಶಿ ಇಬ್ಬರೂ ಕೈಯಲ್ಲಿಯೇ ಸನ್ನೆ ಮಾಡಿದ್ದನ್ನೂ ಗಮನಿಸಬಹುದು.ಇನ್ನು, ಈ ದೃಶ್ಯವನ್ನು ಮಾಧ್ಯಮಗಳು ತಿರುಚಿವೆ, ಪ್ರತಿಪಕ್ಷದ ಕೈವಾಡವಿದೆ ಎಂಬ ಸಮರ್ಥನೆಗಳು ಕಾಂಗ್ರೆಸ್ ಪಕ್ಷ ಮತ್ತು ಅದರ ಅಭಿಮಾನಿ ವೃಂದದಿಂದ ಕೇಳಿಬಂದರೆ ಅದೂ ರಾಜಕಾರಣದ ಭಾಗ ಎನ್ನಿಸುವುದು ಸಹಜ. ಮಾತುಗಳು ಕೇಳಿಸದ ತುಣುಕು ವಿಡಿಯೊದಲ್ಲಿ ಕಾಣಿಸಿದ್ದೆಲ್ಲ ಸತ್ಯವೆಂದೂ ಹೇಳಲಾಗದು. ಹಾಗೆಯೇ ಅಲ್ಲಿ ಕಾಣಿಸಿದ್ದು ಅಷ್ಟು ಮುಖ್ಯವಲ್ಲವೆಂದು ತಳ್ಳಿಹಾಕಲೂ ಆಗದು. ಆದರೆ, ಅದರಿಂದ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ಬೇಕಲ್ಲವೇ?, ರಾಜ್ಯದ ನಾಯಕರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಹೈಕಮಾಂಡ್ ಪ್ರಭುಗಳಿಗೆ ಶರಣಾಗಲಿ, ಅವರ ಅಂಗರಕ್ಷಕ ಕಾರ್ಯ ನಿರ್ವಹಿಸಲಿ; ಆದರೆ ಅದಕ್ಕಾಗಿ ರಾಜ್ಯದ ಸ್ವಾಭಿಮಾನವನ್ನು ಬಲಿ ಕೊಡಬಾರದಲ್ಲವೇ?ಪಕ್ಷದೊಳಗಿನ ಅಧಿಕಾರದ ಸಮೀಕರಣಗಳನ್ನು ಸರಿಪಡಿಸಿಕೊಳ್ಳಲು ದೆಹಲಿಗೆ ಹೋಗುವ ನಾಯಕರು, ಅಲ್ಲಿನ ರಾಜಕೀಯ ವರಿಷ್ಠರ ಕನಸುಗಳನ್ನು ನನಸು ಮಾಡಲು ಹೆಣಗುತ್ತಾರೆ. ಈ ಪ್ರಯತ್ನದಲ್ಲಿ ತಮ್ಮದೇ ಘನತೆಯನ್ನು ಕಳೆದುಕೊಂಡರೆ, ಅದನ್ನು ಸಾಧನೆ ಎಂದು ಕರೆಯಬೇಕೋ ಶರಣಾಗತಿ ಎಂದು ಕರೆಯಬೇಕೋ? ಮುಖ್ಯಮಂತ್ರಿ ಸ್ಥಾನವೆಂದರೆ ಪಕ್ಷದ ವರಿಷ್ಠರ ಕೃಪೆಯಿಂದ ದೊರೆತ ಖಾಸಗಿ ಗದ್ದುಗೆಯಲ್ಲ, ಅದು ಜನಾದೇಶದಿಂದ ಬಂದ ಸಾರ್ವಜನಿಕ ಹೊಣೆಗಾರಿಕೆ ಎಂಬುದನ್ನು ಮರೆಯಬಾರದು.ರಾಜಕಾರಣದಲ್ಲಿ ವರಿಷ್ಠರಿಗೆ ಗೌರವ ಕೊಡುವುದು ತಪ್ಪಲ್ಲ. ಆದರೆ, ಗೌರವಕ್ಕೂ ವಿಧೇಯತೆಗೂ, ದಾಸ್ಯಕ್ಕೂ ನಡುವೆ ಸೂಕ್ಷ್ಮವಾದ ಗೆರೆಯಿದೆ. ಆ ಗೆರೆ ಎಲ್ಲಿ ಮುಗಿಯುತ್ತದೆ, ಎಲ್ಲಿ ಆರಂಭವಾಗುತ್ತದೆ ಎಂಬುದನ್ನು ಅಧಿಕಾರದಲ್ಲಿರುವವರೇ ನಿರ್ಧರಿಸಬೇಕು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ರಾಜ್ಯದ ಚುನಾಯಿತ ಮುಖ್ಯಮಂತ್ರಿಯೆಂದರೆ ಅವರು ಕೋಟ್ಯಂತರ ಜನರ ಪ್ರಾತಿನಿಧ್ಯದ ಹೊಣೆ ಹೊತ್ತಿರುವವರು. ಹಾಗಾಗಿ ಆ ಹುದ್ದೆಗೆ ತನ್ನದೇ ಆದ ಘನತೆ, ಗೌರವ ಇದ್ದೇ ಇರುತ್ತದೆ. ಆ ಪ್ರಜ್ಞೆ ಪ್ರಾಥಮಿಕವಾಗಿ ಆ ಹುದ್ದೆ ಹೊಂದಿದವರಿಗೆ ಇರಬೇಕಾಗುತ್ತದೆ. ಮುಖ್ಯಮಂತ್ರಿ ಪದವಿಗೆ ಏರಿದ ನಂತರ ಅತಿಯಾದ ಉಮೇದಿಯಲ್ಲಿರುವ ಡಿ.ಕೆ.ಶಿವಕುಮಾರ್ ನಡೆನುಡಿಗಳು ಅದೇಕೋ ಆ ಹುದ್ದೆ ಅಪೇಕ್ಷಿಸುವ ಗಜ ಗಾಂಭೀರ್ಯವನ್ನು ಇನ್ನೂ ಧರಿಸಿದಂತೆ ತೋರುತ್ತಿಲ್ಲ. ಅವರ ನಡವಳಿಕೆಯಲ್ಲಿ ಸೌಜನ್ಯ, ಸಭ್ಯತೆ ಇಣುಕಿಯೂ ಹಾಕುವುದಿಲ್ಲ. ಮುಖ್ಯಮಂತ್ರಿಯ ದೇಹಭಾಷೆ, ವೇದಿಕೆಗಳಲ್ಲಿನ ವರ್ತನೆ, ಮಾಧ್ಯಮದೊಂದಿಗಿನ ಸಂವಹನಗಳು ಸಾಕಷ್ಟು ತಿದ್ದುಪಡಿ ಬಯಸುತ್ತವೆ. ಆ ನಿಟ್ಟಿನಲ್ಲಿ ಅವರ ಆಪ್ತ ವರ್ಗ ಸೂಕ್ತ ಸಲಹೆ ನೀಡದಿದ್ದರೆ ಮುಖ್ಯಮಂತ್ರಿ ಇದೇ ರೀತಿ ಟೀಕಾಕಾರರ ಬಾಯಿಗೆ ಸ್ವಾದಿಷ್ಟ ಆಹಾರವಾಗುವುದರಲ್ಲಿ ಸಂದೇಹವಿಲ್ಲ!