ಚಾಮರಾಜನಗರ| ಗೌರವಧನ ₹15 ಸಾವಿರಕ್ಕೆ ಹೆಚ್ಚಿಸಿ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಚಾಮರಾಜನಗರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗೌರವಧನ ಹಾಗೂ ಪ್ರೋತ್ಸಾಹಧನ ಸೇರಿಸಿ ಮಾಸಿಕ ₹ 15 ಸಾವಿರ ವೇತನ ನೀಡಬೇಕು, ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಗುಣಮಟ್ಟದ ಮೊಬೈಲ್ ಫೋನ್ ಒದಗಿಸಬೇಕು, ತಾಂತ್ರಿಕ ದೋಷಗಳನ್ನು ಬಗೆಹರಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ

ಚಾಮರಾಜನಗರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗೌರವಧನ ಹಾಗೂ ಪ್ರೋತ್ಸಾಹಧನ ಸೇರಿಸಿ ಮಾಸಿಕ ₹ 15 ಸಾವಿರ ವೇತನ ನೀಡಬೇಕು, ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಗುಣಮಟ್ಟದ ಮೊಬೈಲ್ ಫೋನ್ ಒದಗಿಸಬೇಕು, ತಾಂತ್ರಿಕ ದೋಷಗಳನ್ನು ಬಗೆಹರಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.ಇದಕ್ಕೂ ಮುನ್ನ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂದೆ ಜಮಾಯಿಸಿದ ಆಶಾ ಕಾರ್ಯಕರ್ತೆಯರು ಮೆರವಣಿಗೆ ಮೂಲಕ ಭುವನೇಶ್ವರಿ ವೃತ್ತದ ಮಾರ್ಗವಾಗಿ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನ ಪ್ರವೇಶಿಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಿಯದರ್ಶಿನಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಆಶಾ ಕಾರ್ಯಕರ್ತೆಯರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು ಗೌರವಧನ ಹೆಚ್ಚಳ ಮಾಡಬೇಕು, ಎನ್ಎಚ್ಎಂ ಮಾರ್ಗಸೂಚಿಗೆ ವಿರುದ್ಧವಾಗಿ ಕೆಲಸ ಮಾಡಿಸಿಕೊಳ್ಳಲು ಅನಗತ್ಯ ಒತ್ತಡ ಹೇರಬಾರದು, ಕೇಂದ್ರದ ಪ್ರೋತ್ಸಾಹಧನ ಸಮಯಕ್ಕೆ ಸರಿಯಾಗಿ ಪಾವತಿಯಾಗಬೇಕು, ಸರ್ಕಾರದ ಕಾರ್ಯಕ್ರಮಗಳ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು, ನಿವೃತ್ತ ಕಾರ್ಯಕರ್ತೆಯರಿಗೆ ಇಡುಗಂಟು ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಕವಿತಾ, ಕಾರ್ಯದರ್ಶಿ ಭಾಗ್ಯಾ, ತಾಲ್ಲೂಕು ಅಧ್ಯಕ್ಷೆ ಜಯಲಕ್ಷ್ಮೀ, ಪ್ರಮುಖರಾದ ನಂಜಮಣಿ, ಉಮಾ ಮಹೇಶ್ವರಿ, ಅಶ್ವಿನಿ, ಯಶೋದಾ ಇದ್ದರು.261013-37-1395572388