ರೈತರಿಗೆ ಕಿರುಕುಳ ಆರೋಪ; ಮನ್ಮುಲ್ ಆಡಳಿತದ ವಿರುದ್ಧ ಜೆಡಿಎಸ್ ಪ್ರತಿಭಟನೆ
ಕೆ.ಆರ್. ಪೇಟೆ: ತಾಲ್ಲೂಕಿನಲ್ಲಿ ಜೆಡಿಎಸ್ ಬೆಂಬಲಿತ ಆಡಳಿತ ಇರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅನಗತ್ಯ ಕಿರುಕುಳ ನೀಡುವ ಮೂಲಕ ಆರ್ಥಿಕವಾಗಿ ನಷ್ಟ ಉಂಟು ಮಾಡುತ್ತಿದ್ದರಿಂದ ಹಾಲು ಉತ್ಪಾದಕರು ಸಂಕಷ್ಟಕ್ಕೊಳಗಾಗಿದ್ದಾರೆಂದು ಆರೋಪಿಸಿ ಜೆಡಿಎಸ್ ರೈತಮೋರ್ಚಾ ತಾಲ್ಲೂಕು ಘಟಕದಿಂದ ಪಟ್ಟಣದ ಹೊರವಲಯದಲ್ಲಿರುವ ಮನ್ಮುಲ್ ಹಾಲು ಶೀತಲೀಕರಣ ಘಟಕದ ಮುಂಭಾಗ ಸೋಮವಾರ ಪ್ರ

ಕೆ.ಆರ್. ಪೇಟೆ: ತಾಲ್ಲೂಕಿನಲ್ಲಿ ಜೆಡಿಎಸ್ ಬೆಂಬಲಿತ ಆಡಳಿತ ಇರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅನಗತ್ಯ ಕಿರುಕುಳ ನೀಡುವ ಮೂಲಕ ಆರ್ಥಿಕವಾಗಿ ನಷ್ಟ ಉಂಟು ಮಾಡುತ್ತಿದ್ದರಿಂದ ಹಾಲು ಉತ್ಪಾದಕರು ಸಂಕಷ್ಟಕ್ಕೊಳಗಾಗಿದ್ದಾರೆಂದು ಆರೋಪಿಸಿ ಜೆಡಿಎಸ್ ರೈತಮೋರ್ಚಾ ತಾಲ್ಲೂಕು ಘಟಕದಿಂದ ಪಟ್ಟಣದ ಹೊರವಲಯದಲ್ಲಿರುವ ಮನ್ಮುಲ್ ಹಾಲು ಶೀತಲೀಕರಣ ಘಟಕದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.ಮೈಸೂರು–ಚನ್ನರಾಯಪಟ್ಟ ಮುಖ್ಯರಸ್ತೆಯಲ್ಲಿ ಬರುವ ಹೆಮ್ಮನಹಳ್ಳಿ ಗೇಟ್ ಬಳಿ ಇರುವ ಶೀತಲೀಕರಣ ಉಪಕೇಂದ್ರ ಕಚೇರಿಯ ಮುಂದೆ ಜಮಾಯಿಸಿದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮನ್ಮುಲ್ ಮತ್ತು ಅದರ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಮನ್ಮುಲ್ ಅಧಿಕಾರಿಗಳು ತಾಲ್ಲೂಕಿನಿಂದ ಗೆದ್ದಿರುವ ಕೆಲವು ನಿರ್ದೇಶಕರ ತಾಳಕ್ಕೆ ಕುಣಿಯುವ ಮೂಲಕ ರೈತರ ಪಾಲಿಗೆ ಶಾಪವಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಪೊಲೀಸರು ಇದನ್ನು ತಡೆಯಲು ಮುಂದಾದಾಗ ರಸ್ತೆಯಲ್ಲೇ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಲು ಮುಂದಾದಾಗ ಗೇಟ್ ತೆರೆಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಅವಕಾಶ ನೀಡಿದರು. ಕಚೇರಿಯ ಮುಂದೆ ಪ್ರತಿಭಟನಾಕಾರರು ಜಮಾಯಿಸಿದ್ದರಿಂದ ಮೈಸೂರು- ಚನ್ನರಾಯಪಟ್ಟಣ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಪ್ರಯಾಣಿರಿಗೆ ಪ್ರತಿಭಟನೆಯ ಕಾವು ತಟ್ಟಿ ಬೇಸರ ವ್ಯಕ್ತಪಡಿಸಿದರು.ಶಾಸಕ ಎಚ್.ಟಿ.ಮಂಜು ಮಾತನಾಡಿ, ‘ಕಳೆದ ಒಂಬತ್ತು ತಿಂಗಳಿಂದ ಜೆಡಿಎಸ್ ಪಕ್ಷದ ಬೆಂಬಲಿಗರ ಆಡಳಿತ ಇರುವ ಹಾಲು ಉತ್ಪಾದಕರ ಸಂಘದ ಮೇಲೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ. ಹಾಲಿನ ಪರಿಕ್ಷೆಯಲ್ಲಿ ಮೋಸ ನಡೆಸಿ ಕಡಿಮೆ ಕೊಬ್ಬಿನಾಂಶ ಇದೆ ಎಂದು ನಮೂದಿಸಿ ಲೀಟರ್ ಗೆ ಕಡಿಮೆ ದರ ನೀಡುವ ಮೂಲಕ ಜೆಡಿಎಸ್ ಬೆಂಬಲಿತ ಕಾರ್ಯಕರ್ತರಿಗೆ ತೊಂದರೆ ಕೊಡಲಾಗುತ್ತಿದೆ. ಇದರಿಂದ ತಾಲ್ಲೂಕಿನ ಕಾಶಿಮುರುಕನಹಳ್ಳಿ, ವಡಕೆ ಶೆಟ್ಟಹಳ್ಳಿ ಸೇರಿದಮತೆ ಆರು ಡೇರಿಗಳಿಗೆ ಪ್ರತಿ ತಿಂಗಳು ಸುಮಾರು ₹45 ಲಕ್ಷ ನಷ್ಟವಾಗಿದ್ದು ಈವರೆಗೆ ಒಂದೂವರೆ ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ಇದರಿಂದ ಡೇರಿಗಳನ್ನು ಮುಚ್ಚುವ ಹಂತಕ್ಕೆ ಬಂದಿವೆ’ ಎಂದು ಆಪಾದಿಸಿದರು.ವ್ಯವಸ್ಥಾಪಕ ನಿರ್ದೇಶಕರನ್ನು ಸಭೆಗೆ ಕರೆಸಿ ತರಾಟೆಗೆ ತೆಗೆದುಕೊಂಡ ಶಾಸಕರು, ದಾಖಲೆ ಸಮೇತ ಆರೋಪ ಮಾಡಿ ಸ್ಪಷ್ಟೀಕರಣ ಬಯಸಿದರು. ಎಲ್ಲವನ್ನೂ ಸರಿಪಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆ ನಿಂತಿತು.‘ಮನ್ಮುಲ್ನಲ್ಲಿ ನಡೆದಿದೆ ಎನ್ನಲಾದ ಹಾಲಿನ ಪುಡಿ ಕಲಬೆರಕೆ ಪ್ರಕರಣದಿಂದ ಹಾಲು ಉತ್ಪಾದಕರಲ್ಲಿ ಆತಂಕ ಮೂಡಿಸಿದೆ. ರೈತರು, ಹಾಲು ಉತ್ಪಾದಕರು ಹಾಗೂ ಮಹಿಳೆಯರ ಬದುಕಿನ ಹಿತದೃಷ್ಟಿಯಿಂದ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವುದು ಅತ್ಯಗತ್ಯ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ರೈತಮೋರ್ಚಾ ಅಧ್ಯಕ್ಷ ಬೂಕನಕೆರೆ ಹೆಳವೇಗೌಡ, ಮುಖಂಡ ಅಕ್ಕಿಹೆಬ್ಬಾಳು ರಘು, ಬಲ್ಲೇನಹಳ್ಳಿ ರಾಮಚಂದ್ರ ಸೇರಿದಂತೆ ಹಲವರು ಒತ್ತಾಯಿಸಿದರು.ಮುಖಂಡರಾದ ನಂಜೇಗೌಡ, ಮಹದೇವೇಗೌಡ, ಮೀಸೆ ಮಹದೇವೇಗೌಡ, ವಿ ಎಸ್ ಧನಂಜಯ್ ಕುಮಾರ್, ತೇರ್ನೇನಹಳ್ಲಿ ಬಲದೇವ್, ದಿಲೀಪ್ ಕುಮಾರ್, ಬಲರಾಮು, ಐನೋರಹಳ್ಳಿ ಮಲ್ಲೇಶ್, ನಾಗೇಶ್, ಕುಮಾರಸ್ವಾಮಿ,ಕುರುಬಹಳ್ಲೀ ನಾಗೇಶ್ ರವಿಕುಮಾರ್, ದಿನೇಶ್, ರೇಖಾ,ಭಾಗ್ಯಮ್ಮ, ನಾಗರಾಜೇಗೌಡ ಸೇರಿದಂತೆ ಪಕ್ಷದ ಹಲವು ಮುಖಂಡರು ಇದ್ದರು.261013-40-1658652482