ಮೈಸೂರು | ಚಿಣ್ಣರ ಕಲರವ, ಪ್ರತಿಭೆ ಅನಾವರಣ: ಕಳೆಗಟ್ಟಿದ ಮಕ್ಕಳ ದಸರಾ
ಮೈಸೂರು: ದಸರಾ ಮಹೋತ್ಸವದ 4ನೇ ದಿನವಾದ ಬುಧವಾರ ನಗರದಲ್ಲಿ ಚಿಣ್ಣರ ಕಲರವ ಕಂಡುಬಂತು. ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿಯಿಂದ ವಿನೋಬಾ ರಸ್ತೆಯ ಕಲಾಮಂದಿರದವರೆಗೆ ಹಮ್ಮಿಕೊಂಡಿದ್ದ ‘ಕಲಾಥಾನ್’ನಲ್ಲಿ ವಿವಿಧ ಶಾಲೆಗಳ ನೂರಾರು ಮಕ್ಕಳು ಕಲಾಪ್ರತಿಭೆ ಪ್ರದರ್ಶಿಸಿ ಸಾರ್ವಜನಿಕರ ಮನ ಗೆದ್ದರು.ಕನ್ನಡಾಂಬೆ, ಮಹಾರಾಜರು, ನವದುರ್ಗೆಯರು ಸೇರಿದಂತೆ ವಿವಿಧ ವೇಷಭೂಷಣದೊಂದಿಗೆ

ಮೈಸೂರು: ದಸರಾ ಮಹೋತ್ಸವದ 4ನೇ ದಿನವಾದ ಬುಧವಾರ ನಗರದಲ್ಲಿ ಚಿಣ್ಣರ ಕಲರವ ಕಂಡುಬಂತು. ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿಯಿಂದ ವಿನೋಬಾ ರಸ್ತೆಯ ಕಲಾಮಂದಿರದವರೆಗೆ ಹಮ್ಮಿಕೊಂಡಿದ್ದ ‘ಕಲಾಥಾನ್’ನಲ್ಲಿ ವಿವಿಧ ಶಾಲೆಗಳ ನೂರಾರು ಮಕ್ಕಳು ಕಲಾಪ್ರತಿಭೆ ಪ್ರದರ್ಶಿಸಿ ಸಾರ್ವಜನಿಕರ ಮನ ಗೆದ್ದರು.ಕನ್ನಡಾಂಬೆ, ಮಹಾರಾಜರು, ನವದುರ್ಗೆಯರು ಸೇರಿದಂತೆ ವಿವಿಧ ವೇಷಭೂಷಣದೊಂದಿಗೆ ಪಾಲ್ಗೊಂಡಿದ್ದ ಮಕ್ಕಳು ‘ಕಲಾಥಾನ್’ನ ಮೆರುಗು ಹೆಚ್ಚಿಸಿದರು. ಅವರನ್ನು ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ವಿದ್ಯಾರ್ಥಿಗಳು ಡೋಲು, ದೊಣ್ಣೆವರಸೆ, ಪೂಜಾ ಕುಣಿತ, ವೀರಗಾಸೆ, ಗಾರುಡಿ ಗೊಂಬೆ, ಕಂಸಾಳೆ, ಮಾರುಕುಣಿತ, ಕೋಲಾಟ, ಜಾನಪದ ನೃತ್ಯ ಮೊದಲಾದ ಕಾರ್ಯಕ್ರಮ ನೀಡುತ್ತಾ ಹೆಜ್ಜೆ ಹಾಕಿದರು.ಬಳಿಕ ಕಲಾಮಂದಿರದಲ್ಲಿ ‘ಮಕ್ಕಳ ದಸರಾ’ ಕಳೆಗಟ್ಟಿತು. ಆವರಣದಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಚಿಣ್ಣರು ತಮ್ಮ ಕಲ್ಪನೆಯ ಚಿತ್ರಗಳಿಗೆ ಬಣ್ಣ ತುಂಬಿದರು. ಉತ್ತಮ ರಚನೆಗಾಗಿ ಮೆಚ್ಚುಗೆಯ ಬಹುಮಾನವನ್ನೂ ಪಡೆದರು. ಸಚಿವ ಮಧು ಬಂಗಾರಪ್ಪ ಅವರು ಮಕ್ಕಳ ಪ್ರತಿಭೆಯನ್ನು ವೀಕ್ಷಿಸಿ ಶ್ಲಾಘಿಸಿದರು. ಪೋಷಕರು ಮತ್ತು ಶಿಕ್ಷಕರು ಹೆಮ್ಮೆಯ ಭಾವ ತಳೆದರು.ಬೆಂಗಳೂರಿನ ಧಾರಾವಾಹಿ ಕಲಾವಿದೆ ಟಿ.ಬಿ ರಚನಾ ಸ್ವಾಗತನೃತ್ಯ ಮಾಡಿ ಸಭಿಕರನ್ನು ರಂಜಿಸಿದರು. ದೇಶಭಕ್ತಿ ಗೀತೆಗೆ ಪ್ರೇಕ್ಷಕರು ಫಿದಾ: ಉತ್ತರ ವಲಯದ ಉರ್ದು ಶಾಲೆಗಳ ಎಲ್ಕೆಜಿ ಮತ್ತು ಯುಕೆಜಿಯ ಮುದ್ದು ಮಕ್ಕಳು ದೇಶಭಕ್ತಿ ಗೀತೆಗೆ ನೃತ್ಯ ಪ್ರಸ್ತುತಪಡಿಸಿದ್ದು ಸೊಗಸಾಗಿತ್ತು, ಪ್ರೇಕ್ಷಕರಿಂದ ಚಪ್ಪಾಳೆಗಳ ಮೆಚ್ಚುಗೆಯನ್ನೂ ಗಳಿಸಿತು.ಗಂಗೋತ್ರಿ ಪಬ್ಲಿಕ್ ಶಾಲೆಯ ಮಕ್ಕಳು ಕಾಂತಾರ ಚಲನಚಿತ್ರದ ‘ಸಿಂಗಾರ ಸಿರಿಯೇ’ ಹಾಡಿಗೆ ಯಕ್ಷಗಾನ ನೃತ್ಯ ಮಾಡಿದರು. ನಂಜನಗೂಡು ತಾಲ್ಲೂಕು ಸುತ್ತೂರಿನ ಜೆಎಸ್ಎಸ್ ಶಾಲೆಯಲ್ಲಿ ಕಲಿಯುತ್ತಿರುವ ಮಣಿಪುರಿ ಹಾಗೂ ಮೇಗಾಲಯದ ಮಕ್ಕಳು ತಮ್ಮ ನಾಡಿನ ನೃತ್ಯ ಪ್ರಾಕಾರವನ್ನು ಪ್ರದರ್ಶಿಸಿದರು. ಕೆ.ಆರ್.ನಗರ ತಾಲ್ಲೂಕು ಅಂಕನಹಳ್ಳಿ ಜಿಎಚ್ಪಿಎಸ್ ಮಕ್ಕಳು ಹುಲಿವೇಷ, ಮರಗಾಲು ಕುಣಿತದಿಂದ ಮನಗೆದ್ದರು. ಪ್ರಿಸಮ್ ಅಕಾಡೆಮಿ ಮಕ್ಕಳು ಕರಾಟೆ ಪ್ರದರ್ಶನ ನೀಡಿದರು.ಬೆಟ್ಟದಪುರ ಡಿಟಿಎಂಎನ್ ಶಾಲೆ ತಂಡ, ಹಳೇಬೀಡಿನ ಬಿಎಚ್ಪಿಎಸ್ ಮಕ್ಕಳು, ನಂಜನಗೂಡಿನ ಕೆಜಿಬಿವಿ ವಸತಿ ಶಾಲೆ, ಸಾಲಿಗ್ರಾಮ ಸರ್ಕಾರಿ ಪ್ರೌಢಶಾಲೆ, ಮೂಗೂರು ಕೆಪಿಎಸ್ ಮಕ್ಕಳು ಜಾನಪದ ನೃತ್ಯ ಪ್ರದರ್ಶಿಸಿದರು. ವಿಶೇಷ ಮಕ್ಕಳು ನೀಡಿದ ದೇಶಭಕ್ತಿ ಗೀತೆ ನೃತ್ಯ ಪ್ರದರ್ಶನ ಮೆಚ್ಚುಗೆ ಗಳಿಸಿತು. ಪಾಲ್ಗೊಂಡಿದ್ದ ಮಕ್ಕಳಿಗೆ ಪ್ರಮಾಣಪತ್ರ, ಸ್ಮರಣಿಕೆ ನೀಡಲಾಯಿತು.