ದಾವಣಗೆರೆ: ತೋಳಹುಣಸೆ–ಹೆಬ್ಬಾಳು ನಡುವಿನ 15 ಕಿ.ಮೀ ಮಾರ್ಗ ರೈಲು ಸಂಚಾರಕ್ಕೆ ಸಜ್ಜು
ದಾವಣಗೆರೆ: ದಾವಣಗೆರೆ– ಚಿತ್ರದುರ್ಗ– ತುಮಕೂರು ನಡುವಿನ ನೂತನ ನೇರ ರೈಲು ಮಾರ್ಗ ವ್ಯಾಪ್ತಿಯ ತೋಳಹುಣಸೆ– ಹೆಬ್ಬಾಳು ನಡುವೆ ರೈಲು ವೇಗ ಸುರಕ್ಷತೆಯ ಪ್ರಯೋಗಾರ್ಥ ಸಂಚಾರ ಬುಧವಾರ ನಡೆಯಿತು. ರೈಲ್ವೆ ಸುರಕ್ಷತಾ ಆಯುಕ್ತರ (ಸಿಆರ್ಎಸ್) ಕಚೇರಿಯ ತಂಡ ರೈಲಿನೊಂದಿಗೆ ಸಂಚರಿಸಿ ಹಳಿಯ ಸಾಮರ್ಥ್ಯವನ್ನು ಪರೀಕ್ಷಿಸಿತು.ದಾವಣಗೆರೆ ತಾಲ್ಲೂಕಿನ ತೋಳಹುಣಸೆ– ಆನಗೋಡು– ಹೆಬ್ಬಾಳ ನಡ

ದಾವಣಗೆರೆ: ದಾವಣಗೆರೆ– ಚಿತ್ರದುರ್ಗ– ತುಮಕೂರು ನಡುವಿನ ನೂತನ ನೇರ ರೈಲು ಮಾರ್ಗ ವ್ಯಾಪ್ತಿಯ ತೋಳಹುಣಸೆ– ಹೆಬ್ಬಾಳು ನಡುವೆ ರೈಲು ವೇಗ ಸುರಕ್ಷತೆಯ ಪ್ರಯೋಗಾರ್ಥ ಸಂಚಾರ ಬುಧವಾರ ನಡೆಯಿತು. ರೈಲ್ವೆ ಸುರಕ್ಷತಾ ಆಯುಕ್ತರ (ಸಿಆರ್ಎಸ್) ಕಚೇರಿಯ ತಂಡ ರೈಲಿನೊಂದಿಗೆ ಸಂಚರಿಸಿ ಹಳಿಯ ಸಾಮರ್ಥ್ಯವನ್ನು ಪರೀಕ್ಷಿಸಿತು.ದಾವಣಗೆರೆ ತಾಲ್ಲೂಕಿನ ತೋಳಹುಣಸೆ– ಆನಗೋಡು– ಹೆಬ್ಬಾಳ ನಡುವಿನ 15 ಕಿ.ಮೀ.ನಲ್ಲಿ ಹಳಿ ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ. ಈ ಮಾರ್ಗವು ರೈಲು ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂಬುದರ ಎರಡನೇ ಹಂತದ ಪರೀಕ್ಷೆ ನಡೆಯಿತು. ನಿಗದಿತ ವೇಗದಲ್ಲಿ ಬೋಗಿಗಳ ಸಮೇತ ರೈಲು ಓಡಿಸಿ ಸುರಕ್ಷತೆಯನ್ನು ಪರಿಶೀಲಿಸಲಾಯಿತು. ಕೇವಲ ಎಂಜಿನ್ ಬಳಸಿ ಪ್ರಾಥಮಿಕ ಪರೀಕ್ಷೆಯನ್ನು ಇತ್ತೀಚೆಗೆ ನಡೆಸಲಾಗಿತ್ತು.‘ರೈಲು ಮಾರ್ಗದ ಸುರಕ್ಷತೆಯನ್ನು ಹಲವು ಹಂತಗಳಲ್ಲಿ ಪರಿಶೀಲಿಸಲಾಗುತ್ತದೆ. ಹಳಿಯ ಸಾಮರ್ಥ್ಯ, ನಿಗದಿತ ವೇಗ, ನಿಲ್ದಾಣದಲ್ಲಿ ನಿಲುಗಡೆಗೆ ಇರುವ ವ್ಯವಸ್ಥೆಯನ್ನು ಗಮನಿಸಲಾಗುತ್ತದೆ. ಸುರಕ್ಷತೆಯ ಮಾರ್ಗಸೂಚಿ ಪ್ರಕಾರ ಎಲ್ಲವೂ ತೃಪ್ತಿದಾಯಕವಾಗಿದ್ದರೆ ಮಾತ್ರ ರೈಲ್ವೆ ಸುರಕ್ಷತಾ ಆಯುಕ್ತರು ಪ್ರಮಾಣ ಪತ್ರ ವಿತರಣೆ ಮಾಡುವರು’ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.ದಾವಣಗೆರೆ– ಚಿತ್ರದುರ್ಗ– ತುಮಕೂರಿನ 192 ಕಿ.ಮೀ ನೇರ ರೈಲು ಮಾರ್ಗದಲ್ಲಿ 40 ಕಿ.ಮೀ ಹಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ತೋಳಹುಣಸೆ–ಆನಗೋಡು– ಹೆಬ್ಬಾಳ ನಡುವಿನ 15 ಕಿ.ಮೀ. ಹಾಗೂ ತುಮಕೂರು– ಊರುಕೆರೆ– ತಿಮ್ಮರಾಜನಹಳ್ಳಿ ನಡುವೆ 25 ಕಿ.ಮೀ. ಮಾರ್ಗ ಸಂಪೂರ್ಣ ಸಜ್ಜಾಗಿದೆ. ಹಳಿ ವಿಸ್ತರಣೆಗೆ ಅನುಗುಣವಾಗಿ ರೈಲು ಸಂಚರಿಸಲಿದ್ದು, ಬಹುದಿನಗಳ ಕನಸು ನನಸಾಗುವ ಭರವಸೆ ಮೂಡಿದೆ.ನೂತನ ರೈಲು ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಯುತ್ತಿರುವುದನ್ನು ಕಂಡ ಜನರು ಆನಗೋಡು, ಹೆಬ್ಬಾಳು ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.