ವಿಶ್ವದ ಪ್ರತಿಷ್ಠಿತ ವಿವಿಗಳಲ್ಲಿ ರಾಜಕಾರಣಿಗಳ ಮಕ್ಕಳು: ಯಾರು, ಎಲ್ಲಿ ಓದಿದ್ದಾರೆ?
ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ತವರಿಗೆ ಬಂದು ಇಲ್ಲಿನ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಕರೆ ನೀಡಿದ್ದಾರೆ. ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆಯುವ ಪ್ರಕ್ರಿಯೆ ಕುರಿತು ಆತಂಕಗಳು ಹೆಚ್ಚುತ್ತಿರುವ ನಡುವೆ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.ಅಕ್ಟೋಬರ್ 13ರಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿರು

ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ತವರಿಗೆ ಬಂದು ಇಲ್ಲಿನ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಕರೆ ನೀಡಿದ್ದಾರೆ. ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆಯುವ ಪ್ರಕ್ರಿಯೆ ಕುರಿತು ಆತಂಕಗಳು ಹೆಚ್ಚುತ್ತಿರುವ ನಡುವೆ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.ಅಕ್ಟೋಬರ್ 13ರಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಶ್ರೀಧರ್ ವೆಂಬು, ‘ಬೇರೆ ದೇಶವೊಂದು ನಿಮ್ಮನ್ನು ಮನೆಗೆ ಹೋಗಿ ಎಂದು ಹೇಳಿದರೆ, ನೀವು ಮನೆಗೆ ಮರಳಬೇಕಾಗುತ್ತದೆ. ಬೇರೆ ಆಯ್ಕೆ ಏನಿದೆ? ನಮ್ಮನ್ನು ಇಲ್ಲಿಯೇ ಇರಲು ಬಿಡಿ ಎಂದು ಆ ದೇಶವನ್ನು ಬೇಡಿಕೊಳ್ಳಬೇಕೇ? ಅಥವಾ ಅಕ್ರಮವಾಗಿ ಅಲ್ಲಿಯೇ ಉಳಿಯಬೇಕೇ?’ ಎಂದು ಪ್ರಶ್ನಿಸಿದ್ದಾರೆ.ಸಾಫ್ಟ್ವೇರ್ ಉದ್ಯೋಗದ ಸಂಖ್ಯೆ ಕಡಿಮೆಯಾದರೂ ಭಾರತದಲ್ಲಿ ಅಭಿವೃದ್ಧಿಪಡಿಸಬಹುದಾದ ಅನೇಕ ಕ್ಷೇತ್ರಗಳಿವೆ. ಹಾಗಾಗಿ, ಭಾರತದಲ್ಲಿ ಹೊಸ ಉದ್ಯಮಗಳನ್ನು ಆರಂಭಿಸುವ ಮೂಲಕ ಇಲ್ಲಿನ ತಂತ್ರಜ್ಞಾನ ಕ್ಷೇತ್ರವನ್ನು ಬಲಪಡಿಸಲು ಭಾರತೀಯರು ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.When another country tells you to go home, you come home. What is the alternative? Beg them to allow us to stay? Stay illegally?There are a million things to build in India, even if software is saturated or goes away.— Sridhar Vembu (@svembu) October 13, 2026 ಅಮೆರಿಕದ ನಿರ್ಧಾರದಿಂದ ಉದ್ಯೋಗಿಗಳಿಗೆ ಆತಂಕಅಮೆರಿಕ ಸರ್ಕಾರವು 8 ತಂತ್ರಜ್ಞಾನ ಕಂಪನಿಗಳಿಗೆ ಗ್ರೀನ್ ಕಾರ್ಡ್ ಪಡೆಯುವ ಪ್ರಕ್ರಿಯೆಯ ಪ್ರಮುಖ ಹಂತವಾದ ಶಾಶ್ವತ ಕಾರ್ಮಿಕ ಸರ್ಟಿಫಿಕೇಶನ್ (PERM) ಕಾರ್ಯಕ್ರಮದಿಂದ ಅಮಾನತುಗೊಳಿಸಿದೆ ಎಂಬ ವರದಿಯ ಬೆನ್ನಲ್ಲೇ ಈ ಚರ್ಚೆ ಮುನ್ನೆಲೆಗೆ ಬಂದಿದೆ.ಈ ಪಟ್ಟಿಯಲ್ಲಿ ಮೈಕ್ರೋಸಾಫ್ಟ್, ಇನ್ಪೊಸಿಸ್, ಟಿಸಿಎಸ್ ಮತ್ತು ವಿಪ್ರೊ ಸೇರಿದಂತೆ ಪ್ರಮುಖ ತಂತ್ರಜ್ಞಾನ ಹಾಗೂ ಐಟಿ ಸೇವಾ ಕಂಪನಿಗಳ ಹೆಸರುಗಳು ಇವೆ.ಈ ನಿರ್ಧಾರದಿಂದ ಸಂಬಂಧಪಟ್ಟ ಕಂಪನಿಗಳ ಮೂಲಕ ಸಲ್ಲಿಸುವ ಹೊಸ PERM ಅರ್ಜಿಗಳನ್ನು ಸ್ವೀಕರಿಸುವುದು ಮತ್ತು ಬಾಕಿ ಇರುವ ಅರ್ಜಿಗಳ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ. ಇದರಿಂದ ಉದ್ಯೋಗದಾತರ ನೆರವಿನೊಂದಿಗೆ ಅಮೆರಿಕದಲ್ಲಿ ಶಾಶ್ವತ ನಿವಾಸ ಪಡೆಯಲು ಪ್ರಯತ್ನಿಸುತ್ತಿರುವ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಬಹುದು.ಅಮೆರಿಕದ ಈ ನಿರ್ಧಾರದಿಂದ ಎಚ್-1ಬಿ (H-1B) ವೀಸಾ ರದ್ದಾಗುವುದಿಲ್ಲ. ಬದಲಾಗಿ ಗ್ರೀನ್ ಕಾರ್ಡ್ ಪಡೆಯುವ ಪ್ರಕ್ರಿಯೆಗೆ ಮಾತ್ರ ಅಡ್ಡಿಯಾಗಲಿದೆ.ಹಾರ್ವರ್ಡ್, ಆಕ್ಸ್ಫರ್ಡ್, ಯೇಲ್ನಲ್ಲಿ ರಾಜಕಾರಣಿಗಳ ಮಕ್ಕಳುಈ ಸಂದರ್ಭದಲ್ಲಿ ಭಾರತದ ಪ್ರಮುಖ ರಾಜಕಾರಣಿಗಳ ಮಕ್ಕಳು ವಿದೇಶಗಳಲ್ಲಿ ಎಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ? ಯಾವ ಪದವಿ ಪಡೆದಿದ್ದಾರೆ? ಈಗ ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗಳೂ ಚರ್ಚೆಗೆ ಬಂದಿವೆ.ಜುಲೈ 2026ರಲ್ಲಿ ಪ್ರಕಟವಾದ ಸ್ಕ್ರೋಲ್ ವರದಿಯು ಭಾರತೀಯ ರಾಜಕಾರಣಿಗಳ ಮಕ್ಕಳ ವಿದೇಶಿ ಶಿಕ್ಷಣದ ಕುರಿತು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಪರಿಶೀಲಿಸಿದೆ.ಹಾರ್ವರ್ಡ್, ಆಕ್ಸ್ಫರ್ಡ್ ಮತ್ತು ಯೇಲ್ನಂತಹ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದವರಿಂದ ಹಿಡಿದು, ವಿದೇಶಗಳಲ್ಲಿ ಉನ್ನತ ಪದವಿ ಗಳಿಸಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರವರೆಗೆ ಹಲವರ ಶಿಕ್ಷಣ ಮತ್ತು ವೃತ್ತಿಜೀವನದ ವಿವರವನ್ನು ಈ ವರದಿ ನೀಡಿದೆ.ಈ ಪೈಕಿ ಕೆಲವರು ಸಂಶೋಧನೆ, ಉದ್ಯಮ, ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ದೇಶ–ವಿದೇಶಗಳಲ್ಲಿ ವೃತ್ತಿಜೀವನ ರೂಪಿಸಿಕೊಂಡಿದ್ದಾರೆ.ಯಾವ ರಾಜಕಾರಣಿಯ ಮಕ್ಕಳು, ಯಾವ ಕಾಲೇಜಿನಲ್ಲಿ ಓದಿದ್ದಾರೆ?ಪಿಯೂಷ್ ಗೋಯಲ್ - ಧ್ರುವ್ ಗೋಯಲ್: ಹಾರ್ವರ್ಡ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಹಾರ್ವರ್ಡ್ ಬಿಸಿನೆನ್ ಸ್ಕೂಲ್ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಪ್ರಸ್ತುತ ಮುಂಬೈ ಮತ್ತು ನ್ಯೂಯಾರ್ಕ್ನಲ್ಲಿ ಕಚೇರಿಗಳನ್ನು ಹೊಂದಿರುವ ಫೋರ್ಲಯನ್ ಕ್ಯಾಪಿಟಲ್ ಹೂಡಿಕೆ ಸಂಸ್ಥೆಯ ಸಿಇಒ ಆಗಿದ್ದಾರೆ.ಪಿಯೂಷ್ ಗೋಯಲ್ - ರಾಧಿಕಾ ಗೋಯಲ್: ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸ್ಯಾನ್ ಡಿಯಾಗೋದಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಸಂಶೋಧನೆ ನಡೆಸುತ್ತಿದ್ದಾರೆ. ಸಾರ್ವಜನಿಕ ಹಣಕಾಸು, ಅಭಿವೃದ್ಧಿ ಮತ್ತು ರಾಜಕೀಯ ಅರ್ಥಶಾಸ್ತ್ರ ಅವರ ಸಂಶೋಧನಾ ಆಸಕ್ತಿಯ ಕ್ಷೇತ್ರಗಳಾಗಿವೆ.ಎಸ್. ಜೈಶಂಕರ್ – ಅರ್ಜುನ್ ಜೈಶಂಕರ್: ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪದವಿ, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೆಕ್ಯೂರಿಟಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವುದಾಗಿ ವರದಿಯಾಗಿದೆ. ಪ್ರಸ್ತುತ ವೃತ್ತಿಯ ಬಗ್ಗೆ ಸಾರ್ವಜನಿಕ ಮಾಹಿತಿ ಲಭ್ಯವಿಲ್ಲ.ಎಸ್. ಜೈಶಂಕರ್–ಧ್ರುವ ಜೈಶಂಕರ್: ಅಮೆರಿಕದ ಮ್ಯಾಕಲೆನ್ಸರ್ ಕಾಲೇಜಿನಲ್ಲಿ ಇತಿಹಾಸ ಮತ್ತು ಕ್ಲಾಸಿಕ್ಸ್ನಲ್ಲಿ ಪದವಿ, ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ಭದ್ರತಾ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ವಾಷಿಂಗ್ಟನ್ನ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಅಮೆರಿಕದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.ನಿರ್ಮಲಾ ಸೀತಾರಾಮನ್ -ವಾಂಗ್ಮಯಿ ಪರಕಾಲ: ನಾರ್ತ್ವೆಸ್ಟರ್ನ್ ವಿಶ್ವವಿದ್ಯಾಲಯದ ಮೆಡಿಲ್ ಶಾಲೆಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಕರ್ತೆ ಮತ್ತು ಲೇಖಕಿಯಾಗಿದ್ದಾರೆ. ಇವರ ಬರಹಗಳು ಮಿಂಟ್ ಮತ್ತು ಮಿಂಟ್ ಲೌಂಜ್ ಸೇರಿದಂತೆ ಹಲವು ಪ್ರಕಟಣೆಗಳಲ್ಲಿ ಪ್ರಕಟವಾಗಿವೆ.ಧರ್ಮೇಂದ್ರ ಪ್ರಧಾನ್-ನೈಮಿಷಾ: ಒ.ಪಿ. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ, ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ ವಿನಿಮಯ ಕಾರ್ಯಕ್ರಮದಡಿ ಒಂದು ವರ್ಷದ ಎಲ್ಎಲ್ಎಂ ಪಡೆದಿದ್ದಾರೆ. ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂನಲ್ಲಿ ಇಂಧನ, ಪರಿಸರ ಮತ್ತು ಮೂಲಸೌಕರ್ಯ ವಿಭಾಗದ ಹಿರಿಯ ಸಹಾಯಕಿ. ಈ ಹಿಂದೆ ನೀತಿ ಆಯೋಗ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ.ಶಿವರಾಜ್ ಸಿಂಗ್ ಚೌಹಾಣ್–ಕಾರ್ತಿಕೇಯ ಚೌಹಾಣ್: ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು 2023ರಲ್ಲಿ ಪೂರ್ಣಗೊಳಿಸಿದ್ದಾರೆ. 2017ರಲ್ಲಿ ಸುಂದರ್ ಫುಡ್ಸ್ ಆ್ಯಂಡ್ ಡೈರಿ ಸಂಸ್ಥೆ ಆರಂಭಿಸಿದ್ದಾರೆ. 7,500ಕ್ಕೂ ಹೆಚ್ಚು ರೈತ ಕುಟುಂಬಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮಧ್ಯಪ್ರದೇಶ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದು, ಬಿಜೆಪಿಯ ಕಾರ್ಯಕರ್ತರೂ ಆಗಿದ್ದಾರೆ.ಶಿವರಾಜ್ ಸಿಂಗ್ ಚೌಹಾಣ್ - ಕುನಾಲ್ ಚೌಹಾಣ್: ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಡೈರಿ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಜ್ಯೋತಿರಾದಿತ್ಯ ಸಿಂಧಿಯಾ -ಮಹಾನ್ ಆರ್ಯಮನ್ ಸಿಂಧಿಯಾ: ಯೇಲ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನ ಮತ್ತು ಆಡಳಿತದಲ್ಲಿ ಪದವಿ ಪಡೆದಿದ್ದಾರೆ. 2025ರಿಂದ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ.ಜ್ಯೋತಿರಾದಿತ್ಯ ಸಿಂಧಿಯಾ -ಅನನ್ಯಾ ರಾಜೆ ಸಿಂಧಿಯಾ: ರೋಡ್ ಐಲ್ಯಾಂಡ್ ಸ್ಕೂಲ್ ಆಫ್ ಡಿಸೈನ್ನಿಂದ ಪದವಿ ಪಡೆದಿದ್ದಾರೆ. ಅಮೆರಿಕದ ಗೂಗಲ್ ಡೀಪ್ ಮೈಂಡ್ನಲ್ಲಿ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ.ಅಶ್ವಿನಿ ವೈಷ್ಣವ್ - ತಾನ್ಯಾ ವೈಷ್ಣವ್: ಸ್ಕೋಲ್ ವರದಿ ಪ್ರಕಾರ, ಬ್ರಿಟನ್ನ ವಿಶ್ವವಿದ್ಯಾಲಯವೊಂದರಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಸೌಂದರ್ಯ, ಆರೋಗ್ಯ ಮತ್ತು ಕೂದಲಿನ ಆರೈಕೆ ಕ್ಷೇತ್ರದಲ್ಲಿ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅಶ್ವಿನಿ ವೈಷ್ಣವ್ - ರಾಹುಲ್ ವೈಷ್ಣವ್: ವಿದೇಶಿ ಶಿಕ್ಷಣದ ಬಗ್ಗೆ ಉಲ್ಲೇಖಿತ ವರದಿಯಲ್ಲಿ ಖಚಿತ ಮಾಹಿತಿ ಇಲ್ಲ, ಅದಾಗ್ಯೂ ಇವರು ಅಡ್ಲರ್ ಇಂಡಸ್ಟ್ರಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರಾಗಿದ್ದಾರೆ.ಪಿ. ಚಿದಂಬರಂ - ಕಾರ್ತಿ ಚಿದಂಬರಂ: ಟೆಕ್ಸಾಸ್ ವಿಶ್ವವಿದ್ಯಾಲಯ, ಆಸ್ಟಿನ್ನಲ್ಲಿ ಬಿಬಿಎ ಮತ್ತು ಕೇಂಬ್ರಿಡ್ಜ್ನಲ್ಲಿ ಕಾನೂನು ಪದವಿ ಪಡೆದಿದ್ದಾರೆ. ತಮಿಳುನಾಡಿನ ಶಿವಗಂಗಾ ಕ್ಷೇತ್ರದ ಸಂಸದರಾಗಿದ್ದಾರೆ.ಶಶಿ ತರೂರ್ ಇಶಾನ್ ತರೂರ್: ಯೇಲ್ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಹಾಗೂ ಜನಾಂಗ, ವರ್ಣ ಮತ್ತು ವಲಸೆ ಅಧ್ಯಯನದಲ್ಲಿ ಪದವಿ ಪಡೆದಿದ್ದಾರೆ. ಪ್ರಸ್ತುತ ಅಮೆರಿಕದ ದಿ ನ್ಯೂಯಾರ್ಕರ್ ಪತ್ರಿಕೆಯಲ್ಲಿ ಜಾಗತಿಕ ವ್ಯವಹಾರಗಳ ಅಂಕಣಕಾರರಾಗಿದ್ದಾರೆ.ಸಚಿನ್ ಪೈಲಟ್ – ಆರನ್ ಪೈಲಟ್: ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ನ ಆಕ್ಸ್ಫರ್ಡ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ವೃತ್ತಿಯ ಬಗ್ಗೆ ಸಾರ್ವಜನಿಕ ಮಾಹಿತಿ ಲಭ್ಯವಿಲ್ಲ.ಅಖಿಲೇಶ್ ಯಾದವ್–ಅದಿತಿ ಯಾದವ್: ಯೂನಿವರ್ಸಿಟಿ ಕಾಲೇಜ್ ಲಂಡನ್ನಲ್ಲಿ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪದವಿ ಪಡೆದಿದ್ದಾರೆ. ಇವರು ಪ್ರಸ್ತುತ ತಮ್ಮ ಪೋಷಕರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ.ಜೈರಾಮ್ ರಮೇಶ್ – ಅನಿರುದ್ಧ ರಮೇಶ್: ಬ್ರಿಟನ್ನಲ್ಲಿ ಅಧ್ಯಯನ ಮಾಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ವೃತ್ತಿಯ ಬಗ್ಗೆ ಸಾರ್ವಜನಿಕ ಮಾಹಿತಿ ಲಭ್ಯವಿಲ್ಲ.ವಿದೇಶಿ ಪದವಿಯಿಂದ ಭಾರತದಲ್ಲಿ ಉದ್ಯಮದವರೆಗೆವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವುದು ಅಥವಾ ಕೆಲಸ ಮಾಡುವುದು ತಪ್ಪಲ್ಲ. ಆದರೆ ಅಲ್ಲಿ ಪಡೆದ ಜ್ಞಾನ ಮತ್ತು ಅನುಭವವನ್ನು ಭಾರತದ ಬೆಳವಣಿಗೆಗೆ ಬಳಸಿಕೊಳ್ಳುವ ಅವಕಾಶಗಳೂ ಇವೆ. ಭಾರತದಲ್ಲಿ ಹೊಸ ಉದ್ಯಮಗಳನ್ನು ಆರಂಭಿಸುವುದು, ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದು, ಸಂಶೋಧನೆಗೆ ಉತ್ತೇಜನ ನೀಡುವುದು ಮತ್ತು ಉದ್ಯೋಗಗಳನ್ನು ಸೃಷ್ಟಿಸುವುದು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶಗಳಿವೆ ಎಂದು ವೆಂಬು ಅಭಿಪ್ರಾಯಪಟ್ಟಿದ್ದಾರೆ.ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ನುರಿತ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ತವರಿಗೆ ಮರಳಬೇಕು ಎಂದರೆ ಭಾರತದಲ್ಲಿ ಉತ್ತಮ ವೇತನದ ಉದ್ಯೋಗಗಳು, ಗುಣಮಟ್ಟದ ಸಂಶೋಧನಾ ಅವಕಾಶಗಳು ಮತ್ತು ಹೊಸ ಉದ್ಯಮಗಳಿಗೆ ಅಗತ್ಯವಾದ ಬೆಂಬಲ ಸಿಗಬೇಕು.ಭಾರತದ ಪ್ರತಿಭೆಗಳು ವಿದೇಶಗಳಲ್ಲಿಯೇ ಉಳಿಯಬೇಕೇ ಅಥವಾ ತವರಿಗೆ ಮರಳಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕೇ ಎಂಬ ಚರ್ಚೆಗಿಂತಲೂ, ಅನುಭವಿ ಭಾರತೀಯರು ತಮ್ಮ ಭವಿಷ್ಯವನ್ನು ಭಾರತದಲ್ಲಿಯೇ ರೂಪಿಸಿಕೊಳ್ಳುವಂತಹ ಅವಕಾಶಗಳನ್ನು ಸೃಷ್ಟಿಸಲು ದೇಶ ಎಷ್ಟರಮಟ್ಟಿಗೆ ಸಿದ್ಧವಾಗಿದೆ? ಎಂಬುದಾಗಿದೆ.