ಕೆಪಿಎಸ್ಸಿ ಅಕ್ರಮ: ಅಲೋಕ್, ದಿವ್ಯಾ ಎಸ್ಐಟಿಯಿಂದ ಹೊರಕ್ಕೆ
ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗವು ಪಶು ವೈದ್ಯಾಧಿಕಾರಿಗಳು ಹಾಗೂ ಇತರೆ ಹುದ್ದೆಗಳಿಗೆ ನಡೆಸಿದ ನೇಮಕಾತಿ ಗಳಲ್ಲಿನ ಸಂಪೂರ್ಣ ಪಿತೂರಿ ಬಯಲಿಗೆಳೆದು ಆರೋಪಿಗಳನ್ನು ಪತ್ತೆ ಹಚ್ಚಲು ಹೈಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡದಲ್ಲಿ (ಎಸ್ಐಟಿ) ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಕೈಬಿಟ್ಟು ಮತ್ತಿಬ್ಬರನ್ನು ಸೇರಿಸಿಕೊಳ್ಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.ಹೈಕೋರ್

ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗವು ಪಶು ವೈದ್ಯಾಧಿಕಾರಿಗಳು ಹಾಗೂ ಇತರೆ ಹುದ್ದೆಗಳಿಗೆ ನಡೆಸಿದ ನೇಮಕಾತಿ ಗಳಲ್ಲಿನ ಸಂಪೂರ್ಣ ಪಿತೂರಿ ಬಯಲಿಗೆಳೆದು ಆರೋಪಿಗಳನ್ನು ಪತ್ತೆ ಹಚ್ಚಲು ಹೈಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡದಲ್ಲಿ (ಎಸ್ಐಟಿ) ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಕೈಬಿಟ್ಟು ಮತ್ತಿಬ್ಬರನ್ನು ಸೇರಿಸಿಕೊಳ್ಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಹಾಗೂ ವಿಜಯ್ ಬಿಷ್ಣೋಯ್ ಅವರ ಪೀಠವು, ‘ರಾಜ್ಯ ಸರ್ಕಾರವು ಇಬ್ಬರು ಅಧಿಕಾರಿಗಳ ಹೆಸರನ್ನು ಎರಡು ವಾರಗಳೊಳಗೆ ಹೈಕೋರ್ಟ್ಗೆ ಸಲ್ಲಿಸಬೇಕು. ಎರಡೂ ಕಡೆಗಳ ವಾದ ಆಲಿಸಿ ಹೈಕೋರ್ಟ್ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದೆ.ಎಸ್ಐಟಿ ಮುಖ್ಯಸ್ಥರಾಗಿದ್ದ ಡಿಜಿಪಿ ಅಲೋಕ್ ಕುಮಾರ್ ಹಾಗೂ ಡಿಐಜಿ ದಿವ್ಯಾ ಗೋಪಿನಾಥ್ ಬದಲಾವಣೆಗೆ ನ್ಯಾಯಪೀಠ ಒಪ್ಪಿಗೆ ಸೂಚಿಸಿದೆ. ತಂಡಕ್ಕೆ ಇಬ್ಬರುಅಧಿಕಾರಿಗಳನ್ನು ಆಯ್ಕೆ ಮಾಡುವ ಹೊಣೆಯನ್ನು ಡಿಜಿಪಿ-ಐಜಿಪಿ ಅವರಿಗೆ ನೀಡಿದೆ.ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ‘ಐಪಿಎಸ್ ಅಧಿಕಾರಿಗಳಾದ ಲಾಬೂರಾಮ್ ಹಾಗೂ ಚೇತನ್ ಸಿಂಗ್ ರಾಠೋಡ್ ಹೆಸರುಗಳನ್ನು ತನಿಖಾ ತಂಡಕ್ಕೆ ನೀಡಲಾಗುತ್ತಿದೆ’ ಎಂದರು.ತನಿಖಾ ತಂಡದಲ್ಲಿ ಅಲೋಕ್ ಕುಮಾರ್ ಯಾಕೆ ಬೇಡ ಎಂದು ಪೀಠ ಪ್ರಶ್ನಿಸಿತು. ಆಗ ಸಿಬಲ್, ‘ಅವರ ಮೇಲೆ ದೂರವಾಣಿ ಕದ್ದಾಲಿಕೆಯ ಆರೋಪ ಇದೆ. ಹಾಗಾಗಿ ಬೇಡ’ ಎಂದರು.‘ಅಲೋಕ್ ಕುಮಾರ್ ಅವರಿಗೆ ರಾಷ್ಟ್ರಪತಿ ಪದಕ ನೀಡುವಂತೆ ಇದೇ ಸರ್ಕಾರ ಶಿಫಾರಸು ಮಾಡಿತ್ತು. ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಅಲೋಕ್ ಕುಮಾರ್ ಪಾತ್ರ ಇಲ್ಲ ಎಂದು ಸಾಬೀತಾಗಿದೆ’ ಎಂದು ಅಭ್ಯರ್ಥಿಗಳ ಪರ ವಕೀಲರು ವಾದ ಮಂಡಿಸಿದರು. ‘ರಾಜ್ಯ ಸರ್ಕಾರ ನೀಡಿದ ಹೆಸರುಗಳನ್ನು ನ್ಯಾಯಪೀಠ ಒಪ್ಪಬಾರದು. ನ್ಯಾಯಪೀಠವೇ ಅಧಿಕಾರಿಗಳ ಹೆಸರನ್ನು ಸೂಚಿಸಲಿ’ ಎಂದೂ ಅವರು ಹೇಳಿದರು. ‘ನಮಗೆ ಯಾವುದೇ ಅಧಿಕಾರಿಗಳು ಗೊತ್ತಿಲ್ಲ. ಎಸ್ಐಟಿಗೆ ಹಿರಿಯ ಅಧಿಕಾರಿಗಳ ಅವಶ್ಯಕತೆ ಇದೆ’ ಎಂದು ಪೀಠ ಹೇಳಿತು. ‘ಡಿಜಿಪಿ ಬದಲು ಎಡಿಜಿಪಿ ದರ್ಜೆಯ ಅಧಿಕಾರಿಯ ಹೆಸರನ್ನು ಸರ್ಕಾರ ಶಿಫಾರಸು ಮಾಡಿದೆ. ಉನ್ನತ ಮಟ್ಟದ ತನಿಖೆ ನಡೆಯಬೇಕಾಗಿರುವುದರಿಂದ ತನಿಖಾ ತಂಡದ ಅಧಿಕಾರಿಗಳನ್ನು ಡಿಜಿಪಿ-ಐಜಿಪಿಯೇ ನಿರ್ಧರಿಸಲಿ’ ಎಂದು ಪೀಠ ಸ್ಪಷ್ಟಪಡಿಸಿತು.