ಶಿಗ್ಗಾವಿ | ಕಬ್ಬಿಗೆ ₹5,500 ದರಕ್ಕೆ ಆಗ್ರಹ: ಹೆದ್ದಾರಿ ತಡೆದು ಪ್ರತಿಭಟನೆ
ಹಾವೇರಿ/ಶಿಗ್ಗಾವಿ: ‘ಕಬ್ಬಿಗೆ ಪ್ರತಿ ಟನ್ಗೆ ₹ 5,500 ದರ ನಿಗದಿಪಡಿಸಬೇಕು’ ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಗಂಭೀರ ಸ್ವರೂಪ ಪಡೆದಿದೆ. ಕೇಂದ್ರ ಸರ್ಕಾರದ ಜೊತೆಗಿನ ಸಭೆಯಲ್ಲಿ ಬೇಡಿಕೆ ಈಡೇರದಿದ್ದರಿಂದ ರೊಚ್ಚಿಗೆದ್ದಿರುವ ರೈತರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸಂಚಾರ ತಡೆದು ಮಂಗಳವಾರದಿಂದ ಪ್ರತಿಭಟನೆ ಶುರು ಮಾಡಿದ್ದಾರೆ.ಕಬ್ಬಿನ ದರ ನಿಗದಿಗ

ಹಾವೇರಿ/ಶಿಗ್ಗಾವಿ: ‘ಕಬ್ಬಿಗೆ ಪ್ರತಿ ಟನ್ಗೆ ₹ 5,500 ದರ ನಿಗದಿಪಡಿಸಬೇಕು’ ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಗಂಭೀರ ಸ್ವರೂಪ ಪಡೆದಿದೆ. ಕೇಂದ್ರ ಸರ್ಕಾರದ ಜೊತೆಗಿನ ಸಭೆಯಲ್ಲಿ ಬೇಡಿಕೆ ಈಡೇರದಿದ್ದರಿಂದ ರೊಚ್ಚಿಗೆದ್ದಿರುವ ರೈತರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸಂಚಾರ ತಡೆದು ಮಂಗಳವಾರದಿಂದ ಪ್ರತಿಭಟನೆ ಶುರು ಮಾಡಿದ್ದಾರೆ.ಕಬ್ಬಿನ ದರ ನಿಗದಿಗಾಗಿ ಹೋರಾಟ ನಡೆಸುತ್ತಿರುವ ರೈತ ಮುಖಂಡರಾದ ಚೂನಪ್ಪ ಪೂಜೇರ ಹಾಗೂ ಶಶಿಕಾಂತ್ ಗುರೂಜಿ ಅವರು, ‘ಕೇಂದ್ರ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸದೇ ಸಭೆಯ ನೆಪದಲ್ಲಿ ರೈತರಿಗೆ ಅವಮಾನ ಮಾಡಿದೆ. ಇದಕ್ಕೆ ಉತ್ತರವಾಗಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸಿ’ ಎಂದು ಸೋಮವಾರ ಸಂಜೆ ಕರೆ ನೀಡಿದ್ದರು.ಅವರ ಕರೆಯಂತೆ, ಬೆಳಗಾವಿ ಜಿಲ್ಲೆಯ ಹತ್ತರಗಿ ಹಾಗೂ ಹಿರೇಬಾಗೇವಾಡಿ ಟೋಲ್ ಬಳಿ ಮಂಗಳವಾರ ಬೆಳಿಗ್ಗೆಯಿಂದಲೇ ಕಬ್ಬು ಬೆಳೆಗಾರರ ಪ್ರತಿಭಟನೆ ಶುರುವಾಯಿತು. ಅದೇ ಪ್ರತಿಭಟನೆಯನ್ನು ಬೆಂಬಲಿಸಿ, ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯ ಟೋಲ್ನಲ್ಲಿಯೂ ರೈತರು ಪ್ರತಿಭಟನೆ ಆರಂಭಿಸಿದರು.ಹಾವೇರಿ ಜಿಲ್ಲೆಯ ಶಿಗ್ಗಾವಿ, ಹಾನಗಲ್, ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ, ಸವಣೂರು, ಹಾವೇರಿ, ರಟ್ಟೀಹಳ್ಳಿ ತಾಲ್ಲೂಕಿನ ಕಬ್ಬು ಬೆಳೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಸ್ಥಳಕ್ಕೆ ಬಂದಿದ್ದರು. ಹೆದ್ದಾರಿಯಲ್ಲಿಯೇ ಪೆಂಡಾಲ್ ನಿರ್ಮಿಸಿದ್ದ ರೈತರು, ಅದರಲ್ಲಿಯೇ ಕುಳಿತು ಪ್ರತಿಭಟಿಸಿದರು.ಕೆಲ ರೈತರು ಬಾರಕೋಲುಗಳನ್ನು ಬೀಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹಲಗೆ ಬಾರಿಸಿ ಕಿಡಿಕಾರಿದರು. ಕೆಲವರು, ರಸ್ತೆ ಮಧ್ಯೆಯೇ ಮೇವಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.ಬಂಕಾಪುರ ಟೋಲ್ ಬಳಿ ಬೆಳಿಗ್ಗೆ 11 ಗಂಟೆಯಿಂದ ಶುರುವಾದ ಪ್ರತಿಭಟನೆ, ರಾತ್ರಿಯೂ ಮುಂದುವರಿಯಿತು. ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು, ರೈತರ ಮನವೋಲಿಸಲು ಯತ್ನಿಸಿ ವಿಫಲರಾದರು. ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಪರ್ಯಾಯ ಮಾರ್ಗದ ಮೂಲಕ ವಾಹನಗಳ ಸಂಚಾರಕ್ಕೆ ಪೊಲೀಸರು ವ್ಯವಸ್ಥೆ ಮಾಡಿದ್ದರು. ಪ್ರತಿಭಟನಾ ಸ್ಥಳದಲ್ಲಿಯೂ ಎಸ್.ಪಿ. ಯಶೋಧಾ ವಂಟಗೋಡಿ ನೇತೃತ್ವದಲ್ಲಿ ಭದ್ರತೆ ಇತ್ತು.ಒಳ ರಸ್ತೆಯಲ್ಲೂ ದಟ್ಟಣೆ: ಬಂಕಾಪುರ ಟೋಲ್ನಲ್ಲಿ ಪ್ರತಿಭಟನೆ ನಡೆಯುವ ಮಾಹಿತಿ ತಿಳಿಯುತ್ತಿದ್ದಂತೆ ಹಾವೇರಿ ಜಿಲ್ಲಾ ಪೊಲೀಸರು, ಹೆದ್ದಾರಿಯ ವಾಹನಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿದರು. ಬೆಂಗಳೂರಿನಿಂದ ಬರುವ ವಾಹನಗಳನ್ನು ರಾಣೆಬೆನ್ನೂರಿನಿಂದ ಗುತ್ತಲ ಮಾರ್ಗವಾಗಿ ಹುಬ್ಬಳ್ಳಿಗೆ ಕಳುಹಿಸಿದರು. ಹಾವೇರಿಗೆ ಬಂದ ವಾಹನಗಳನ್ನು ಹಾನಗಲ್, ತಡಸ ಮಾರ್ಗವಾಗಿ ಹುಬ್ಬಳ್ಳಿಗೆ ಹೋಗುವಂತೆ ಮಾಡಿದರು.ಹುಬ್ಬಳ್ಳಿಯಿಂದ ಬೆಂಗಳೂರಿನ ಕಡೆಗೆ ಹೊರಟಿದ್ದ ವಾಹನಗಳನ್ನು, ತಡಸ ಕ್ರಾಸ್ನಿಂದಲೇ ಮಾರ್ಗ ಬದಲಿಸಿ ತಡಸ– ದುಂಡಶಿ– ಕೋಣನಕೇರಿ– ಹಾನಗಲ್ ಮಾರ್ಗವಾಗಿ ಹಾವೇರಿಗೆ ತಲುಪುವಂತೆ ಮಾಡಿದರು. ಕೆಲ ವಾಹನಗಳು, ಶಿವಮೊಗ್ಗದ ಮೂಲಕವೂ ಬೆಂಗಳೂರಿನತ್ತ ತೆರಳಿದವು. ಬೆಳಗಾವಿಯಲ್ಲಿಯೂ ಪ್ರತಿಭಟನೆ ನಡೆದಿದ್ದರಿಂದ, ಮಹಾರಾಷ್ಟ್ರದ ವಾಹನಗಳು ಹಾವೇರಿ ಜಿಲ್ಲೆಗೆ ಬರಲಿಲ್ಲ.ಹೆದ್ದಾರಿ ಮೂಲಕ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹಾಲು, ತರಕಾರಿ, ತೈಲ, ಬಿಡಿಭಾಗಗಳು, ಆಟೊಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಾಹನಗಳಲ್ಲಿ ಸಾಗಿಸಲಾಗುತ್ತದೆ. ಸೋಮವಾರ ದಿಢೀರ್ ಪ್ರತಿಭಟನೆ ಮಾಡಿದ್ದರಿಂದ, ವಸ್ತುಗಳನ್ನು ಸಾಗಿಸುವ ವಾಹನಗಳ ಚಾಲಕರು ಯಾತನೆ ಅನುಭವಿಸಿದರು. ಹೆದ್ದಾರಿ ಹೊರತುಪಡಿಸಿ, ಒಳ ರಸ್ತೆಗಳ ಮೂಲಕವೂ ವಾಹನಗಳು ಸಂಚರಿಸಿದವು. ಅಂಥ ರಸ್ತೆಯಲ್ಲಿಯೂ ವಿಪರೀತ ದಟ್ಟಣೆ ಉಂಟಾಗಿ, ವಾಹನಗಳ ಚಾಲಕರು ಪರದಾಡಿದರು.ಹೆದ್ದಾರಿಗಷ್ಟೇ ಸೂಕ್ತವಾದ ಭಾರಿ ಗಾತ್ರದ ವಾಹನಗಳು, ಒಳ ರಸ್ತೆಯಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಹೆದ್ದಾರಿಯಲ್ಲಿಯೇ ಎಲ್ಲೆಂದರಲ್ಲಿ ನಿಂತುಕೊಂಡಿದ್ದವು.‘ಒಂದೇ ದಿನಕ್ಕೆ ₹ 30 ಲಕ್ಷ ನಷ್ಟ’ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಅಡಿಯಲ್ಲಿ ಬಂಕಾಪುರ ಟೋಲ್ ಕಾರ್ಯನಿರ್ವಹಿಸುತ್ತಿದೆ. ನಿತ್ಯವೂ 15 ಸಾವಿರದಿಂದ 20 ಸಾವಿರ ವಾಹನಗಳು ಟೋಲ್ ಮೂಲಕ ಸಂಚರಿಸುತ್ತವೆ. ದಿನಕ್ಕೆ ಸುಮಾರು ₹ 30 ಲಕ್ಷ ಶುಲ್ಕ ಸಂಗ್ರಹವಾಗುತ್ತದೆ. ಸೋಮವಾರ ನಡೆದ ಪ್ರತಿಭಟನೆಯಿಂದಾಗಿ, ಎನ್ಎಚ್ಎಐಗೆ ₹30 ಲಕ್ಷದಷ್ಟು ನಷ್ಟ ಉಂಟಾಯಿತು.‘ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ದೇಶದ ದೊಡ್ಡ ಸಾರಿಗೆ ವ್ಯವಸ್ಥೆಯಾಗಿದೆ. ಇದೇ ಹೆದ್ದಾರಿ ಮೂಲಕ ಸಾವಿರಾರು ಕೋಟಿ ಮೌಲ್ಯದ ವಸ್ತುಗಳು ಸರಬರಾಜು ಆಗುತ್ತವೆ. ಪ್ರತಿಯೊಂದು ಸರಕು ವಾಹನವೂ ಮಹತ್ವದ್ದಾಗಿರುತ್ತದೆ. ಸೋಮವಾರದ ಪ್ರತಿಭಟನೆಯಿಂದ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸಲಿಲ್ಲ. ಟೋಲ್ಗೂ ವಾಹನಗಳು ಬರಲಿಲ್ಲ. ಇದರಿಂದ ₹ 30 ಲಕ್ಷ ಶುಲ್ಕ ಸಂಗ್ರಹವಾಗಿಲ್ಲ’ ಎಂದು ಟೋಲ್ ಸಿಬ್ಬಂದಿಯೊಬ್ಬರು ಹೇಳಿದರು.ಯಶೋಧಾ ವಂಟಗೋಡಿ, ಜಿಲ್ಲಾ ಎಸ್.ಪಿ.ಪ್ರತಿಭಟನೆಯಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿದ್ದೇವೆ. ಭಾರಿ ಗಾತ್ರದ ವಾಹನ ಹೊರತುಪಡಿಸಿ, ಉಳಿದ ವಾಹನಗಳು ಪರ್ಯಾಯ ಮಾರ್ಗದಲ್ಲಿ ಯಥಾಪ್ರಕಾರ ಸಂಚರಿಸುತ್ತಿವೆ. 261014-22-1018114954