ತಿಂದುಂಡು ಸುಖವಾಗಿ| ಮೈಗೆ ಒಳ್ಳೆದಲ್ಲ ಮೈದಾ; ಇದನ್ನು ತಿಂದರೆ ದಪ್ಪ ಆಗೋದು ನಿಜವೇ?
‘ಮೈದಾ ತಿಂದರೆ ದಪ್ಪವಾಗುತ್ತೇವೆ’ ಎಂಬ ಮಾತು ಬಹಳ ಸಾಮಾನ್ಯ. ಆದರೆ ಮೈದಾದ ಕಥೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ಗೋಧಿಯ ಕಥೆ ತಿಳಿಯಬೇಕು. ಸಂಪೂರ್ಣ ಗೋಧಿ ಕಾಳಿನಲ್ಲಿ ಹೊರಪದರವಾದ bran, germ ಮತ್ತು endosperm ಎಂಬ ಭಾಗಗಳಿರುತ್ತವೆ. bran ಮತ್ತು germನಲ್ಲಿ ನಾರಿನಂಶ, ವಿಟಮಿನ್, ಖನಿಜಗಳು ಸೇರಿದಂತೆ ಹಲವು ಪೋಷಕಾಂಶಗಳಿವೆ. ಮೈದಾ ತಯಾರಿಸುವಾಗ ಗೋಧಿಯ ಕಾಳನ

‘ಮೈದಾ ತಿಂದರೆ ದಪ್ಪವಾಗುತ್ತೇವೆ’ ಎಂಬ ಮಾತು ಬಹಳ ಸಾಮಾನ್ಯ. ಆದರೆ ಮೈದಾದ ಕಥೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು ಗೋಧಿಯ ಕಥೆ ತಿಳಿಯಬೇಕು. ಸಂಪೂರ್ಣ ಗೋಧಿ ಕಾಳಿನಲ್ಲಿ ಹೊರಪದರವಾದ bran, germ ಮತ್ತು endosperm ಎಂಬ ಭಾಗಗಳಿರುತ್ತವೆ. bran ಮತ್ತು germನಲ್ಲಿ ನಾರಿನಂಶ, ವಿಟಮಿನ್, ಖನಿಜಗಳು ಸೇರಿದಂತೆ ಹಲವು ಪೋಷಕಾಂಶಗಳಿವೆ. ಮೈದಾ ತಯಾರಿಸುವಾಗ ಗೋಧಿಯ ಕಾಳನ್ನು ಹೆಚ್ಚು ಸಂಸ್ಕರಿಸಿ ಮುಖ್ಯವಾಗಿ endosperm ಭಾಗವನ್ನು ಬಳಸಲಾಗುತ್ತದೆ.ಅಂದರೆ ಗೋಧಿಯ ಹೊಟ್ಟನ್ನು ತೆಗೆದು ಒಳಗಿನ ನಯವಾದ ಸ್ವರೂಪದಲ್ಲಿರುವ ಮೈದಾ ನೇರವಾಗಿ ‘ವಿಷ’ ಅಲ್ಲ. ಆದರೆ, ನಾವು ಬಳಸುತ್ತಿರುವ, ಮಾರುಕಟ್ಟೆಯಲ್ಲಿ ಸಿಗುವ ಸಂಸ್ಕರಿತ ಮೈದಾ ತಯಾರಾಗುವುದು ಹೇಗೆ ಎಂಬುದನ್ನು ಅರ್ಥ ಮಾಡಿಕೊಂಡರೆ, ಅದರ ಸೇವನೆಯಿಂದಾಗುವ ದುಷ್ಪರಿಣಾಮವೂ ಅರ್ಥವಾಗಬಹುದು. ಗೋಧಿಯಲ್ಲಿನ ಎಂಡೋಸ್ಪರ್ಮ್ ಅನ್ನು ತೆಗೆದ ನಂತರ ಅದನ್ನು ಸಂಸ್ಕರಿಸುವ ಹಂತದಲ್ಲಿ ಅದಕ್ಕೆ ಬೆಂಜಾಯ್ ಫೆರಾಕ್ಸೈಡ್ ಅನ್ನು ಬಳಸಲಾಗುತ್ತದೆ. ಇದು ಇದು ಹಂದಿ, ಇಲಿಗಳಿಗೆ ಚುಚ್ಚುವ ಅಲೋಕ್ಸೆನ್ ಎಂಬ ರಾಸಾಯನಿಕ. ಇದನ್ನೇ ಬಟ್ಟೆ ತಯಾರಿಕಾ ಕೈಗಾರಿಕೆಗಳಲ್ಲೂ ಬಳಸಲಾಗುತ್ತದೆ. ರುಚಿ ಹೆಚ್ಚಿಸಲು ಹೋಟೆಲ್ಗಳಲ್ಲಿ ಬಳಸುವ ಅಜಿನೋಮೋಟೊ, ಮಿನರಲ್ ಆಯಿಲ್, ಟೇಸ್ಟ್ ಮೇಕರ್ಸ್, ಪ್ರಸಿರ್ವೇಟೀಸ್ಗಳಲ್ಲೂ ಇದು ಬಳಕೆಯಾಗುತ್ತದೆ. ಮೈದಾದಲ್ಲಿ ಸೇರುವ ಈ ರಾಸಾಯನಿಕ ಅಂಶ ನಮ್ಮ ರಕ್ತದಲ್ಲಿ ಆಮ್ಲೀಯ ಅಂಶವನ್ನು ಹೆಚ್ಚಿಸುತ್ತದೆ. ಈ ಕಾರಣಕ್ಕೇ ಮೈದಾದ ಆಹಾರಗಳನ್ನು ತಿಂದಾಗ ಅಸಿಡಿಟಿ ಕಾಣಿಸಿಕೊಳ್ಳುವುದು.ಜತೆಗೆ ಸಂಪೂರ್ಣ ಧಾನ್ಯದಲ್ಲಿರುವ (ಗೋಧಿ) ಹೊರಭಾವನ್ನೆಲ್ಲ ತೆಗೆದು ಹಾಕಿದ ಬಳಿಕದ ಉಳಿಕೆಯಲ್ಲಿ ಮೈದಾ ಹಿಟ್ಟನ್ನು ತಯಾರಿಸುವುದರಿಂದ ಅದರ ನಾರಿನಂಶ ಮತ್ತು ಮುಖ್ಯ ಪೋಷಕಾಂಶಗಳು ಕಡಿಮೆಯಾಗಿರುತ್ತವೆ. ಇದರ ಪರಿಣಾಮವಾಗಿ ಮೈದಾ ಆಧಾರಿತ ಆಹಾರ ಬೇಗ ಜೀರ್ಣವಾಗುವ ಸಾಧ್ಯತೆ ಇದೆ. ನಾರಿನಂಶ ಕಡಿಮೆಯಿರುವುದರಿಂದ ಹೊಟ್ಟೆ ತುಂಬಿದ ಅನುಭವವೂ ಕಡಿಮೆ ಇರಬಹುದು. ಹೀಗಾಗಿ ಹೆಚ್ಚು ತಿನ್ನುತ್ತೇವೆ. ಇದರಿಂದ ದೇಹದಲ್ಲಿ ಕೊಬ್ಬಿನಂಶ ಜಾಸ್ತಿಯಾಗುತ್ತದೆ. ಇಂಥ ಕೊಬ್ಬು ಆರ್ಟರೀಸ್ಗಳನ್ನು ಮುಚ್ಚಿ ಹೃದಯ ಸಮಸ್ಯೆಯಂಥವುಗಳಿಗೆ ಕಾರಣವಾಗಬಹುದು.ಜತೆಗೆ ಮೈದಾದಲ್ಲಿ ಗೋಧಿಗಿಂತಲೂ ಹೆಚ್ಚಿನ ಗ್ಲುಟೆನ್ ಅಂಶ ಇರುತ್ತದೆ. ಜೀರ್ಣ ಸಮಸ್ಯೆ ಇರುವವರನ್ನು ಇದು ತೀವ್ರ ತೊಂದರೆಗೆ ಈಡು ಮಾಡುತ್ತದೆ. ಸಣ್ಣ ಕರುಳಿನ ಕೊನೆಯ ಭಾಗದಲ್ಲಿ ವಿಲ್ಲೈಗಳು ಎಂಬ ಕೂದಲಿನಂತ ರಚನೆ ಇರುತ್ತದೆ. ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ವಿಲ್ಲೈಗಳ ಪಾತ್ರ ಬಹುಮುಖ್ಯ. ಮೈದಾದಲ್ಲಿನ ಗ್ಲುಟೆನ್ ಅಂಶ ಈ ವಿಲ್ಲೈಗಳನ್ನು ಬ್ಲಾಕ್ ಮಾಡುತ್ತವೆ. ಹೀಗಾಗಿ ರೋಗ ನಿರೋಧಕ ಶಕ್ತಿ ಕುಸಿದು, ಗಟ್ನ ಆರೋಗ್ಯ ಕೆಡುತ್ತದೆ. ಮಾತ್ರವಲ್ಲ ಇದರಿಂದ ಸ್ವತಂತ್ರ ಒಂಟಿ ಜೀವಕೋಶಗಳ (ಫ್ರೀ ರಾಡಿಕಲ್ಸ್) ಸಂಖ್ಯೆ ಹೆಚ್ಚಾಗಿ, ಬಲುಬೇಗ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ, ತೂಕ ಹೆಚ್ಚಳದ ನಿಜವಾದ ಸಮಸ್ಯೆ ಮೈದಾದಿಂದ ಮಾತ್ರವೇ ಬರುವುದಿಲ್ಲ. ಮೈದಾ ಯಾವ ರೂಪದಲ್ಲಿ ನಮ್ಮ ತಟ್ಟೆಗೆ ಬರುತ್ತದೆ; ಹೊಟ್ಟೆ ಸೇರುತ್ತದೆ ಎನ್ನುವುದು ಅತ್ಯಂತ ಗಮನಾರ್ಹ ಸಂಗತಿ. ಪಫ್, ಬಿಸ್ಕತ್, ಕೇಕ್, ಪೇಸ್ಟ್ರಿ, ಪಿಜ್ಜಾ, ಬರ್ಗರ್ ಬನ್, ನೂಡಲ್ಸ್—ಇವುಗಳಲ್ಲಿ ಮೈದಾ ಜೊತೆಗೆ ಸಕ್ಕರೆ, ಬೆಣ್ಣೆ ಅಥವಾ ಇತರ ಕೊಬ್ಬು, ಚೀಸ್, ಸಾಸ್ ಮುಂತಾದವು ಸೇರಿರಬಹುದು. ಹೀಗಾಗಿ ಆಹಾರದ ಒಟ್ಟು ಕ್ಯಾಲೊರಿ ಬಹಳ ಹೆಚ್ಚಬಹುದು. ಅದರಲ್ಲೂ ಮುಖ್ಯವಾಗಿ ಮೈದಾ ಮತ್ತು ಸಕ್ಕರೆ ಸೇರಿದರೆ ಅದರ ಒಟ್ಟಾರೆ ಗ್ಲೈಸಮಿಕ್ ಇಂಡೆಕ್ಸ್ (ಜಿಐ) ಹೆಚ್ಚುತ್ತದೆ. ಸಂಸ್ಕರಿಸಿದ ಧಾನ್ಯಗಳ ಹೆಚ್ಚಿನ ಸೇವನೆ ಮತ್ತು ಅಧಿಕ ತೂಕ/ಬೊಜ್ಜಿನ ಅಪಾಯದ ನಡುವೆ ಬಹಳ ನಿಕಟ ಸಂಬಂಧವಿದೆ ಎನ್ನುತ್ತವೆ ಅಧ್ಯಯನಗಳು. ಮತ್ತೊಂದೆಡೆ, ಸಂಪೂರ್ಣ ಧಾನ್ಯಗಳು ಹಸಿವನ್ನು ಕಡಿಮೆ ಮಾಡಿ ಹೊಟ್ಟೆ ತುಂಬಿದ ಅನುಭವ ಹೆಚ್ಚಿಸಿದರೆ, ಮೈದಾದಂಥ ಸಂಸ್ಕರಿತ ಆಹಾರ ವಸ್ತು ಹಸಿವನ್ನು ಶಮನ ಮಾಡುವುದರಲ್ಲಿ ಸೋಲುತ್ತವೆ, ಬದಲಾಗಿ ಕ್ರೇವಿಂಗ್ ಹೆಚ್ಚಿಸುತ್ತದೆ ಎನ್ನುತ್ತವೆ ಕೆಲವು ಅಧ್ಯಯನಗಳು. ಹಾಗಾದರೆ ಮೈದಾ ಸಂಪೂರ್ಣ ಬಿಟ್ಟುಬಿಡಬೇಕೇ?ಎಲ್ಲರಿಗೂ ಹಾಗೆ ಹೇಳಲು ಸಾಧ್ಯವಿಲ್ಲ. ಆದರೆ ತೂಕ ಇಳಿಸಿಕೊಳ್ಳುತ್ತಿರುವವರು ಮೈದಾ ಆಧಾರಿತ ಅತಿಸಂಸ್ಕರಿತ ಆಹಾರವನ್ನು ಕಡಿಮೆ ಮಾಡುವುದು ಬಹಳ ಉಪಯುಕ್ತ. ಉದಾಹರಣೆಗೆ ಬೆಳಗಿನ ಉಪಾಹಾರಕ್ಕೆ ಪ್ರತಿದಿನ ಪಫ್ ಅಥವಾ ಬಿಸ್ಕತ್ ಬದಲು ಇಡ್ಲಿ, ದೋಸೆ, ರಾಗಿ, ಓಟ್ಸ್, ತರಕಾರಿ ಉಪ್ಮಾ ಅಥವಾ ಇತರ ಪೌಷ್ಟಿಕ ಆಯ್ಕೆಗಳನ್ನು ಮಾಡಬಹುದು. ಸಾಧ್ಯವಾದಷ್ಟು ಬೆಳಗ್ಗೆ ಮತ್ತು ರಾತ್ರಿಯ ಸಂದರ್ಭದಲ್ಲಿ ಗೋಧಿ ಅಥವಾ ಗೋಧಿಯ ಉತ್ಪನ್ನ (ಮೈದಾ)ದಿಂದ ತಯಾರಿಸಿದ ಆಹಾರಗಳ ಬದಲಿಗೆ ಸಾಮಾನ್ಯ ಕಾರ್ಬೋಹೈಡ್ರೇಡ್ ಅನ್ನು ಒಳಗೊಂಡ ಆಹಾರ ಉತ್ತಮ. ಇಲ್ಲಿ ಮತ್ತೊಂದು ತಪ್ಪು ಕಲ್ಪನೆ ಇದೆ—‘ಬ್ರೌನ್ ಬ್ರೆಡ್ ಎಂದರೆ ಯಾವಾಗಲೂ ಆರೋಗ್ಯಕರ’ ಎಂಬುದು. ಬಣ್ಣ ಮಾತ್ರ ನೋಡಿ ನಿರ್ಧಾರ ಮಾಡಬಾರದು. ಲೇಬಲ್ನಲ್ಲಿ whole grain ಅಥವಾ whole wheat ಪ್ರಮಾಣ, ನಾರಿನಂಶ ಮತ್ತು ಸೇರಿಸಿರುವ ಸಕ್ಕರೆ ಮುಂತಾದವುಗಳನ್ನು ನೋಡುವುದು ಉತ್ತಮ.ಮೈದಾ ತೂಕ ಹೆಚ್ಚಿಸುವುದು ಹೇಗೆ?ಮುಖ್ಯವಾಗಿ ಮೂರು ಸಂಗತಿಗಳು. ಮೊದಲನೆಯದು, ಕಡಿಮೆ ನಾರಿನಂಶದಿಂದ ಹೊಟ್ಟೆ ತುಂಬಿದ ಅನುಭವ ಕಡಿಮೆಯಾಗಬಹುದು. ಎರಡನೆಯದು, ಮೈದಾ ಆಹಾರಗಳನ್ನು ಸುಲಭವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಹುದು. ಮೂರನೆಯದು, ಮೈದಾ ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೊರಿಯ ಇತರ ಪದಾರ್ಥಗಳೊಂದಿಗೆ ಬರುತ್ತದೆ.ಹೀಗಾಗಿ ‘ಮೈದಾ ತಿಂದರೆ ಕೊಬ್ಬು ಆಗುತ್ತದೆ’ ಎನ್ನುವುದಕ್ಕಿಂತ ಮೈದಾ ಆಧಾರಿತ ಅತಿಸಂಸ್ಕರಿತ ಆಹಾರವನ್ನು ಹೆಚ್ಚು ಸೇವಿಸಿದರೆ ಒಟ್ಟು ಕ್ಯಾಲೊರಿ ಹೆಚ್ಚಾಗಿ ತೂಕ ಹೆಚ್ಚುವ ಸಾಧ್ಯತೆ ಇದೆ ಎನ್ನುವುದು ಹೆಚ್ಚು ವೈಜ್ಞಾನಿಕವಾದ ಮಾತು. ಮೈದಾವನ್ನು ಶತ್ರುವಾಗಿಸುವ ಅಗತ್ಯವಿಲ್ಲ. ಆದರೆ ತಟ್ಟೆಯಲ್ಲಿ ಸಂಪೂರ್ಣ ಧಾನ್ಯ, ತರಕಾರಿ, ಬೇಳೆ, ಪ್ರೋಟೀನ್ಗಳಿಗೆ ಜಾಗ ಕೊಟ್ಟರೆ ಮೈದಾ ತಾನಾಗಿಯೇ ಕಡಿಮೆಯಾಗುತ್ತದೆ.