ಧಮ್ಮ ಚಕ್ರವು ನಮ್ಮ ಎದೆಗಳಲ್ಲಿ ತಿರುಗಲಿ
ಬೌದ್ಧ ಧಮ್ಮ ಸ್ವೀಕಾರದ ಮೂಲಕ ಅಂಬೇಡ್ಕರ್ ಹಂಬಲಿಸಿದ ಸಮಾನತೆ, ಆತ್ಮಗೌರವ ಮತ್ತು ಮಾನವ ವಿಮೋಚನೆ ಸಮಾಜದಲ್ಲಿ ಸಾಕಾರಗೊಂಡಿವೆಯೆ?ಭಾರತದ ಸಾಮಾಜಿಕ ಮತ್ತು ವೈಚಾರಿಕ ಇತಿಹಾಸದಲ್ಲಿ ಅಕ್ಟೋಬರ್ 14ಕ್ಕೆ ವಿಶೇಷ ಮಹತ್ವವಿದೆ. ಪ್ರತಿವರ್ಷ ಈ ದಿನದಂದು ಆಚರಿಸಲಾಗುವ ‘ಧಮ್ಮಚಕ್ರ ಪ್ರವರ್ತನ ದಿನ’ವು ಬರೀ ಧಾರ್ಮಿಕ ಉತ್ಸವವಲ್ಲ; ಅದು ಸಮಾನತೆ, ಆತ್ಮಗೌರವ ಮತ್ತು ದಾಸ್ಯ ವಿಮೋಚನೆಯ

ಬೌದ್ಧ ಧಮ್ಮ ಸ್ವೀಕಾರದ ಮೂಲಕ ಅಂಬೇಡ್ಕರ್ ಹಂಬಲಿಸಿದ ಸಮಾನತೆ, ಆತ್ಮಗೌರವ ಮತ್ತು ಮಾನವ ವಿಮೋಚನೆ ಸಮಾಜದಲ್ಲಿ ಸಾಕಾರಗೊಂಡಿವೆಯೆ?ಭಾರತದ ಸಾಮಾಜಿಕ ಮತ್ತು ವೈಚಾರಿಕ ಇತಿಹಾಸದಲ್ಲಿ ಅಕ್ಟೋಬರ್ 14ಕ್ಕೆ ವಿಶೇಷ ಮಹತ್ವವಿದೆ. ಪ್ರತಿವರ್ಷ ಈ ದಿನದಂದು ಆಚರಿಸಲಾಗುವ ‘ಧಮ್ಮಚಕ್ರ ಪ್ರವರ್ತನ ದಿನ’ವು ಬರೀ ಧಾರ್ಮಿಕ ಉತ್ಸವವಲ್ಲ; ಅದು ಸಮಾನತೆ, ಆತ್ಮಗೌರವ ಮತ್ತು ದಾಸ್ಯ ವಿಮೋಚನೆಯ ಸಂಕೇತ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನಾಗಪುರದ ದೀಕ್ಷಾಭೂಮಿಯಲ್ಲಿ 1956ರ ಅ. 14ರಂದು ಬೌದ್ಧ ಧಮ್ಮ ಸ್ವೀಕರಿಸಿದರು. ಆ ಐತಿಹಾಸಿಕ ಘಟನೆಗೀಗ 70 ವರ್ಷ. ಬೌದ್ಧ ಧಮ್ಮ ಸ್ವೀಕಾರದ ಮೂಲಕ, ಕ್ಷೀಣಿಸಿದ್ದ ಬೌದ್ಧ ಧಮ್ಮದ ಚಕ್ರವನ್ನು ಅಂಬೇಡ್ಕರ್ ಮತ್ತೆ ಚಲನೆಗೆ ತಂದರು. ಅದನ್ನು ಸಾಮಾಜಿಕ ಪರಿವರ್ತನೆಯ ಶಕ್ತಿಯನ್ನಾಗಿ ರೂಪಿಸಿದರು. ಅಂದು ತಿರುಗಲಾರಂಭಿಸಿದ ಧಮ್ಮಚಕ್ರವು ಶೋಷಿತರ ಆತ್ಮಗೌರವ, ಸಮಾನತೆ ಮತ್ತು ಮಾನವ ಘನತೆಯ ಹೊಸ ಪಯಣಕ್ಕೆ ನಾಂದಿಯಾಯಿತು.ಸಾಮ್ರಾಟ ಅಶೋಕನ ಬೌದ್ಧ ಧಮ್ಮ ಸ್ವೀಕಾರದ ಐತಿಹಾಸಿಕ ಸ್ಮೃತಿಯೊಂದಿಗೆ ಬೆಸೆದುಕೊಂಡಿರುವ ವಿಜಯದಶಮಿಯ ದಿನವನ್ನು ಆಯ್ದುಕೊಂಡು ಅಂಬೇಡ್ಕರ್ ಧಮ್ಮದೀಕ್ಷೆ ಪಡೆದರು. ಅಂದಿನಿಂದ ನಾಗಪುರದ ದೀಕ್ಷಾಭೂಮಿಯು ಧಾರ್ಮಿಕ ಕೇಂದ್ರವಾಗಿ ಮಾತ್ರ ಉಳಿಯದೆ, ಸಾಮಾಜಿಕ ವಿಮೋಚನೆ ಮತ್ತು ವೈಚಾರಿಕ ಪ್ರತಿರೋಧದ ಸಂಕೇತವಾಗಿ ಬೆಳೆದಿದೆ. ಪ್ರತಿವರ್ಷ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಅನುಯಾಯಿಗಳ ಸಮಾಗಮವು ಈ ಐತಿಹಾಸಿಕ ಪರಿವರ್ತನೆಯ ಸ್ಮೃತಿಯನ್ನು ಜೀವಂತವಾಗಿರಿಸುತ್ತದೆ.‘ಧಮ್ಮಚಕ್ರ’ವು ಒಂದು ಸಂಕೇತ ಮಾತ್ರವಲ್ಲ; ಅದು ಬದುಕಿನ ಪರಿವರ್ತನೆಯನ್ನು ಸೂಚಿಸುವ ತಾತ್ತ್ವಿಕ ರೂಪಕ. ಧಮ್ಮವು ಮನುಷ್ಯನಿಗೆ ನೈತಿಕವಾಗಿ ಬದುಕುವ ಮಾರ್ಗವನ್ನು ತೋರಿಸಿದರೆ, ಚಕ್ರವು ಆ ಮಾರ್ಗದನಿರಂತರ ಚಲನೆಯನ್ನು ಪ್ರತಿನಿಧಿಸುತ್ತದೆ. ಅಜ್ಞಾನದಿಂದ ಪ್ರಜ್ಞೆಯತ್ತ, ದ್ವೇಷದಿಂದ ಕರುಣೆಯತ್ತ, ಅಸಮಾನತೆಯಿಂದ ಸಮಾನತೆಯತ್ತ ಸಾಗುವ ಪಯಣವೇ ಧಮ್ಮಚಕ್ರದ ಅಂತರಾರ್ಥ. ಮನುಷ್ಯನು ತನ್ನ ದುಃಖವನ್ನು ಅರಿಯುವುದರೊಂದಿಗೆ ಮತ್ತೊಬ್ಬರ ನೋವಿಗೂ ಸ್ಪಂದಿಸುವ ಹೃದಯವನ್ನು ಬೆಳೆಸಿಕೊಳ್ಳಬೇಕು ಎಂಬುದು ಧಮ್ಮದ ಆಶಯ.ಗೌತಮ ಬುದ್ಧರು ವಾರಾಣಸಿ ಸಮೀಪದ ಸಾರನಾಥದ ಮೃಗದಾವನದಲ್ಲಿ ತಮ್ಮ ಐವರು ಹಿಂದಿನ ಸಂಗಡಿಗರಿಗೆ ‘ಧಮ್ಮಚಕ್ಕಪ್ಪವತ್ತನ ಸುತ್ತ’ ಎಂಬ ಮೊದಲ ಪ್ರವಚನ ನೀಡಿದರು. ನಾಲ್ಕು ಆರ್ಯ ಸತ್ಯಗಳು ಮತ್ತು ಆರ್ಯ ಅಷ್ಟಾಂಗ ಮಾರ್ಗವನ್ನು ವಿವರಿಸುವ ಮೂಲಕ ದುಃಖದ ಸ್ವರೂಪ, ಅದರ ಕಾರಣ, ದುಃಖನಿರೋಧದ ಸಾಧ್ಯತೆ ಮತ್ತು ಅದನ್ನು ಸಾಧಿಸುವ ಮಾರ್ಗವನ್ನು ಪ್ರತಿಪಾದಿಸಿದರು. ದುಃಖವನ್ನು ವಿಧಿಯೆಂದು ಒಪ್ಪಿಕೊಳ್ಳದೆ, ಅದರ ಕಾರಣಗಳನ್ನು ಅರಿತು ಮುಕ್ತಿಯ ಮಾರ್ಗವನ್ನು ಕಂಡುಕೊಳ್ಳುವುದೇ ಬುದ್ಧರ ಬೋಧನೆಯ ಸಾರವಾಗಿದೆ. ಈ ಪ್ರವಚನದ ಮೂಲಕ ಬೌದ್ಧ ಧಮ್ಮದ ಸಾರ್ವಜನಿಕ ಬೋಧನಾ ಕಾರ್ಯಕ್ಕೆ ಚಾಲನೆ ದೊರೆಯಿತು.ಜೈನ ಧರ್ಮದಲ್ಲಿಯೂ ಧರ್ಮಚಕ್ರಕ್ಕೆ ಮಹತ್ವವಿದೆ. ಜೈನ ಪರಂಪರೆಯಲ್ಲಿ ಅದು ಧರ್ಮಮಾರ್ಗ, ಅಹಿಂಸೆ, ಆತ್ಮಸಂಯಮ ಮತ್ತು ಆಧ್ಯಾತ್ಮಿಕ ವಿಮೋಚನೆಯ ಆಶಯಗಳೊಂದಿಗೆ ಸಂಬಂಧ ಹೊಂದಿದೆ.ಬೌದ್ಧ ಮತ್ತು ಜೈನ ಪರಂಪರೆಗಳ ತಾತ್ತ್ವಿಕ ನೆಲೆಗಳು ಭಿನ್ನವಾಗಿದ್ದರೂ, ನೈತಿಕ ಬದುಕು ಮತ್ತು ಆತ್ಮಶಿಸ್ತಿನ ಮಹತ್ವವನ್ನು ಎರಡೂ ಒತ್ತಿಹೇಳುತ್ತವೆ. ಹೀಗಾಗಿ ಧರ್ಮಚಕ್ರವು ಜ್ಞಾನ, ನೈತಿಕತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತವಾಗಿ ಗುರ್ತಿಸಿಕೊಂಡಿದೆ.ಧಮ್ಮಚಕ್ರದ ನಿಜವಾದ ಮಹತ್ವವು ಅದರ ರೂಪದಲ್ಲಾಗಲಿ, ಆಚರಣೆಯಲ್ಲಾಗಲಿ ಮಾತ್ರವಿಲ್ಲ. ಅದು ಪ್ರತಿನಿಧಿಸುವ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಲ್ಲಿದೆ. ಪ್ರಜ್ಞೆಯು ಅನ್ಯಾಯವನ್ನು ಗುರ್ತಿಸುವ ದೃಷ್ಟಿಯನ್ನು ನೀಡುತ್ತದೆ. ಕರುಣೆಯು ಮತ್ತೊಬ್ಬರ ನೋವಿಗೆ ಸ್ಪಂದಿಸುವ ಹೃದಯವನ್ನು ಬೆಳೆಸುತ್ತದೆ. ಸಮತೆಯು ಪ್ರತಿಯೊಬ್ಬರ ಘನತೆಯನ್ನು ಗೌರವಿಸುವ ಸಮಾಜದ ನೆಲೆಯನ್ನು ನಿರ್ಮಿಸುತ್ತದೆ. ಈ ಮೌಲ್ಯಗಳು ವ್ಯಕ್ತಿಯ ಬದುಕಿನಿಂದ ಕುಟುಂಬಕ್ಕೆ, ಕುಟುಂಬದಿಂದ ಸಮುದಾಯಕ್ಕೆ ಮತ್ತು ಸಮುದಾಯದಿಂದ ಸಮಾಜಕ್ಕೆ ವಿಸ್ತರಿಸಿದಾಗ ಧಮ್ಮಚಕ್ರವು ನಿಜವಾದ ಪರಿವರ್ತನೆಯ ಶಕ್ತಿಯಾಗುತ್ತದೆ.ಅಂಬೇಡ್ಕರ್ ಅವರ ಪಾಲಿಗೆ ಬೌದ್ಧ ಧಮ್ಮವು ಆಧ್ಯಾತ್ಮಿಕಆಶ್ರಯ ಮಾತ್ರವಾಗಿರಲಿಲ್ಲ. ಅದು ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಅನ್ಯಾಯವನ್ನು ಪ್ರಶ್ನಿಸುವ ವೈಚಾರಿಕ ಶಕ್ತಿ ಹಾಗೂ ಸಮಾನತೆಯ ಸಮಾಜ ನಿರ್ಮಿಸುವ ನೈತಿಕ ಮಾರ್ಗಆಗಿತ್ತು. ಮನುಷ್ಯನ ಘನತೆಯನ್ನು ಜನ್ಮದ ಆಧಾರದ ಮೇಲೆ ನಿರ್ಧರಿಸುವ ವ್ಯವಸ್ಥೆಯನ್ನು ಅವರು ನಿರಾಕರಿಸಿದರು. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಪರಸ್ಪರ ಪೂರಕವಾದ ಮೌಲ್ಯಗಳು.ಸಮಾನತೆಯಿಲ್ಲದ ಸ್ವಾತಂತ್ರ್ಯವು ಅಸಮಾನತೆಯನ್ನು ಮುಂದುವರಿಸಬಹುದು. ಭ್ರಾತೃತ್ವವಿಲ್ಲದ ಸಮಾಜದಲ್ಲಿ ಪರಸ್ಪರ ಗೌರವ ಮತ್ತು ಸಹಬಾಳ್ವೆ ನೆಲೆಗೊಳ್ಳಲಾರವು. ಆದ್ದರಿಂದ ಜಾತಿ, ಧರ್ಮ, ಭಾಷೆ ಮತ್ತು ವರ್ಗಗಳ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವ ಪ್ರವೃತ್ತಿಗಳನ್ನು ಮೀರಿ, ಎಲ್ಲರಿಗೂ ಸಮಾನ ಘನತೆ ಮತ್ತು ಅವಕಾಶಗಳು ದೊರೆಯುವ ಸಮಾಜವನ್ನು ನಿರ್ಮಿಸುವುದು ಅಗತ್ಯವಾಗಿದೆ.ಬಾಬಾಸಾಹೇಬರ ಧಮ್ಮದೀಕ್ಷೆಗೆ ಎಪ್ಪತ್ತು ವರ್ಷಗಳು ತುಂಬಿರುವ ಐತಿಹಾಸಿಕ ಸಂದರ್ಭದಲ್ಲಿ ಗೌತಮ ಬುದ್ಧರು ಬೋಧಿಸಿದ ಪ್ರಜ್ಞೆ, ಕರುಣೆ ಮತ್ತು ಸಮತೆಯ ಮಾರ್ಗ ಸಮಾಜಕ್ಕೆ ಅನುಸರಣೆಯ ಪಥವಾಗಬೇಕು. ಧಮ್ಮಚಕ್ರವು ದೀಕ್ಷಾಭೂಮಿಯಲ್ಲಿ ತಿರುಗಿದರೆ ಸಾಲದು. ಅದು ನಮ್ಮ ಮನಸ್ಸಿನಲ್ಲಿ ತಿರುಗಬೇಕು, ನಮ್ಮ ಮಾತಿನಲ್ಲಿ ಮೊಳಗಬೇಕು ಮತ್ತು ನಮ್ಮ ಕೃತಿಗಳಲ್ಲಿ ಜೀವಂತವಾಗಬೇಕು.