ಸಂಚಲನ ಮೂಡಿಸಿದ ಸ್ಟ್ರಿಂಗ್ಆಪರೇಷನ್: ರಾಜಕಾರಣದ ದಿಕ್ಕು ಬದಲಿಸಿದ ‘ಮಾರುವೇಷ’
ಸುಳ್ಳು ಸುದ್ದಿಗಳು, ಎಐ ತಂತ್ರಜ್ಞಾನದ ಮೂಲಕ ರೂಪಿತವಾಗುವ ದೃಶ್ಯಾವಳಿಗಳು, ಯೂಟ್ಯೂಬ್ ಮೂಲಕ ಜನಸಾಮಾನ್ಯರ ಮಿದುಳನ್ನು ಕದಡುವ ಸಾಮರ್ಥ್ಯವಿದ್ದವರು ಮಾತ್ರ ಮುಂದಿನ ದಿನಗಳಲ್ಲಿ ರಾಜಕೀಯ ಚಕ್ರಾಧಿಪತಿ ಆಗಲು ಸಾಧ್ಯ. ಇದು ನೇಪಾಳ ಮತ್ತು ತಮಿಳುನಾಡಿನಲ್ಲಿ ರಾಜಕೀಯ ಬದಲಾವಣೆಗಳಿಗೆ ಕಾರಣವಾಗಿರುವುದು ಇತಿಹಾಸ. ಇತಿಹಾಸದ ಪುಟಗಳು ಈಗ ತೆರೆದುಕೊಂಡಿವೆ. ಒಬ್ಬ ವ್ಯಕ್ತಿಯನ್ನು

ಸುಳ್ಳು ಸುದ್ದಿಗಳು, ಎಐ ತಂತ್ರಜ್ಞಾನದ ಮೂಲಕ ರೂಪಿತವಾಗುವ ದೃಶ್ಯಾವಳಿಗಳು, ಯೂಟ್ಯೂಬ್ ಮೂಲಕ ಜನಸಾಮಾನ್ಯರ ಮಿದುಳನ್ನು ಕದಡುವ ಸಾಮರ್ಥ್ಯವಿದ್ದವರು ಮಾತ್ರ ಮುಂದಿನ ದಿನಗಳಲ್ಲಿ ರಾಜಕೀಯ ಚಕ್ರಾಧಿಪತಿ ಆಗಲು ಸಾಧ್ಯ. ಇದು ನೇಪಾಳ ಮತ್ತು ತಮಿಳುನಾಡಿನಲ್ಲಿ ರಾಜಕೀಯ ಬದಲಾವಣೆಗಳಿಗೆ ಕಾರಣವಾಗಿರುವುದು ಇತಿಹಾಸ. ಇತಿಹಾಸದ ಪುಟಗಳು ಈಗ ತೆರೆದುಕೊಂಡಿವೆ. ಒಬ್ಬ ವ್ಯಕ್ತಿಯನ್ನು ಸಾಮ್ರಾಟನನ್ನಾಗಿಯೂ ಮಾಡಬಹುದು, ಮೂಲೆಗುಂಪೂ ಮಾಡಬಹುದು ಎನ್ನುವುದು ಸಾಬೀತಾಗುತ್ತಿದೆ. ಮುದ್ರಣ ಮಾಧ್ಯಮ ಆರಂಭವಾದ ಹೊಸತಿನಲ್ಲಿ ಇದು ಅಜ್ಞಾನ ಪ್ರಸಾರದ ಸಾಧನ ಎಂದು ದೂರಲಾಯಿತಂತೆ. ಇದನ್ನು ಒಳಿತಿಗೆ ಬಳಸಿಕೊಳ್ಳುವ ಬದಲು ಸಮಾಜದಲ್ಲಿ ಕೆಟ್ಟದ್ದಕ್ಕೆ ಬಳಸುವ ಸಾಧ್ಯತೆ ಇದೆ ಎಂದು ಅನುಮಾನಿಸಿದ್ದು ಈಗ ನಿಜವಾಗಿದೆ. ಭ್ರಷ್ಟಾಚಾರ, ಅಕ್ರಮ ಚಟುವಟಿಕೆಗಳನ್ನು ಬಯಲಿಗೆಳೆಯಲು ಮಾಧ್ಯಮವು ಬಳಸಬೇಕಾದ ಮಾರುವೇಷದ ಕಾರ್ಯಾಚರಣೆ (ಸ್ಟ್ರಿಂಗ್ಆಪರೇಷನ್) ಇಂದು ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಿದೆಯಲ್ಲದೆ, ರಾಜ್ಯ ರಾಜಕಾರಣದಲ್ಲಿ ಇನ್ನಿಲ್ಲದ ಸಂಚಲನವನ್ನುಂಟು ಮಾಡಿದೆ. ಕರ್ನಾಟಕದ ಸುದೀರ್ಘಕಾಲದ ಮುಖ್ಯಮಂತ್ರಿ ಎಂಬ ದಾಖಲೆ ಬರೆದ, ದೇವರಾಜ ಅರಸು ಅವರ ಆಳ್ವಿಕೆಯ ದಾಖಲೆಯನ್ನು ಮೀರಿ ಬೆಳೆದ ಸಮಾಜವಾದಿ ರಾಜಕಾರಣಿ ಎಂದೇ ಹೆಸರು ಗಳಿಸಿದ್ದ ಸಿದ್ದರಾಮಯ್ಯ ಅವರೂ ಕೂಡ ಮಾರುವೇಷದ ಕಾರ್ಯಾಚರಣೆಯ ಬಲೆಗೆ ಬಿದ್ದಿರುವುದು ಇತ್ತೀಚಿನ ಕಾಂಗ್ರೆಸ್ ರಾಜಕೀಯದ ಅತ್ಯಂತ ದೊಡ್ಡ ಬೆಳವಣಿಗೆ ಎಂದೇ ಹೇಳಬೇಕು.ಈ ಎಲ್ಲ ವಿದ್ಯಮಾನಗಳಿಗೆ ಮೂಲ ಎರಡೂವರೆ ವರ್ಷಗಳ ಅಧಿಕಾರಾವಧಿ ಎಂಬ ದಾಳ. ರಾಜ್ಯದಲ್ಲಿ 135 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅದರ ಯಶಸ್ಸನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ತಮ್ಮದೇ ಎಂದು ಪ್ರತಿಪಾದಿಸಿದರು. ಆ ಸಮಯದಲ್ಲಿ ಕಗ್ಗಂಟಾಗಿದ್ದ ಪ್ರಶ್ನೆಯನ್ನು ಹೈಕಮಾಂಡ್ ಬಗೆಹರಿಸಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಆದರೆ ಆ ಸಂದರ್ಭದಲ್ಲಿ ಹೈಕಮಾಂಡ್ ಒಂದು ಷರತ್ತನ್ನು ವಿಧಿಸಿತ್ತಂತೆ. ಎರಡೂವರೆ ವರ್ಷಗಳ ನಂತರ ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ಅವರಿಗೆ ಅಧಿಕಾರ ಬಿಟ್ಟುಕೊಡಬೇಕೆಂಬುದೇ ಆ ಷರತ್ತು. ಅದು ಹೈಕಮಾಂಡ್ ಮಟ್ಟದಲ್ಲೇ ಆದ ಅಲಿಖಿತ ಒಪ್ಪಂದವಾದ್ದರಿಂದ ಸುದ್ದಿಯಾಗಲಿಲ್ಲ. ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನೂ ಪಕ್ಷ ನೀಡಲಿಲ್ಲ. ಆದರೆ ಎರಡೂವರೆ ವರ್ಷಗಳ ನಂತರ ಡಿ.ಕೆ.ಶಿವಕುಮಾರ್ ಅವರು ಹೋದಲ್ಲಿ ಬಂದಲ್ಲಿ, ಅಧಿಕಾರ ಹಸ್ತಾಂತರಿಸಿ ಎಂದು ಸಿದ್ದರಾಮಯ್ಯನವರನ್ನು ಅಟಕಾಯಿಸತೊಡಗಿದಾಗ, ಸಿದ್ದರಾಮಯ್ಯ ಅಷ್ಟು ಸುಲುಭವಾಗಿ ಬಿಟ್ಟುಕೊಡಲಿಲ್ಲ. ನಾಲ್ಕು ತಿಂಗಳ ಆ ಅವಧಿಯಲ್ಲಿ ಶಿವಕುಮಾರ್ಅವರಿಂದ ತಪ್ಪಿಸಿಕೊಂಡು ಓಡಾಡುವುದೇ ಸಿದ್ದರಾಮಯ್ಯ ಅವರಿಗೆ ಕಷ್ಟವಾಯಿತು.‘ನಾನೇ ಐದು ವರ್ಷ ಸಿಎಂ’ ಎಂದು ಸಿದ್ದರಾಮಯ್ಯ ಘರ್ಜಿಸುತ್ತಲೇ ಇದ್ದರು. ಅತ್ತ ಶಿವಕುಮಾರ್, ಹೈಕಮಾಂಡಿನ ಮೇಲೆ ಒತ್ತಡ ಹೇರುತ್ತಾ, ಶತ್ರು ಸಂಹಾರ ಹೋಮ ಮಾಡಿಸುತ್ತಾ ತಮ್ಮ ಸತತ ಪ್ರಯತ್ನವನ್ನು ಮಾಡುತ್ತಲೇ ಇದ್ದರು. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಕುರ್ಚಿ ಬಿಟ್ಟುಕೊಡುವುದಿಲ್ಲ ಎಂದು ಹೇಳುತ್ತಲೇ ಇದ್ದರು. ಸಂಪುಟ ಪುನರ್ರಚನೆ ಮಾಡುವುದಾಗಿ ಘೋಷಿಸಿದರು. ಅವರು ದೆಹಲಿಗೆ ಕಡೆಯ ಬಾರಿ ಹೋದದ್ದು, ಸಂಪುಟ ಪುನರ್ರಚನೆಗೆ ಹೈಕಮಾಂಡ್ ಒಪ್ಪಿಗೆ ಪಡೆಯುವ ಸಲುವಾಗಿ. ಆದರೆ ವಾಪಸ್ಸು ಕಳಾಹೀನವಾಗಿ ಬಂದದ್ದು ರಾಜೀನಾಮೆ ಪತ್ರದೊಂದಿಗೆ.ಹುಲಿಯಂತಿದ್ದ ಹುಲಿಯಾ, ಮೌನವಾಗಿ ಆಧಿಕಾರ ಹಸ್ತಾಂತರಿಸಿ ತೆರೆಗೆ ಸರಿದದ್ದು ಅಂದು ರಾಜಕೀಯ ರಂಗದಲ್ಲಿ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿತ್ತು. ಇದು ಹೇಗೆ ಸಾಧ್ಯ? ಇಂದು ಅದು ಸ್ಟ್ರಿಂಗ್ಆಪರೇಷನ್ಕಾರ್ಯಾಚರಣೆಯ ಮೂಲಕ ಘಟನೆಯ ಪ್ಲ್ಯಾಷ್ಬ್ಯಾಕ್ ಬಿಚ್ಚಿಕೊಳ್ಳುತ್ತಿದೆ. ಸಿದ್ದರಾಮಯ್ಯನವರನ್ನು ಹನಿಟ್ರ್ಯಾಪ್ಗೆ ಕೆಡವಿರುವ ಸಿಡಿಯೊಂದನ್ನು ಅವರ ಮುಂದೆ ಇಟ್ಟು, ಅವರು ಸದ್ದಿಲ್ಲದೆ, ಮೌನವಾಗಿ ತೆರೆಯ ಹಿಂದಕ್ಕೆ ಸರಿಯುವಂತೆ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಆಸ್ಫೋಟಕಾರಿ ವಿಷಯವನ್ನು ಬಯಲಿಗೆಳೆದು, ರಾಜಕೀಯ ಆಟ ಶುರುಮಾಡಿರುವ ಕೇಂದ್ರ ಸಚಿವರೂ, ಮಾಜಿ ಮುಖ್ಯಮಂತ್ರಿಗಳೂ, ಜನತಾದಳದ ನಾಯಕರೂ ಆಗಿರುವ ಎಚ್.ಡಿ.ಕುಮಾರಸ್ವಾಮಿಯವರೇ ಈ ಅನುಮಾನವನ್ನು ವ್ಯಕ್ತಪಡಿಸುವ ಮೂಲಕ, ಮಾರುವೇಷದ ಕಾರ್ಯಾಚರಣೆಯ ತೀವ್ರತೆಯನ್ನು ಪ್ರಕಟಿಸಿದ್ದಾರೆ.Karnataka Politics: ಕುತೂಹಲ ಮೂಡಿಸಿದ ಸಿದ್ದರಾಮಯ್ಯ–ರಮೇಶ ಜಾರಕಿಹೊಳಿ ಭೇಟಿಮಾರುವೇಷ ಕಾರ್ಯಾಚರಣೆ ವಿಡಿಯೊ|ನಾನು ನಿರಪರಾಧಿ; ಸತ್ಯವೇ ಗೆಲ್ಲಲಿದೆ: ಸಿದ್ದರಾಮಯ್ಯಇತ್ತೀಚಿನ ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರ ಸಂಪುಟದಲ್ಲೇ ಸಚಿವರಾಗಿದ್ದ ಮೇಟಿ (ಈಗ ದಿವಂಗತ) ಎನ್ನುವ ಸಚಿವರೊಬ್ಬರ ಹನಿಟ್ರ್ಯಾಪ್ಸಿಡಿಯೊಂದು ಬಹಿರಂಗವಾಗಿ ಕೋಲಾಹಲ ಸೃಷ್ಟಿಸಿತ್ತು. ಸಚಿವರ ರಾಸಲೀಲೆಯ ಈ ಸಿಡಿ, ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿತ್ತಲ್ಲದೆ, ಪೆನ್ ಡ್ರೈವ್ ಮೂಲಕ ಸಾವಿರಾರು ಜನರಿಗೆ ತಲುಪಿತು. ಪರಮಾಪ್ತರೂ ಆಗಿದ್ದ ಸಚಿವರ ಈ ವರ್ತನೆಯಿಂದ ಬೇಸತ್ತಿದ್ದ ಸಿದ್ದರಾಮಯ್ಯ, ಅವರನ್ನು ಸಚಿವಸಂಪುಟದಿಂದ ವಜಾ ಮಾಡಿದರು. ಅಲ್ಲದೆ, ಸಮಜಾಯಿಷಿ ಕೊಡಲು ಗೃಹ ಕಚೇರಿಗೆ ಆಗಮಿಸಿದ್ದ ಮೇಟಿಯವರ ಮೇಲೆ ಕೋಪಾವಿಷ್ಠರಾಗಿ ಕೂಗಾಡಿ ಮುಖ ತೋರಿಸಬೇಡ ತೊಲಗು ಎಂದು ಬೈದು ಹೊರಹಾಕಿದರಂತೆ. ಇಂದು ಮುಸ್ಲಿಂ ಮಹಿಳೆಯೊಬ್ಬರು ‘ನಾನು ಎರಡು ಹೆಣ್ಣುಮಕ್ಕಳ ತಾಯಿ’ ಎಂದು ಹೇಳಿಕೊಳ್ಳುತ್ತಾ, ಸಿದ್ದರಾಮಯ್ಯನವರ ಹೆಸರು ಹೇಳುತ್ತಿರುವ ದೃಶ್ಯಾವಳಿಗಳು ಯೂಟ್ಯೂಬ್ನಲ್ಲಿ ಹರಿದಾಡುತ್ತಿವೆ. 2011ರ ವಿಡಿಯೊ ಎಂದು ಇದಕ್ಕೆ ಸಮಜಾಯಿಷಿ ನೀಡಲಾಗುತ್ತಿದೆ. ಸಮ್ಮಿಶ್ರ ಸರ್ಕಾರ ರಚನೆಯ ಸಮಯದಲ್ಲಿ ಕಾಂಗ್ರೆಸ್ನಿಂದ ಬಹಳಷ್ಟು ಸಚಿವರು ಬಿಜೆಪಿಗೆ ಪಕ್ಷಾಂತರ ಮಾಡಿದರು. ಪಕ್ಷಾಂತರ ಮಾಡಿದ ಸಚಿವರನ್ನು ಮುಂಬೈಗೆ ಕರೆದೊಯ್ದು ಸ್ಟಾರ್ಹೋಟೆಲೊಂದರಲ್ಲಿ ಇರಿಸಲಾಯಿತು. ಮತ್ತೊಂದು ತಂಡವನ್ನು ಗೋವಾಕ್ಕೆ ಕರೆದೊಯ್ಯಲಾಯಿತು. ಅಂತಹ ಹಲವಾರು ಶಾಸಕರು ತಮಗೇ ಗೊತ್ತಿಲ್ಲದಂತೆ ಮಾರುವೇಷದ ಕಾರ್ಯಾಚರಣೆಗೆ ಒಳಗಾಗಿದ್ದರಂತೆ. ಅವರನ್ನು ಸುಲುಭವಾಗಿ ಹನಿಟ್ರ್ಯಾಪ್ ಮಾಡಲಾಯಿತು. ಅಂತಹ ಶಾಸಕರು ಬೆಂಗಳೂರಿಗೆ ಬಂದ ಈ ವಿಷಯ ತಿಳಿದು ಗಾಬರಿಯಾದರು. ನ್ಯಾಯಾಲಯಕ್ಕೆ ತೆರಳಿ, ತಮ್ಮ ವಿರುದ್ಧ ಯಾವುದೇ ಮಾಧ್ಯಮಗಳಲ್ಲಿ ಅಪ್ರಚಾರ ಮಾಡಬಾರದೆಂದು ತಡೆ ಆಜ್ಞೆ ತಂದರು. ಕಾಂಗ್ರೆಸ್ನಲ್ಲಿ ಇಂದು ಈ ರೀತಿ ಸ್ಟೇ ತಂದು ಬದುಕುತ್ತಿರುವ 38 ಶಾಸಕರಿದ್ದಾರೆ.ಕಲಾಪ ನಡೆಯುವಾಗಲೇ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ಅವರು, ನ್ಯಾಯಾಲಯಕ್ಕೆ ಹೋಗಿ ಸ್ಟೇ ತಂದು ಬದುಕುತ್ತಿದ್ದೀರಲ್ಲಾ, ನಿಮಗೆ ನಾಚಿಕೆ, ಮಾನ ಮರ್ಯಾದೆ ಇಲ್ಲವೇ? ಎಂದು ಛೇಡಿಸಿದ್ದು ದಾಖಲಾಗಿದೆ. ಸ್ಟ್ರಿಂಗ್ಗೆ ಒಳಗಾಗಿರುವವರು ಬರೀ ಕಾಂಗ್ರೆಸ್ಸಿಗರೇ ಅಲ್ಲ, ಬಿಜೆಪಿಯಲ್ಲೂ ಇದ್ದಾರೆ. ಸದಾನಂದ ಗೌಡ, ಬಸವರಾಜ ಬೊಮ್ಮಾಯಿ (ಚಿತ್ರ ನಟಿಯೊಬ್ಬರೊಂದಿಗೆ ಇರುವ ಅವರ ವಿಡಿಯೊ ಬಯಲಾದ ವರದಿಗಳಿವೆ) ಅವರುಗಳೂ ಅವರ ಬಗ್ಗೆ ಇರುವ ಸಿಡಿ ಪ್ರಸಾರ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸುವಂತೆ ನ್ಯಾಯಾಲಯದಿಂದ ತಡೆ ತಂದಿದ್ದಾರೆ. ಈಗ ಸಿದ್ದರಾಮಯ್ಯ ಅವರ ಸರದಿ.ಈ ರೀತಿ ಹನಿಟ್ರ್ಯಾಪ್ ಮಾಡುವ ಸಂಗತಿ ವಿಧಾನಪರಿಷತ್ ಕಲಾಪದಲ್ಲಿಯೂ ಮಾರ್ದನಿಸಿತ್ತು. ಒಂದು ಕಾಲದಲ್ಲಿ ಕಾಂಗ್ರೆಸ್ಸಿನಲ್ಲೇ ಇದ್ದು, ಈಗ ಬಿಜೆಪಿಯಲ್ಲಿರುವ ಶಾಸಕ ಮುನಿರತ್ನ ಅವರು ವಿಧಾನಸಭೆಯಲ್ಲೇ ಈ ಬಗ್ಗೆ ರೋಷಾವೇಷದಿಂದ ಮಾತನಾಡಿದ್ದರು.ಮುನಿರತ್ನ ಹನಿಟ್ರ್ಯಾಪ್ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದರು. ಮಹಿಳೆಯರ ಮಾನಭಂಗ ಮಾಡಲೆತ್ನಿಸಿರುವ ಕೆಲ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು. ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಮುನಿರತ್ನ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದೂ ಆರೋಪಿಸಲಾಗಿತ್ತು. ಇದನ್ನೆಲ್ಲಾ ವಿಧಾನ ಸಭಾ ಕಲಾಪದಲ್ಲೇ ಹೇಳಿದ ಮುನಿರತ್ನ, ಡಿ.ಕೆ.ಶಿವಕುಮಾರ್, ನನ್ನ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇಲ್ಲಸಲ್ಲದ ಆರೋಪಗಳನ್ನು ನನ್ನ ಮೇಲೆ ಹಾಕಿ ಕೇಸು ದಾಖಲಿಸುತ್ತಿದ್ದಾರೆ. ಈ ರೀತಿಯ ವಿಡಿಯೊ ಮಾಡುವ ಕೆಲಸ ಡಿ.ಕೆ.ಶಿವಕುಮಾರ್ ಅವರ ಬಣದಿಂದಲೇ ನಡೆಯುತ್ತಲೇ ಇದೆ ಎಂದು ಆರೋಪಿಸಿದ್ದರು.ಕರ್ನಾಟಕ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಮಾಡುವ ಸುದ್ದಿಯೊಂದನ್ನು ಬಿಡುಗಡೆ ಮಾಡುತ್ತೇನೆ ಎಂದು ಬಹಿರಂಗವಾಗಿಯೇ ಬೆದರಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಈ ರೀತಿಯ ವಿಡಿಯೋಗಳ ಪಿತಾಮಹ ಯಾರು? ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರತ್ತ ಬೊಟ್ಟು ತೋರಿಸಿದರು. ಅದಕ್ಕೂ ಮುನ್ನ ಅಲ್ಲೋಲ ಕಲ್ಲೋಲ ಮಾಡುವ ಸುದ್ದಿ ಎಂದು ಹೇಳಿದ್ದ ಕುಮಾರಸ್ವಾಮಿಗಳು ಅಮೆರಿಕ ಪ್ರವಾಸಕ್ಕೆ ತೆರಳಿದ್ದರು. ಸ್ವಲ್ಪ ಗಲಿಬಿಲಿಗೊಂಡಂತೆ ಕಾಣುತ್ತಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಸಂಪುಟ ಸಭೆಯಲ್ಲಿ ಸಚಿವರನ್ನು ಉದ್ದೇಶಿಸಿ, ನಿಮ್ಮಗಳ ಮೇಲೆ ಸ್ಟ್ರಿಂಗ್ಆಪರೇಷನ್ ಮಾಡಲಾಗುತ್ತಿದೆ ಎಚ್ಚರಿಕೆಯಿಂದ ಇರಿ ಎಂದು ಎಚ್ಚರಿಸಿದರು. ಅನುಮಾನದ ಗೇಟ್ಓಪನ್ ಆದದ್ದು ಹೀಗೆ. ಐದು ಸಚಿವರನ್ನು ಹೆಸರಿಡಿದೇ ಹೇಳಿದ ಮುಖ್ಯಮಂತ್ರಿಗಳು, ನನ್ನ ಮೇಲೂ ಸ್ಟ್ರಿಂಗ್ಆಪರೇಷನ್ ನಡೆಯುತ್ತಿದೆ. ನಿಮ್ಮ ಮೇಲೂ ಕಣ್ಣಿಟ್ಟಿದ್ದಾರೆ. ಹುಷಾರಾಗಿರಿ. ಎಲ್ಲೂ ಏನೂ ಮಾತನಾಡಬೇಡಿ ಎಂದು ಹೇಳಿದ್ದು ಪಕ್ಷದೊಳಗೇ ಆತಂಕದ ಅಲೆ ಎಬ್ಬಿಸಿತು.ಡಿ.ಕೆ.ಶಿವಕುಮಾರ್ ಅದಕ್ಕೆ ಮುನ್ನ ಭಾಷಣವೊಂದರಲ್ಲಿ, ಎಲ್ಲ ಶಾಸಕರ ಜಾತಕ ನನ್ನ ಬಳಿ ಇದೆ. ಬೇರೆ ಜಿಲ್ಲೆಗಳಿಂದ ಬಂದ ಶಾಸಕರು ಮರಳಿ ತಮ್ಮ ಊರಿಗೆ ಹೋಗುವುದೇ ಇಲ್ಲ. ಕೆಲವು ಶಾಸಕರಿಗೆ ಇಬ್ಬಿಬ್ಬರು ಪತ್ನಿಯರಿದ್ದಾರೆ ಎಂದು ಹೇಳುವ ಮೂಲಕ ತಮ್ಮ ಶಾಸಕರ ಮರ್ಯಾದೆಯನ್ನು ತಾವೇ ತೆಗೆದರು. ದಾಖಲೆ ಸಮಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಅಧಿಕಾರ ಹೋದ ಸಿಟ್ಟು ಇದೆ. ಅವರಿಗೆ ಸಿಟ್ಟು ಇದೆ ಎಂಬುದು ಅವರ ವರ್ತನೆಯಿಂದಲೇ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಾಗಿದೆ. ಮೈಸೂರಿನಲ್ಲಿ ಅಹಿಂದ ಸಮಾವೇಶ ಏರ್ಪಡಿಸಿದ್ದು, ಸಂಪುಟ ವಿಸ್ತರಣೆಗೆ ಅಡ್ಡಗಾಲಾಗಿದ್ದು ಮೊದಲಾದ ಘಟನೆಗಳೆಲ್ಲಾ ಶಿವಕುಮಾರ್ ಅವರಿಗೆ ಅಡ್ಡಿಯಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಅವರ ಬಗ್ಗೆ ಬಂದಿರುವ ಹನಿಟ್ರ್ಯಾಪ್ ಸಿಡಿ ವಿಷಯ ಶಿವಕುಮಾರ್ ಅವರಿಗೆ ತಿಳಿದೇ ಇತ್ತು ಎಂದು ಎಲ್ಲ ರಾಜಕೀಯ ಪಕ್ಷಗಳು ಹೇಳುತ್ತಿವೆ.ಈ ವಿಷಯದಲ್ಲಿ ಕುಮಾರಸ್ವಾಮಿ ಅವರ ರಾಜಕೀಯ ದಾಳ ಚೆನ್ನಾಗಿಯೇ ಇದೆ. ಅವರು ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಬಿಜೆಪಿ ನಾಯಕ ಅಶೋಕ್ ಕೂಡ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಾ, ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಶಾಸಕರ ಮೇಲೆ, ಸಚಿವರುಗಳ ಮೇಲೆ ನಿಗಾ ಇಡಲು, ಶಿವಕುಮಾರ್, ಸದಾಶಿವ ನಗರದ ಮನೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಫೋನ್ಟ್ಯಾಪಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿ ವಿಷಯಕ್ಕೆ ಮತ್ತಷ್ಟು ತೀವ್ರತೆ ತಂದಿದ್ದಾರೆ.ಸ್ಟ್ರಿಂಗ್ಆಪರೇಷನ್ ಎನ್ನುವುದು ಪತ್ರಿಕಾ ಧರ್ಮವೇ? ಇದು ನೈತಿಕತೆಯೇ? ಎನ್ನುವ ಪ್ರಶ್ನೆಯೂ ಮೂಡಬಹುದು. ಪತ್ರಿಕೋದ್ಯಮದ ಆರಂಭಕಾಲದಲ್ಲಿ ಇದು ತನಿಖಾ ವರದಿಯ ಭಾಗವಾಗಿಯೇ ಇರುತ್ತಿತ್ತು. ಮಾರುವೇಷದ ಕಾರ್ಯಾಚರಣೆಯ ಮೂಲಕ ಬಹಳಷ್ಟು ಭ್ರಷ್ಟರನ್ನು ಬಯಲಿಗೆಳೆದ ಉದಾಹರಣೆಗಳಿವೆ. ಕರ್ನಾಟಕದಲ್ಲಿ 2006 ರಲ್ಲಿ ಇಂತಹ ಒಂದು ಘಟನೆ ಬಹಿರಂಗವಾಗಿಯೇ ನಡೆಯಿತು ಎನ್ನುವುದನು ನೆನಪಿಸಿಕೊಳ್ಳಬಹುದು.ಬಳ್ಳಾರಿಯ ಗಣಿ ಮಾಲೀಕರು 150 ಕೋಟಿ ರೂ. ಕಪ್ಪ ಕೊಡಬೇಕು ಎಂದು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗಣಿ ಮಾಲೀಕರಿಗೆ ತಾಕೀತು ಮಾಡುತ್ತಿರುವ ಸಿಡಿ ಬಿಡುಗಡೆ ಮಾಡುವುದಾಗಿ ಜನಾರ್ಧನ ರೆಡ್ಡಿ ಗಣಿ ಹಗರಣವನ್ನು ಬಯಲಿಗೆಳೆದಿದ್ದರು. ಸಿಡಿ ಬಿಡುಗಡೆ ಮಾಡಲು ಬಳ್ಳಾರಿಯಲ್ಲೇ ಪತ್ರಿಕಾಗೋಷ್ಠಿ ನಡೆಸಿ, ಅದಕ್ಕೆ ದೇಶದ ಎಲ್ಲ ಭಾಗಗಳಿಂದಲೂ ಪತ್ರಕರ್ತರು ಆಗಮಿಸಿ ಸಂಚಲನ ಉಂಟು ಮಾಡಿದ್ದರು. ಸಿಡಿಯಲ್ಲಿ ಅಸ್ಪಷ್ಟತೆಯಿಂದಾಗಿ ವಿಷಯ ಅಲ್ಲಿಗೆ ಮುಕ್ತಾಯವಾದರೂ, ಈ ಹಗರಣ ಇತಿಹಾಸದಲ್ಲಿ ದಾಖಲಾಗಿದೆ. ಮಾರುವೇಷದ ಕಾರ್ಯಾಚರಣೆ ಹುಟ್ಟಿಕೊಂಡದ್ದೇ 1970ರಲ್ಲಿ ಎನ್ನಬಹುದು. ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ಪೊಲೀಸರು ತನಿಖಾ ಕಾರ್ಯ ನಡೆಸಿದರು. 1976 ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಕದ್ದಮಾಲುಗಳನ್ನು ಕೊಳ್ಳುವ ಕಂಪನಿಯೊಂದನ್ನು ಪೊಲೀಸ್ ತನಿಖಾ ತಂಡ ಆರಂಭಿಸಿತು. ಆಪರೇಷನ್ಸ್ಟ್ರಿಂಗ್ ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆ ಯಶಸ್ಸಾಯಿತು. ಮಾರಲು ಬಂದ ಅಪರಾಧಿಗಳನ್ನು ಮಾಲು ಸಮೇತ ಬಂಧಿಸಿ ಪೊಲೀಸರು ಅಪರಾಧ ಲೋಕಕ್ಕೆ ದಿಗಿಲು ಹುಟ್ಟಿಸಿದ್ದರು. 1973 ರಲ್ಲಿ ಅಮೆರಿಕದಲ್ಲಿ ‘ದಿ ಸ್ಟಿಂಗ್’ ಎಂಬ ಸಿನಿಮಾ ಆಸ್ಕರ್ ಪ್ರಶಸ್ತಿ ಗಳಿಸಿತು. ಮಾರುವೇಷ ಕಾರ್ಯಾಚರಣೆ ಮೂಲಕ ಅಪರಾಧಿಗಳನ್ನು ಹಿಡಿಯುವ ವಸ್ತು ಈ ಚಿತ್ರದ್ದು. ಭಾರತದಲ್ಲಿ ರಾಜಕೀಯ ಭ್ರಷ್ಟಾಚಾರ ಬಯಲಿಗೆಳೆಯಲು ಮಾರುವೇಷದ ಕಾರ್ಯಾಚರಣೆ ನಡೆಸಿದ್ದು ಇತಿಹಾಸ. 2001ರಲ್ಲಿ ತೆಹಲ್ಕಾ ಸುದ್ದಿ ವಾಹಿನಿ, ಆಪರೇಷನ್ ವೆಸ್ಟ್ಎಂಡ್ ಎಂಬ ಕುಟುಕು ಕಾರ್ಯಾಚರಣೆಯನ್ನು ನಡೆಸಿತು. ಶಸ್ತ್ರಾಸ್ತ್ರ ಡೀಲರ್ಗಳು ಎಂಬ ವೇಷ ತೊಟ್ಟ ಪತ್ರಕರ್ತರು, ವೆಸ್ಟ್ಎಂಡ್ಇಂಟರ್ನ್ಯಾಷನಲ್ ಎಂಬ ಕಂಪನಿ ತೆರೆದರು. ಅಂದಿನ ಬಿಜೆಪಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಒಂದು ಲಕ್ಷ ರೂಪಾಯಿ ಲಂಚ ಪಡೆಯುತ್ತಿರುವುದನ್ನು ಲೈವಾಗಿ ಚಿತ್ರೀಕರಿಸಿದರು. ಬಂಗಾರು ಲಕ್ಷ್ಮಣ್ ಅವರ ತಲೆದಂಡವಾಯಿತು. ನಾಲ್ಕು ವರ್ಷ ಸೆರೆಮನೆವಾಸವಾಯಿತು.ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಜಯಾ ಜೈಟ್ಲಿ ಅವರು ಬಯಲಾದದ್ದೂ ಮಾರುವೇಷದ ಕಾರ್ಯಾಚರಣೆಯಿಂದಲೇ. ಇತಿಹಾಸದಲ್ಲಿ ಮತ್ತೊಂದು ಬಹುದೊಡ್ಡ ಸ್ಟಿಂಗ್ ಆಪರೇಷನ್ ಎಂದರೆ 2005ರಲ್ಲಿ ಆಪರೇಷನ್ ದುರ್ಯೋಧನ್, ಕೋಬ್ರಾಪೋಸ್ಟ್ ಮತ್ತು ಆಜ್ತಕ್ ಜಂಟಿಯಾಗಿ ಆಪರೇಷನ್ಮಾಡಿ ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಹಣ ತೆಗೆದುಕೊಂಡ ಹನ್ನೊಂದು ಮಂದಿ ಲೋಕಸಭಾ ಸದಸ್ಯರನ್ನು ಬಯಲಿಗೆಳೆದದ್ದು. 2000 ಇಸವಿಯಲ್ಲಿ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಹಗರಣ ಬಯಲಾದದ್ದು ಕೂಡ ಮಾರುವೇಷದ ಕಾರ್ಯಾಚರಣೆಯಿಂದಲೇ.ಈ ತಂತ್ರಜ್ಞಾನವನ್ನು ವೈಯಕ್ತಿಕವಾಗಿ ವ್ಯಕ್ತಿಗಳನ್ನು ತೇಜೋವಧೆಗೆ ಬಳಸುತ್ತಿರುವುದು ದುರಂತ. ಹಣ ಸಂಪಾದನೆ ಮಾಡುವುದೇ ಪರಮ ಧ್ಯೇಯವಾಗಿರುವ ಟಿವಿ ಮಾಧ್ಯಮಗಳಿಗೆ, ಯೂಟ್ಯೂಬ್ಗಳಿಗೆ ಇಂತಹ ಸಂಗತಿಗಳು ಹಬ್ಬವಿದ್ದಂತೆ. ಇಂತಹ ಸಾಮಾಜಿಕ ಜಾಲತಾಣಗಳಿಗೆ ಯಾವುದೇ ಸಿದ್ಧಾಂತವಿರುವುದಿಲ್ಲ. ಸಿನಿಮಾ ನಟನಟಿಯರು ತಮ್ಮ ರಾಸಲೀಲೆಗಳ ಮೂಲಕ ಸಾಮಾಜಿಕ ಜಾಲತಾಣಗಳಿಗೆ, ಟಿವಿಗಳಿಗೆ ಅಂತಹ ಭೋಜನವನ್ನು ಉಣಬಡಿಸುತ್ತಿದ್ದರು. ಈಗ ರಾಜಕಾರಣಿಗಳೂ ಅದಕ್ಕಿಂತ ಹೆಚ್ಚು ರುಚಿಯಾದ ಆಹಾರ ನೀಡುತ್ತಿದ್ದಾರೆ.