ವಾಚಕರ ವಾಣಿ: ಪ್ರೊಬೇಷನರಿ ಪರೀಕ್ಷೆಗೆ ತರಾತುರಿ ಏಕೆ?
ಪ್ರೊಬೇಷನರಿ ಪರೀಕ್ಷೆಗೆ ತರಾತುರಿ ಏಕೆ?ಕೆಪಿಎಸ್ಸಿ ನಡೆಸಿರುವ ಹಲವು ನೇಮಕಾತಿಗಳಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ ಎಸಗಿರುವ ಆರೋಪಗಳಿವೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಆಯೋಗದ ಉನ್ನತ ಹುದ್ದೆಗಳಲ್ಲಿ ಇರುವವರ ವಿರುದ್ಧವೇ ಈಗ ತನಿಖೆ ನಡೆಯುತ್ತಿದೆ. ಈ ನಡುವೆಯೇ ತರಾತುರಿಯಲ್ಲಿ
ಪ್ರೊಬೇಷನರಿ ಪರೀಕ್ಷೆಗೆ ತರಾತುರಿ ಏಕೆ?ಕೆಪಿಎಸ್ಸಿ ನಡೆಸಿರುವ ಹಲವು ನೇಮಕಾತಿಗಳಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಅಕ್ರಮ ಎಸಗಿರುವ ಆರೋಪಗಳಿವೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಆಯೋಗದ ಉನ್ನತ ಹುದ್ದೆಗಳಲ್ಲಿ ಇರುವವರ ವಿರುದ್ಧವೇ ಈಗ ತನಿಖೆ ನಡೆಯುತ್ತಿದೆ. ಈ ನಡುವೆಯೇ ತರಾತುರಿಯಲ್ಲಿ 319 ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸಲು ಮುಂದಾಗಿರುವುದು ಸರಿಯೆ? ಪರೀಕ್ಷೆ ನಡೆಸಬಾರದು ಅಥವಾ ಮುಂದೂಡಬೇಕೆಂಬುದು ಅಭ್ಯರ್ಥಿಗಳ ಬೇಡಿಕೆಯಲ್ಲ. ಪರೀಕ್ಷೆಯ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆ ಬಗ್ಗೆ ವಿಶ್ವಾಸ ಮೂಡಿಸುವ ಜವಾಬ್ದಾರಿ ಸರ್ಕಾರ ಮತ್ತು ಆಯೋಗದ ಮೇಲಿದೆ. ಲಕ್ಷಾಂತರ ಯುವಜನರು ಸಮಯ, ಶ್ರಮ ಮತ್ತು ಕನಸುಗಳನ್ನು ಈ ಪರೀಕ್ಷೆ ಮೇಲೆ ಹೂಡಿಕೆ ಮಾಡಿರುತ್ತಾರೆ. ಹಗರಣದ ತನಿಖೆಯು ಪೂರ್ಣಗೊಳ್ಳುವವರೆಗೂ ಆಯೋಗದಿಂದ ಪರೀಕ್ಷೆ ನಡೆಸಬಾರದು. ಪರೀಕ್ಷೆಯ ಜವಾಬ್ದಾರಿಯನ್ನು ಜಂಟಿ ರಾಜ್ಯ ಲೋಕಸೇವಾ ಆಯೋಗ ಅಥವಾ ಬೇರೊಂದು ಪರೀಕ್ಷಾ ಪ್ರಾಧಿಕಾರಕ್ಕೆ ವರ್ಗಾಯಿಸಬೇಕಿದೆ.⇒ರವಿಕುಮಾರ್ ಎಸ್., ಬೆಂಗಳೂರುಅನ್ನದಾತರ ನೋವಿಗೆ ಸ್ಪಂದಿಸದ ಸರ್ಕಾರರಾಜ್ಯದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿ ಕಬ್ಬು ಬೆಳೆಯುವ ಜಿಲ್ಲೆಗಳಲ್ಲಿ ಸಾವಿರಾರು ರೈತರು ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿಹೋರಾಡುತ್ತಿದ್ದಾರೆ. ಆದರೆ, ಆಳುವ ವರ್ಗವು ಈ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆಯಾಗಿದೆ. ಆದರೆ, ಕಬ್ಬಿನ ಬೆಲೆಏರಿಕೆ ಕಂಡಿಲ್ಲ. ಬೆಳೆಗಾರರು ಹೋರಾಟದ ಮೂಲಕ ಸರ್ಕಾರಗಳನ್ನು ಪ್ರಶ್ನಿಸುತ್ತಿರುವುದು ನ್ಯಾಯೋಚಿತವಾಗಿದೆ. ಸರ್ಕಾರಗಳು ಕೂಡ ರೈತರ ಹೋರಾಟಕ್ಕೆ ಧ್ವನಿಯಾಗಬೇಕು. ನೇಗಿಲಯೋಗಿಗಳ ಕಣ್ಣೀರು ಒರೆಸಬೇಕಿದೆ. ಜತೆಗೆ ಅನ್ನದಾತರ ಆದಾಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೃಷಿ ತಜ್ಞ ಎಂ.ಎಸ್. ಸ್ವಾಮಿನಾಥನ್ ಹಾಗೂ ಅರವಿಂದ ದಳವಾಯಿ ಸಲ್ಲಿಸಿರುವ ವರದಿಗಳನ್ನು ಜಾರಿಗೊಳಿಸಬೇಕಿದೆ. ಆಗಷ್ಟೇ ರೈತರು ಆರ್ಥಿಕ ಸ್ವಾವಲಂಬಿಗಳಾಗಲು ಸಾಧ್ಯ.⇒ಬೀರಪ್ಪ ಡಿ. ಡಂಬಳಿ, ಅಥಣಿಸಾಂಸ್ಕೃತಿಕ ಕ್ಷೇತ್ರದಲ್ಲಿ ಕಣ್ಣಾಮುಚ್ಚಾಲೆವಿವಿಧ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರನ್ನು ಬದಲಿಸಲು ಸರ್ಕಾರ ಮುಂದಾಗಿದೆ ಎಂಬ ಸುದ್ದಿ ಇದೆ. ಸಾಮಾನ್ಯವಾಗಿ ಸರ್ಕಾರಗಳು ಬದಲಾದಾಗ ಇಂತಹ ತೀರ್ಮಾನಗಳು ಈ ಹಿಂದೆಯೂ ನಡೆದಿವೆ. ಆದರೆ, ಈಗ ಇರುವುದು ಕಾಂಗ್ರೆಸ್ ಸರ್ಕಾರ; ಬದಲಾಗಿರುವುದು ಮುಖ್ಯಮಂತ್ರಿಯಷ್ಟೇ. ಪದಾಧಿಕಾರಿಗಳ ಬದಲಾವಣೆ ವದಂತಿಯು ಸಾಂಸ್ಕೃತಿಕ ಲೋಕದಲ್ಲಿ ಅಚ್ಚರಿ ಹುಟ್ಟಿಸಿದೆ. ಇನ್ನು ಆರರಿಂದ ಎಂಟು ತಿಂಗಳಷ್ಟೇ ಅವಧಿ ಇರುವ ಸಾಂಸ್ಕೃತಿಕ ಸಂಸ್ಥೆಗಳ ಪದಾಧಿಕಾರಿಗಳನ್ನು ಬದಲಾಯಿಸುವುದು ಕೆಟ್ಟ ಸಂದೇಶ ಕೊಡುತ್ತದೆ. ಈಗಾಗಲೇ, ಕೆಲವು ಅಕಾಡೆಮಿಗಳು ವಾರ್ಷಿಕ ಪ್ರಶಸ್ತಿ ಘೋಷಿಸಿವೆ. ಹಲವು ಯೋಜನೆ ರೂಪಿಸಿ ಅನುಷ್ಠಾನಕ್ಕೆ ಮುಂದಾಗಿವೆ. ವದಂತಿ ನಿಜವಾದಲ್ಲಿ ಎಲ್ಲ ಯೋಜನೆಗಳು ನನೆಗುದಿಗೆ ಬೀಳಲಿವೆ. ಪಂಪ ಪ್ರಶಸ್ತಿ ಸೇರಿ ಸಾಂಸ್ಕೃತಿಕ ಕ್ಷೇತ್ರದ ಪ್ರಶಸ್ತಿಗಳನ್ನು ಪ್ರಕಟಿಸಿ ತಿಂಗಳುಗಳೇ ಕಳೆದಿವೆ. ಪ್ರಶಸ್ತಿ ಪ್ರದಾನ ಯಾವಾಗ ನಡೆಯಲಿದೆ ಎಂಬುದನ್ನು ಸಾಂಸ್ಕೃತಿಕ ವಲಯ ಎದುರು ನೋಡುತ್ತಿದೆ.⇒ಶಶಿಧರ ಭಾರಿಘಾಟ್, ಬೆಂಗಳೂರುಮೀಸಲು: ತಮಿಳುನಾಡು ಮಾದರಿ ಆಗಲಿಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿನ ಮೀಸಲಾತಿ ಪ್ರಮಾಣವನ್ನು ಶೇ 50ರಿಂದಶೇ 56ಕ್ಕೆ ಹೆಚ್ಚಿಸಿದ್ದ ರಾಜ್ಯ ಸರ್ಕಾರದ ತೀರ್ಮಾನವನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ತೀರ್ಪು ಸಮಾನ ಅವಕಾಶ ವಂಚಿತ ಸಮುದಾಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟರ ಮೀಸಲಾತಿ ಹೆಚ್ಚಿಸಲು ಸಂವಿಧಾನದಲ್ಲಿಯೇ ಅವಕಾಶ ಕಲ್ಪಿಸಲಾಗಿದೆ. ಆದರೆ, ಮೀಸಲಾತಿ ಹೆಚ್ಚಳ ಪ್ರಕ್ರಿಯೆಯು ಸಾಂವಿಧಾನಿಕವಾಗಿಯೇ ನಡೆಯಬೇಕಾಗಿದೆ. ಹೈಕೋರ್ಟ್ ತೀರ್ಪಿನ ಬಗ್ಗೆ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಬೇಕಿದೆ. ಮೀಸಲಾತಿ ಪ್ರಮಾಣವು ಅಸಾಧಾರಣ ಸಂದರ್ಭ ಹೊರತುಪಡಿಸಿ ಶೇ 50ರಷ್ಟು ಮಿತಿಯನ್ನು ಮೀರಬಾರದು ಎಂದುಇಂದಿರಾ ಸಾಹನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ನೆರೆಯ ತಮಿಳುನಾಡಿನಲ್ಲಿ ಶೇ 69ರಷ್ಟು ಮೀಸಲಾತಿ ಇದೆ. ರಾಜ್ಯದ ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಈ ಕುರಿತಂತೆ ಸರ್ವಪಕ್ಷಗಳ ನಿಯೋಗ ಕರೆದೊಯ್ದು ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಡಬೇಕಿದೆ.⇒ಪ್ರಶಾಂತ್ ಬುಳ್ಳಣ್ಣವರ, ಬೆಳಗಾವಿಜೆನ್ ಝೀ ವಿರುದ್ಧ ಸರ್ವಾಧಿಕಾರ ನೀತಿಸಂವಿಧಾನದತ್ತವಾದ ಪ್ರತಿಭಟನೆಯ ಹಕ್ಕನ್ನು ದಮನಗೊಳಿಸಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆಯು ಸರ್ವಾಧಿಕಾರದ ದ್ಯೋತಕವಾಗಿದೆ. ಅಧಿಕಾರವು ಭ್ರಷ್ಟಗೊಳಿಸುತ್ತದೆ; ಸಂಪೂರ್ಣ ಅಧಿಕಾರವು ಸಂಪೂರ್ಣವಾಗಿ ಭ್ರಷ್ಟಗೊಳಿಸುತ್ತದೆ ಎಂಬ ಮಾತು ಮತ್ತೆ ನಿಜವಾಗುತ್ತಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಡಳಿತ ಮತ್ತು ಅವರು ಹೇರಿದ್ದ ತುರ್ತುಪರಿಸ್ಥಿತಿಯನ್ನು ಸರ್ವಾಧಿಕಾರ ಎಂದು ಅವಕಾಶ ಸಿಕ್ಕಿದಾಗಲೆಲ್ಲ ಟೀಕಿಸುವ ಬಿಜೆಪಿ ಕೂಡ ಅದೇ ಹಾದಿ ತುಳಿದಿದೆ; ಅದಕ್ಕಿಂತಲೂ ಹೀನಾಯವಾಗಿ ವರ್ತಿಸುತ್ತಿರುವುದು ಅಕ್ಷಮ್ಯವೇ ಸರಿ. ಪ್ರಜಾಪ್ರಭುತ್ವದ ಗೆಲುವು ವಿರೋಧ ಪಕ್ಷಗಳನ್ನು ಗೌರವಿಸುವುದರಲ್ಲಿ, ವಿರೋಧಿಗಳ ಮಾತನ್ನು ಆಲಿಸುವುದರಲ್ಲಿ ಅಡಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಅರ್ಥ ಮಾಡಿಕೊಳ್ಳಬೇಕಿದೆ. ‘ಒಂದು ರಾಷ್ಟ್ರ; ಒಂದು ಪಕ್ಷ’ ಎಂಬ ಕಲ್ಪನೆಯು ಜನತಂತ್ರ ವ್ಯವಸ್ಥೆಗೆ ಮಾರಕ.⇒ಜಗದೀಶ್ ಎಚ್.ಬಿ., ಹುಬ್ಬಳ್ಳಿ